Friday, March 21, 2008

ಮತ್ತೆ ಹಳೆಯ ನೆನಪುಗಳು...

ಆಕೆಯನ್ನು ನಾನ್ಯಾವತ್ತೂ ಮರೆಯಲು ಸಾಧ್ಯವಿಲ್ಲ... ಏಕೆಂದರೆ ಜೀವನದಲ್ಲಿ ನಾನು ಮೊತ್ತ ಮೊದಲು ಇಷ್ಟಪಟ್ಟಿದ್ದ ಹುಡುಗಿ ಅವಳಾಗಿದ್ದಳು... ಆರಂಭದಲ್ಲಿ ಅದೊಂಥರ ಹುಚ್ಹು ಪ್ರೀತಿಯಾಗಿತ್ತು. ಪ್ರಥಮ ಪಿ.ಯು.ಸಿ ವಿದ್ಯಾರ್ಥಿಯೊಬ್ಬನ ಮನಸಿನಲ್ಲಿ ಮೊಳಕೆಯೊಡೆದಿದ್ದ ಅಪ್ರಭುದ್ದ, ಅಪಕ್ವ ಪ್ರೀತಿ.. ಪಿ.ಯು.ಸಿ ಮುಗಿಯಿತು. Degree life ಆರಂಭವಾಯಿತು. ಆದರೂ ನಾನವಳಲ್ಲಿ ನನ್ನ ಪ್ರೀತಿಯನ್ನು ತಿಳಿಸಿರಲಿಲ್ಲ. ಅವಳಿಗೆ ಇಷ್ಟವಿದೆಯೋ ಇಲ್ಲವೋ ಎಂದು ಕೂಡ ಗೊತ್ತಿರಲಿಲ್ಲ. ಆದ್ರೂ ಪ್ರೀತಿಸ್ತಿದ್ದೆ, ಆರಾಧಿಸ್ತಿದ್ದೆ.. ಕೊನೆಗೂ ದ್ವಿತೀಯ ಪದವಿಯಲ್ಲಿ ನಾನವಳ ಮುಂದೆ ಮನ ಬಿಚ್ಹಿದ್ದೆ. ಆದ್ರೆ "ನೋಡು, ನಾ ನಿನ್ನ ಇಷ್ಟಪಡ್ತಿದ್ದೀನಿ", ಅಂದಾಗ "ನಂಗೊತ್ತಿತ್ತು" ಅಂದಿದ್ದಳು.. ಅದು ಹೇಗೆ ಅವಳಿಗೆ ತಿಳಿದಿತ್ತೋ ನನಗರಿಯದು. ಏಕೆಂದರೆ ನಾನು ಯಾವುದೇ ಗೆಳೆಯರಲ್ಲೂ ಆ ಪ್ರೀತಿಯ ಬಗ್ಗೆ ತಿಳಿಸಿರಲಿಲ್ಲ. ಮತ್ತು ತಪ್ಪಿಯೂ ವಿಶೇಷವಾಗಿ ಅವಳನ್ನು ಮಾತನಾಡಿಸುವುದಾಗಲಿ, ನೋಡುವುದಾಗಲಿ ಇರಲಿಲ್ಲ.. ಪ್ರೀತಿ ಮನಸೊಳಗೆ ಇತ್ತೇ ವಿನಃ ಹೊರಬಂದಿರಲಿಲ್ಲ. ನಾನವಳನ್ನು ಇಷ್ಟಪಡ್ತಿದ್ದೀನಿ ಅಂದಾಗ "ಆಗಲ್ಲ" ಅಂದಿದ್ದಳು. ಏಕೆಂದು ಪ್ರಶ್ನಿಸಿದಾಗ, "ಮನೆಯಲ್ಲಿ ಗೊತ್ತಾದ್ರೆ problem ಆಗುತ್ತೆ" ಎಂಬ ಉತ್ತರ ಬಂದಿತ್ತು.. ಅವತ್ತೇ ಕೊನೆ, ಮತ್ತೆಂದೂ ನಾನವಳಲ್ಲಿ ಮಾತನ್ನೇ ಆಡಿರಲಿಲ್ಲ... ಯಾಕಂದ್ರೆ ಅವಳು ನನ್ನ ಮುಖವನ್ನೇ ನೋಡ್ತಿರಲಿಲ್ಲ...!
ಇವೆಲ್ಲ ಕಳೆದು ಹೆಚ್ಹು ಕಡಿಮೆ ಎರಡುವರೆ ವರ್ಷಗಳಾಗಿವೆ. ನನಗೀಗಲೂ ಅವಳ ಮೇಲೆ ಗೌರವವಿದೆ. ಯಾಕಂದ್ರೆ ನಾನವತ್ತು ಅವಳನ್ನು ಇಷ್ಟಪಡ್ತಿದ್ದೀನಿ ಅಂದಾಗ "ಮನೆಯಲ್ಲಿ ಗೊತ್ತಾದ್ರೆ problem ಆಗುತ್ತೆ" ಅಂದ್ದಿದ್ದಳಲ್ಲ... ಮನೆಯವರ ಬಗ್ಗೆ ಯೋಚನೆ ಮಾಡಿದ್ಳಲ್ಲ... ಅದ್ಕೇ.. ಈಗಲೂ ನನ್ನನ್ನೊಂದು ಪ್ರಶ್ನೆ ಕಾಡ್ತಿದೆ. ಮನೆಯಲ್ಲಿ ಗೊತ್ತಾಗದೆ ಇದ್ರೆ ಅವಳು ನನ್ನನ್ನು ಇಷ್ಟಪಡ್ತಿದ್ಳಾ? ಅವಳಿಗೆ ನನ್ ಮೇಲೆ ಸ್ವಲ್ಪನಾದ್ರೂ ಪ್ರೀತಿ ಇತ್ತಾ? ಅದೇನೆ ಇರಲಿ ಅಂದಿನ ಅವಳ ನಿರ್ಧಾರಕ್ಕೆ ಹ್ಯಾಟ್ಸಾಫ್... ನಾನೇನೋ ಭಗ್ನ ಪ್ರೇಮಿಯಾದೆ, ಆದ್ರೂ ತೊಂದ್ರೆ ಇಲ್ಲ.. ಅವಳು ಮನೆಯವರ ಮುಂದೆ ತಲೆತಗ್ಗಿಸುವ ಹಾಗಾಗಲಿಲ್ಲವಲ್ಲ...
ಇವನ್ನೆಲ್ಲಾ ಈಗ ಯಾಕೆ ಬರಿತಿದ್ದೇನೆ ಅಂದ್ರೆ, ಕೆಲವೇ ದಿನಗಳಲ್ಲಿ ಅವಳ ಮದುವೆ ನಡೆಯಲಿದೆ... ಅವಳು ಮದುವೆಗೆ ನನ್ನನ್ನು ಕರೆಯದೇ ಇದ್ರೂ ತೊಂದ್ರೆ ಇಲ್ಲ.. ನನ್ ಕಡೆಯಿಂದ HAPPY MARRIED LIFE.......
ಪ್ರೀತಿಯಿಂದ ಸುನಿಲ್.....

Wednesday, March 19, 2008

ನಗರದ ಬದುಕಿನ ನಡುವೆ.....



ಆಧುನಿಕತೆಯ ಭರದಲ್ಲಿ, ನಗರ ಜೀವನದ ಪಯಣದಲ್ಲಿ ಬದುಕು ಬದಲಾಗುತ್ತಿದೆ. ಯಾಂತ್ರೀಕೃತ ಬದುಕು ರೂಢಿಯಾಗಿಬಿಟ್ಟಿದೆ. ಇವೆಲ್ಲದರ ನಡುವೆ ನಾನು ನನ್ನತನವನ್ನು ಕಳೆದುಕೊಂಡಿದ್ದೇನೆ ಎಂದನಿಸುತ್ತಿದೆ...
ಯೋಚಿಸಲು ಸಮಯ ಸಿಕ್ಕಾಗಲೆಲ್ಲ ನೆನಪಾಗುವುದು ಅದೇ ಹಳೆಯ ಕಾಲೇಜು ದಿನಗಳು. ಸುಖ, ದುಖ, ನೋವು, ನಲಿವುಗಳಿಂದ ಕೂಡಿದ್ದ ಆ ದಿನಗಳು ಈಗಲೂ ಕಣ್ಮುಂದೆ ಸುಳಿಯುತ್ತಿದೆ. ತರಗತಿಗೆ ಚಕ್ಕರ್ ಹೊಡೆದು ಭಟ್ರ ಹೋಟೆಲಿಗೆ ಹೋಗಿ ಪಟ್ಟಾಂಗ ಹೊಡೆಯುತ್ತಾ, ಲೇಡೀಸ್ ಹಾಸ್ಟೆಲ್ಗೆ ಹೋಗುವ ದಾರಿಯಲ್ಲಿನ ಮರದ ಕಟ್ಟೆಯಲ್ಲಿ ಕುಳಿತು ಚಹಾ ಕುಡಿಯುತ್ತಿದ್ದುದು ಅವಿಸ್ಮರಣೀಯ... ನಡುವೆ ಗೆಳೆಯ ಸ್ಟ್ಯಾನಿಯ ಹಾಸ್ಯ ಚಟಾಕಿಗಳನ್ನು ಮರೆಯಲು ಸಾಧ್ಯವೇ ಇಲ್ಲ. ಈಗಲೂ ಜೊತೆಗೆ ಅವನಿಲ್ಲದ ಕೊರತೆ ನನ್ನನ್ನು ಕಾಡುತ್ತಿದೆ.
೯ ಗಂಟೆಗೆ ತರಗತಿ ಆರಂಭಗೊಂಡರೂ ೯.೪೫ಕ್ಕೆ ತರಗತಿಯೊಳಗೆ ಹೋಗುತ್ತಿದ್ದುದು, ಉಪನ್ಯಾಸಕರ ಅವಗಣನೆ, ಕೆಲವೊಮ್ಮೆ ತರಗತಿಯಿಂದ ಹೊರಗೆ ಕಳಿಸುತ್ತಿದ್ದುದು, ಮಧ್ಯಾಹ್ನ ಊಟ ಮುಗಿಸಿ ಕಾರಿಡಾರಿನಲ್ಲಿ ಸುತ್ತಾಡುತ್ತಿದ್ದುದು, ಸಂಜೆ ಕಾಲೇಜಿನ ಗೇಟ್ ಹಾಕುವವರೆಗೂ ಅಲ್ಲೇ ಇರುತ್ತಿದ್ದುದು ಅಚ್ಹಳಿಯದೆ ಮನಸಿನಲ್ಲಿದೆ. ಆದರೆ ಅವೆಲ್ಲವೂ ಈಗ ಕೇವಲ ನೆನಪು ಮಾತ್ರ. ಇನ್ನೆಂದಿಗೂ ಮರಳಿ ಬಾರದ ಸಿಹಿ ನೆನಪುಗಳು...
ಈಗೇನಿದ್ದರೂ ಆಫೀಸ್ ಮತ್ತು ರೂಮ್ ಎಂಬೆರಡು ಪ್ರಪಂಚ ಮಾತ್ರ... ದಿನದಲ್ಲಿ ಎಂಟು ಗಂಟೆಯ ಆಫೀಸ್ ಕೆಲಸ ಮುಗಿಸಿದರೆ ಮತ್ತೆ ರೂಮ್ಗೆ ಹಿಂತಿರುಗುವುದು. ಒಂದಷ್ಟು ಹೊತ್ತು ಕಾಲಹರಣಕ್ಕಾಗಿ ಟಿ.ವಿ ವೀಕ್ಷಣೆ. ಮೊಬೈಲ್ ನಲ್ಲಿ ಕರೆನ್ಸಿ ಇದ್ರೆ ಯಾರಾದರೂ ಗೆಳೆಯರೊಂದಿಗೆ ಸ್ವಲ್ಪ ಹೊತ್ತು ಹರಟೆ.. ಅಲ್ಲಿಗೆ ಮುಗಿಯಿತು...
ಕೆಲವೊಮ್ಮೆ ಬೇಸರ ಆಗ್ತದೆ... ಇನ್ನೂ ಕೆಲವೊಮ್ಮೆ ಸಂತಸ ಆಗ್ತದೆ. ಆದ್ರೆ ಅದನ್ನು ಹಂಚಿಕೊಳ್ಳಲು ಯಾರೂ ಇಲ್ಲ... ನಗರ ಜೀವನದಲ್ಲಿ ಭಾವನೆಗಳಿಗೆ ಎಳ್ಳಷ್ಟೂ ಬೆಲೆಯಿಲ್ಲ... ಕೆಲವೊಮ್ಮೆ ಬದುಕು ಶೂನ್ಯ ಎಂದನಿಸಿದರೂ ಎಲ್ಲೋ ಒಂದೆಡೆ ನಿರೀಕ್ಷೆಯ ಒಸರು ಕಾಡ್ತಿದೆ....