ಮಳೆಹನಿಗೂ ಪ್ರೀತಿಗೂ ಅವಿನಾಭಾವ ಸಂಬಂಧ ಅನ್ಸತ್ತೆ. ಪ್ರತಿಯೊಂದು ಪ್ರಣಯ ಕಥೆಗಳ ಹಿಂದೆಯೂ ಮಳೆಹನಿಯ ಸ್ಪರ್ಶಗಳಿರತ್ತೆ. ತೆಳುಗಾಳಿಯ ರೋಮಾಂಚನಗೊಳಿಸುವ ಅನುಭವಗಳಿರತ್ತೆ. ಬಾಂಧವ್ಯದ ಬೆಸುಗೆ ಹೆಣೆಯುವ ನೂರಾರು ಸುಮಧುರ ಹೆಜ್ಜೆಗಳ ಸಪ್ಪಳವಿರತ್ತೆ..
ಮಳೆ ಅಂದ್ರೆ ಹಾಗೆನೇ ಅಲ್ವಾ.. ಮಳೆಹನಿ ಮೈಮೇಲೆ ಸ್ಪರ್ಶಿಸಿದಾಗ ಉಂಟಾಗುವ ಅನುಭವನೇ ಅಂಥಾದ್ದು. ಅದು ಬೆವರ ಹನಿಗಳ ಮೇಲೆ ಮಳೆ ತೋಕಿದಾಗ ಇರಬಹುದು ಅಥವಾ ಚಳಿಗಾಳಿಗೆ ಮೈ ಬೆಚ್ಚಗೆ ಮಾಡಿಕೊಳ್ಳುವ ತವಕದಲ್ಲಿದ್ದಾಗ ಇರಬಹುದು... ಮಳೆ ಹನಿಯ ಸ್ಪರ್ಶ ವಿಶೇಷ ಅನುಭೂತಿ ನೀಡತ್ತೆ. ಅದರೊಂದಿಗೆ ಪ್ರೀತಿಯ ಸ್ಪರ್ಶವೂ ಇದ್ರೆ ಅದರ ಅನುಭವನೇ ಬೇರೆ..
ಪ್ರೀತಿಸುವ ಪ್ರತಿಯೊಬ್ಬ ಹುಡುಗನಿಗೂ ತಾನು ತನ್ನ ಹುಡುಗಿ ಜೊತೆಗೆ ಮಳೆಯಲ್ಲಿ ತೋಯಬೇಕು ಅನ್ನೋ ಆಸೆಯಿರತ್ತೆ. ಹುಡುಗಿಗೂ ಜೋರುಮಳೆಯಲ್ಲಿ ತನ್ನ ಹುಡುಗನ ಎದೆಗೊರಗಿ ನಿಲ್ಲಬೇಕೆನ್ನುವ ಕನಸುಗಳಿರತ್ತೆ. ಕೈ ಕೈ ಹಿಡಿದು ನಡೀಬೇಕು ಅನ್ನೋ ವಾಂಛೆಯಿರತ್ತೆ. ಇವೆಲ್ಲ ಪ್ರೀತಿಸೋ ಹೃದಯಗಳಲ್ಲಿ ಕನಸುಗಳಾಗಿ ಮಾತ್ರ ಉಳಿದಿರತ್ತೆ. ಕೆಲವರು ಮಾತ್ರ ತಮ್ಮ ಕನಸುಗಳನ್ನು ಈಡೇರಿಸಿಕೊಂಡಿರುತ್ತಾರೆ.
ನನ್ನ ಹುಡುಗಿ ಜೊತೆಗೆ ಮಳೆಯಲ್ಲಿ ನೆನೆಯೋ ಆಸೆ ನಂಗೂ ಇದೆ. ತುಂತುರು ಮಳೆಯೊಂದಿಗೆ ಅವಳು ನನ್ನ ಜೊತೆಯಿರಬೇಕು. ಇಳಿ ಸಂಜೆಯ ಕಾರ್ಮೋಡದ ನೆರಳಲ್ಲಿ ತಣ್ಣನೆಯ ಗಾಳಿಯೊಂದಿಗೆ, ತುಂತುರು ಮಳೆ.. ಜೊತೆಗೆ ಅವಳೂ.. ಅವಳು ಅಂಗೈ ಹಿಡಿದು ನನ್ನೊಂದಿಗೆ ಹೆಜ್ಜೆ ಹಾಕಬೇಕು. ಮಳೆನೀರಿನಲ್ಲಿ ಕಾಲು ತೋಯಿಸುತ್ತಾ ಆಟವಾಡಬೇಕು. ಪರಸ್ಪರ ನೀರೆರಚಿ ಸಂಭ್ರಮಿಸಬೇಕು. ಮಳೆಹನಿ ಮೈ ತಣ್ಣಗಾಗಿಸಿದಾಗ ನನ್ನೆದೆಯಲ್ಲಿ ಮುಖ ಹುದುಗಿಸಿ ಬಿಗಿದಪ್ಪಿ ನಿಲ್ಲಬೇಕು. ಪುಟ್ಟ ಕಂದಮ್ಮನನ್ನು ಎದೆಗೊರಗಿಸಿ ನಿಂತ ತಾಯಿಯಂತೆ ನಾನಾಕೆಯ ತಲೆ ನೇವರಿಸಬೇಕು. ಮಳೆಹನಿಗಳ ಸ್ಪರ್ಶದೊಂದಿಗೆ ನಾನಾಕೆಯ ಹಣೆಮೇಲೊಂದು ಸಿಹಿ ಮುತ್ತು ನೀಡಬೇಕು. ಅದು ಮಳೆಹನಿಗೂ ಮಿಗಿಲಾದ ಅನುಭೂತಿ ನೀಡಬೇಕು. ಕೊನೆಯುಸಿರವರೆಗೂ ಜೊತೆಗಿರುವ ಹೃದಯಗಳಿಗೆ ಆಸರೆಯ ಬೆಸುಗೆಯಾಗಬೇಕು... ಅಕ್ಕರೆಯ ನೇವರಿಕೆಯಾಗಬೇಕು.
ಹಸಿರು ರಾಶಿಯ ಕಾಲು ದಾರಿಯಲ್ಲಿ ಮಳೆಯ ಸ್ಪರ್ಶದೊಂದಿಗೆ ಅವಳ ಜೊತೆಗೆ ಹೆಜ್ಜೆ ಹಾಕಬೇಕು. ಅವಳ ಕಾಲು ಸೋತಷ್ಟೂ ದೂರ. ಬಳಿಕ ನಾನಾಕೆಯನ್ನು ಪುಟ್ಟ ಮಗುವಿನಂತೆ ಎದೆಗೆ ಬಿಗಿದಪ್ಪಿ ನಡೆಯಬೇಕು. ಮುಸ್ಸಂಜೆಯ ಇಳಿಹೊತ್ತಿನಲ್ಲಿ ನಾವಿಬ್ಬರೇ ಇರಬೇಕು. ಹೆಜ್ಜೆ ಸೋತಾಗ ಅವಳೊಂದಿಗೆ ಯಾವುದಾದರೂ ಮರದ ಬುಡದಲ್ಲಿ ಕೂರಬೇಕು. ಆಕೆಯನ್ನು ಮಡಿಲಲ್ಲಿ ಮಗುವಿನಂತೆ ಮಲಗಿಸಬೇಕು. ಮಳೆ ಹನಿಗಳ ಸ್ಪರ್ಶದೊಂದಿಗೆ ಮುಖದ ಮೇಲೆ ಬಿದ್ದಿರೋ ಮುಂಗುರುಳ ಸೋಕಬೇಕು. ಅರಳು ಹುರಿವಂತ ಅವಳ ಮಾತುಗಳಿಗೆ ಕಿವಿಗೊಡಬೇಕು. ಅವಳ ನಿರೀಕ್ಷೆಗಳಿಗೆ ಸ್ಪಂದಿಸಬೇಕು. ಅವಳ ತುಂಟಾಟಕ್ಕೆ ಸಾಥ್ ನೀಡಬೇಕು. ಅವಳೆಲ್ಲಾ ಕನಸುಗಳನ್ನು ಸಾಕಾರಗೊಳಿಸಲು ಪ್ರಯತ್ನಿಸಬೇಕು. ಮತ್ತೆ ಪ್ರೀತಿಸಬೇಕು.. ಪ್ರೀತಿಸಿ ಪ್ರೀತಿಸಿ ಪ್ರೀತಿಸಬೇಕು... ಪ್ರೀತಿಯ ಜೊತೆಗೆ ಅಕ್ಕರೆ, ಕಾಳಜಿಯ ಸ್ಪರ್ಶ ನೀಡಬೇಕು. ತಾನು ಪ್ರೀತಿಸಿದ್ದು ತಪ್ಪಲ್ಲ. ತನ್ನ ಪ್ರೀತಿಗೆ ಅರ್ಥವಿದೆ. ನೂರು ಜನ್ಮ ಎದ್ದು ಬಂದ್ರು ತನ್ನ ಪ್ರೀತಿ ಅವಳಿಗೆ ಬೇಕು ಅನಿಸಬೇಕು. ತಾನು ಪ್ರೀತಿಸೋ ಹುಡುಗ ತನ್ನವನು ಮಾತ್ರ.. ತನ್ನನ್ನು ಮಾತ್ರ ಪ್ರೀತಿಸಬೇಕು ಅನ್ನೋ ಸ್ವಾರ್ಥ ಇರಬೇಕು. ಇವೆಲ್ಲದರ ಜೊತೆಗೆ ನಿಷ್ಕಲಶ್ಮವಾಗಿ ಅವಳು ನನ್ನನ್ನು ಪ್ರೀತಿಸಬೇಕು...
ನನ್ನೆಲ್ಲ ಕನಸುಗಳಿಗೆ ಸ್ಪಂದಿಸುವ ಹುಡುಗಿ ಇರಬಹುದಾ.. ಇದ್ರೂ ಆಕೆ ನನ್ನವಳಾಗಬಹುದಾ.. ನನ್ನವಳಾದ್ರೆ ತುಂಬಾ ಖುಷಿಪಡ್ತೀನಿ. ಎಲ್ಲಕ್ಕಿಂತ ಮಿಗಿಲಾಗಿ ಅವಳನ್ನು ತುಂಬಾ ತುಂಬಾ ಪ್ರೀತಿಸ್ತೀನಿ..