Tuesday, December 2, 2008

ಘಾಸಿ ಮಾಡಬೇಡಿ ಈ ಬದುಕಿಗೆ...

ಭಾವನೆಗಳ ಲೋಕದಲ್ಲಿ,
ಭಾವಗಳ ಬದುಕಲ್ಲಿ,
ಪ್ರೀತಿ ಸ್ನೇಹದ ಬೆಸುಗೆಗಳಿಗೆ ಅರ್ಥ ಕಲ್ಪಿಸುತ್ತ,
ವಾಸ್ತವದ ನೆನಪಿನಲ್ಲಿ ವಿಹರಿಸುವ ಪುಟ್ಟ ಜೀವಿ ನಾನು,
ಘಾಸಿ ಮಾಡಬೇಡಿ ಈ ಬದುಕಿಗೆ....

Monday, October 6, 2008

ಧನ್ಯವಾದ ನಿನಗೆ...


ಧನ್ಯವಾದ ನಿನಗೆ...
ನೀನು ಹೇಳಬೇಕಾದ್ದನ್ನು,
ನಾನು ಕೇಳಬೇಕಾದ್ದನು,
ಹೇಳಿ ಮುಜುಗರ ಪಡಿಸದ್ದಕ್ಕೆ,
ಹೇಳುವ ಮಾತುಗಳಿಗಿಂತ,
ಹೇಳದ ಮೌನದ ಮೊರೆ ಹೋಗಿದ್ದಕ್ಕೆ...
ಗೆಳತಿಯೊಬ್ಬಳು ನೀಡಿದ ಗ್ರೀಟಿಂಗ್ ಕಾರ್ಡ್ ನೊಳಗಿದ್ದ ಬರಹಗಳಿವು... ತುಂಬಾ ಹಚ್ಹಿಕೊಂಡಿದ್ದಳು.. ಆದರೂ ಒಂದಾಗಲು ಸಾಧ್ಯವಾಗಲಿಲ್ಲ... ಇದನ್ನು ಇವಾಗ ಯಾಕೆ ಹೇಳುತ್ತಿದ್ದೇನಂದ್ರೆ ಆ ಹಳೆಯ ನೆನಪುಗಳು ಮರುಕಳಿಸುವುದು ಕಡಿಮೆಯಾಗಿದೆ... ಭೂತಕಾಲವನ್ನು ಮರೆಯಲು ಯತ್ನಿಸುತ್ತಿದ್ದೇನೆ.. ಇವಕ್ಕೆಲ್ಲ ಕಾರಣ... ನನ್ನನ್ನು ಅರ್ಥಮಾಡಿಕೊಂಡಿರುವ ಗೆಳತಿ... LOVE ಎಂಬ ಪದಕ್ಕೆ ಯಾವತ್ತೋ good bye ಹೇಳಿಯಾಗಿದೆ... ಈಗೇನಿದ್ದರೂ ಗೆಳೆತನ ಮಾತ್ರ...

ನನ್ನನ್ನು ಅರ್ಥಮಾಡಿಕೊಂಡಿರುವುದಕ್ಕೆ ಅವಳಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು... ಕೆಲವೊಮ್ಮೆ ಕಾರಣವಿಲ್ಲದೆ ಜಗಳ ಆಡ್ತೇವೆ.. ಆದರೆ ಅದು ಸ್ವಲ್ಪ ಹೊತ್ತು ಮಾತ್ರ... ಮತ್ತೆ ಮೊದಲಿನಂತೆ ಹರಟೆ ಆರಂಭವಾಗ್ತದೆ...

ಮುಂದೆ ಎಂದಾದರೊಂದು ದಿನ ದೂರಗಲೇಬೇಕು... ಅಷ್ಟು ದಿನ ಹೀಗೇ ಇರೋಣ ಅಂತ ನಿರ್ಧಾರ ಮಾಡಿದ್ದೇವೆ...
ಬಹಳ ತಿಂಗಳುಗಳ ಬಳಿಕ ಮತ್ತೆ ಬರೆಯುವ ತುಡಿತ...


ಬ್ಲಾಗ್ ನಲ್ಲಿ ಬರೆಯದೆ ಹಲವಾರು ತಿಂಗಳುಗಳೆ ಕಳೆದಿದೆ... ಯಾಕೋ ಇತ್ತೀಚೆಗೆ ಬರೆಯಬೇಕೆಂದು ಮನಸಾಗುವುದೇ ಇಲ್ಲ.. ಆದರೆ ಕೆಲವು ದಿನಗಳ ಹಿಂದೆ ವಿಜಯ್ ಮಾಲೂರ್ ಎಂಬ ಡಾಕ್ಟರ್ ಬರೆದ From Cardiac Bypass to Everest Bypasses ಎಂಬ ಪುಸ್ತಕ ಓದಿದ ಮೇಲೆ ಆದರ ಬಗ್ಗೆ ಏನಾದರೂ ಬರೆಯಬೇಕೆಂದೆನಿಸಿತು..

ಮೂಲತ: ಕೋಲಾರದವರಾದ ವಿಜಯ್ ಮಾಲೂರ್ ವಿದೇಶದಲ್ಲಿ ವೈದ್ಯಕೀಯ ವೃತ್ತಿ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಅವರು ತಮ್ಮ ಫ್ಲಾಟ್ ನ ಮಹಡಿ ಮೇಲಿನಿಂದ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಯ ಸಂದರ್ಭದಲ್ಲಿ ಅವರ ನಾಲ್ಕು Blood Vessels Block ಆಗಿರುವುದು ತಿಳಿಯಿತು. ಇದಕ್ಕಾಗಿ ಅವರು ನಾಲ್ಕು ಬೈಪಾಸ್ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳಬೇಕಾಗಿ ಬಂತು. ಕ್ರಮೇಣ ಅವರು ಚೇತರಿಸಿಕೊಂಡರೂ, ಮತ್ತೆ ವೈದ್ಯಕೀಯ ವೃತ್ತಿಯನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ.


ನಡುವೆ ತವರುನೆಲ ಭಾರತಕ್ಕೆ ಆಗಮಿಸಿದ ವಿಜಯ್ ಅವರಿಗೆ ವಿಶ್ವದ ಅತಿ ಎತ್ತರದ ಪರ್ವತವಾದ ಮೌಂಟ್ ಎವರೆಸ್ಟ್ ಏರುವ ಹಂಬಲವಾಯಿತು. ಅದಕ್ಕಾಗಿ ಸಿಧ್ದತೆಗಳನ್ನು ಆರಂಭಿಸಿದ ಅವರು ನೇಪಾಳದ ಒಂದು ಖಾಸಗೀ ಟ್ರೆಕ್ಕಿಂಗ್ ಸಂಸ್ಥೆಯ ಸಹಕಾರ ಪಡೆದುಕೊಂಡರು. ೬೦ರ ಹರೆಯದ ವಿಜಯ್ ಸುಮಾರು ಏಳು ದಿನಗಳ ಕಠಿಣ ಪರಿಶ್ರಮದ ಬಳಿಕ ವಿಜಯ್ ಯಶಸ್ವಿಯಾಗಿ ಎವರೆಸ್ಟ್ ನ ತುದಿಗೇರಿಯೇಬಿಟ್ಟರು. ಆ ಮೂಲಕ ವಿಜಯ್, ವಿಶ್ವದಲ್ಲೇ ನಾಲ್ಸ್ಕು ಬೈಪಾಸ್ ಶಸ್ತ್ರಚಿಕಿತ್ಸೆಯ ಬಳಿಕ ಎವರೆಸ್ಟ್ ಶಿಖರವೇರಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕಯ ಜೊತೆಗೆ ಗಿನ್ನೆಸ್ ದಾಖಲೆ ಪುಸ್ತಕದಲ್ಲೂ ತಮ್ಮ ಹೆಸರನ್ನು ಬರೆಸಿಕೊಂಡರು.


ಛಲವೊಂದಿದ್ದರೆ ಏನನ್ನೂ ಸಾಧಿಸಬಹುದು ಎನ್ನುವುದಕ್ಕೆ ವಿಜಯ್ ಮಾಲೂರು ಜೀವಂತ ನಿದರ್ಶನ. ೬೦ರ ತಮ್ಮ ಇಳಿವಯಸ್ಸಿನಲ್ಲೂ ವಿಶ್ವದಾಖಲೆ ನಿರ್ಮಿಸಿದ ಅವರ ಸಾಹಸಕ್ಕೆ Hatsoff...


Friday, March 21, 2008

ಮತ್ತೆ ಹಳೆಯ ನೆನಪುಗಳು...

ಆಕೆಯನ್ನು ನಾನ್ಯಾವತ್ತೂ ಮರೆಯಲು ಸಾಧ್ಯವಿಲ್ಲ... ಏಕೆಂದರೆ ಜೀವನದಲ್ಲಿ ನಾನು ಮೊತ್ತ ಮೊದಲು ಇಷ್ಟಪಟ್ಟಿದ್ದ ಹುಡುಗಿ ಅವಳಾಗಿದ್ದಳು... ಆರಂಭದಲ್ಲಿ ಅದೊಂಥರ ಹುಚ್ಹು ಪ್ರೀತಿಯಾಗಿತ್ತು. ಪ್ರಥಮ ಪಿ.ಯು.ಸಿ ವಿದ್ಯಾರ್ಥಿಯೊಬ್ಬನ ಮನಸಿನಲ್ಲಿ ಮೊಳಕೆಯೊಡೆದಿದ್ದ ಅಪ್ರಭುದ್ದ, ಅಪಕ್ವ ಪ್ರೀತಿ.. ಪಿ.ಯು.ಸಿ ಮುಗಿಯಿತು. Degree life ಆರಂಭವಾಯಿತು. ಆದರೂ ನಾನವಳಲ್ಲಿ ನನ್ನ ಪ್ರೀತಿಯನ್ನು ತಿಳಿಸಿರಲಿಲ್ಲ. ಅವಳಿಗೆ ಇಷ್ಟವಿದೆಯೋ ಇಲ್ಲವೋ ಎಂದು ಕೂಡ ಗೊತ್ತಿರಲಿಲ್ಲ. ಆದ್ರೂ ಪ್ರೀತಿಸ್ತಿದ್ದೆ, ಆರಾಧಿಸ್ತಿದ್ದೆ.. ಕೊನೆಗೂ ದ್ವಿತೀಯ ಪದವಿಯಲ್ಲಿ ನಾನವಳ ಮುಂದೆ ಮನ ಬಿಚ್ಹಿದ್ದೆ. ಆದ್ರೆ "ನೋಡು, ನಾ ನಿನ್ನ ಇಷ್ಟಪಡ್ತಿದ್ದೀನಿ", ಅಂದಾಗ "ನಂಗೊತ್ತಿತ್ತು" ಅಂದಿದ್ದಳು.. ಅದು ಹೇಗೆ ಅವಳಿಗೆ ತಿಳಿದಿತ್ತೋ ನನಗರಿಯದು. ಏಕೆಂದರೆ ನಾನು ಯಾವುದೇ ಗೆಳೆಯರಲ್ಲೂ ಆ ಪ್ರೀತಿಯ ಬಗ್ಗೆ ತಿಳಿಸಿರಲಿಲ್ಲ. ಮತ್ತು ತಪ್ಪಿಯೂ ವಿಶೇಷವಾಗಿ ಅವಳನ್ನು ಮಾತನಾಡಿಸುವುದಾಗಲಿ, ನೋಡುವುದಾಗಲಿ ಇರಲಿಲ್ಲ.. ಪ್ರೀತಿ ಮನಸೊಳಗೆ ಇತ್ತೇ ವಿನಃ ಹೊರಬಂದಿರಲಿಲ್ಲ. ನಾನವಳನ್ನು ಇಷ್ಟಪಡ್ತಿದ್ದೀನಿ ಅಂದಾಗ "ಆಗಲ್ಲ" ಅಂದಿದ್ದಳು. ಏಕೆಂದು ಪ್ರಶ್ನಿಸಿದಾಗ, "ಮನೆಯಲ್ಲಿ ಗೊತ್ತಾದ್ರೆ problem ಆಗುತ್ತೆ" ಎಂಬ ಉತ್ತರ ಬಂದಿತ್ತು.. ಅವತ್ತೇ ಕೊನೆ, ಮತ್ತೆಂದೂ ನಾನವಳಲ್ಲಿ ಮಾತನ್ನೇ ಆಡಿರಲಿಲ್ಲ... ಯಾಕಂದ್ರೆ ಅವಳು ನನ್ನ ಮುಖವನ್ನೇ ನೋಡ್ತಿರಲಿಲ್ಲ...!
ಇವೆಲ್ಲ ಕಳೆದು ಹೆಚ್ಹು ಕಡಿಮೆ ಎರಡುವರೆ ವರ್ಷಗಳಾಗಿವೆ. ನನಗೀಗಲೂ ಅವಳ ಮೇಲೆ ಗೌರವವಿದೆ. ಯಾಕಂದ್ರೆ ನಾನವತ್ತು ಅವಳನ್ನು ಇಷ್ಟಪಡ್ತಿದ್ದೀನಿ ಅಂದಾಗ "ಮನೆಯಲ್ಲಿ ಗೊತ್ತಾದ್ರೆ problem ಆಗುತ್ತೆ" ಅಂದ್ದಿದ್ದಳಲ್ಲ... ಮನೆಯವರ ಬಗ್ಗೆ ಯೋಚನೆ ಮಾಡಿದ್ಳಲ್ಲ... ಅದ್ಕೇ.. ಈಗಲೂ ನನ್ನನ್ನೊಂದು ಪ್ರಶ್ನೆ ಕಾಡ್ತಿದೆ. ಮನೆಯಲ್ಲಿ ಗೊತ್ತಾಗದೆ ಇದ್ರೆ ಅವಳು ನನ್ನನ್ನು ಇಷ್ಟಪಡ್ತಿದ್ಳಾ? ಅವಳಿಗೆ ನನ್ ಮೇಲೆ ಸ್ವಲ್ಪನಾದ್ರೂ ಪ್ರೀತಿ ಇತ್ತಾ? ಅದೇನೆ ಇರಲಿ ಅಂದಿನ ಅವಳ ನಿರ್ಧಾರಕ್ಕೆ ಹ್ಯಾಟ್ಸಾಫ್... ನಾನೇನೋ ಭಗ್ನ ಪ್ರೇಮಿಯಾದೆ, ಆದ್ರೂ ತೊಂದ್ರೆ ಇಲ್ಲ.. ಅವಳು ಮನೆಯವರ ಮುಂದೆ ತಲೆತಗ್ಗಿಸುವ ಹಾಗಾಗಲಿಲ್ಲವಲ್ಲ...
ಇವನ್ನೆಲ್ಲಾ ಈಗ ಯಾಕೆ ಬರಿತಿದ್ದೇನೆ ಅಂದ್ರೆ, ಕೆಲವೇ ದಿನಗಳಲ್ಲಿ ಅವಳ ಮದುವೆ ನಡೆಯಲಿದೆ... ಅವಳು ಮದುವೆಗೆ ನನ್ನನ್ನು ಕರೆಯದೇ ಇದ್ರೂ ತೊಂದ್ರೆ ಇಲ್ಲ.. ನನ್ ಕಡೆಯಿಂದ HAPPY MARRIED LIFE.......
ಪ್ರೀತಿಯಿಂದ ಸುನಿಲ್.....

Wednesday, March 19, 2008

ನಗರದ ಬದುಕಿನ ನಡುವೆ.....ಆಧುನಿಕತೆಯ ಭರದಲ್ಲಿ, ನಗರ ಜೀವನದ ಪಯಣದಲ್ಲಿ ಬದುಕು ಬದಲಾಗುತ್ತಿದೆ. ಯಾಂತ್ರೀಕೃತ ಬದುಕು ರೂಢಿಯಾಗಿಬಿಟ್ಟಿದೆ. ಇವೆಲ್ಲದರ ನಡುವೆ ನಾನು ನನ್ನತನವನ್ನು ಕಳೆದುಕೊಂಡಿದ್ದೇನೆ ಎಂದನಿಸುತ್ತಿದೆ...
ಯೋಚಿಸಲು ಸಮಯ ಸಿಕ್ಕಾಗಲೆಲ್ಲ ನೆನಪಾಗುವುದು ಅದೇ ಹಳೆಯ ಕಾಲೇಜು ದಿನಗಳು. ಸುಖ, ದುಖ, ನೋವು, ನಲಿವುಗಳಿಂದ ಕೂಡಿದ್ದ ಆ ದಿನಗಳು ಈಗಲೂ ಕಣ್ಮುಂದೆ ಸುಳಿಯುತ್ತಿದೆ. ತರಗತಿಗೆ ಚಕ್ಕರ್ ಹೊಡೆದು ಭಟ್ರ ಹೋಟೆಲಿಗೆ ಹೋಗಿ ಪಟ್ಟಾಂಗ ಹೊಡೆಯುತ್ತಾ, ಲೇಡೀಸ್ ಹಾಸ್ಟೆಲ್ಗೆ ಹೋಗುವ ದಾರಿಯಲ್ಲಿನ ಮರದ ಕಟ್ಟೆಯಲ್ಲಿ ಕುಳಿತು ಚಹಾ ಕುಡಿಯುತ್ತಿದ್ದುದು ಅವಿಸ್ಮರಣೀಯ... ನಡುವೆ ಗೆಳೆಯ ಸ್ಟ್ಯಾನಿಯ ಹಾಸ್ಯ ಚಟಾಕಿಗಳನ್ನು ಮರೆಯಲು ಸಾಧ್ಯವೇ ಇಲ್ಲ. ಈಗಲೂ ಜೊತೆಗೆ ಅವನಿಲ್ಲದ ಕೊರತೆ ನನ್ನನ್ನು ಕಾಡುತ್ತಿದೆ.
೯ ಗಂಟೆಗೆ ತರಗತಿ ಆರಂಭಗೊಂಡರೂ ೯.೪೫ಕ್ಕೆ ತರಗತಿಯೊಳಗೆ ಹೋಗುತ್ತಿದ್ದುದು, ಉಪನ್ಯಾಸಕರ ಅವಗಣನೆ, ಕೆಲವೊಮ್ಮೆ ತರಗತಿಯಿಂದ ಹೊರಗೆ ಕಳಿಸುತ್ತಿದ್ದುದು, ಮಧ್ಯಾಹ್ನ ಊಟ ಮುಗಿಸಿ ಕಾರಿಡಾರಿನಲ್ಲಿ ಸುತ್ತಾಡುತ್ತಿದ್ದುದು, ಸಂಜೆ ಕಾಲೇಜಿನ ಗೇಟ್ ಹಾಕುವವರೆಗೂ ಅಲ್ಲೇ ಇರುತ್ತಿದ್ದುದು ಅಚ್ಹಳಿಯದೆ ಮನಸಿನಲ್ಲಿದೆ. ಆದರೆ ಅವೆಲ್ಲವೂ ಈಗ ಕೇವಲ ನೆನಪು ಮಾತ್ರ. ಇನ್ನೆಂದಿಗೂ ಮರಳಿ ಬಾರದ ಸಿಹಿ ನೆನಪುಗಳು...
ಈಗೇನಿದ್ದರೂ ಆಫೀಸ್ ಮತ್ತು ರೂಮ್ ಎಂಬೆರಡು ಪ್ರಪಂಚ ಮಾತ್ರ... ದಿನದಲ್ಲಿ ಎಂಟು ಗಂಟೆಯ ಆಫೀಸ್ ಕೆಲಸ ಮುಗಿಸಿದರೆ ಮತ್ತೆ ರೂಮ್ಗೆ ಹಿಂತಿರುಗುವುದು. ಒಂದಷ್ಟು ಹೊತ್ತು ಕಾಲಹರಣಕ್ಕಾಗಿ ಟಿ.ವಿ ವೀಕ್ಷಣೆ. ಮೊಬೈಲ್ ನಲ್ಲಿ ಕರೆನ್ಸಿ ಇದ್ರೆ ಯಾರಾದರೂ ಗೆಳೆಯರೊಂದಿಗೆ ಸ್ವಲ್ಪ ಹೊತ್ತು ಹರಟೆ.. ಅಲ್ಲಿಗೆ ಮುಗಿಯಿತು...
ಕೆಲವೊಮ್ಮೆ ಬೇಸರ ಆಗ್ತದೆ... ಇನ್ನೂ ಕೆಲವೊಮ್ಮೆ ಸಂತಸ ಆಗ್ತದೆ. ಆದ್ರೆ ಅದನ್ನು ಹಂಚಿಕೊಳ್ಳಲು ಯಾರೂ ಇಲ್ಲ... ನಗರ ಜೀವನದಲ್ಲಿ ಭಾವನೆಗಳಿಗೆ ಎಳ್ಳಷ್ಟೂ ಬೆಲೆಯಿಲ್ಲ... ಕೆಲವೊಮ್ಮೆ ಬದುಕು ಶೂನ್ಯ ಎಂದನಿಸಿದರೂ ಎಲ್ಲೋ ಒಂದೆಡೆ ನಿರೀಕ್ಷೆಯ ಒಸರು ಕಾಡ್ತಿದೆ....

Sunday, February 10, 2008

ಚಿತ್ರಚಾಪದ ಕುರಿತು ನನಗನಿಸಿದಂತೆ....


ಗೆಳೆಯ ಶ್ರೀನಿಧಿ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಕರೆದಾಗ ವಿಶೇಷವೇನು ಅನಿಸಲಿಲ್ಲ. ಎಲ್ಲರಂತೆ ಇವರೂ ತಮ್ಮಿಂದಾದಷ್ಟು ಬರೆದು ಒಂದಷ್ಟು ಹಣ ಖರ್ಚು ಮಾಡಿ ಪುಸ್ತಕವೊಂದನ್ನು ಬಿಡುಗಡೆ ಮಾಡುತ್ತಾರೆ. ಅದೇ ಮಾಮೂಲಿ ಪುಸ್ತಕ ಬಿಡುಗಡೆ, ಒಂದಷ್ಟು ಭಾಷಣ... ಅಲ್ಲಿಗೆ ಮುಗಿಯಿತು... ಹೀಗೆಲ್ಲ ಅಂದುಕೊಂಡು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ದ್ ಕಲ್ಚರ್ಗೆ ತೆರಳಿದವನಿಗೆ ಅಚ್ಹರಿ ಕಾದಿತ್ತು. ಒಂದು ರೀತಿಯಲ್ಲಿ ನಮ್ಮ ದಕ್ಷಿಣ ಕನ್ನಡದ ಯಾವುದೋ ಕಾರ್ಯಕ್ರಮಕ್ಕೆ ತೆರಳಿದ ಅನುಭವ. ಜೊತೆಗೆ ಬ್ಲಾಗ್ ಬರಹಗಾರರ ದಂಡೇ ಅಲ್ಲಿತ್ತು.

ಕಾರ್ಯಕ್ರಮ ಮಾತ್ರ ಅರ್ಧ ಗಂಟೆ ತಡವಾಗಿಯೇ ಆರಂಭವಾಗಿತ್ತು. ಪುಸ್ತಕ ಬಿಡುಗಡೆ ಮಾಡಿದ ವೆಂಕಟ ಸುಬ್ಬಯ್ಯ ಅವರು ಮಾತನಾಡಿದ ರೀತಿಯಿಂದಲೇ ಈ ಪುಸ್ತಕದಲ್ಲೇನೋ ವಿಶೇಷತೆಯಿದೆ ಅನಿಸಿತು. ಅದು ಹೊಗಳುವಿಕೆಯಾಗಿರಲಿಲ್ಲ. ಆದರೆ ವಾಸ್ತವವನ್ನು ಹೊರಗಿಟ್ಟಿದ್ದರು. ಮುಕ್ತವಾಗಿ ಪುಸ್ತಕದ ಬಗೆಗಿನ ತಮ್ಮ ಅನುಭವಗಳನ್ನು ಹರಿಯ ಬಿಟ್ಟರು. ಈ ಇಳಿ ವಯಸ್ಸಿನಲ್ಲೂ ನವಯುವಕನಂತೆ ಮಾತನಾಡಿ ಸಭೆಯಲ್ಲಿ ನಗೆಯುಬ್ಬಿಸಿದರು.

ಪುಸ್ತಕ ಕೈಗೆ ಸಿಕ್ಕಿದ ಕೂಡಲೇ ಪೂರ್ತಿ 58 ಪುಟಗಳನ್ನು ವೇಗವಾಗಿ ತಿರುವಿ ಹಾಕಿದೆ. ಬಳಿಕ ಚಿತ್ರಚಾಪ ತಂಡದ ಮುನ್ನುಡಿಯೋದಿದೆ. ಖುಷಿಯನಿಸಿತು. ಮುಂದಿನ ಪುಟದಲ್ಲಿ ವಸುಧೇಂದ್ರ ಬರೆದದ್ದನ್ನು ಓದಿದೆ. ತುಂಬಾ ಚೆನ್ನಾಗಿ ಬರೆದಿದ್ದಾರೆ. ಐವರು ಲೇಖಕರ ಬರಹಗಳ ಕುರಿತೂ ಚಿಕ್ಕದಾಗಿ ಆದರೂ ಚೊಕ್ಕವಾಗಿ ಬರೆದಿದ್ದಾರೆ.

ಮಲೆನಾಡು, ದೇವಕಾರ ಮತ್ತು ಭುವಿಯ ಸ್ವಗತ- ಮೂರೂ ಕವನಗಳನ್ನು ಮೊದಲು ಓದಿದೆ. ಪ್ರಕೃತಿಯನ್ನೇ ಕೇಂದ್ರವಾಗಿರಿಸಿ ಬರೆದ ಕವನಗಳು. ಪ್ರಕೃತಿಯ ಕುರಿತಾದ ಮರುಕ, ನೋವು, ಸೌಂದರ್ಯ ಎಲ್ಲವೂ ಅದರಲ್ಲಡಗಿದೆ. ಭುವಿಯ ಸ್ವಗತದಲ್ಲಿನ ಸಾಲುಗಳು ಮಾತ್ರ ಅರಣ್ಯ ರೋದನವೇ ಸರಿ...


ಪರಿಸರದ ನಾಲ್ಕು ಚಿತ್ರಗಳು ಎಂಬ ಬರಹದಲ್ಲಿ ನಾಲ್ಕು ವಿಷಯಗಳನ್ನು ಲೇಖಕರು ಆಯ್ಕೆ ಮಾಡಿದ್ದಾರೆ. ಕೆರೆಯೊಂದರ ದುರವಸ್ಥೆಯ ಚಿತ್ರಣ ಕಣ್ಣಿಗೆ ಕಟ್ಟುವಂತಿದೆ. ದಕ್ಷಿಣ ಕನ್ನಡದ ಕೃಷಿಯ ಕುರಿತು ಬರೆದಿರುವ ಲೇಖನದಲ್ಲಿ ಕೃಷಿಕನ, ಕೃಷಿಯ ಕಷ್ಟದ ಅರಿವಾಗುತ್ತದೆ. ಅದರಲ್ಲಿನ ಮೂರನೆಯ ಲೇಖನ ನೆಲೆ ಅರ್ಥಪೂರ್ಣವಾಗಿದೆ. "ಕರೆಂಟು ಜಗತ್ತಿಗೆ ಕೊಡುವ ಆತುರದಲ್ಲಿ ನಾವೆಲ್ಲ ನಮ್ಮ ಜಮೀನು, ನೆಲ, ಕಳೆದುಕೊಂಡೆವು, ನಮ್ಮ ಪುಣ್ಯಕ್ಕೆ ನಮಗಿಲ್ಲೇ ಜಾಗ ಸಿಕ್ಕಿತು, ಹತ್ತಿರದಲ್ಲೇ. ಆದರೆ ಮೊದಲಿನ ಹಂತಕ್ಕೆ ಬರಲು ಇನ್ನೂ ಸಾಧ್ಯವಾಗಿಲ್ಲ. ಇಷ್ಟೆಲ್ಲ ಮಾಡಿದರೂ, ನಮ್ಮಗಳ ಮನೆಗೆಲ್ಲ ಇನ್ನೂ ವಿದ್ಯುತ್ ಬಂದಿಲ್ಲ, ಅದೇನೋ ಅನ್ನುತ್ತಾರಲ್ಲ, ದೀಪದ ಬುಡ ಕತ್ತಲೆ ಅಂತ, ಹಾಗಾಗಿದೆ ನಮ್ಮ ಕಥೆ."- ಎಂಬ ಈ ವಾಕ್ಯಗಳಲ್ಲಿ ಲೇಖಕರ ಸಂಪೂರ್ಣ ಸಿಟ್ಟು, ವೇದನೆ, ಅಸಮಾಧಾನ ಅಡಗಿರುವುದನ್ನು ಗಮನಿಸಬಹುದು. ಅಣೆಕಟ್ಟಿನ ಭರದಲ್ಲಿ ಮುಳುಗಿದ ಊರುಗಳ ಕುರಿತು ಬೆಳಕು ಚೆಲ್ಲುವ ಸುಂದರ ಮತ್ತು ಮನಮುಟ್ಟುವ ಲೇಖನವಿದು. ನಾಲ್ಕನೆಯ ಲೇಖನ ಅಲೆ ಕರಾವಳಿಯ ಮೀನುಗಾರ ಕುಟುಂಬಗಳು ಕಡಲ್ಕೊರೆತ ಉಂಟಾದಾಗ ಅನುಭವಿಸುವ ಬವಣೆಯ ಕುರಿತು ಹೇಳುತ್ತದೆ.

ಇದು ಎಂಥ ಲೋಕವಯ್ಯ- ಲೇಖನ ಚಾರಣಕ್ಕೆ ಸಂಭಂಧಪಟ್ಟದ್ದು. ಚಾರಣದ ನವಿರಾದ ವರ್ಣನೆಯ ಜೊತೆಗೆ ಒಂದಷ್ಟು ಹಾಸ್ಯ ಪ್ರಜ್ನೆ ಲೇಖನದಲ್ಲಿದ್ದು ಓದಿಸಿಕೊಂಡು ಹೋಗುತ್ತದೆ. ಕೆಲವೆಡೆಗಳಲ್ಲಿ ವರ್ಣನೆ ಬೋರ್ ಹೊಡೆಸಿದ್ದೂ ಇದೆ.

ಹಳ್ಳಿಯ ಪರಿಸರದಲ್ಲೊಂದು ಸುತ್ತು, ಲೇಖನ ವಿಭಿನ್ನವಾಗಿದೆ. ಇಲ್ಲಿ ಲೇಖಕರು ಕಥೆಯನ್ನು ಗೆಳೆಯನೊಬ್ಬನಿಗೆ ವರ್ಣಿಸುವಂತೆ ವಿವರಿಸಿದ್ದಾರೆ. ಪಕ್ಕಾ ಹಳ್ಳಿಗಾಡಿನ ತೋಟ, ಬೆಟ್ಟ ಗುಡ್ಡಗಳನ್ನು ವಿವರಿಸಿರುವ ಪರಿ ಮಾತ್ರ ಉತ್ತಮವಾಗಿದೆ.. "ಬ್ಯಾಟರಿಯ ಬೆಳಕಿನಲ್ಲಿ ನನಗೆ ರಾಜಿ, ಸುಮಂತನೆಂಬ ಮರವನ್ನು ತಬ್ಬಿ ನಿಂತ ಬಳ್ಳಿಯಂತೆ ಕಾಣಿಸಿದಳು" - ಈ ವಾಕ್ಯವನ್ನೊಮ್ಮೆ ಗಮನಿಸಿ.. ಏನೋ ವಿಶೇಷವಿದೆ... ತಬ್ಬಿ ನಿಂತ ಗಂಡ-ಹೆಂಡತಿಯನ್ನು ಮರ ಮತ್ತು ಬಳ್ಳಿಗೆ ಹೋಲಿಸಿದ್ದಾರೆ.. ಲೇಖಕರ ಭಾವನಾತ್ಮಕ ಚಿಂತನೆಯನ್ನು ಇಲ್ಲಿ ಗಮನಿಸಬಹುದು.

ಅರಿವೆಷ್ಟಿದೆ ನಮಗೆ ಲೇಖನದಲ್ಲಿ ಚಾರಣಿಗರ ಉತ್ಸಾಹಕ್ಕೆ ತಣ್ಣೀರೆರಚುವ ಸಾಕಷ್ಟು ಜನರಿಗೆ ತಕ್ಕ ಉತ್ತರವಿದೆ.. "ನೀವು ಏನು ನೋಡಬೇಕು ಅಂತಿದ್ದೀರೋ ಈಗಲೇ ನೋಡಿ. ನಗರೀಕರಣವು ಬಹಳ ವೇಗವಾಗಿ ಬೆಳೆಯುತ್ತಿದೆ" ಎಂಬ ಲೇಖಕರ ಚಾರಣದ ಗುರುಗಳ ಮಾತುಗಳನ್ನು ಉಲ್ಲೇಖಿಸಿರುವುದು ನೂರಕ್ಕೆ ನೂರರಷ್ಟು ಸತ್ಯ. ಆಧುನೀಕರಣದ ಭರದಲ್ಲಿ ಮುಂದೆ ಸಾಗುತ್ತಿರುವ ಈ ಕಾಲಘಟ್ಟದಲ್ಲಿ ಅಳಿದುಳಿದಿರುವ ಅರಣ್ಯಗಳನ್ನು, ಜಲಪಾತಗಳನ್ನು ನೋಡಲು ಸಾಧ್ಯವಾದರೆ ಬದುಕು ಸಾರ್ಥಕ....

"ಮಾನವನಾಗಿ ಹುಟ್ಟೀದ್ ಮೇಲೆ ಏನೇನ್ ಕಂಡಿ, ಸಾಯೋದ್ರೊಳಗೆ ಒಮ್ಮೆ ನೋಡು ಕೆಮ್ಮಣ್ಣ್ ಗುಂಡಿ!"- ಇದು ಕೆಮ್ಮಣ್ಣು ಗುಂಡಿಯ ವೈಭವವನ್ನು ವರ್ಣಿಸುವ ಬರಹ.. ಇಲ್ಲಿ ಪ್ರಕೃತಿಯ ವರ್ಣಯೆಯ ಜೊತೆಗೆ ಅಗತ್ಯವಿಲ್ಲದ ಕೆಲವೊಂದು ವಿಚಾರಗಳೂ ಇವೆ.. ಆದರು ಪ್ರಸ್ತುತ ಪಡಿಸಿರುವ ರೀತಿ ಮಾತ್ರ ಗಮನಾರ್ಹವಾಗಿದೆ..

ಒಟ್ಟಿನಲ್ಲಿ ಹೇಳುವುದಾದರೆ ಪುಸ್ತಕ ಒಪ್ಪವಾಗಿ, ಓರಣವಾಗಿದೆ. ಪ್ರಕೃತಿಯ ಬಗ್ಗೆ ಈ ಯುವಕರಿಗಿರುವ ಪ್ರೀತಿ, ಗೌರವ ಎಲ್ಲರಲ್ಲೂ ಇದ್ದಿದ್ದರೆ ಇಂದು ಅರಣ್ಯಗಳು ಇಷ್ಟರ ಮಟ್ಟಿಗೆ ನಾಶವಾಗುತ್ತಿರಲಿಲ್ಲ.. ಚಿತ್ರ ಚಾಪದಲ್ಲಿನ ಚಿತ್ರಗಳು ಮಾತ್ರ ಕಳೆಗುಂದಿವೆ. ಕಲಾವಿದ ಇನ್ನಷ್ಟು ಉತ್ತಮವಾಗಿ ಚಿತ್ರಗಳನ್ನು ಬಿಡಿಸಬಹುದಿತ್ತು. ಸಮಯದ ಅಭಾವವೋ ಅಥವಾ ನಿರ್ಲಕ್ಷ್ಯವೋ ಒಟ್ಟಿನಲ್ಲಿ ಎಲ್ಲಾ ಚಿತ್ರಗಳಲ್ಲೂ ಎದ್ದು ಕಾಣುತ್ತವೆ. ಉಳಿದಂತೆ ಪುಸ್ತಕದ ಬಗ್ಗೆ ದೂರು ಹೇಳಲು ನನ್ನಲ್ಲೇನೂ ಇಲ್ಲ.. ೫೫ ರೂಪಾಯಿಯ ಪುಸ್ತಕವನ್ನು ಕೊಂಡು ಓದುವುದರಿಂದ ಯಾವುದೇ ನಿರಾಸೆಯಾಗದು ಎಂಬುದು ನನ್ನ ಅನಿಸಿಕೆ.


ಸುನಿಲ್....