Monday, October 31, 2011

ಕಾಲೇಜಿನ ನೆನಪುಗಳು ಮತ್ತೊಮ್ಮೆ..

ನಿನ್ನೆಯಷ್ಟೇ ಅಕ್ಷತಾ ಕಾಲೇಜು ಜೀವನದ ಸವಿನೆನಪುಗಳನ್ನು ಮತ್ತೆ ಮೆಲುಕು ಹಾಕುವ ಒಂದಷ್ಟು ಫೋಟೋಗಳನ್ನು ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ್ಳು.. ಆ ಮೂಲಕ ಕಳೆದು ಹೋದ, ಮತ್ತೆಂದು ಬಾರದ ಆ ದಿನಗಳ ಬಗ್ಗೆ ಮತ್ತಷ್ಟು ಆಸೆಯನ್ನು ಮನಸ್ಸಿನ ಮೂಲೆ ಮೂಲೆಗೂ ತುಂಬಿದ್ದಾಳೆ..

ಮೂರು ವರ್ಷದ ಡಿಗ್ರೀ ಲೈಫ್ ಅವಿಸ್ಮರಣೀಯ... ಪ್ರತಿಯೊಬ್ಬರಿಗೂ ಅವರವರ ಕಾಲೇಜು ಲೈಫ್ ತುಂಬಾ ಮೆಮೊರಬಲ್ ಆಗಿರತ್ತೆ.. ನಮ್ಮದೂ ಹಾಗೆ ಅನಿಸ್ಬೋದು.. ಆದ್ರೆ ಬೇರೆಯವ್ರಿಗಿಂತ ವಿಭಿನ್ನವಾದ ಹಲವಾರು ಅನುಗಳನ್ನು ನಾವು ಪಡ್ಕೊಂಡಿದ್ವಿ..

ಫಸ್ಟ್ ಇಯರ್ ನಲ್ಲಿ ಯಾರೂ ಅಷ್ಟೊಂದು ಪರಿಚಿತರಾಗಿರಲಿಲ್ಲ. ಪಿಯುಸಿನಲ್ಲಿ ಒಟ್ಟಿಗಿದ್ದವರು ಮಾತ್ರ ಹೆಚ್ಚು ಮಿಂಗಲ್ ಆಗ್ತಿರ್ತಿದ್ರು.. ಆದ್ರೆ ದಿನಗಳೆದಂತೆ ಡಿಗ್ರಿಗೆ ಹೊಸದಾಗಿ ಸೇರ್ಕೊಂಡವ್ರು ಎಲ್ರ ಜೊತೆಗೆ ಕ್ಲೋಸ್ ಆಗತೊಡಗಿದ್ರು. ನಮ್ಮ ಜರ್ನಲಿಸಂ ಕ್ಲಾಸ್ ಒಂದು ಕುಟುಂಬದಂತೆ ಆಗಿತ್ತು. ಇದಕ್ಕೆಲ್ಲ ಮುಖ್ಯ ಕಾರಣ ಅಂದ್ರೆ ನಮ್ಮ ಜರ್ನಲಿಸಂ ಲೆಕ್ಟರರ್ ಭಾಸ್ಕರ್ ಹೆಗಡೆ ಅಂದ್ರೆ ತಪ್ಪಾಗಲಿಕ್ಕಿಲ್ಲ. ಯಾಕಂದ್ರೆ ನಮಗೆ ಅಷ್ಟೊಂದು ಫ್ರೀಡಂ ಕೊಟ್ಟಿದ್ರು. ಮಾತ್ರವಲ್ಲ ಒಂದು ಕುಟುಂಬದಂತೆ ಇರೋಕೆ ಬೇಕಾದ ಪೂರಕ ವಾತಾವರಣವನ್ನು ಅವರೇ ಕಲ್ಪಿಸಿಕೊಟ್ಟಿದ್ರು.

ನಮ್ಮೆಲ್ಲರ ಆತ್ಮೀಯತೆಗೆ ಹೆಚ್ಚಿನ ಪಾತ್ರ ವಹಿಸಿದ್ದು ಜರ್ನಲಿಸಂ ಲ್ಯಾಬ್ ಅಂದ್ರೆ ತಪ್ಪಾಗಲಿಕ್ಕಿಲ್ಲ. ಯಾಕಂದ್ರೆ ಇಡೀ ಕಾಲೇಜಲ್ಲಿ ಡಿಸಿಪ್ಲಿನ್ ಕಮಿಟಿಯವ್ರು ಬರದೆ ಇದ್ದ ಜಾಗ ಅಂದ್ರೆ ಬಹುಶ ಅದೊಂದೇ ಆಗಿತ್ತು. ಬೇರೆಲ್ಲ ಕ್ಲಾಸ್ ಗಳತ್ತನೂ ಡಿಸಿಪ್ಲಿನ್ ಕಮಿಟಿಯಲ್ಲಿದ್ದ ಲೆಕ್ಟರರ್ಸ್ ಒಂದು ಕಣ್ಣಿಟ್ಟಿದ್ರು. ಯಾವುದಾದ್ರೂ ಒಂದು ಕ್ಲಾಸ್ ನಿಂದ ಸ್ವಲ್ಪ ಜಾಸ್ತಿ ಸೌಂಡ್ ಬಂದ್ರೂ ಅತ್ತ ಓಡೋಡಿ ಹೋಗ್ತಿದ್ರು. ಆದ್ರೆ ನಮ್ಮ ಜರ್ನಲಿಸಂ ಲ್ಯಾಬ್ ಇದ್ದಿದ್ದು ಬೇಸ್ ಮೆಂಟ್ ನಲ್ಲಿ. ಮಾತ್ರವಲ್ಲ ಪಕ್ಕದಲ್ಲೇ ನಮ್ಮ ಜರ್ನಲಿಸಂ ಡಿಪಾರ್ಟ್ ಮೆಂಟ್ ಸಹ ಇತ್ತು. ನಮ್ಮ ಡಿಪಾರ್ಟ್ ಮೆಂಟ್ ನ ಏಕೈಕ ಲೆಕ್ಚರರ್ ಕಂ ಹೆಚ್ಒಡಿ ಭಾಸ್ಕರ್ ಹೆಗ್ಡೆ ಯವರನ್ನು ದಾಟಿ ಯಾವ ಲೆಕ್ಟರರ್ಸ್ ಕೂಡ ಜರ್ನಲಿಸಂ ಲ್ಯಾಬ್ ಒಳಗೆ ಕಾಲಿಡ್ತಿರ್ಲಿಲ್ಲ.

ಹಾಗಾಗಿ ನಾವೆಷ್ಟೇ ಕೂಗಾಡಿದ್ರೂ, ಕೇಕೆ ಹಾಕಿದ್ರೂ ಬೇರೆ ಯಾರೂ ಬಂದು ಕೇಳ್ತಿರ್ಲಿಲ್ಲ. ತೀರಾ ಸೌಂಡ್ ಜಾಸ್ತಿಯಾದಾಗ ಭಾಸ್ಕರ್ ಹೆಗ್ಡೆ ಸರ್ ಬಂದು ಏನಾಯ್ತು ಅಂತ ಅದೇ ತಾಳ್ಮೆ ಬೆರೆತ ಧ್ವನಿಯಲ್ಲಿ ಕೇಳ್ತಿದ್ರು. ಅವರ ತಾಳ್ಮೆಗೆ ಹ್ಯಾಟ್ಸ್ ಆಫ್ ಹೇಳಲೇಬೇಕು.. ಆದ್ರೆ ಅವರು ಅಷ್ಟು ಹೇಳಿ ಲ್ಯಾಬ್ ನಿಂದ ಆಚೆ ಹೋಗ್ತಿದ್ದಂಗೆ ಮತ್ತೆ ನಮ್ಮ ಆರ್ಭಟ ಯಥಾಸ್ಥಿತಿಗೆ ಮರಳುತ್ತಿತ್ತು. ಇದು ಎಂದಿನ ದಿನಚರಿಯಾಗಿತ್ತು. ನಮ್ಮಲ್ಲಿ ಯಾರದಾದ್ರೂ ಬರ್ತ್ ಡೇ ಅಥವಾ ಇನ್ಯಾವುದೋ ಫಂಕ್ಷನ್ ಇದ್ರೆ ಕೇಳೋದೆ ಬೇಡ. ಕ್ಲಾಸ್ ಕಟ್, ಎಂಜಾಯ್ ಮೆಂಟ್ ಸ್ಟಾರ್ಟ್. ಪ್ರತಿಯೊಬ್ಬರ ಬರ್ತ್ ಡೇಯನ್ನೂ ನೆನಪಿಟ್ಟುಕೊಂಡಿದ್ದ ದೀಕ್ಷಾ ತಲೆಯಲ್ಲಿ ಅದ್ಯಾವ ಮೆಮೊರಿ ಕಾರ್ಡ್ ಇಟ್ಕೊಂಡಿದ್ಳೋ ಗೊತ್ತಿಲ್ಲ..

ಸೆಕೆಂಡ್ ಇಯರ್ ಎಂಡ್ ವರೆಗೂ ನಮ್ಮ ನೆಟ್ಟಿನ ಜರ್ನಲಿಸಂ ಲ್ಯಾಬ್ ಇತ್ತು. ಆದ್ರೆ ಫೈನಲ್ ಇಯರ್ ಗೆ ಬರ್ತಿದ್ದಂಗೆ ಪ್ರೀತಿಯ ಜರ್ನಲಿಸಂ ಲ್ಯಾಬ್ ಕಾಣೆಯಾಗಿತ್ತು. ಸ್ಟುಡಿಯೋ ಪರ್ಪಸ್ ಗೋಸ್ಕರ ಲ್ಯಾಬನ್ನು ತೆರವುಗೊಳಿಸಿದ್ರು. ಹಾಗಾಗಿ 0-2ನಲ್ಲಿ ಕುಳಿತು ಪಾಠ ಕೇಳುವ ಅನಿವಾರ್ಯ ಪರಿಸ್ಥಿತಿ ಉಂಟಾಗಿತ್ತು. ಅದೂ ಕಾರಿಡಾರ್ ಪಕ್ಕದಲ್ಲೇ. ಹಾಗಾಗಿ ಆರಂಭದಲ್ಲಿ ನಮ್ಮ ಆರ್ಭಟಕ್ಕೆ ಕೊಂಚ ಬ್ರೇಕ್ ಇದ್ದಿತ್ತು. ಆದ್ರೆ ಆ ಕ್ಲಾಸ್ ರೂಮ್ ಗೆ ಒಗ್ಗಿಕೊಳ್ತಿದ್ದಂಗೆ ನಿಧಾನವಾಗಿ ಮತ್ತೆ ಹಳೇ ಚಾಳಿ ಆರಂಭಿಸಿದ್ವಿ.

ಮೂರು ವರ್ಷದ ಸವಿನೆನಪುಗಳು ಸಾಕಷ್ಟಿವೆ. ಒಂದೊಂದಾಗಿ ಬರೀತೀನಿ.. ನಿಮಲ್ಲಿ ಆ ಮೂರು ವರ್ಷಗಳ ನೆನಪುಗಳಿದ್ರೆ ಶಾರ್ಟ್ ಆಗಿಯಾದ್ರೂ ಕಮೆಂಟ್ ಬಾಕ್ಸ್ ನಲ್ಲಿ ಹಾಕಿ.. ಅದನ್ನೇ ಮೂಲ ಪ್ರತಿಯಾಗಿರಿಸಿ ನೆನಪುಗಳ ಹಂದರವನ್ನು ಮತ್ತಷ್ಟು ಬಿಚ್ಚಿಡೋಣ....

Monday, October 10, 2011

ನಕ್ಸಲ್ ಹಾದಿ...???

ಎರಡು ದಿನಗಳ ರಜೆಯ ನಿಮಿತ್ತ ಶುಕ್ರವಾರವಷ್ಟೇ ಊರಿಗೆ ಹೋಗಿದ್ದೆ.. ಶನಿವಾರ ಬೆಳಿಗ್ಗೆ ಎದ್ದು ಟಿವಿ ಹಾಕ್ತಿದ್ದಂಗೆ ಬೆಳ್ತಂಗಡಿ ಸಮೀಪ ಸವಣಾಲು ಗ್ರಾಮದಲ್ಲಿ ನಕ್ಸಲರು ಮತ್ತು ಪೊಲೀಸರ ಮಧ್ಯೆ ನಡೆದ ಗುಂಡಿನ ಚಕಮಕಿಯ ಬ್ರೇಕಿಂಗ್ ನ್ಯೂಸ್ ಬರ್ತಿತ್ತು. ಎಎನ್ಎಫ್ ಸಿಬ್ಬಂದಿ ಮೃತಪಟ್ಟ ಬಗ್ಗೆಯೂ ವರದಿ ಪ್ರಸಾರವಾಗ್ತಿತ್ತು. ಫೋನ್ ಮೂಲಕ ಸ್ಥಳೀಯ ವರದಿಗಾರರಿಂದ ಕೆಲವು ಮಾಹಿತಿ ಪಡೆದ ನಾನು ಕಚೇರಿಗೆ ಫೋನಾಯಿಸಿ ಕೆಲವು ಪಾಯಿಂಟ್ಸ್ ಕೊಟ್ಟಿದೆ. 9 ಗಂಟೆ ನ್ಯೂಸ್ ಗೆ ನಂಗೆ ಫೋನೋ ಕನೆಕ್ಟ್ ಮಾಡಿದ್ರು...

ಮತ್ತೆ ಮನೆಯಲ್ಲಿ ಸಣ್ಣಪುಟ್ಟ ಕೆಲಸಗಳನ್ನೆಲ್ಲ ಮುಗಿಸಿಕೊಂಡು ಮಧ್ಯಾಹ್ನ ಎಷ್ಟೊತ್ತಿಗೋ ಟಿವಿ ಆನ್ ಮಾಡಿದಾಗ ಮಹದೇವ ಮಾನೆ ಅನ್ನೋ ಎಎನ್ಎಫ್ ಸಿಬ್ಬಂದಿ ಮೃತಪಟ್ಟ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಾಯ್ತು. ನಕ್ಸಲರ ಜೊತೆಗಿನ ಗುಂಡಿನ ಚಕಮಕಿಯಲ್ಲಿ ಮಾನೆಯ ಬೆನ್ನಿಗೆ ಗುಂಡು ಬಿದ್ದ ವಿಷಯ ಗೊತ್ತಾದಾಗ ಶಾಕ್ ಆಯ್ತು.. ಯಾಕಂದ್ರೆ ಗುಂಡಿನ ಚಕಮಕಿಯ ವೇಳೆ ಹೊಟ್ಟೆಗೆ ಗಂಡು ಬೀಳೋದು ಸಹಜ. ಆದ್ರೆ ಬೆನ್ನಿಗೆ ಬೀಳ್ಬೇಕಾದ್ರೆ ನಕ್ಸಲರು ಹಿಂದಿನಿಂದ ಗುಂಡು ಹೊಡೆದ್ರಾ ಅನ್ನೋದು ಪ್ರಶ್ನೆ..

ಇದೇ ಕುತೂಹಲದಲ್ಲಿ ಮರುದಿನ ಕೆಲವು ವರದಿಗಾರರಲ್ಲಿ ಈ ಬಗ್ಗೆ ವಿಚಾರಿಸಿದೆ. ಕೆಲವರು ಹೇಳಿದ್ರು, ಇದು ನಕ್ಸಲರು ಹಾರಿಸಿದ ಗುಂಡಲ್ಲ, ಬದಲಾಗಿ ಎಎನ್ಎಫ್ ಸಿಬ್ಬಂದಿಗಳ ಬಂದೂಕಿನಿಂದಲೇ ಸಿಡಿದ ಗುಂಡು. ಆದ್ರೆ ತಮ್ಮ ತಪ್ಪನ್ನು ಮುಚ್ಚಿಹಾಕೋದಿಕ್ಕಾಗಿ ನಕ್ಸಲರ ವಿರುದ್ಧ ಬೊಟ್ಟು ಮಾಡಿ ತೋರಿಸಿದ್ದಾರೆ ಎಂದು.. ಮತ್ತೊಂದೆಡೆ, ಇಲ್ಲ ನಕ್ಸಲರ ಇರುವಿಕೆ ಗೊತ್ತಾಗಿ ಎಎನ್ಎಫ್ ಸಿಬ್ಬಂದಿಗಳು ಗುಂಡು ಹಾರಿಸೋಕೆ ಮುಂದಾಗಿದ್ರು. ಆದ್ರೆ ರೈಫಲ್ ಕೈಕೊಟ್ಟ ಕಾರಣದಿಂದಾಗಿ ಹಿಂದಕ್ಕೋಡಿದ್ರು. ಈ ಸಂದರ್ಭದಲ್ಲಿ ನಕ್ಸಲರು ಹಾರಿಸಿದ ಗುಂಡು ಮಾನೆ ಅವರ ಬೆನ್ನಿಗೆ ಹೊಕ್ಕಿತು ಅನ್ನೋದು ಇನ್ನೂ ಕೆಲವರ ಅಭಿಪ್ರಾಯ.. ಈ ಬಗ್ಗೆ ಬಿಪಿನ್ ಗೋಪಾಲಕೃಷ್ಣ ನೇತೃತ್ವದ ತಂಡ ತನಿಖೆ ಪೂರ್ಣಗೊಳಿಸಿದ ಮೇಲಷ್ಟೇ ಸತ್ಯ ಹೊರಬೀಳಲಿದೆ. ಆದ್ರೆ ಒಂದಂತೂ ಸತ್ಯ, ಎಎನ್ಎಫ್ ಸಿಬ್ಬಂದಿಗಳು ಹಾರಿಸಿದ ಗುಂಡಿನಿಂದಲೇ ಮಾನೆ ಮೃತಪಟ್ಟಿದ್ದು ಧೃಢವಾದ್ರೆ ಆ ಸತ್ಯ ಹೊರಜಗತ್ತಿಗೆ ತಿಳಿಯುವ ಸಾಧ್ಯತೆಗಳು ತೀರಾ ಕಡಿಮೆ...!

ಬೆಳ್ತಂಗಡಿ ತಾಲೂಕಿನಲ್ಲಿ ನಕ್ಸಲ್ ಚಟುವಚಿಕೆ ಇದೆ ಅನ್ನೋದು ಹೊರಜಗತ್ತಿಗೆ ಗೊತ್ತಾಗಿದ್ದೇ ಕಳೆದ ಮೂರು ವರ್ಷಗಳಿಂದೀಚೆಗೆ.. ಬೆಳ್ತಂಗಡಿಯ ಕುತ್ಲೂರು ಗ್ರಾಮದಲ್ಲಿ ಅಕ್ರಮವಾಗಿ ನಕ್ಸಲರು ಅಡಗಿಸಿಟ್ಟಿದ್ದ ಶಸ್ತ್ರಾಸ್ತ್ರಗಳು ದೊರೆತ ಮೇಲಷ್ಟೇ ಇದು ಗೊತ್ತಾಗಿದ್ದು. ಆದ್ರೆ ಇದಕ್ಕೂ ಮುನ್ನವೇ ಇಲ್ಲಿ ನಕ್ಸಲ್ ಚಟುವಟಿಕೆ ಇತ್ತೋ ಇಲ್ವೋ ಅನ್ನೋದು ಗ್ರಾಮಸ್ಥರಿಗಷ್ಟೇ ಗೊತ್ತು. ಯಾಕಂದ್ರೆ ಸಾಮಾನ್ಯವಾಗಿ ಪಶ್ಚಿಮ ಘಟ್ಟಗಳ ತಪ್ಪಲಿನ ಹಳ್ಳಿಗಳಲ್ಲಿ ನಕ್ಸಲರು ಓಡಾಡ್ತಾನೇ ಇರ್ತಾರೆ.. ಗ್ರಾಮಸ್ಥರ ಮನಪರಿವರ್ತನೆ ಮಾಡೋಕೆ ಪ್ರಯತ್ನ ಮಾಡ್ತಾನೇ ಇರ್ತಾರೆ..

ಪುಷ್ಪಗಿರಿ ವನ್ಯಧಾಮ ವಿಸ್ತರಣೆ ವಿಚಾರ ಸದ್ಯಕ್ಕೆ ಬೆಳ್ತಂಗಡಿ, ಸುಳ್ಯ ಮತ್ತು ಪುತ್ತೂರು ತಾಲೂಕಿನ ಜನತೆಯ ನಿದ್ದೆಗೆಡಿಸಿದೆ. ಬೆಳ್ತಂಗಡಿ ತಾಲೂಕಿನ ಶಿಶಿಲ, ಶಿಬಾಜೆ, ಪುದುವೆಟ್ಟು, ಅರಸಿನಮಕ್ಕಿ ಮತ್ತು ನೆರಿಯಾ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ, ಸುಳ್ಯ ತಾಲೂಕಿನ ಸುಬ್ರಮಣ್ಯ, ಐನೆಕಿಡು, ಬಾಳುಗೋಡು, ಕಲ್ಮಕಾರು, ಕೊಲ್ಲಮೊಗ್ರ ಗ್ರಾಮಗಳು ಹಾಗೂ ಪುತ್ತೂರು ತಾಲೂಕಿನ ಗುಂಡ್ಯ, ಶಿರಾಡಿ, ಕೊಂಬಾರು, ಬಿಳಿನೆಲೆ ಸೇರಿದಂತೆ ಸುಮಾರು 50 ಗ್ರಾಮಗಳಿಗೆ ಪುಷ್ಪಗಿರಿ ಯೋಜನೆಯಿಂದ ತೊಂದರೆಯಾಗಲಿದೆ. ಈ ಗ್ರಾಮಗಳಲ್ಲಿ ವಾಸಿಸುವ ಜನರು ಬೀದಿಪಾಲಾಗುವ ಸ್ಥಿತಿ ಬಂದೊಗಿದೆ. ಸಹಜವಾಗಿಯೇ ಜನರು ಈ ಯೋಜನೆಯ ವಿರುದ್ಧ ಸೆಟೆದು ನಿಂತಿದ್ದಾರೆ. ಬಹುತೇಕ ಎಲ್ಲಾ ಗ್ರಾಮಗಳಲ್ಲಿ ಪುಷ್ಪಗಿರಿ ಯೋಜನೆಯ ವಿರುದ್ಧ ಹೋರಾಟ ಸಮಿತಿ ರಚನೆಯಾಗಿದೆ. ಈ ಹೋರಾಟ ಸಮಿತಿ ಇದೇ ತಿಂಗಳ 2 ರಂದು ಎಲ್ಲಾ ಗ್ರಾಮಗಳಲ್ಲಿ ಪ್ರತಿಭಟನೆ ನಡೆಸಿದ್ದಲ್ಲದೆ ಜಿಲ್ಲಾಧಿಕಾರಿಯವರಿಗೂ ಮನವಿ ಪತ್ರ ಸಲ್ಲಿಸಿದ್ರು. ಇಷ್ಟು ದಿನ ಶಾಂತಿಯುತವಾಗಿಯೇ ಪ್ರತಿಭಟನೆ ನಡೆಸಿರುವ ಗ್ರಾಮಸ್ಥರು ಒಂದೊಮ್ಮೆ ಈ ಯೋಜನೆ ಜಾರಿಯಾದ್ರೆ ಬೀದಿಗಿಳಿದು ಹೋರಾಡೋದಂತೂ ಖಚಿತ..

ಇಲ್ಲಿ ಗಮನಿಸಬೇಕಾದ ಒಂದು ಅಂಶವಿದೆ. ಈ ಬಗ್ಗೆ ಸರ್ಕಾರ ಸಹ ಚಿಂತನೆ ನಡೆಸಬೇಕಿದೆ. ನಕ್ಸಲ್ ಚಟುವಟಿಕೆಗಳು ಹೆಚ್ಚಾಗಿ ಗರಿಗೆದರುವುದೇ ಇಂತಹ ಸಂದರ್ಭಗಳಲ್ಲಿ. ಎಲ್ಲಿ ಗ್ರಾಮಸ್ಥರು ಸರ್ಕಾರದ ವಿರುದ್ಧ ತೊಡೆತಟ್ಟಿ ನಿಲ್ತಾರೋ, ನಕ್ಸಲರು ಅಲ್ಲಿ ಹಾಜರಾಗ್ತಾರೆ.. ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಾ, ಗ್ರಾಮಸ್ಥರ ನೆರವಿಗೆ ಧಾವಿಸುವ ನಕ್ಸಲರು ಪರಿಸ್ಥಿತಿಯ ಲಾಭ ಪಡೆಯೋಕೆ ಪ್ರಯತ್ನಿಸ್ತಾರೆ. ಸರ್ಕಾರದ ವಿರುದ್ಧ ತಿರುಗಿ ಬಿದ್ದ ಜನರನ್ನು ನಕ್ಸಲ್ ಚಟುವಟಿಕೆಗೆ ಸೇರಿಕೊಳ್ಳಲು ಆಹ್ವಾನಿಸ್ತಾರೆ, ಪ್ರಚೋದಿಸುತ್ತಾರೆ.. ಅವರ ಮನಪರಿವರ್ತನೆಗೆ ಬೇಕಾದ ಎಲ್ಲಾ ಕೆಲಸಗಳನ್ನು ಮಾಡ್ತಾರೆ.. ಮಾನಸಿಕವಾಗಿ ಧೈರ್ಯ ತುಂಬುವ ಜೊತೆಗೆ ಆರಂಭದಲ್ಲಿ ಜೇಬು ತುಂಬಿಸುವ ಕೆಲಸವನ್ನೂ ಮಾಡ್ತಾರೆ.. ಮನೆ ಕಳೆದುಕೊಳ್ಳುವ ಭೀತಿಯಲ್ಲಿರುವ ಕುಟುಂಬಗಳಲ್ಲಿ ವಿದ್ಯಾವಂತ ಯುವಕರಿದ್ದರೆ ಅಂತವರನ್ನು ಮೊದಲು ತಮ್ಮ ನಕ್ಸಲ್ ಪಡೆಗೆ ಸೇರಿಕೊಳ್ಳುವಂತೆ ಪ್ರೇರೇಪಿಸುತ್ತಾರೆ.. ನಕ್ಸಲರು ಪಶ್ಚಿಮ ಘಟ್ಟಗಳಲ್ಲಿ ತಮ್ಮ ಸಂಖ್ಯೆ ಹೆಚ್ಚು ಮಾಡಿಕೊಳ್ಳಲು ಕಂಡುಕೊಂಡಿರುವ ಉಪಾಯ ಇದೇ.. ಪುಷ್ಪಗಿರಿ ಅಭಯಾರಣ್ಯ ಯೋಜನೆಗೆ ಸರ್ಕಾರ ಫುಲ್ ಸ್ಟಾಪ್ ಹಾಕದಿದ್ರೆ ಈ ರೀತಿಯ ನಕ್ಸಲ್ ಚಟುವಟಿಕೆ ತನ್ನ ಕಬಂಧ ಬಾಹುವನ್ನು ವಿಸ್ತರಿಸೋದ್ರಲ್ಲಿ ಸಂಶಯವಿಲ್ಲ. ಸಾಮಾನ್ಯವಾಗಿ ಕುದುರೆಮುಖ ಮತ್ತು ಚಿಕ್ಕಮಗಳೂರು ಪ್ರದೇಶಗಳಿಗೆ ಹೊಂದಿಕೊಂಡಿರುವ ಪಶ್ಟಿಮ ಘಟ್ಟಗಳ ಕಾಡುಗಳಲ್ಲಿ ಅಲೆಯುವ ನಕ್ಸಲರಿಗೆ ಅದೇ ಕಾಡಿನ ಮೂಲಕ ಚಾರ್ಮಾಡಿ ಮಾರ್ಗವಾಗಿ ನೆರಿಯಾ, ಪುದುವೆಟ್ಟು, ಮೀಯಾರು, ಶಿಶಿಲ, ಶಿಬಾಜೆ, ಅರಸಿನಮಕ್ಕಿ, ಗುಂಡ್ಯ, ಶಿರಾಡಿ ಸೇರಿದಂತೆ ಮೂರು ತಾಲೂಕುಗಳಿಗೆ ಪ್ರವೇಶ ಮಾಡೋದು ಕಷ್ಟವೇನಲ್ಲ.

ಇದು ಹೀಗೆ ಅಗುತ್ತದೆ ಅನ್ನೋ ಕಠಿಣ ನುಡಿಗಳಲ್ಲ. ಆದ್ರೆ ಹೀಗೂ ಆಗಬಹುದಾದ ಸಾಧ್ಯತೆಗಳಿವೆ ಎಂದು ಹೇಳಿದನಷ್ಟೇ.. ಸರ್ಕಾರದ ಯೋಜನೆಗಳು ಜನರಿಗೆ ಮಾರಕವಾಗುವಾಗ ಅದರ ಲಾಭ ಪಡೆಯೋಕೆ ನಕ್ಸಲರು ಪ್ರಯತ್ನಪಡಬಹುದು ಎಂದು ಅನಿಸ್ತು.. ಅದಕ್ಕೇ ಈ ಪುಟ್ಟ ಬರಹ.. ಹಾಗಂತ ನಕ್ಸಲ್ ವಿರೋಧಿಯಾಗಿ ಅಥವಾ ನಕ್ಸಲ್ ಪರವಾಗಿ ಇದ್ದೇನೆ ಎಂದೂ ಅಲ್ಲ.. ಇತ್ತೀಚೆಗೆ ಊರಿಗೆ ಹೋಗಿದ್ದಾಗ ಸಂಬಂಧಿಕರ ಮನೆಗೆಂದು ಪುದುವೆಟ್ಟಿಗೆ ಹೋದಾಗ ಅನಿಸಿದ ವಿಷಯಗಳಿವು...


ಹಸಿವು ಅಂದ್ರೆ....

ಅಂದು ಸೆಪ್ಟೆಂಬರ್ 13.. ನೈಟ್ ಶಿಫ್ಟ್ ಇದ್ದಿದ್ರಿಂದ 11 ಗಂಟೆಗೆಲ್ಲ ಆಫೀಸಿಗೆ ಬಂದಿದ್ದೆ.. ಮತ್ತೊಂದು ಗಂಟೆ ಕಳೆದಿರಬಹುದು ಅನ್ಸತ್ತೆ.. ಇನ್ಸುಟ್ ನವ್ರು ಫೋನ್ ಮಾಡಿ ಅರ್ಜೆಂಟಾಗಿ ಚೆನ್ನೈಗೆ ಹೊರಡಿ ಅಂದ್ರು.. ನೋಡಿದ್ರೆ ತಮಿಳುನಾಡಿನ ಅರಕ್ಕೋಣಂನಲ್ಲಿ ರೈಲು ಅಪಘಾತ ಸಂಭವಿಸಿತ್ತು. ಆಗಲೇ 9 ಮಂದಿ ಸಾವನ್ನಪ್ಪಿದ್ರು.. 80ಕ್ಕೂ ಅಧಿಕ ಮಂದಿ ಗಾಯಾಳಾಗಿದ್ರು... ಉಟ್ಟ ಬಟ್ಟೆಯಲ್ಲೇ ಅರಕ್ಕೋಣಂಗೆ ಹೋಗೋಕೆ ರೆಡಿಯಾಗಿದ್ದೆ. ಕ್ಯಾಮೆರಾಮ್ಯಾನ್ ನರೇಶ್ ಮನೆಯಿಂದ ರೆಡಿಯಾಗಿ ಬಂದಿದ್ದ. ನ್ಯೂಸ್ 9 ನಿಂದಲೂ ಒಬ್ರು ರಿಪೋರ್ಟರ್ ಇದ್ರು. ಚಂದ್ರು ಅವರ ಕ್ವಾಲಿಸ್ ವಾಹನ ಆಫೀಸ್ ಹೊರಗಡೆ ಕಾಯ್ತಾ ನಿಂತಿತ್ತು... ಓಬಿ ವೆಹಿಕಲ್ ಕೂಡ ರೆಡಿಯಾಗಿತ್ತು.. ಎಂಜಿನಿಯರ್ ಪ್ರಕಾಶ್ ಮತ್ತು ಡ್ರೈವರ್ ತಿಮ್ಮೇಶ್ ನಮಗಿಂತ ಮೊದಲು ಹೊರಟು ಬಿಟ್ಟಿದ್ರು.. ನಾವು 1 ಗಂಟೆಗೆಲ್ಲ ಕ್ವಾಲಿಸ್ ಏರಿ ಅರಕ್ಕೋಣಂನತ್ತ ಪ್ರಯಾಣ ಹೊರಟಿದ್ವಿ.. < /p>

ಬೆಳಗ್ಗಿನ ಜಾವ 6.30ಕ್ಕೆ ಅರಕ್ಕೋಣಂ ಸರ್ಕಾರೀ ಆಸ್ಪತ್ರೆಯ ಮುಂದೆ ತಲುಪಿದ್ವಿ.. ಗಾಯಾಳುಗಳಲ್ಲಿ ಸುಮಾರು 60 ಮಂದಿ ಅದೇ ಆಸ್ಪತ್ರೆಗೆ ದಾಖಲಾಗಿದ್ರು.. ಅಲ್ಲಿ ನಮಗೆ ಶ್ರೀಕಾಂತ್ ಸಿಕ್ಕಿದ್ದ.. ಶ್ರೀಕಾಂತ್ ನಮ್ಮ ಚೆನ್ನೈ ಕ್ಯಾಮೆರಾಮ್ಯಾನ್ ಕಂ ರಿಪೋರ್ಟರ್.. ಶ್ರೀಕಾಂತ್ ಜೊತೆಗೆ ಮಾತಾಡ್ಕೊಂಡು ಅರ್ಧ ಗಂಟೆಯ ನಂತ್ರ ನೇರವಾಗಿ ಅಪಘಾತ ನಡೆದ ಸ್ಥಳಕ್ಕೆ ಧಾವಿಸಿದ್ವಿ.. ರಾತ್ರಿ ಅಪಘಾತ ಸಂಭವಿಸಿತ್ತು.. ಆದ್ರೆ ಬೆಳಗಾಗ್ತಿದ್ದಂಗೆ ಸ್ಥಳೀಯರೂ, ಅಕ್ಕಪಕ್ಕದ ಊರವರೆಲ್ಲ ತಂಡೋಪತಂಡವಾಗಿ ಅಪಘಾತ ನೋಡೋಕೆ ಬಂದಿದ್ರು..ಹಾಗಾಗಿ ರೈಲ್ವೇ ಗೇಟ್ ನಿಂದಾಚೆಗೆ ಯಾವುದೇ ವಾಹನಗಳನ್ನು ಬಿಡ್ತಿರಲಿಲ್ಲ.. ಹಾಗಾಗಿ ರೈಲ್ವೇ ಗೇಟ್ ಗಿಂತಲೂ ಹಿಂದೆಯೇ ವಾಹನ ನಿಲ್ಲಿಸಿ ನಡ್ಕೊಂಡು ಹೋಗ್ಬೇಕಾಯ್ತು.. ಓಬಿ ವ್ಯಾನ್ ಕೂಡ ಅಲ್ಲೇ ನಿಂತಿತ್ತು.. ಹೆಚ್ಚು ಕಡಿಮೆ 1 ಕಿಲೋ ಮೀಟರ್ ರೈಲ್ವೇ ಟ್ರ್ಯಾಕ್ ಮೇಲೆ ನಡ್ಕೊಂಡು ಹೋಗ್ಬೇಕಾಯ್ತು ಸ್ಪಾಟ್ ತಲುಪೋಕೆ..


ಆಗಲೇ ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳೆಲ್ಲ ಸ್ಥಳದಲ್ಲಿ ಜಮಾಯಿಸಿದ್ರು.. ನಜ್ಜುಗುಜ್ಜಾದ ಬೋಗಿಗಳನ್ನು ರೈಲ್ವೇ ಟ್ರ್ಯಾಕ್ ನಿಂದ ಬದಿಗೆ ಸರಿಸುವ ಕೆಲಸ ಒಂದ್ಕಡೆ ನಡೀತಿತ್ತು.. ಮತ್ತೊಂದೆಡೆ ಕಿತ್ತು ಹೋದ ಟ್ರ್ಯಾಕ್ ಗಳನ್ನು ಸರಿಪಡಿಸುವ ಕೆಲಸ ಆರಂಭವಾಗಿತ್ತು.. ಹೋದ ಕೂಡ್ಲೇ ಒಂದು ವಾಕ್ ಥ್ರೂ ಕೊಟ್ಟೆ... ಅಷ್ಟೊತ್ತಿಗಾಗ್ಲೇ ಆಫೀಸಿನಿಂದ ಫೋನ್ ಮೇಲೆ ಫೋನ್ ಬರೋಕೆ ಶುರುವಾಗಿತ್ತು.. ಕ್ಯಾಸೆಟ್ ಓಬಿಗೆ ಇನ್ನೂ ಕೊಟ್ಟಿಲ್ವಾ.. ಡಂಪ್ ಆಯ್ತಾ.. ಅಂತೆಲ್ಲ.. ಓಬಿ ವ್ಯಾನ್ ನಾವಿದ್ದ ಜಾಗದಿಂದ 1 ಕಿಲೋಮೀಟರ್ ದೂರದಲ್ಲಿತ್ತು.. ಹಾಗಾಗಿ ನಡ್ಕೊಂಡು ಹೋಗಿ ಕ್ಯಾಸೆಟ್ ಕೊಟ್ಟು ಬರೋಕೆ ಲೇಟ್ ಆಗಿತ್ತು.. ಆದ್ರೂ ನಮ್ಮ ಚೆನ್ನೈ ಕ್ಯಾಮೆರಾಮ್ಯಾನ್ ಶ್ರೀಕಾಂತ್ ತಾನೇ ಕ್ಯಾಸೆಟ್ ನ ಓಬಿ ಹತ್ರ ಕೊಟ್ಟು ಬಂದಿದ್ದ.. 10 ಗಂಟೆಯಾಗ್ತಿದ್ದಂಗೆ ಬಿಸಿಲಿನ ತಾಪ ಹೇಗಿದೆ ಅನ್ನೋದು ಅರಿವಿಗೆ ಬಂದಿತ್ತು.. ಬೆಂಗ್ಳೂರಲ್ಲಿ ಮಟ ಮಟ ಮಧ್ಯಾಹ್ನ ಸ್ವಲ್ಪ ಬಿಸಿಲು ಜಾಸ್ತಿ ಇದ್ರೆ ಸಾಕು.. ಅಬ್ಬಾ ಏನು ಸೆಕೆ ಅಂತಿದ್ವಿ.. ಅಂತಾದ್ರಲ್ಲಿ ಅಲ್ಲಿ 10 ಗಂಟೆಗೆ ನಿಲ್ಲೋಕಾಗ್ತಿರ್ಲಿಲ್ಲ..

ಹಾಗೆ ಮತ್ತೊಂದು ವಾಕ್ ಥ್ರೂ ಕೊಟ್ಟು ಸೆಕೆಂಡ್ ಟೈಮ್ ನಾನೇ ಕ್ಯಾಸೆಟ್ ತಗೊಂಡು ಓಬಿ ವ್ಯಾನ್ ಹತ್ರಕ್ಕೆ ಹೋಗಿದ್ದೆ... ಕ್ಯಾಸೆಟ್ ಡಂಪ್ ಮಾಡಿದ್ಮೇಲೆ ಪೊಲೀಸರ ಜೊತೆಗೆ ಮನವಿ ಮಾಡ್ಕೊಂಡು ಹೇಗೋ ಓಬಿ ವ್ಯಾನ್ ನ ರೈಲ್ವೇ ಗೇಟ್ ದಾಟಿಸಿ ಮತ್ತೊಂದು ಬದಿಗೆ ತಂದಿದ್ವಿ.. ಅಲ್ಲಿ ಪೊಲೀಸರು ಮತ್ತೆ ನಮ್ಮನ್ನು ಅಡ್ಡ ಹಾಕಿದ್ರು.. ಅವ್ರ ಬಳಿ ಕಾಡಿ ಬೇಡಿ ರೈಲ್ವೇ ಟ್ರ್ಯಾಕ್ ಸಮೀಪದಲ್ಲೇ ಇರುವ ಪ್ಯಾರಲಲ್ ರೋಡ್ ನಲ್ಲಿ ಒಂದಷ್ಟು ದೂರ ಹೋದ್ವಿ.. ರಸ್ತೆ ಕಿರಿದಾಗಿದ್ದು ಒಂದು ವಾಹನ ಹೋಗೋವಷ್ಟು ಮಾತ್ರ ಜಾಗವಿತ್ತು.. ಅಷ್ಟು ಕಿರಿದಾದ ರಸ್ತೆಯಲ್ಲಿ ಆಗ್ಲೇ ಪೊಲೀಸರ ವಾಹನಗಳು ಸಾಲಾಗಿ ನಿಂತಿದ್ವು.. ಜೊತೆಗೆ ಹಿಂದಿನ ದಿನ ರಾತ್ರಿಯೇ ಬಂದಿದ್ದ ನ್ಯಾಷನಲ್ ಮತ್ತು ಕೆಲವು ಸ್ಥಳೀಯ ಟಿವಿ ಚಾನಲ್ ಗಳ ಓಬಿ ವ್ಯಾನ್ ಗಳು ರಸ್ತೆ ಪಕ್ಕ ಪಾರ್ಕ್ ಆಗಿತ್ತು...

ಹಾಗೂ ಹೀಗೂ ಸಾಹಸ ಮಾಡಿ ನಮ್ಮ ಓಬಿ ವ್ಯಾನನ್ನು ರೈಲು ಅಪಘಾತ ನಡೆದ ಸ್ಥಳದ ಸಮೀಪಕ್ಕೆ ತಂದಿದ್ವಿ. ಹಾಗಾಗಿ ವಿಸುವಲ್ಸ್ ಕಳ್ಸೋಕೆ ತುಂಬಾ ಅನುಕೂಲ ಆಯ್ತು.. ಮಧ್ಯಾಹ್ನ 12 ಗಂಟೆ ನ್ಯೂಸ್ ಗೆ ಲೈವ್ ಚಾಟ್ ಕೊಟ್ಟಾಯ್ತು.. ಅಷ್ಟೊತ್ತಿಗಾಗ್ಲೇ ಹೊಟ್ಟೆ ಚುರುಗುಟ್ಟೋಕೆ ಆರಂಭವಾಗಿತ್ತು. ಮಧ್ಯಾಹ್ನದ ಆ ಉರಿಬಿಸಿಲಿನ ಜೊತೆಗೆ ಬಿಸಿಲಿನ ಝಳ.. ಓಬಿ ವ್ಯಾನ್ ನಲ್ಲಿದ್ದ ನೀರು ಖಾಲಿಯಾಗಿತ್ತು.. ನಮ್ಮ ಓಬಿ ಡ್ರೈವರ್ ತಿಮ್ಮೇಶ್ ಬೇರ್ಯಾವುದೇ ಓಬಿ ವ್ಯಾನ್ ನಲ್ಲಿದ್ದ ನೀರು ತಂದುಕೊಟ್ಟು ಸದ್ಯಕ್ಕೆ ಬಾಯಾರಿಕೆ ನೀಗಿಸಿದ್ದ. ಆದ್ರೆ ಹಸಿವು ಮಾತ್ರ ಕಡಿಮೆಯಾಗ್ಲಿಲ್ಲ. ಗಂಟೆ 1.30 ಆಗ್ತಿದ್ದಂಗೆ ರೈಲ್ವೇ ಖಾತೆ ಸಚಿವ ದಿನೇಶ್ ತ್ರಿವೇದಿ, ರಾಜ್ಯ ಸಹಾಯಕ ಸಚಿವ ಮುನಿಯಪ್ಪ ಮತ್ತಿತರ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ರು. ಆ ನೂಕು ನುಗ್ಗಲಿನಲ್ಲಿ ಬೈಟ್, ವಿಸುವಲ್ಸ್ ತಗೊಂಡು ಕಳಿಸುವಷ್ಟರಲ್ಲಿ ಸಾಕಾಗಿ ಹೋಗಿತ್ತು. ಇವೆಲ್ಲ ಮುಗಿದಾಗ ಗಂಟೆ 3 ಆಗಿತ್ತು. ಹಸಿವಿನಿಂದ ಕಣ್ಣು ಕಾಣದಂತ ಪರಿಸ್ಥಿತಿ. ಬೆಳಿಗ್ಗೆ ತಿಂಡಿ ಸಹ ಮಾಡಿರಲಿಲ್ಲ. ಎಲ್ಲಾದ್ರೂ ತಿನ್ನೋಕೆ ಏನಾದ್ರೂ ತೆಗೆದುಕೊಂಡು ಬರೋಣ ಅಂದ್ಕೊಂಡ್ರೆ ಅಂಗಡಿಗಳೇ ಇಲ್ಲ.

ಓಬಿ ವ್ಯಾನ್ ನಲ್ಲಿ ವಿಸುವಲ್ಸ್ ಸೆಂಡ್ ಆಗ್ತಿರ್ಬೇಕಾದ್ರೆ ನಮ್ಮ ಓಬಿ ಡ್ರೈವರ್ ತಿಮ್ಮೇಶ್ ಹೋಗಿ ಎಲ್ಲಿಂದಲೋ ಒಂದು ಬೇಯಿಸಿದ ಮೊಟ್ಟೆ ತೆಗೆದುಕೊಂಡು ಬಂದ. ಆ ಮೊಟ್ಟೆಯನ್ನು ನಾನು, ಕ್ಯಾಮೆರಾಮ್ಯಾನ್ ನರೇಶ್, ಓಬಿ ಇಂಜಿನಿಯರ್ ಪ್ರಕಾಶ್ ಮತ್ತು ಡ್ರೈವರ್ ತಿಮ್ಮೇಶ್ ನಾಲ್ಕು ಪೀಸ್ ಮಾಡಿ ತಿಂದ್ವಿ. ಆದ್ರೆ ಅದು ನಮ್ಮ ಹೊಟ್ಟೆಯ ಯಾವ ಮೂಲೆಗೂ ಸಾಕಾಗಲಿಲ್ಲ. ಮತ್ತೆ ಸ್ವಲ್ಪ ಹೊತ್ತಿನ ನಂತ್ರ ತಿಮ್ಮೇಶ್ ನಾಲ್ಕು ಬೆರಳಿನಷ್ಟುದ್ದದ ಬಾಳೆಹಣ್ಣು ತಗೊಂಡು ಬಂದ. ಆದ್ರೆ ಆ ನಾಲ್ಕರಲ್ಲಿ 1 ಬಾಳೆಹಣ್ಣು ಹಾಳಾಗಿ ಹೋಗಿತ್ತು. ಹಾಗಾಗಿ ಮೂರು ಬಾಳೆಹಣ್ಣನ್ನು ಪೀಸ್ ಮಾಡಿ ನಾಲ್ವರು ತಿಂದಿದ್ವಿ. ಮುಂದೇನು ಮಾಡೋದು ಅಂತ ಹಾಗೆ ವ್ಯಾನ್ ನಲ್ಲಿ ಕೂತಿರ್ಬೇಕಾದ್ರೆ ರೈಲ್ವೇ ಪೊಲೀಸ್ ಸಮವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬ ಬಂದ. ಸಾರ್ ನಾನು ಮೈಸೂರಿನವನು ಎಂದು ಹೇಳಿ ಪರಿಚಯ ಮಾಡಿಸಿಕೊಂಡು, ನಂತ್ರ ಊಟ ಆಯ್ತಾ ಕೇಳ್ದ. ಊಟ ಎಲ್ಲಿ ಸಾರ್ ತಿಂಡಿನೇ ಆಗಿಲ್ಲ ಅಂತ ನಾವು ಹೇಳಿದ ಕೂಡ್ಲೇ ಆ ರೈಲ್ವೇ ಪೊಲೀಸ್ ಎಲ್ಲಿಂದಲೋ ನಾಲ್ಕು ಬೇಯಿಸಿದ ಮೊಟ್ಟೆ ತೆಗೆದುಕೊಂಡು ಬಂದು ಕೊಟ್ಟ. ಸಿಕ್ಕಿದ್ದೇ ತಡ ನಾಲ್ವರೂ ಒಂದೊಂದು ಮೊಟ್ಟೆ ತಿಂದ್ವಿ. ಕನಿಷ್ಠ ಆ ಪೊಲೀಸ್ ಗೆ ನಿಮ್ಗೆ ಬೇಕಾ ಅಂತನೂ ಕೇಳಿರಲಿಲ್ಲ. ಹಸಿದ ಹೊಟ್ಟೆಯ ತಾಳದ ಮಧ್ಯೆ ಏನೂ ಗೊತ್ತಾಗ್ತಿರ್ಲಿಲ್ಲ.

ಒಮ್ಮೊಮ್ಮೆ ಊಟ ಸಾಕು ಅಂತ ಅರ್ಧ ತಿಂದು ಎಸೆದಿದ್ದ ಘಟನೆಗಳೆಲ್ಲ ನೆನಪಾಗಿತ್ತು ಅವಾಗ. ಅಥವಾ ಚೆನ್ನಾಗಿಲ್ಲ ಅಂತ ತಂದಿದ್ದ ಊಟ-ತಿಂಡಿ ಬೇಡಾಂತ ಎಸೀತೀವಿ. ಆದ್ರೆ ಅರಕ್ಕೋಣಂನ ಉರಿಬಿಸಿಲಿನಲ್ಲಿ ಹೊಟ್ಟೆಗೆ ಹಿಟ್ಟಿಲ್ಲದೆ ಪರದಾಡ್ತಿದ್ದಾಗ ಅವೆಲ್ಲವೂ ನೆನಪಾಯ್ತು..

ಅಷ್ಟೊತ್ತಿಗೆ ನಮ್ಮ ನ್ಯೂಸ್ 9 ರಿಪೋರ್ಟರ್ ತನ್ನ ಕೆಲಸ ಮುಗಿಸಿಕೊಂಡು ಕ್ವಾಲಿಸ್ ನಲ್ಲಿ ವಾಪಾಸ್ ಬಂದಿದ್ರು. ಪುಣ್ಯಕ್ಕೆ ನಮ್ಮ ಕ್ವಾಲಿಸ್ ಡ್ರೈವರ್ ಜೊತೆಗೆ ನಾಲ್ಕೈದು ಊಟ ಪಾರ್ಸೆಲ್ ಕಟ್ಟಿಸಿಕೊಂಡು ಬಂದಿದ್ದ. ಮೈನ್ ರೋಡ್ ಗೆ ಬಂದು ರಸ್ತೆ ಪಕ್ಕದಲ್ಲಿ ಮರದ ನೆರಳಿನಲ್ಲಿ ಗಾಡಿ ಪಾರ್ಕ್ ಮಾಡಿ ಪಾರ್ಸೆಲ್ ತಂದಿದ್ದ ಊಟ ತಿನ್ಬೇಕಾದ್ರೆ ಏನೋ ನೆಮ್ಮದಿ..