Saturday, September 24, 2011


College Life is Golden Life ಅಂತಾರೆ... ಇದು ಅಕ್ಷರಶಃ ಸತ್ಯ.. ಕಾಲೇಜು ಮುಗಿಸಿ 4 ವರ್ಷ ಕಳೆದಿದೆ.. ಆದ್ರೆ ಕಾಲೇಜು ದಿನಗಳ ನೆನಪು ತುಂಬಾನೇ ಕಾಡ್ತಿದೆ.. ಅದ್ರಲ್ಲೂ ಒಂದಷ್ಟು ಕಾಲೇಜು ಗೆಳೆಯರನ್ನಂತೂ ಮರೆಯಲು ಸಾಧ್ಯನೇ ಇಲ್ಲ...

ಪಿಯುಸಿ ಫಸ್ಟ್ ಇಯರ್ ಸೇರೋಕೆ ಕಾಲೇಜಿಗೆ ಹೋದಾಗ ಕೆಲವು ಹೈಸ್ಕೂಲ್ ಗೆಳೆಯರು ಜೊತೆಗಿದ್ರು.. ಆದ್ರೆ ಕೆಲವರು ಸೈನ್ಸ್ ತೆಗೆದುಕೊಂಡ್ರು.. ಇನ್ನೂ ಕೆಲವರು ಕಾಮರ್ಸ್ ಸೇರಿದ್ರು.. ನಾನು ಮಾತ್ರ ಅದೇ ಮಾಮೂಲಿ ಆರ್ಟ್ಸ್ ಚೂಸ್ ಮಾಡ್ದೆ...

ಹೈಸ್ಕೂಲ್ ಗೆಳೆಯರಲ್ಲೊಬ್ಬನಾದ ರಾಜೇಶ್ ನಂಗೆ ಪಿಯುಸಿಯಲ್ಲಿ ಬೆಂಚ್ ಮೇಟ್.. ನಾವೆಲ್ಲರೂ ಅವನನ್ನೂ ಗಾರ್ಡ ಎಂದೇ ಕರೀತಿದ್ವಿ.. ಪ್ರತಿ ಕ್ಲಾಸ್ ನಲ್ಲೂ ನಾನೂ ಅವ್ನೂ ಜೊತೆಗೇ ಕೂರ್ತಿದ್ವಿ.. ಕಾಲೇಜು ಸೇರಿದ ಮೊದ ಮೊದಲು ನಾನು ತುಂಬಾನೇ ಒಬೀಡಿಯೆಂಟ್ ಸ್ಟೂಡೆಂಟ್ ಥರ ಇದ್ದೆ.. ಕ್ಲಾಸ್ ನಲ್ಲಿ ಕೂತು ನೆಟ್ಟಗೆ ಪಾಠ ಕೇಳ್ತಿದ್ದೆ.. ಆದ್ರೆ ಜೊತೆಗಿದ್ನಲ್ಲಾ.. ಗಾರ್ಡ.. ಅವ್ನು ಬರೀ ತಲೆಹರಟೆ.. ಒಂದಿನಾನೂ ನೆಟ್ಟಗೆ ಕ್ಲಾಸ್ ನಲ್ಲಿ ಪಾಠ ಕೇಳೋಕೆ ಬಿಡ್ತಿರ್ಲಿಲ್ಲ.. ಏನಾದ್ರೂ ವಟ ವಟಾಂತ ಮಾತಾಡ್ತಾನೆ ಇರ್ತಿದ್ದ.. ಅವ್ನಿಂದಾಗಿ ನಾನೂ ಕ್ಲಾಸ್ ಕಡೆಗೆ ಗಮನ ಹರಿಸ್ತಿರ್ಲಿಲ್ಲ.. ಜೊತೆಗೆ ಆ ಹುಡುಗಿ ನೋಡು, ಈ ಹುಡುಗಿ ನೋಡು ಎಂದೆಲ್ಲ ಹೇಳಿ ಕಾಡಿಸ್ತಿದ್ದ.. ನಾವಿಬ್ರೂ ಕ್ಲಾಸ್ ನಲ್ಲಿ ಕಿತಾಪತಿ ಮಾಡ್ತೀವಿ ಅಂತ ಹೇಳಿ ತುಂಬಾ ಸಲ ಲೆಕ್ಚರರ್ಸ್ ಗೆಟ್ ಔಟ್ ಹೇಳಿದ್ದೂ ಇದೆ.. ಹಾಗೆ ಕ್ಲಾಸ್ ನಿಂದ ನಾವಿಬ್ರೂ ಹೊರಗಡೆ ಹೋಗ್ಬೇಕಾದ್ರೆ ಉಳಿದವರೆಲ್ಲ ಕಿಸಿ ಕಿಸಿ ನಗ್ರಿದ್ರು.. ಆದ್ರೆ ಗಾರ್ಡ ಮಾತ್ರ ಟೆನ್ಶನ್ ಮಾಡ್ಕೋತಿರ್ಲಿಲ್ಲ.. ನಾನು ಛೇ ಕ್ಲಾಸ್ ಮಿಸ್ ಆಯ್ತಲ್ಲಾ ಅಂದ್ರೆ, ಅವ್ನು ಮಾತ್ರ, ಹೋಗ್ಲಿ ಬಿಡು, ಅಟೆಂಡೆನ್ಸ್ ಸಿಕ್ತು.. ಇನ್ನು ವನ್ ಹವರ್ ಫ್ರೀ ಅಂತ ಹೇಳಿ ನನ್ನನ್ನು ಕರ್ಕೊಂಡು ಬಾಯ್ಸ್ ರೂಂಗೆ ಹೋಗ್ತಿದ್ದ.. ಅಲ್ಲಿ ಮತ್ತದೇ ಪಟ್ಟಾಂಗ..

ಪಿಯುಸಿ ಫಸ್ಟ್ ಇಯರ್ ನಲ್ಲಿದ್ದಾಗ್ಲೇ ನನ್ನ ಫಸ್ಟ್ ಲವ ಸ್ಟೋರಿ ಸ್ಟಾರ್ಟ್ ಆಗಿದ್ದು.. ನಮ್ಮ ಕ್ಲಾಸ್ ನಲ್ಲೊಬ್ಳು ಹುಡುಗಿಯಿದ್ಳು.. ಅವಳ ಜೊತೆಗೆ ಮಾತಾಡೋಕೂ ಶುರು ಮಾಡಿರ್ಲಿಲ್ಲ.. ಆಗ್ಲೇ ನಂಗೆ ಅವಳ ಮೇಲೆ ವಿಪರೀತ ಲವ್.. ಪಿಯುಸಿನಲ್ಲಿ ಎರಡು ವರ್ಷ ಕಳೆದ್ರೂ ನಾನು ಪ್ರೊಪೋಸ್ ಮಾಡಿರ್ಲಿಲ್ಲ..

ಪಿಯುಸಿನಲ್ಲಿ ಗಾರ್ಡ ಡುಮ್ಕಿ ಹೊಡ್ದ.. ಹಾಗಾಗಿ ಡಿಗ್ರಿಗೆ ಬಂದಾಗ ಅವನು ಮಿಸ್ ಆಗ್ಬಿಟ್ಟ.. ಆದ್ರೆ ದಾಮು ಜೊತೆಗಿದ್ದ.. ಹಾಗಾಗಿ ಅಷ್ಟೊಂದು ಬೋರ್ ಅನ್ಸಿಲ್ಲ.. ಇನ್ನು ಪಿಯುಸಿಯಲ್ಲಿದ್ದಾಗ್ಲೇ ಕೊಡಗಿನ ಹುಡುಗಿ ಜಯಶ್ರೀ ಪರಿಚಯ ಆಗಿದ್ದು.. ಆದ್ರೆ ಡಿಗ್ರಿಗೆ ಬರ್ತಿದ್ದಂಗೆ ಅವಳದ್ದು ಫೈನಲ್ ಇಯರ್ ಮುಗಿದಿತ್ತು.. ಮತ್ತೆ ಕಾಂಟ್ಯಾಕ್ಟ್ ಗೆ ಸಿಗಲೇ ಇಲ್ಲ.. ಇನ್ನು ಮೌಲ್ಯ ಇವಾಗ್ಲೂ ಟಚ್ ನಲ್ಲಿದ್ದಾಳೆ.. ಮದುವೆಯಾಗಿ ಒಂದು ಪುಟ್ಟ ಮಗ ಇದ್ದಾನೆ.. ಇನ್ನು ಕೆಲವರ ಹೆಸರು ಹೇಳೋದೇ ಬೇಡ... ಎಲ್ಲಾ ನಂಗಿಂತ ಸೀನಿಯರ್ಸ್.. ಹಾಂ, ಸುನಿಲ್ ಮತ್ತು ವಿನು ಅನ್ನೋ ಇಬ್ರು ಸೈನ್ಸ್ ಫ್ರೆಂಡ್ಸ್ ಇದ್ರು.. ಅವ್ರೂ ಸೀನಿಯರ್ಸೇ.. ಆದ್ರೂ ನಂಗೆ ಒಳ್ಳೆ ಫ್ರೆಂಡ್ಸ್ ಆಗಿದ್ರು.. ಸುನಿಲ್ ಸದ್ಯಕ್ಕೆ ಉಡುಪಿಯಲ್ಲಿದ್ದಾನೆ, ಆದ್ರೆ ವಿನು ಎಲ್ಲಿದ್ದಾನೋ ಗೊತ್ತಿಲ್ಲ.. ರಾಜೇಶ್ ಉಜಿರೆಯಲ್ಲಿ ಮೊಬೈಲ್ ಶಾಪ್ ಇಟ್ಕೊಂಡಿದ್ದಾನೆ.. ಸ್ಟಿಲ್ ಹ್ಯಾವ್ ಕಾಂಟ್ಯಾಕ್ಟ್...

ಡಿಗ್ರಿ ಸೇರ್ಕೊಂಡಾಗ ಅದ್ಯಾಕೋ ಗೊತ್ತಿಲ್ಲ, ಜರ್ನಲಿಸಂ ಸಬ್ಜೆಕ್ಟ್ ತಗೊಂಡೆ.. ಜೊತೆಗೆ ಇಂಗ್ಲೀಷ್ ಲಿಟರೇಚರ್ ಮತ್ತು ಡಾಟಾ ಪ್ರೋಸೇಸಿಂಗ್.. ಫಸ್ಟ್ ಇಯರ್ ಡಿಗ್ರಿಯಲ್ಲಿ ನಂಗೆ ಬೆಂಚ್ ಮೇಟ್ ಆಗಿದ್ದು ಸ್ಟ್ಯಾನಿ ಪಿಂಟೋ, ಬಿಜು ವರ್ಗೀಸ್, ಚೇತನ್, ಪುಷ್ಪರಾಜ್ ಮೊದಲಾದವರು.. ದಿನ ಹೋಗ್ತಿದ್ದಂಗೆ ತುಂಬಾ ಜನ ಫ್ರೆಂಡ್ಸ್ ಆದ್ರೂ.. ದೀಕ್ಷಾ, ಅಕ್ಷತಾ, ಯಾಮಿನಿ, ಶಾಂತಲಾ, ಶ್ವೇತಾ.. ಹೀಗೆ ಪಟ್ಟಿ ಬೆಳೀತಾನೇ ಹೋಗತ್ತೆ.. ಬಟ್ ಮೋಸ್ಟ್ ಮೆಮೊರಬಲ್ ಅಂದ್ರೆ ಸ್ಟ್ಯಾನಿ.. ಮೂರು ವರ್ಷದ ಡಿಗ್ರಿ ಲೈಫ್ ನಲ್ಲಿ ನಾನು ಅವ್ನೂ ಬಹುತೇಕ ಜೊತೆಗೇ ಇದ್ವಿ... ಸಂಜೆ 5 ಗಂಟೆಯಿಂದ ನೆಕ್ಟ್ ಡೇ 9 ಗಂಟೆ ಟೈಮ್ ಬಿಟ್ಟು... ರಜಾ ದಿನಗಳಂದೂ ಕೆಲವೊಮ್ಮೆ ಒಟ್ಟಿಗೆ ಇರ್ತಿದ್ವಿ...

ನಾನು ಸ್ಟ್ಯಾನಿ ಒಟ್ಟಿಗೆ ಸೇರಿ ಮಾಡ್ಕೊಂಡ ಚೇಷ್ಟೆಗಳು ಒಂದೆರಡಲ್ಲ.. ಇದಕ್ಕೆಲ್ಲ ಪುಷ್ಪರಾಜ್ ಮತ್ತು ಚೇತನ್ ಸಾಥ್ ನೀಡ್ತಿದ್ದ.. ಜೊತೆಗೆ ದಾಮು ಕೂಡ.. ಆದ್ರೆ ನಮ್ಮ ಚಿಪ್ಸ್ ಬಿಜು ಮಾತ್ರ ಬುದ್ಧಿ ಹೇಳ್ತಿದ್ದ... ಯಾಕಂದ್ರೆ ಅವ್ನು ಡಿಗ್ರಿಗೆ ಬರೋ ಮೊದ್ಲು ಒಂದರೆಡು ವರ್ಷ ಫಿಲಾಸಫಿ ಓದಿ ನಂತ್ರ ಅರ್ಧಕ್ಕೆ ಬಿಟ್ಟು ಬಂದಿದ್ದ.. ವಯಸಲ್ಲಿ ನಮಗಿಂತಲೂ ಸ್ವಲ್ಪ ದೊಡ್ಡವನು.. ಸ್ವಲ್ಪ ಅಂದ್ರೆ.. ಬೇಡ ಬಿಡಿ.. ಬಿಜು ಕ್ಲಾಸ್ ಗೆ ತರ್ತಿದ್ದ ಚಿಪ್ಸ್ ಮಾತ್ರ ಸೂಪರ್.. ನಾವೆಲ್ಲ ಕಿತ್ತಾಡ್ಕೊಂಡು ತಿನ್ತಿದ್ವಿ..
ಈ ಮಧ್ಯೆ ನಮ್ ಸ್ಟ್ಯಾನಿ ಸ್ಟಾರ್ಟ್ ಮಾಡಿದ್ದ ಆ ಮ್ಯಾಗಜಿನ್ ಮಾತ್ರ ಸೂಪರಾಗಿತ್ತು.. ಅದ್ರ ಹೆಸರು ಬೇಡ ಅನ್ಸತ್ತೆ.. ಬಹುಷ ಆ ಮ್ಯಾಗಜಿನ್ ಸ್ಟಾರ್ಟ್ ಆದಮೇಲೆ ಸುನಿಲ್ ಹೆಗ್ಡೆ, ರಾಘವ್ ಶರ್ಮನಂತಹ ಕೆಲವು ಫಸ್ಟ್ ಬೆಂಚಿನ ವಿದ್ಯಾರ್ಥಿಗಳು ನಮ್ಗೆ ಕ್ಲೋಸ್ ಆದ್ರೂ.. ಸಿದ್ಧವನದ ಗೆಳೆಯರ ಸಪೋರ್ಟ್ ಅಂತೂ ಯಾವತ್ತೂ ಇತ್ತು..

ಸೆಕೆಂಡ್ ಇಯರ್ ನಲ್ಲಿದ್ದಾಗ ಕಾಲೇಜು ಡೇ ಟೈಮ್ ನಲ್ಲಿ ಮಾಡಿದ್ದ ಫ್ಯಾನ್ಸಿ ಡ್ರೆಸ್ ಕಾಂಪಿಟೇಷನ್ ಅನ್ ಫೊರ್ಗೆಟೆಬಲ್.. ಸಬ್ಜೆಕ್ ಕಂಬಳ.. ತುಳುನಾಡಿನ ಆಟಗಳಲ್ಲೊಂದು.. ಅವತ್ತು ಕಂಬಳಕ್ಕಾಗಿ ಎಲ್ಲಾ ಸಿದ್ಧತೆ ಮಾಡ್ಕೊಂಡಿದ್ವಿ.. ಪುಷ್ಪರಾಜ್, ಸ್ಟ್ಯಾನಿ ಎಲ್ಲಾ ಸೇರ್ಕೊಂಡು ರತ್ನಮಾನಸದಿಂದ ಎತ್ತುಗಳನ್ನು ಕಂಬಳಕ್ಕೆ ರೆಡಿ ಮಾಡ್ಕೊಂಡು ಬರೋಕೆ ಹೋಗಿದ್ರು... ರತ್ನಮಾನಸದ ವಾರ್ಡನ್ ಎರಡು ಎತ್ತುಗಳನ್ನು ಚೆನ್ನಾಗಿ ತೊಳೆದು, ಕಟ್ಟಿ ಹಾಕಿದ್ರು.. ನಮ್ಮ ಹುಡುಗರು ಆ ಎತ್ತುಗಳನ್ನು ಹಗ್ಗ ಬಿಚ್ಚಿದ್ದೇ ತಡ,, ನಾಗಾಲೋಟದಿಂದ ರತ್ನಮಾನಸದ ತೋಟದೊಳಗೆ ಓಡಿ ಹೋಯ್ತು.. ನಾನು ಮತ್ತು ದಾಮು ರತ್ನಮಾನಸಕ್ಕೆ ಹೋದ್ರೆ ಎಲ್ರೂ ಆ ಎತ್ತುಗಳ ಹಿಂದೆ ಓಡ್ತಿದ್ರು.. ವಾರ್ಡನ್, ರತ್ನಮಾನಸದ ಸ್ಟೂಡೆಂಟ್ಸ್, ಕೆಲಸದವರು ಎಲ್ಲಾ ಅದ್ರ ಹಿಂದೆ ಹೋದ್ರೂ ಪ್ರಯೋಜನವಾಗಲಿಲ್ಲ.. ಕೊನೆಗೆ ಅಲ್ಲಿದ್ದ ಎರಡು ಪುಟ್ಟ ಕರುಗಳೊಂದಿಗೆ ಕಾಲೇಜಿಗೆ ವಾಪಾಸ್ ಬಂದ್ವಿ.. ಎತ್ತಿನ ಬದಲು ಕರುಗಳನ್ನೇ ಒಂದು ಜೊತೆ ಕಂಬಳದಲ್ಲಿ ಓಡಿಸಿದ್ವಿ.. ಮತ್ತೊಂದು ಜೊತೆಗೆ ಸ್ಟ್ಯಾನಿ ಮತ್ತು ರಿತೇಶ್ ತಲೆ ಮೇಲೆ ಕಂಬಳಿ ಹಾಕೊಂಡು ಎತ್ತುಗಳಂತೆ ಓಡಿದ್ರು.. ಅದನ್ನೆಲ್ಲ ಜೀವಮಾನದಲ್ಲಿ ಮರೆಯೋಕಾಗಲ್ಲ..

ಸೆಕೆಂಡ್ ಇಯರ್ ಡಿಗ್ರಿನಲ್ಲಿದ್ದಾಗ್ಲೇ ನಮ್ಮ ಬಿಜು ಎಲೆಕ್ಷನ್ ಗೆ ನಿಂತಿದ್ದ.. ಎಲೆಕ್ಷನ್ ಆಯ್ತು.. ಬಿಜು ಕ್ಲಾಸ್ ರೆಪ್ರೆಸೆಂಟೇಟೀವ್ ಆಗಿ ಗೆದ್ದು ಬಿಟ್ಟಿದ್ದ.. ಅದ್ರ ಅಂಗವಾಗಿ ಸ್ವಪ್ನಾ ಬಾರ್ ಆಂಡ್ ರೆಸ್ಟೋರೆಂಟ್ ಗೆ ಹೋಗಿದ್ವಿ.. ಪಾರ್ಟಿ ಸೆಲೆಬ್ರೇಷನ್ ಗೆ.. ಕೆಲವ್ರೆಲ್ಲ ಲೈಟಾಗಿ ಎಣ್ಣೆ ಏರಿಸಿಕೊಂಡಿದ್ರು.. ಪಾರ್ಟಿ ಎಲ್ಲಾ ಮುಗಿಸ್ಕೊಂಡು ಹೊರಗಡೆ ಬಂದಿದ್ವಿ.. ಯಾವ್ದೋ ಮಾರುತಿ 800 ನಿಂತಿತ್ತು.. ಸ್ವಲ್ಪ ಮತ್ತೇರಿದ್ದ ಬಿಜು ಒಂದು ಡೈಲಾಗ್ ಹೊಡೆದ.. ಚಾರ್ಜರ್ ಕೊರ್ಯೆ, ಮೊಬೈಲ್ ಕೊರ್ಯೆ.. ಥ್ಯಾಂಕ್ಸ್ ಬೊಡ್ಚಿ.. ಒಂಜಿ ವೋಟ್ ಪಾಡ್ಯಾಲಾ... ಅಂದ್ರೆ, ಚಾರ್ಜರ್ ಕೊಟ್ಟೆ, ಮೊಬೈಲ್ ಕೊಟ್ಟೆ.. ಥ್ಯಾಂಕ್ಸ್ ಬೇಡ.. ಆದ್ರೆ ಒಂದು ವೋಟ್ ಹಾಕಿದ್ಳಾ... ಇದು ನಮ್ಮದೇ ತರಗತಿಯ ಹುಡುಗಿಯೊಬ್ಬಳ ಬಗ್ಗೆ ಬಿಜು ಹೇಳಿದ ಡೈಲಾಗ್ ಆಗಿತ್ತು.. ಇವತ್ತಿಗೂ ಬಿಜು ಅಂದ್ರೆ ಆ ಡೈಲಾಗ್ ನೆನಪಾಗತ್ತೆ.. ಮತ್ತೂ ಮಜಾ ಅಂದ್ರೆ ಒಂದಿನ ಕ್ಲಾಸ್ ನಲ್ಲಿ ಫ್ರೀ ಟೈಮ್ ಇದ್ದಾಗ ಸ್ಕಿಟ್ ಮಾಡಿದ್ವಿ.. ಜೊತೆಗೆ ಬಿಜು ಕೂಡ ಇದ್ದ.. ಆದ್ರೆ ಬಿಜುಗೆ ನಾವು ಯಾವ ಸ್ಕಿಟ್ ಮಾಡ್ತಿದ್ದೀವಿ ಅನ್ನೋದೇ ಗೊತ್ತಿರ್ಲಿಲ್ಲ.. ಅಲ್ಲಿ ನಾನು, ದಾಮು, ಸ್ಟ್ಯಾನಿ ಎಲ್ಲಾ ಸೇರ್ಕೊಂಡು ಮಾಡಿದ್ದು ಅದೇ ಬಿಜುನ ಡೈಲಾಗ್ ಸ್ಕಿಟ್ ನ... ಬಿಜು ಬೈದಿಲ್ಲ ಅಷ್ಟೇ.. ಆದ್ರೆ ಅವ್ನ ಮುಖ ಸಣ್ಣಗಾಗಿ ಹೋಗಿತ್ತು.. ಮತ್ತೆ ಅವ್ನಿಗೆ ಹೇಗೋ ಸಮಾಧಾನ ಮಾಡೋವಷ್ಟರಲ್ಲಿ ಸಾಕಾಗಿ ಹೋಗಿತ್ತು..

ಫೈನಲ್ ಇಯರ್ ನಲ್ಲಿದ್ದಾಗ ಫ್ಯಾನ್ಸಿ ಡ್ರೆಸ್ ಕಾಂಪಿಟೇಷನ್ ಗೆ ಆಯ್ಕೆ ಮಾಡ್ಕೊಂಡಿದ್ದು ಹಿಜಿಡಾ ಸಮಾವೇಶ.. ನಾನು, ಸ್ಟ್ಯಾನಿ, ಬಿಜು, ಪುಷ್ಪರಾಜ, ಗುರುಪ್ರಸಾದ್ ಎಲ್ಲಾ ಸೇರ್ಕೊಂಡು ಅದಕ್ಕೆ ಅಣಿಯಾಗಿದ್ವಿ.. ಕ್ಲಾಸ್ ನಲ್ಲಿದ್ದ ಸಹೃದಯಿ ಗೆಳತಿಯರು ತಮ್ಮ ಚೂಡಿದಾರ್ ಗಳನ್ನು ನಮಗೆ ಕೊಟ್ಟಿದ್ರು.. ಮುಖಕ್ಕೊಂದಿಷ್ಟು ಬಣ್ಣ ಹಚ್ಕೊಂಡು, ತುಟಿಗೆಲ್ಲ ಲಿಪ್ ಸ್ಟಿಕ್ ಪದರ ಹಾಕಿ, ಏನೇನೋ ಮಾಡ್ಕೊಂಡು ಹಿಜಿಡಾ ಆಗಿ ರೆಡಿಯಾಗಿದ್ವಿ.. ನಮ್ಮ ತರಗತಿಯ ಕೆಲವು ಗೆಳತಿಯರು ನಮಗೆ ಮೇಕ್ ಅಪ್ ಮಾಡೋಕೆ ಹೆಲ್ಪ್ ಮಾಡಿದ್ರು.. ಕಾಲೇಜು ಗ್ರೌಂಡ್ ನಲ್ಲಿ ನಾವು ಸುಮಾರು 20 ಹುಡುಗರು, ಹಿಜಿಡಾ ವೇಷದಲ್ಲಿ ಮಿಂಚಿದ್ವಿ.. ದಾಮು ಕೊಟ್ಟಿದ್ದ ಬ್ಯಾಕ್ ಗ್ರೌಂಡ್ ವಾಯ್ಸ್ ಅಂತೂ ಸೂಪರ್.. ಕೊನೆಯಲ್ಲಿ ಮೇರಾ ಅಂಗಾನೇಮೇ ತುಮ್ಹಾರಾ ನಾಮ್ ಅನ್ನೋ ಸಾಂಗ್ ಗೆ ಹೆಜ್ಜೆ ಹಾಕಿದ್ವಿ... ಕೊನೆಗೆ ಪುಷ್ಪರಾಜ್ ನ ಬೈಕ್ ನಲ್ಲಿ ವಾಪಾಸ್ ಹೋಗ್ತಿದ್ದಾಗ ಯಾರ್ದೋ ಚೂಡಿದಾರ್ ನ ವೇಲ್ ಹಿಂದಿನ ಚಕ್ರಕ್ಕೆ ಸಿಲುಕಿತ್ತು.. ಆದ್ರೆ ಅದೃಷ್ಟವಶಾತ್ ಯಾವುದೇ ಅಪಾಯ ಆಗಿಲ್ಲ...

ಇನ್ನು ವೆರೈಟಿ ಕಾಂಪಿಟೇಷನ್ ಗೆ ರಾತ್ರಿಯೆಲ್ಲಾ ಕಷ್ಟಪಟ್ಟು ಕೆಲಸ ಮಾಡಿದ್ವಿ.. ನೆಕ್ಟ್ ಡೇ ಫಸ್ಟ್ ಪ್ರೈಸ್ ನಮಗೇ ಬಂದಿತ್ತು.. ಇಂಗ್ಲೀಷ್ ಕ್ಲಾಸ್ ನಲ್ಲಿ ಕೂತು ಮಾಡಿದ್ದ ಕಿತಾಪತಿಗಳು ಒಂದೆರಡಲ್ಲ.. ಸದ್ಯ ಡೆಲ್ಲಿಯಲ್ಲಿ ಜನಶ್ರೀ ರಿಪೋರ್ಟರ್ ಆಗಿರೋ ರಾಘವ್ ಶರ್ಮಾನಿಗೆ ರಸ್ಕ್ ಕೊಟ್ಟಿದ್ದಂತೂ ಮರೆಯೋಕಾಗಲ್ಲ.. ರಾಘು ರಸ್ಕ್ ಬೇಕೇನೋ ಅಂತ ಹೇಳಿ ನಾನೇ ಕೊಟ್ಟಿದ್ದೆ.. ಪಾಪ ಅವ್ನು ತಗೊಂಡು ತಿಂದಿದ್ದ... ಶೇಕ್ಸ್ ಪಿಯರ್ ಬಗ್ಗೆ ಕ್ಲಾಸ್ ನಡೀತಿತ್ತು.. ಅವ್ನು ಅರ್ಧ ತಿಂದಾದ ಮೇಲೆ ಕೇಳ್ದ.. ರಸ್ಕ್ ಎಲ್ಲಿಂದ ಅಂತ.. ಮುಸಿ ಮುಸಿ ನಗ್ತಾ ನಿಧಾನಕ್ಕೆ ಹೇಳಿದ್ದೆ.. ಇಲ್ಲೇ ಕೆಳಗಡೆ ಬಿದ್ದಿತ್ತು ಕಣೋ.. ಪಾಪ ರಾಘವನ ಮುಖ ನೋಡ್ಬೇಕಾಗಿತ್ತು.. ಅತ್ತ ಉಗುಳೋಕೂ ಆಗಲ್ಲ, ಇತ್ತ ನುಂಗೋಕೂ ಆಗಲ್ಲ..

ನ್ಯೂ ಇಯರ್ ಸೆಲೆಬ್ರೇಷನ್ ನವತ್ತು ನೇತ್ರಾವತಿ ನದಿಯ ತಟದಲ್ಲಿ ನೈಟ್ ಕ್ಯಾಂಪ್ ಮಾಡಿದ್ವಿ.. ಅವತ್ತು ನದಿ ದಡದಲ್ಲಿ ಮರಳಲ್ಲಿ ಆರಡಿ ಉದ್ದದ ಹೊಂಡ ತೋಡಿದ್ವಿ. ನಂತ್ರ ಎಲ್ಲಾ ಸೇರ್ಕೊಂಡು ರಾಘವನನ್ನು ಆ ಹೊಂಡದಲ್ಲಿ ಹಾಕಿದ್ವಿ.. ಆದ್ರೆ ಮೇಲೆ ಮರಳು ಹಾಕಿ ಮುಚ್ಚಿಲ್ಲ.. ಅದ್ಕೇ ಇವಾಗ ಡೆಲ್ಲಿಯಲ್ಲಿ ಕೆಲ್ಸ ಮಾಡ್ತಿದ್ದಾನೆ...

ಹೀಗೆ ಕಾಲೇಜು ದಿನಗಳ ಸವಿನೆನಪುಗಳು ಒಂದೆರಡಲ್ಲ... ಒಂದಕ್ಕಿಂತ ಮತ್ತೊಂದು ವಿಭಿನ್ನ.. ಕಾಲೇಜು ಲೈಫ್ ಮುಗಿದು ನಾಲ್ಕು ವರ್ಷ ಕಳೆಯಿತು.. ಜೊತೆಗಿದ್ದ ಬಹುತೇಕ ಗೆಳೆಯರು ಇಂದು ಒಳ್ಳೆಯ ಪೊಸಿಷನ್ ನಲ್ಲಿದ್ದಾರೆ.. ಖುಷಿ ಆಗತ್ತೆ..

ತುಂಬಾ ಗೆಳೆಯರು ಇವತ್ತಿಗೂ ಕಾಂಟ್ಯಾಕ್ಟ್ ನಲ್ಲಿದ್ದಾರೆ.. ಆದ್ರೆ ಕೆಲವರು ಕಾರಣಾಂತರಗಳಿಂದ ಮಾತಾಡ್ತಿಲ್ಲ.. ಇನ್ನು ಕೆಲವರ ಜೊತೆಗೆ ಟಚ್ ಇಲ್ಲ.. ಎಲ್ಲಿದ್ದಾರೆ, ಏನ್ ಮಾಡ್ತಿದ್ದಾರೆ ಅನ್ನೋದೇ ಗೊತ್ತಿಲ್ಲ.. ಆದ್ರೆ ನಮ್ಮ ಕ್ಲಾಸ್ ನಲ್ಲಿದ್ದ 52 ಗೆಳೆಯರ ನೆನಪುಗಳೂ ಜೊತೆಗಿವೆ.. ಹೀಗೆ ಹಳೆಯ ನೆನಪುಗಳು ಇನ್ನೂ ಇವೆ.. ಮತ್ತೊಮ್ಮೆ ಬರೀತೀನಿ...

Saturday, November 27, 2010

ಕೊಲೆಗಡುಕನ ಮುಂದೆ...

ಅದೊಂದು ಭಾನುವಾರ...
ಖಾಸಗೀ ಟಿವಿ ವಾಹಿನಿಯೊಂದರಲ್ಲಿ ಅಪರಾಧ ವರದಿಗಾರನಾಗಿ ಕೆಲಸ ಮಾಡ್ತಿರೋ ನನಗೆ ಆ ದಿನವನ್ನು ಯಾವತ್ತಿಗೂ ಮರೆಯೋಕಾಗಲ್ಲ.. ಬೆಳ್ಳಂ ಬೆಳಗ್ಗೆ ಆರ್. ಟಿ.ನಗರದಲ್ಲಿ ಮರ್ಡರ್ ಆಗಿದೆ ಅಂತ ಗೊತ್ತಾಗಿದ್ದೆ ತಡ, ಬ್ರೇಕಿಂಗ್ ನ್ಯೂಸ್ ಕೊಡ್ತಾ ಸ್ಪಾಟ್ ತಲುಪಿದ್ದೆ.. ತಾಳಿ ಕಟ್ಟಿದ ಹೆಂಡತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಆ ಪಾಪಿ ಗಂಡ ಕೊಲೆಮಾಡಿದ್ದ.. ಪಾಪ ಎಲ್ಲವನ್ನೂ ಕಣ್ಣಾರೆ ಕಂಡಿದ್ದ ಇಬ್ಬರು ಮಕ್ಕಳನ್ನು ತಾಯಿ ಮನೆಯಲ್ಲಿ ಬಿಟ್ಟು ಗಂಡ ಪರಾರಿಯಾಗಿದ್ದ.. ನಾನು ಮತ್ತು ಮತ್ತೊಂದು ಖಾಸಗಿ ವಾಹಿನಿಯ ಗೆಳೆಯ ರಾಕೇಶ್ ಸ್ಪಾಟ್ ವಿಸುವಲ್ಸ್ ಮತ್ತು ಬೈಟ್ ತಗೊಂಡು ನೇರವಾಗಿ ಕಮಿಷನರ್ ಆಫೀಸಿಗೆ ಹೋಗಿದ್ದೆವು.. ಜಂಟಿ ಪೋಲಿಸ್ ಆಯುಕ್ತರಾದ ಅಲೋಕ್ ಕುಮಾರ್ ಬೈಟ್ ಬೇಕಾಗಿತ್ತು.. ಬೈಟ್ ತಗೊಂಡು ವಾಪಾಸ್ ಆಫೀಸಿಗೆ ಬಂದು ಸ್ಕ್ರಿಪ್ಟ್ ಕೊಟ್ಟು ಬೇರ್ಯಾವುದೋ ಕೆಲಸದಲ್ಲಿ ತೊಡಗಿಸಿಕೊಂಡಿದ್ದೆ.. ಸಂಜೆ ಸುಮಾರು ೫ ಗಂಟೆಯಾಗಿರಬಹುದು ಅನ್ಸತ್ತೆ.. ಆಫೀಸ್ ಗೆ ಅನಾಮಿಕನೊಬ್ಬ ಬಂದಿದ್ದ.. ಮೇಡಂ ಸುನಿಲ್ ಯಾರೋ ಬಂದಿದ್ದಾರೆ ನೋಡಿ, ಏನೋ ಮರ್ಡರ್ ಅಂತ ಹೇಳ್ತಿದ್ದಾರೆ ಅಂದ್ರು.. ಏನಪ್ಪಾ ಇದು ಅಂದ್ಕೊಂಡು ಅವನನ್ನು ವಿಚಾರಿಸಿದೆ.. Receptionಮೇಡಂ ಕೂಡ ಅಲ್ಲೇ ನಿಂತಿದ್ರು.. ಗಬ್ಬು ವಾಸನೆ ಅವನ ದೇಹದಿಂದ ಮೂಗಿಗೆ ಬಡಿಯುತ್ತಿತ್ತು.. "ಯಾರ್ ನೀವು, ಏನ್ ವಿಷ್ಯ" ಅಂತ ಕೇಳ್ದೆ.. " ಸಾರ್ ಬೆಳಿಗ್ಗೆ ಆರ್. ಟಿ.ನಗರದಲ್ಲಿ ಮರ್ಡರ್ ಆಗಿತ್ತಲ್ಲ, ಅದು ನಾನೆ ಮಾಡಿದ್ದೂ ಸಾರ್" ಅಂದ.. ಅರೆಕ್ಷಣ ಕೈಕಾಲು ಸ್ತಬ್ಧವಾಗಿತ್ತು.. ಏನ್ ಹೇಳ್ಬೇಕು, ಏನ್ ಮಾಡ್ಬೇಕು ಅಂತಾನೆ ಗೊತ್ತಾಗದೆ ಸುಮ್ಮನೆ ನಿಂತಿದ್ದೆ.. ಪಕ್ಕದಲ್ಲಿ ನಿಂತಿದ್ದ ಮೇಡಂ ಪರಿಸ್ಥಿತಿಯಂತೂ ಕೇಳೋದೇ ಬೇಡ.. ಆದರು ಕೊಂಚ ಧೈರ್ಯ ೧೨ "ಯಾಕೆ ಮರ್ಡರ್ ಮಾಡ್ದೆ" ಎಂದು ಕೇಳ್ದೆ.. "ಇಲ್ಲ ಸಾರ್ ಆಕೆ ತುಂಬಾನೇ ಕೆಟ್ಟವಳು.. ಅದ್ಕೇ ಕೊಲೆ ಮಾಡ್ದೆ.. " ಅದೇ ನಿರ್ವಿಕಾರ ಮನೋಭಾವದಲ್ಲಿ ಆತ ಮುಂದುವರಿಸಿದ.. "ತುಂಬಾನೇ ಸಹಿಸ್ಕೊಂಡೆ, ಆದ್ರೆ ಅವಳು ನೆಟ್ಟಗಾಗ್ಲಿಲ್ಲ.. ಮಾತ್ರವಲ್ಲ ಮತ್ತೆ ಹಳೇ ಚಾಳಿ ಮುಂದುವರಿಸಿದ್ಳು.. " "ಸಾರ್ ಸ್ವಲ್ಪ ನೀರು ಕುಡೀಬೋದಾ" ಅಂತ ಕೇಳ್ದ.. "ಹಾಂ" ಎಂದು ಹೇಳಿ ನಾನು ತಲೆಯಲ್ಲಾಡಿಸಿದೆ.. ಪಕ್ಕದಲ್ಲೇ ಇದ್ದ ಕ್ಯಾನ್ ನಿಂದ ಗ್ಲಾಸಿಗೆ ನೀರು ತುಂಬಿಸ್ಕೊಂಡು ಕುಡಿದ.. ಪಾಪ ಬೆಳಗ್ಗೆಯಿಂದ ಏನೂ ತಿಂದಿರ್ಲಿಲ್ಲ ಅನ್ಸತ್ತೆ... ನೀರು ಕುಡಿದಾದ ಮೇಲೆ ಮತ್ತೆ ಮಾತಾಡೋಕೆ ಶುರು ಮಾಡ್ದ.. "ಆಕೆ ನನ್ನ ಮಗಳನ್ನೂ ತನ್ನ ಹಾದಿಗೆ ತರ್ತೀನಿ ಅಂತ ಹೇಳೋಕೆ ಶುರು ಮಾಡಿದ್ಳು, ನಂಗೆ ತಡ್ಕೊಳ್ಳೋಕೆ ಆಗಿಲ್ಲ.. ರಾತ್ರಿ ಪೂರ ಜಗಳ ಆಗಿತ್ತು.. ನಾನು ಏನೇ ಹೇಳಿದ್ರೂ ನನ್ ಮಾತನ್ನು ಕೇಳೋ ಪರಿಸ್ಥಿತಿಯಲ್ಲಿ ಆಕೆ ಇರ್ಲಿಲ್ಲ.. ಆಕೆ ಇನ್ನು ಬದುಕೋದು ಬೇಡಾಂತ ನಿರ್ಧರಿಸಿದ್ದೆ.. ಯಾಕಂದ್ರೆ ನಂಗೆ ನಂಗಿತ್ತ ನನ್ ಮಗಳೇ ಹೆಚ್ಚಾಗಿತ್ತು.. 12 ವರ್ಷದ ಆ ಮಗೂ ತಾಯಿ ದಾರಿಯಲ್ಲಿ ಹೋಗೋದು ನಂಗೆ ಇಷ್ಟ ಇರ್ಲಿಲ್ಲ.. " ಇಷ್ಟನ್ನು ಒಂದೇ ಉಸಿರಲ್ಲಿ ಹೇಳಿದ ಆ ವ್ಯಕ್ತಿ ನಂತ್ರ ನಿಧಾನವಾಗಿ ಚೇರ್ ಮೇಲೆ ಕುಳಿತುಕೊಂಡ.. ನಂಗೆ ಭಯ ಆದ್ರೂ ಅದನ್ನು ತೋರಿಸ್ಕೊಳ್ಳದೆ ಪಕ್ಕದ ಚೇರ್ ನಲ್ಲಿ ಕುಳಿತುಕೊಂಡೆ.. "ಆಕೆ ತುಂಬಾ ಜನರ ಜೊತೆಗೆ ಸಂಬಂಧ ಇಟ್ಕೊಂಡಿದ್ಳು ಸಾರ್.. ಅದನ್ನೇ ವೃತ್ತಿಯಾಗಿ ಮಾಡಿಕೊಂಡಿದ್ಳು.. ಅದೂ ನನ್ ಗೆಳೆಯರ ಜೊತೆಗೇ... ನಂಗೆ ಮೊದ್ಲು ಇವೆಲ್ಲ ಗೊತ್ತಿರ್ಲಿಲ್ಲ.. ಅವಳ ಮೇಲೆ ತುಂಬಾನೇ ನಂಬಿಕೆಯಿಟ್ಟಿದೆ... ಆದ್ರೆ ನಂತ್ರ ಅವಳ ಖಯಾಲಿ ಗೊತ್ತಾಯ್ತು.. ನಿನ್ನೆ ರಾತ್ರಿ ನಾನು ಮನೆಗೆ ಹೋಗ್ತಿದ್ದಾಗ ಯಾರೋ ಒಬ್ಬ ಮನೆಯಿಂದ ಆಚೆ ಹೋಗ್ತಿದ್ದ.. ಆಕೆಗೆ ಇವಾಗ ಹೋಗಿದ್ದು ಯಾರು ಅಂತ ಕೇಳಿದ್ದಕ್ಕೆ ಫ್ರೆಂಡ್ ಅಂದ್ಳು.. ಯಾವ ಫ್ರೆಂಡ್ ಅವನಿಗೆ ಇಷ್ಟೊತ್ತಲ್ಲಿ ಏನ್ ಕೆಲ್ಸ ಅಂತ ಕೇಳಿದ್ದಕ್ಕೆ ನಂಗೇ ದಬಾಯಿಸಿದ್ಳು... ನಿಮ್ಗೆ ಯಾಕ್ರೀ ಅದೆಲ್ಲ ಅಂತ ನನ್ನನ್ನೇ ದಬಾಯಿಸಿದ್ಳು.. ನಂಗೆ ರೇಗೋಗಿತ್ತು.. ಮಕ್ಕಳ ಮುಂದೆಯೇ ಅವಳ ಕಪಾಳಕ್ಕೆರಡು ಬಾರಿಸಿದೆ.. ಅಷ್ಟಕ್ಕೆ ಆಕೆಯ ಕೋಪ ಮತ್ತಷ್ಟು ನೆತ್ತಿಗೇರಿತ್ತು... ನಂಗೆ ಇಷ್ಟ ಇರೋ ರೀತಿಯಲ್ಲಿ ನಾನು ಬದುಕ್ತೀನಿ ನೀವು ಕೇಳೋಕೆ ಬರ್ಬೇಡಿ ಅಂದ್ಳು.. ನಂಗೆ ಆಕೆಯ ವರ್ತನೆ ಆಶ್ಚರ್ಯ ತಂದಿತ್ತು.. ಆಕೆಯ ಬಗ್ಗೆ ಹಲವಾರು ಕನಸುಗಳನ್ನಿಟ್ಟುಕೊಂಡಿದ್ದೆ... ಏನು ಮಾತಾಡ್ಬೇಕು ಎಂದು ಗೊತ್ತಾಗದೆ ಸುಮ್ಮನಿದ್ದೆ... ನಾನು ಸುಮ್ಮನಿರೋದನ್ನು ಕಂಡ ಆಕೆ ಮತ್ತಷ್ಟು ಮಾತಾಡೋಕೆ ಶುರು ಮಾಡಿದ್ಳು.. ಕೊನೆಗೆ ನಾನು ಒಂದು ಮಾತು ಹೇಳ್ದೆ.. ನೀನ್ ಏನ್ ಬೇಕಾದ್ರೂ ಮಾಡ್ಕೋ, ಆದ್ರೆ ಮಕ್ಕಳ ಮುಂದೆ ಈ ರೀತಿ ಮಾಡೋದು ಸರಿಯಿರಲ್ಲ.. ಮಗಳು ದೊಡ್ಡವಳಾಗ್ತಿದ್ದಾಳೆ.. ನೀನ್ ಇನ್ಮೇಲೆ ಈ ಮನೆಯಲ್ಲಿರ್ಬೇಡ ಅಂತ ಹೇಳ್ದೆ.. ಆಗ್ಲೇ ಆಕೆಯ ನಿಜರೂಪ ನೋಡಿದ್ದು.. ನಾನು ನಂಗೆ ಇಷ್ಟ ಬಂದ ರೀತಿಯಲ್ಲಿ ಇರ್ತೀನಿ, ನನ್ ಮಗಳನ್ನೂ ನಂಗಿಷ್ಟ ಬಂದ ರೀತಿಯಲ್ಲೇ ಬೆಳೆಸ್ತೀನಿ... ಬೇಕಂದ್ರೆ ಅವಳನ್ನೂ ಜೊತೆಗೆ ಕರ್ಕೊಂಡು ಹೋಗ್ತೀನಿ ಅಂದ್ಳು.. ಅವಳ ಆ ಮಾತನ್ನು ನಂಗೆ ಸಹಿಸೋಕಾಗಿಲ್ಲ ಸರ್.. ಆದ್ರೆ ಅವಾಗ ಏನೂ ಮಾಡಿಲ್ಲ.. ಮತ್ತೆ ಬಾರ್ ಗೆ ಹೋಗಿ ಒಂದು ಕ್ವಾರ್ಟರ್ ಕುಡ್ಕೊಂಡು ಮನೆಗೆ ಬಂದೆ.. ಗಂಟೆ ೧೨ ಕಳೆದಿರ್ಬೋದು.. ಕೋಣೆಯಲ್ಲಿ ಬಹುತೇಕ ಕತ್ತಲು ಆವರಿಸಿತ್ತು.. ಮಕ್ಕಳೂ ಜೊತೆಗೇ ಮಲಗಿದ್ರು... ಕೋಣೆಯ ಮತ್ತೊಂದು ಮೂಲೆಯಲ್ಲಿ ಆಕೆ ಮಲಗಿದ್ಳು.. ಮಕ್ಕಳಿಬ್ಬರನ್ನೂ ಎಬ್ಬಿಸಿ ಪಕ್ಕದ ಕೋಣೆಗೆ ಕರ್ಕೊಂಡು ಹೋಗಿ ಮಲಗ್ಸಿದೆ.. ಆ ಘಳಿಗೆಯಲ್ಲಿ ಅದ್ಯಾಕೆ ಹಾಗನಿಸ್ತೋ ಗೊತ್ತಿಲ್ಲ.. ಮನೆಯ ಮುಂದೆ ಬಟ್ಟೆ ಒಗಿಯೋಕೆ ಹಾಕಿದ್ದ ಚಪ್ಪಡಿ ಕಲ್ಲು ಎತ್ಕೊಂಡು ಮನೆಯೊಳಗೆ ಬಂದೆ.. ಮಬ್ಬು ಬೆಳಕಲ್ಲೇ ಮಲಗಿದ್ದ ಆಕೆಯ ತಲೆ ಮೇಲಕ್ಕೆ ಕಲ್ಲನ್ನು ಎತ್ತಿ ಹಾಕಿದೆ.. ಒಂದೆರಡು ಕ್ಷಣ ನರಳಾಡಿದ್ಳು.. ಬಾಯಿಂದ ಸಣ್ಣದೊಂದು ಆರ್ತನಾದ ಹೊರಬಂದಿತ್ತು ಅಷ್ಟೇ.. ವಿಲ ವಿಲನೆ ಒದ್ದಾಡಿ ಅಲ್ಲೇ ಪ್ರಾಣ ಬಿಟ್ಳು.. ರೂಂ ಪೂರ್ತಿ ರಕ್ತ ತುಂಬಿಕೊಂಡಿತ್ತು.. ಸದ್ದು ಕೇಳಿ ಮಕ್ಕಳಿಬ್ಬರೂ ಪಕ್ಕದ ಕೋಣೆಯಿಂದ ಓಡಿ ಬಂದು ನೋಡಿದ್ರು.. ಇಬ್ಬರನ್ನೂ ಎತ್ಕೊಂಡು ಸೀದಾ ನನ್ನ ತಾಯಿ ಮನೆಗೆ ಹೋಗಿ ಬಿಟ್ಟು ಬಂದೆ.. ಬಳಿಕ ರಾತ್ರಿಯಿಂದ ಅಲೆದಾಡೋಕೆ ಶುರು ಮಾಡ್ದೆ.. "
" ಪೊಲೀಸ್ ಹತ್ರ ಸರೆಂಡರ್ ಆಗ್ಬೋದಿತ್ತಾಲ್ಲಾ" ಕೇಳ್ದೆ..
"ಇಲ್ಲ ಸಾರ್.. ನಂಗೆ ನಡೆದ ಘಟನೆಯನ್ನು ಮಾಧ್ಯಮದ ಜೊತೆಗೆ ಹೇಳ್ಕೋಬೇಕಿತ್ತು.. ಹಾಗಾಗಿನೇ ರಾತ್ರಿಯಿಂದ ತಪ್ಪಿಸಿಕೊಂಡು ಇಲ್ಲಿವರೆಗೆ ಹುಡುಕ್ಕೊಂಡು ಬಂದೆ.. ನಂಗೆ ಆಕೆಯನ್ನು ಕೊಲೆ ಮಾಡಿರೋದಿಕ್ಕೇನೂ ಬೇಜಾರಿಲ್ಲ ಸಾರ್.. ಅವಳಂತವ್ರು ಬದುಕಿರ್ಬಾರ್ದು.. ಆಕೆ ಹಾಳಾಗಿದ್ದು ಪರ್ವಾಗಿಲ್ಲ.. ಆದ್ರೆ ನನ್ ಮಗಳನ್ನು ಹಾಳು ಮಾಡ್ತೀನಿ ಅಂತ ಹೇಳಿದ್ಳಲ್ಲಾ... ಅದನ್ನೇ ಸಹಿಸೋಕಾಗಿಲ್ಲ.. " ಅಂತ ಮತ್ತೆ ಹೇಳ್ದ...
"ಹಾಗಾದ್ರೆ ಇವಾಗ ಪೊಲೀಸರು ಬಂದ್ರೆ ಸರೆಂಡರ್ ಆಗ್ತಿಯಾ.." ಕೇಳ್ದೆ..
"ಹೂಂ ಸರ್ ಆಗ್ತೀನಿ.." ಅಂದ..
ಮೊದ್ಲು ಕ್ಯಾಮೆರಾಗೆ ಓರ್ಡರ್ ಮಾಡಿ ಸೀದಾ ಆತನನ್ನು ಕರ್ಕೊಂಡು ಆಫೀಸ್ ಪಕ್ಕದ ಪಾರ್ಕ್ ಗೆ ಹೋದೆ.. ಅರ್ಧ ಗಂಟೆ ಆತನ ಇಂಟರ್ ವ್ಯೂ ತಗೊಂಡೆ.. ಕ್ಯಾಮೆರಾ ಮುಂದೆ ಆ ಕೊಲೆಗಾರ ತನ್ನೆಲ್ಲಾ ಕಥೆಗಳನ್ನೂ ಹೇಳ್ಕೊಂಡ.. ನಂತ್ರ ಅಂದಿನ ಜಾಯಿಂಟ್ ಕಮಿಷನರ್ ಅಲೋಕ್ ಕುಮಾರ್ ಗೆ ಫೋನ್ ಮಾಡಿ ವಿಷಯ ತಿಳಿಸಿದೆ.. ಅಲೋಕ್ ಕುಮಾರ್ ಕೂಡ್ಲೇ ಅಶೋಕ ನಗರ ಪೊಲೀಸರಿಗೆ ನಮ್ಮ ಕಚೇರಿಯತ್ತ ದೌಡಾಯಿಸುವಂತೆ ಸೂಚನೆ ನೀಡಿದ್ರು.. ಮತ್ತೊಂದೆಡೆ ಆರ್.ಟಿ ನಗರ ಇನ್ಸ್ ಪೆಕ್ಟರ್ ಪೂವಯ್ಯನವ್ರಿಗೂ ಸುದ್ದಿ ಮುಟ್ಟಿಸಿ ಅಶೋಕ ನಗರ ಠಾಣೆಯತ್ತ ತೆರಳುವಂತೆ ಹೇಳಿದ್ರು.. ೧೦ ನಿಮಿಷಗಳ ಒಳಗಾಗಿ ಅಶೋಕ್ ನಗರ ಪೊಲೀಸ್ ಠಾಣೆಯ ಹೊಯ್ಸಳ ವಾಹನವೊಂದು ನಮ್ಮ ಆಫೀಸ್ ಮುಂದೆ ನಿಂತಿತ್ತು.. ಸಬ್ ಇನ್ಸ್ ಪೆಕ್ಟರ್ ಲಕ್ಷ್ಮಿ ಮೇಡಮ್ ಜೊತೆಯಲ್ಲಿದ್ರು.. ನಂಗೊಂದು ಥ್ಯಾಂಕ್ಸ್ ಹೇಳಿ ಆ ಕೊಲೆಗಾರ ಪೊಲೀಸ್ ಜೀಪ್ ಹತ್ತಿದ್ದ... ಅಷ್ಟೊತ್ತು ನಂಜೊತೆ ಗೆಳೆಯನಂತೆ ಎಲ್ಲವನ್ನೂ ಹೇಳ್ಕೊಂಡಿದ್ದ ಆ ವ್ಯಕ್ತಿ ಕೈಗೆ ಕೋಳ ತೊಟ್ಕೊಂಡು ಜೀಪ್ ನಲ್ಲಿ ಕುಳಿತಿದ್ದ.. ಹೊಯ್ಸಳ ಜೀಪ್ ಅಶೋಕ್ ನಗರ ಠಾಣೆಯತ್ತ ಹೋಯ್ತು.. ನಾನು ಆಫೀಸೊಳಕ್ಕೆ ಬಂದೆ...

Saturday, October 23, 2010

ನನ್ನ ದೇವತೆ...

ಮನಸ್ಸಿನ ಗುಡಿಗೋಪುರದೊಳಗೊಂದು ಪುಟ್ಟ ದೇವತೆ..
ಅಪ್ಸರೆಯ ಸೊಬಗು, ಸ್ವರ್ಣ ಮಾಲೆ, ನೆರಿಗೆಯ ಸೀರೆ, ಕನಕಾಂಬರ ಹೂವುಗಳಿಲ್ಲದಿದ್ರು ನನಗವಳು ದೇವತೆಯೇ...
ನೆನೆದಾಗ ಕಣ್ಮುಂದೆ ಬರೋ ನಡೆದಾಡುವ ದೇವತೆ..
ಪ್ರೀತಿ, ಸ್ನೇಹದ ದೀಪ ಹಚ್ಚಿ, ವಿಶ್ವಾಸ ನಂಬಿಕೆಯ ಆರತಿ ಎತ್ತಿ, ಕಾಳಜಿಯ ಪೂಜೆ ಸಲ್ಲಿಸಿ ಆರಾಧಿಸ್ತೀನಿ..
ತುಟಿಯಂಚಿನ ಕಿರುನಗೆ ಮತ್ತು ಪ್ರೀತಿ ತುಂಬಿದ ಮಾತುಗಳೇ ನನಗಾ ದೇವತೆಯ ಪ್ರಸಾದ..

Tuesday, December 2, 2008

ಘಾಸಿ ಮಾಡಬೇಡಿ ಈ ಬದುಕಿಗೆ...

ಭಾವನೆಗಳ ಲೋಕದಲ್ಲಿ,
ಭಾವಗಳ ಬದುಕಲ್ಲಿ,
ಪ್ರೀತಿ ಸ್ನೇಹದ ಬೆಸುಗೆಗಳಿಗೆ ಅರ್ಥ ಕಲ್ಪಿಸುತ್ತ,
ವಾಸ್ತವದ ನೆನಪಿನಲ್ಲಿ ವಿಹರಿಸುವ ಪುಟ್ಟ ಜೀವಿ ನಾನು,
ಘಾಸಿ ಮಾಡಬೇಡಿ ಈ ಬದುಕಿಗೆ....

Monday, October 6, 2008

ಧನ್ಯವಾದ ನಿನಗೆ...


ಧನ್ಯವಾದ ನಿನಗೆ...
ನೀನು ಹೇಳಬೇಕಾದ್ದನ್ನು,
ನಾನು ಕೇಳಬೇಕಾದ್ದನು,
ಹೇಳಿ ಮುಜುಗರ ಪಡಿಸದ್ದಕ್ಕೆ,
ಹೇಳುವ ಮಾತುಗಳಿಗಿಂತ,
ಹೇಳದ ಮೌನದ ಮೊರೆ ಹೋಗಿದ್ದಕ್ಕೆ...
ಗೆಳತಿಯೊಬ್ಬಳು ನೀಡಿದ ಗ್ರೀಟಿಂಗ್ ಕಾರ್ಡ್ ನೊಳಗಿದ್ದ ಬರಹಗಳಿವು... ತುಂಬಾ ಹಚ್ಹಿಕೊಂಡಿದ್ದಳು.. ಆದರೂ ಒಂದಾಗಲು ಸಾಧ್ಯವಾಗಲಿಲ್ಲ... ಇದನ್ನು ಇವಾಗ ಯಾಕೆ ಹೇಳುತ್ತಿದ್ದೇನಂದ್ರೆ ಆ ಹಳೆಯ ನೆನಪುಗಳು ಮರುಕಳಿಸುವುದು ಕಡಿಮೆಯಾಗಿದೆ... ಭೂತಕಾಲವನ್ನು ಮರೆಯಲು ಯತ್ನಿಸುತ್ತಿದ್ದೇನೆ.. ಇವಕ್ಕೆಲ್ಲ ಕಾರಣ... ನನ್ನನ್ನು ಅರ್ಥಮಾಡಿಕೊಂಡಿರುವ ಗೆಳತಿ... LOVE ಎಂಬ ಪದಕ್ಕೆ ಯಾವತ್ತೋ good bye ಹೇಳಿಯಾಗಿದೆ... ಈಗೇನಿದ್ದರೂ ಗೆಳೆತನ ಮಾತ್ರ...

ನನ್ನನ್ನು ಅರ್ಥಮಾಡಿಕೊಂಡಿರುವುದಕ್ಕೆ ಅವಳಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು... ಕೆಲವೊಮ್ಮೆ ಕಾರಣವಿಲ್ಲದೆ ಜಗಳ ಆಡ್ತೇವೆ.. ಆದರೆ ಅದು ಸ್ವಲ್ಪ ಹೊತ್ತು ಮಾತ್ರ... ಮತ್ತೆ ಮೊದಲಿನಂತೆ ಹರಟೆ ಆರಂಭವಾಗ್ತದೆ...

ಮುಂದೆ ಎಂದಾದರೊಂದು ದಿನ ದೂರಗಲೇಬೇಕು... ಅಷ್ಟು ದಿನ ಹೀಗೇ ಇರೋಣ ಅಂತ ನಿರ್ಧಾರ ಮಾಡಿದ್ದೇವೆ...




ಬಹಳ ತಿಂಗಳುಗಳ ಬಳಿಕ ಮತ್ತೆ ಬರೆಯುವ ತುಡಿತ...


ಬ್ಲಾಗ್ ನಲ್ಲಿ ಬರೆಯದೆ ಹಲವಾರು ತಿಂಗಳುಗಳೆ ಕಳೆದಿದೆ... ಯಾಕೋ ಇತ್ತೀಚೆಗೆ ಬರೆಯಬೇಕೆಂದು ಮನಸಾಗುವುದೇ ಇಲ್ಲ.. ಆದರೆ ಕೆಲವು ದಿನಗಳ ಹಿಂದೆ ವಿಜಯ್ ಮಾಲೂರ್ ಎಂಬ ಡಾಕ್ಟರ್ ಬರೆದ From Cardiac Bypass to Everest Bypasses ಎಂಬ ಪುಸ್ತಕ ಓದಿದ ಮೇಲೆ ಆದರ ಬಗ್ಗೆ ಏನಾದರೂ ಬರೆಯಬೇಕೆಂದೆನಿಸಿತು..

ಮೂಲತ: ಕೋಲಾರದವರಾದ ವಿಜಯ್ ಮಾಲೂರ್ ವಿದೇಶದಲ್ಲಿ ವೈದ್ಯಕೀಯ ವೃತ್ತಿ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಅವರು ತಮ್ಮ ಫ್ಲಾಟ್ ನ ಮಹಡಿ ಮೇಲಿನಿಂದ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಯ ಸಂದರ್ಭದಲ್ಲಿ ಅವರ ನಾಲ್ಕು Blood Vessels Block ಆಗಿರುವುದು ತಿಳಿಯಿತು. ಇದಕ್ಕಾಗಿ ಅವರು ನಾಲ್ಕು ಬೈಪಾಸ್ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳಬೇಕಾಗಿ ಬಂತು. ಕ್ರಮೇಣ ಅವರು ಚೇತರಿಸಿಕೊಂಡರೂ, ಮತ್ತೆ ವೈದ್ಯಕೀಯ ವೃತ್ತಿಯನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ.


ನಡುವೆ ತವರುನೆಲ ಭಾರತಕ್ಕೆ ಆಗಮಿಸಿದ ವಿಜಯ್ ಅವರಿಗೆ ವಿಶ್ವದ ಅತಿ ಎತ್ತರದ ಪರ್ವತವಾದ ಮೌಂಟ್ ಎವರೆಸ್ಟ್ ಏರುವ ಹಂಬಲವಾಯಿತು. ಅದಕ್ಕಾಗಿ ಸಿಧ್ದತೆಗಳನ್ನು ಆರಂಭಿಸಿದ ಅವರು ನೇಪಾಳದ ಒಂದು ಖಾಸಗೀ ಟ್ರೆಕ್ಕಿಂಗ್ ಸಂಸ್ಥೆಯ ಸಹಕಾರ ಪಡೆದುಕೊಂಡರು. ೬೦ರ ಹರೆಯದ ವಿಜಯ್ ಸುಮಾರು ಏಳು ದಿನಗಳ ಕಠಿಣ ಪರಿಶ್ರಮದ ಬಳಿಕ ವಿಜಯ್ ಯಶಸ್ವಿಯಾಗಿ ಎವರೆಸ್ಟ್ ನ ತುದಿಗೇರಿಯೇಬಿಟ್ಟರು. ಆ ಮೂಲಕ ವಿಜಯ್, ವಿಶ್ವದಲ್ಲೇ ನಾಲ್ಸ್ಕು ಬೈಪಾಸ್ ಶಸ್ತ್ರಚಿಕಿತ್ಸೆಯ ಬಳಿಕ ಎವರೆಸ್ಟ್ ಶಿಖರವೇರಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕಯ ಜೊತೆಗೆ ಗಿನ್ನೆಸ್ ದಾಖಲೆ ಪುಸ್ತಕದಲ್ಲೂ ತಮ್ಮ ಹೆಸರನ್ನು ಬರೆಸಿಕೊಂಡರು.


ಛಲವೊಂದಿದ್ದರೆ ಏನನ್ನೂ ಸಾಧಿಸಬಹುದು ಎನ್ನುವುದಕ್ಕೆ ವಿಜಯ್ ಮಾಲೂರು ಜೀವಂತ ನಿದರ್ಶನ. ೬೦ರ ತಮ್ಮ ಇಳಿವಯಸ್ಸಿನಲ್ಲೂ ವಿಶ್ವದಾಖಲೆ ನಿರ್ಮಿಸಿದ ಅವರ ಸಾಹಸಕ್ಕೆ Hatsoff...


Friday, March 21, 2008

ಮತ್ತೆ ಹಳೆಯ ನೆನಪುಗಳು...

ಆಕೆಯನ್ನು ನಾನ್ಯಾವತ್ತೂ ಮರೆಯಲು ಸಾಧ್ಯವಿಲ್ಲ... ಏಕೆಂದರೆ ಜೀವನದಲ್ಲಿ ನಾನು ಮೊತ್ತ ಮೊದಲು ಇಷ್ಟಪಟ್ಟಿದ್ದ ಹುಡುಗಿ ಅವಳಾಗಿದ್ದಳು... ಆರಂಭದಲ್ಲಿ ಅದೊಂಥರ ಹುಚ್ಹು ಪ್ರೀತಿಯಾಗಿತ್ತು. ಪ್ರಥಮ ಪಿ.ಯು.ಸಿ ವಿದ್ಯಾರ್ಥಿಯೊಬ್ಬನ ಮನಸಿನಲ್ಲಿ ಮೊಳಕೆಯೊಡೆದಿದ್ದ ಅಪ್ರಭುದ್ದ, ಅಪಕ್ವ ಪ್ರೀತಿ.. ಪಿ.ಯು.ಸಿ ಮುಗಿಯಿತು. Degree life ಆರಂಭವಾಯಿತು. ಆದರೂ ನಾನವಳಲ್ಲಿ ನನ್ನ ಪ್ರೀತಿಯನ್ನು ತಿಳಿಸಿರಲಿಲ್ಲ. ಅವಳಿಗೆ ಇಷ್ಟವಿದೆಯೋ ಇಲ್ಲವೋ ಎಂದು ಕೂಡ ಗೊತ್ತಿರಲಿಲ್ಲ. ಆದ್ರೂ ಪ್ರೀತಿಸ್ತಿದ್ದೆ, ಆರಾಧಿಸ್ತಿದ್ದೆ.. ಕೊನೆಗೂ ದ್ವಿತೀಯ ಪದವಿಯಲ್ಲಿ ನಾನವಳ ಮುಂದೆ ಮನ ಬಿಚ್ಹಿದ್ದೆ. ಆದ್ರೆ "ನೋಡು, ನಾ ನಿನ್ನ ಇಷ್ಟಪಡ್ತಿದ್ದೀನಿ", ಅಂದಾಗ "ನಂಗೊತ್ತಿತ್ತು" ಅಂದಿದ್ದಳು.. ಅದು ಹೇಗೆ ಅವಳಿಗೆ ತಿಳಿದಿತ್ತೋ ನನಗರಿಯದು. ಏಕೆಂದರೆ ನಾನು ಯಾವುದೇ ಗೆಳೆಯರಲ್ಲೂ ಆ ಪ್ರೀತಿಯ ಬಗ್ಗೆ ತಿಳಿಸಿರಲಿಲ್ಲ. ಮತ್ತು ತಪ್ಪಿಯೂ ವಿಶೇಷವಾಗಿ ಅವಳನ್ನು ಮಾತನಾಡಿಸುವುದಾಗಲಿ, ನೋಡುವುದಾಗಲಿ ಇರಲಿಲ್ಲ.. ಪ್ರೀತಿ ಮನಸೊಳಗೆ ಇತ್ತೇ ವಿನಃ ಹೊರಬಂದಿರಲಿಲ್ಲ. ನಾನವಳನ್ನು ಇಷ್ಟಪಡ್ತಿದ್ದೀನಿ ಅಂದಾಗ "ಆಗಲ್ಲ" ಅಂದಿದ್ದಳು. ಏಕೆಂದು ಪ್ರಶ್ನಿಸಿದಾಗ, "ಮನೆಯಲ್ಲಿ ಗೊತ್ತಾದ್ರೆ problem ಆಗುತ್ತೆ" ಎಂಬ ಉತ್ತರ ಬಂದಿತ್ತು.. ಅವತ್ತೇ ಕೊನೆ, ಮತ್ತೆಂದೂ ನಾನವಳಲ್ಲಿ ಮಾತನ್ನೇ ಆಡಿರಲಿಲ್ಲ... ಯಾಕಂದ್ರೆ ಅವಳು ನನ್ನ ಮುಖವನ್ನೇ ನೋಡ್ತಿರಲಿಲ್ಲ...!
ಇವೆಲ್ಲ ಕಳೆದು ಹೆಚ್ಹು ಕಡಿಮೆ ಎರಡುವರೆ ವರ್ಷಗಳಾಗಿವೆ. ನನಗೀಗಲೂ ಅವಳ ಮೇಲೆ ಗೌರವವಿದೆ. ಯಾಕಂದ್ರೆ ನಾನವತ್ತು ಅವಳನ್ನು ಇಷ್ಟಪಡ್ತಿದ್ದೀನಿ ಅಂದಾಗ "ಮನೆಯಲ್ಲಿ ಗೊತ್ತಾದ್ರೆ problem ಆಗುತ್ತೆ" ಅಂದ್ದಿದ್ದಳಲ್ಲ... ಮನೆಯವರ ಬಗ್ಗೆ ಯೋಚನೆ ಮಾಡಿದ್ಳಲ್ಲ... ಅದ್ಕೇ.. ಈಗಲೂ ನನ್ನನ್ನೊಂದು ಪ್ರಶ್ನೆ ಕಾಡ್ತಿದೆ. ಮನೆಯಲ್ಲಿ ಗೊತ್ತಾಗದೆ ಇದ್ರೆ ಅವಳು ನನ್ನನ್ನು ಇಷ್ಟಪಡ್ತಿದ್ಳಾ? ಅವಳಿಗೆ ನನ್ ಮೇಲೆ ಸ್ವಲ್ಪನಾದ್ರೂ ಪ್ರೀತಿ ಇತ್ತಾ? ಅದೇನೆ ಇರಲಿ ಅಂದಿನ ಅವಳ ನಿರ್ಧಾರಕ್ಕೆ ಹ್ಯಾಟ್ಸಾಫ್... ನಾನೇನೋ ಭಗ್ನ ಪ್ರೇಮಿಯಾದೆ, ಆದ್ರೂ ತೊಂದ್ರೆ ಇಲ್ಲ.. ಅವಳು ಮನೆಯವರ ಮುಂದೆ ತಲೆತಗ್ಗಿಸುವ ಹಾಗಾಗಲಿಲ್ಲವಲ್ಲ...
ಇವನ್ನೆಲ್ಲಾ ಈಗ ಯಾಕೆ ಬರಿತಿದ್ದೇನೆ ಅಂದ್ರೆ, ಕೆಲವೇ ದಿನಗಳಲ್ಲಿ ಅವಳ ಮದುವೆ ನಡೆಯಲಿದೆ... ಅವಳು ಮದುವೆಗೆ ನನ್ನನ್ನು ಕರೆಯದೇ ಇದ್ರೂ ತೊಂದ್ರೆ ಇಲ್ಲ.. ನನ್ ಕಡೆಯಿಂದ HAPPY MARRIED LIFE.......
ಪ್ರೀತಿಯಿಂದ ಸುನಿಲ್.....