ಅವಳು ಇನ್ನೆಂದಿಗೂ ನನ್ನ ಪಾಲಿಗೆ ನೆನಪು ಪಾತ್ರ.. ಈ ಹಿಂದೆಲ್ಲ ಪ್ರೀತಿ-ಪ್ರೇಮ ಅಂತೆಲ್ಲ ಸುತ್ತಾಡ್ತಿದ್ದ ನಾನು ಮೊದಲ ಬಾರಿಗೆ ನಿಷ್ಕಲಷ್ಮ ಗೆಳೆತನದ ಬೆಸುಗೆಯಲ್ಲಿ ಬಂಧಿಯಾಗಿದ್ದೆ.. ಇದು ನಾಲ್ಕು ವರ್ಷಗಳ ಹಿಂದಿನ ಕಥೆ.. ನಾನಾಯ್ತು ನನ್ನ ಪಾಡಾಯ್ತು ಅಂತ ಯಾವುದೋ ಯೋಚನೆಯಲ್ಲಿ ಮುಳುಗಿರ್ತಿದ್ದ ನನ್ನ ಬಾಳಿಗೆ ಆಕೆ ಪ್ರವೇಶ ಮಾಡಿದ್ದಳು.. ಉತ್ತಮ ಗೆಳತಿಯಾಗಿ.. ಆ ಸಂಬಂಧ ಕೊನೆವರೆಗೂ ಮುಂದುವರಿಯಿತು... ಮೊನ್ನೆ ಮೊನ್ನೆ ನನ್ನಿಂದ ದೂರವಾಗೋವರೆಗೂ...
ಗೆಳತಿಯಾಗಿ ಅವಳು ನನ್ನೊಂದಿಗಿದ್ದ ದಿನಗಳನ್ನು ಮರಿಯೋಕಾಗಲ್ಲ.. ಯಾವುದೋ ತುಂಟಾಟದಲ್ಲಿ ಆರಂಭವಾದ ಗೆಳೆತನ... ದಿನಗಳೆದಂತೆ ಗೆಳೆತನದ ಬೆಸುಗೆ ಗಟ್ಟಿಯಾಗುತ್ತಾ ಹೋಯ್ತು.. ಬೆಳಗ್ಗೆ ಎದ್ದಾಗಿಂದ ರಾತ್ರಿ ಮಲಗೋವರೆಗೆ ಗಂಟೆಗೊಮ್ಮೆ ಆಕೆಯೊಂದಿಗೆ ಫೋನಲ್ಲಿ ಮಾತಾಡ್ತಿದ್ದೆ... ನನ್ನ ಜೀವನದ ಪುಟ್ಟ ಪುಟ್ಟ ನಿರ್ಧಾರಗಳನ್ನೂ ತೆಗೆದುಕೊಳ್ಳೋ ಮುನ್ನ ಅವಳಲ್ಲಿ ಕೇಳ್ತಿದ್ದೆ.. ಅವಳು ಹೇಳ್ತಿದ್ದುದೆಲ್ಲ ನಂಗೆ ವೇದವಾಕ್ಯವಾಗಿತ್ತು.. ಅವಳು ಹೇಳ್ತಿದ್ದುದರಲ್ಲಿ ಯಾವತ್ತೂ ಯಾವ ತಪ್ಪುಗಳೂ ಇರ್ತಿರ್ಲಿಲ್ಲ.. ಅಷ್ಟರಮಟ್ಟಿಗೆ ಅವಳು ದೃಢ ಮತ್ತು ಪಕ್ವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಳು..
ಯಾವತ್ತೂ ನನ್ನ ಬೆಸ್ಟ್ ಫ್ರೆಂಡ್ ಅಂದ್ಕೊಂಡಿದ್ದ ಅವಳು ನನಗೆ ಕೊಟ್ಟ ಪ್ರೀತಿ, ಸ್ನೇಹ, ಕಾಳಜಿ.. ಇವಕ್ಕೆಲ್ಲ ಬೆಲೆ ಕಟ್ಟೋಕಾಗಲ್ಲ.. ನನ್ನ ಮಟ್ಟಿಗಂತೂ ಆಕೆ ಪುಟ್ಟ ಮಗುವಾಗಿದ್ದಳು. ಜೊತೆಗಿದ್ದಷ್ಟು ದಿನ ಪುಟ್ಟ ಕಂದಮ್ಮನಂತೆ ನೋಡ್ಕೊಂಡೆ.. ಆಕೆ ಗೆಳತಿಯಾಗಿ, ತಾಯಿಯ ಪ್ರೀತಿಯನ್ನೂ ಕೊಟ್ಟಳು.. ತನ್ನೆಲ್ಲ ಸುಖಃ ದುಖಃ ಗಳನ್ನು ಹಂಚಿಕೊಂಡಳು... ನನ್ನ ಮನಸ್ಸಿನ ಕನ್ನಡಿಯಾದಳು... ನಾಲ್ಕು ವರ್ಷದಲ್ಲಿ ಅವಳಿಂದ ಮುಚ್ಚಿಟ್ಟ ಸಂಗತಿಗಳೇನೂ ಇರಲಿಲ್ಲ..
ಬೇಕಾಬಿಟ್ಟಿ ಇರ್ತಿದ್ದ ನಾನು ಪರಿಪೂರ್ಣನಾಗಲು ಆಕೆ ಕಾರಣವಾದಳು.. ಯಾವುದೋ ನೋವಿನ ಗುಂಗಿನಲ್ಲಿರ್ತಿದ್ದ ನನ್ನನ್ನು ಅದರಿಂದ ಹೊರಬರುವಂತೆ ಮಾಡಿದ್ದಳು.. ನಾನು ಎಲ್ಲರಂತೆ ಎಲ್ಲರೊಂದಿಗೆ ಇರುವಂತಾಗಲು ಅವಳು ಪ್ರೇರಣೆಯಾದಳು.. ನನ್ನ ಬದುಕಿನ ದಿಕ್ಕನ್ನೇ ಬದಲಿಸಿದ ಅವಳು ನನ್ನೆಲ್ಲಾ ಯಶಸ್ಸಿನ ಬೆನ್ನೆಲುಬಾಗಿದ್ದಳು..
ತುಂಬಾ ಇಷ್ಟಪಟ್ಟಿದ್ದೆ ಅವಳನ್ನ.. ಅವಳಿಗೂ ನಾನಂದ್ರೆ ತುಂಬಾ ಇಷ್ಟನೇ ಆಗಿತ್ತು.. ಆದ್ರೆ ನಾಲ್ಕು ವರ್ಷದಲ್ಲಿ ಒಮ್ಮೆಯೂ ಆ ಇಷ್ಟಗಳು ಗೆಳೆತನದ ಪರಿಧಿ ಮೀರಿ ಹೋಗಲಿಲ್ಲ.. ಈಗ ಅವಳು ನನ್ನಿಂದ ದೂರ ಇದ್ರೂನೂ ಜೀವಮಾನ ಪೂರ್ತಿ ಮೆಲುಕು ಹಾಕಿಕೊಳ್ಳುವಷ್ಟು ನೆನಪುಗಳು ನನ್ನೊಂದಿಗಿದ್ದಾವೆ..
No comments:
Post a Comment