Wednesday, July 24, 2019
Sunday, February 19, 2017
ಬಾಲ್ಯದ ನೆನಪುಗಳು 1...
ಆಗೆಲ್ಲ ಮನೆಯಿಂದ ಪೇಟೆ, ಅಥವಾ ಪೇಟೆಯಿಂದ ಮನೆಗೆ ಹೋಗ್ಬೇಕಾದ್ರೆ ನಡ್ಕೊಂಡು ಹೋಗ್ತಿದ್ವಿ. ಆದ್ರೆ ಮಟ ಮಟ ಮಧ್ಯಾಹ್ನ ನಮ್ಮೂರಿನ ಬಿಸಿಲಲ್ಲಿ ನಡೀಬೇಕಾದ್ರೆ ನಿಮಿಷಕ್ಕೊಮ್ಮೆ ಹಿಂದೆ ತಿರುಗಿ ನೋಡ್ತಿದ್ವಿ. ಯಾರಾದ್ರೂ ಪರಿಚಿತರು ಗಾಡಿಯಲ್ಲಿ ಬರ್ತಾ ಇದ್ದಾರಾ ಅಂತ.. ಆಗ ಕೆಲವರೆಲ್ಲ ಬೈಕ್ ಅಥವಾ ಕಾರಿನಲ್ಲಿ ಬಂದ್ರೂ ನೋಡಿಯೂ ನೋಡದಂಗೆ ಹೋಗ್ತಿದ್ರು. ಇನ್ನೂ ಕೆಲವರು ನಿಲ್ಲಿಸಿ ನಮ್ಮನ್ನು ಕರ್ಕೊಂಡು ಹೋಗ್ತಿದ್ರು. ಹಾಗಾಗಿ ಸ್ಕೂಲ್‌ಗೆ ಹೋಗ್ತಿದ್ದಾಗ ಗಾಡಿ ಇರೋವ್ರನ್ನೆಲ್ಲ ಬೇಗ ಪರಿಚಯ ಮಾಡ್ಕೊಂಡು ಬಿಡ್ತಿದ್ವಿ. ನಡ್ಕೊಂಡು ಹೋಗೋದಿದ್ರೂ ಮೈನ್ ರೋಡ್‌ಗಿಂತ ಶಾರ್ಟ್ ಕಟ್‌ಗಳನ್ನೇ ಹೆಚ್ಚಾಗಿ ಬಳಸ್ತಿದ್ವಿ. ಯಾರದ್ದೋ ತೋಟದ ಮೂಲಕ, ಗದ್ದೆ ಬದಿಯ ಮೂಲಕ ನಮ್ಮದೇ ಲೋಕದಲ್ಲಿ ಏನೋ ಯೋಚನೆ ನಡ್ಕೊಂಡು ಹೋಗೋದು.
ಸೈಕಲ್ ಓಡ್ಸೋಕೆ ಕಲಿಯೋದು ಹುಡುಗರಿಗೆ ಶಾಲಾ ದಿನದ ದೊಡ್ಡ ಟಾರ್ಗೆಟ್. ಈಗ ಡ್ರೈವಿಂಗ್ ಕಲಿತು ಲೈಸೆನ್ಸ್ ಪಡ್ಕೊಳ್ಳುವಾಗ್ಲೂ ಅಷ್ಟು ಖುಷಿಯಾಗಲ್ಲ. ಆದ್ರೆ ಆಗ ಸೈಕಲ್ ಓಡ್ಸೋಕೆ ಕಲಿತು ಬಿಟ್ರೆ, ಜಗತ್ತನ್ನೇ ಗೆದ್ದು ಬಿಟ್ಟಂಗೆ.. 3 ರೂಪಾಯಿ ಕೊಟ್ರೆ ಒಂದು ಗಂಟೆ ಸೈಕಲ್ ಬಾಡಿಗೆಗೆ ಸಿಗ್ತಿತ್ತು. ಆ ಸೈಕಲ್ ಹೇಗಿತ್ತು ಅಂತ ಹೇಳೋದು ಕಷ್ಟ. ಆದ್ರೆ ಅದನ್ನು ಓಡ್ಸಿದವರಿಗೆ ಆ ಸೈಕಲ್‌ನ ಚಿತ್ರಣ ಕಣ್ಮುಂದೆ ಇರುತ್ತೆ.. ಪುಸ್ತಕ ತಗೊಳ್ಳೋಕೋ ಅಥವಾ ಇನ್ಯಾವುದಕ್ಕೋ ಅಪ್ಪ ಕೊಡ್ತಿದ್ದ ಹಣದಲ್ಲಿ 25, 50 ಪೈಸೆ ಉಳಿಸ್ತಾ 3 ರೂಪಾಯಿ ಆಗ್ತಿದ್ದಂಗೆ ಸೈಕಲ್ ಬಾಡಿಗೆಗೆ ತಗೊಂಡು ರೌಂಡ್ ಹೊಡಿಯೋಕೆ ಹೋಗ್ತಿದ್ವಿ. ಆ ಸೈಕಲ್‌ನಿಂದ ಅದೆಷ್ಟು ಸಲ ಬಿದ್ದಿದ್ದೀವಿ ಅನ್ನೋದಿಕ್ಕೆ ಲೆಕ್ಕನೇ ಇರಲ್ಲ.. ಆಗ ಬಹುತೇಕ ಎಲ್ಲರ ಮೊಣಕೈ ಮತ್ತು ಮೊಣಕಾಲಿನ ಮೇಲೆ ಚರ್ಮನೇ ಇರ್ತಿರ್ಲಿಲ್ಲ.. Funny but its true.. ಸಾಮಾನ್ಯವಾಗಿ ಇಬ್ರೂ ಅಥವಾ ಮೂವರು ಸೈಕಲ್ ಬಾಡಿಗೆಗೆ ಪಡ್ಕೊಂಡು ರೌಂಡ್ ಹೊಡಿಯೋಕೆ ಹೋಗ್ತಿದ್ವಿ. ತೀರಾ ಹಣ ಇಲ್ಲದೆ ಇದ್ದಾಗ ನಮ್ಮ ಮನೆಯದ್ದೋ ಅಥವಾ ಪಕ್ಕದ ತೋಟದ್ದೋ ಗೇರುಬೀಜ ಸಂಗ್ರಹಿಸಿ ಅದನ್ನು ಮಾರಾಟ ಮಾಡಿ, ಆ ಹಣದಲ್ಲಿ ಸೈಕಲ್ ಬಾಡಿಗೆಗೆ ತಗೊಳ್ಳೋಕೆ ಹೋಗಿದ್ದೂ ಉಂಟು.. ನಾವು ಆಗ ಸೈಕಲ್ ಮೇಲೆ ಕೂತು ಹೋಗ್ಬೇಕಾದ್ರೆ ಆ ಫೀಲ್, ಈಗಿನ ಯಾವ ಬುಲೆಟ್ ರೈಡ್‌ಗೂ ಕಡಿಮೆ ಇರ್ತಿರ್ಲಿಲ್ಲ.
ಸಣ್ಣವರಿದ್ದಾಗ ಹಾಲಿನ ಹುಡಿ ತಿನ್ನೋದು ನಂಗಂತೂ ತುಂಬಾನೇ ಇಷ್ಟವಾಗಿತ್ತು. ಇದು ನಂಗೆ ಮಾತ್ರ ಅಲ್ಲ ಅನ್ಸತ್ತೆ.. ಎಲ್ರಿಗೂ ಆಗ್ತಿತ್ತೇನೋ.. ಮನೆಯಲ್ಲಿ ಅಮ್ಮ ಹಾಲಿನ ಹುಡಿಯ ಪ್ಯಾಕೆಟನ್ನು ಯಾವುದೋ ಡಬ್ಬಿಯಲ್ಲಿ ಇಡ್ತಿದ್ರು. ನೆಂಟ್ರು ಬಂದ್ರೆ ಮಾತ್ರ ಟೀ ಅಥವಾ ಕಾಫಿ ಮಾಡೋಕೆ ಅಂತ ನಮ್ಮ ಕಣ್ಣಿಗೆ ಕಾಣಿಸ್ಬಾರ್ದು ಅಂತ ಅದನ್ನು ಅಡಗಿಸಿ ಇಡ್ತಿದ್ರು. ಮನೆಯಲ್ಲಿ ಯಾರೂ ಇಲ್ಲದೆ ಇದ್ದಾಗ ನಮ್ಮ ಇನ್ವೆಸ್ಟಿಗೇಷನ್ ಸ್ಟಾರ್ಟ್ ಆಗ್ಗಿತ್ತು. ಆಪರೇಷನ್ ಮಿಲ್ಕ್ ಪೌಡರ್.. ಜಾಸ್ತಿ ತಿಂದ್ರೆ ಮತ್ತೆ ಅಮ್ಮ ಓಪನ್ ಮಾಡಿ ನೋಡಿದಾಗ ಗೊತ್ತಾಗತ್ತೆ ಅಂತ ಒಂದು ಸ್ಪೂನ್ ಮಾತ್ರ ಬಾಯಿಗೆ ಹಾಕ್ತಿದ್ವಿ. ಆದ್ರೆ ಒಂದು ಸ್ಪೂನ್ ತಿನ್ತಾ ಇದ್ದಂಗೆ ಇನ್ನೊಂದು ಸ್ಪೂನ್ ತಿನ್ನೋಣ ಅಂತ ಮನಸಾಗ್ತಿತ್ತು. ಹೀಗೆ ನಾಲ್ಕೈದು ಬಾರಿ ಆದಾಗ ಹಾಲಿನ ಹುಡಿ ಬಹುತೇಕ ಖಾಲಿ ಆಗ್ತಿತ್ತು. ಯಾವತ್ತಾದ್ರೂ ನೆಂಟ್ರು ಬಂದಾಗ ಟೀ ಮಾಡೋಣ ಅಂತ ಅಮ್ಮ ಅಡಗಿಸಿ ಇಟ್ಟಿದ್ದ ಹಾಲಿನ ಹುಡಿ ತೆಗೆದು ನೋಡಿದ್ರೆ ಅದ್ರಲ್ಲೇನೂ ಇರ್ತಿಲ್ಲಿಲ್ಲ.. ಆಮೇಲೇ ಬೈಗುಳ ಇದ್ದಿದ್ದೇ.. ಆಗ ಯಾವುದಾದ್ರೂ ಮಂಚದ ಮೂಲೆಯಲ್ಲಿ ಅಡಗಿ ಕೂತ್ಕೋತಿದ್ವಿ.
ನೆಲ್ಲಿಕಾಯಿ ಮರ ಹುಡುಕ್ಕೊಂಡು ಹೋಗಿ, ನೆಲ್ಲಿಕಾಯಿ ಕಿತ್ತು ತಿಂದು ಆಮೇಲೆ ನೀರು ಕುಡಿಯುವಾಗ ಅದೆಷ್ಟು ಸಿಹಿ ಇರ್ತಿತ್ತು ಅಲ್ವಾ.. ಬೆಳ್ಳಂಬೆಳಗ್ಗೆ ಚಳಿಯನ್ನೂ ಲೆಕ್ಕಿಸದೆ ಕಾಡು ಮಾವಿನ ಮರದತ್ತ ಓಡಿ ಹೋಗಿ ಮಾವಿನ ಹಣ್ಣು ಹೆಕ್ಕೋದು.. ಆಮೇಲೆ ಅದ್ರ ಸೊನೆಯನ್ನು ಅದೇ ಮರಕ್ಕೆ ಮೆತ್ತಿಸಿ ಆ ಮಾವಿನ ಹಣ್ಣಿನ ರಸವನ್ನು ಹೀರೋದ್ರಲ್ಲಿ ತುಂಬಾನೇ ಟೇಸ್ಟ್ ಇತ್ತು. ಅಮವಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮೆ ಬೆಳೆಯುವ ಚೆರಿ ಹಣ್ಣು ಕೆಂಪು ಬಣ್ಣಕ್ಕೆ ತಿರುಗ್ತಿದ್ದಂಗೆ ಬಾಯೊಳಗೆ ಹಾಕೊಳ್ತಿದ್ವಿ. ಹಲಸಿನ ಹಣ್ಣು ಮರದಿಂದ ಕೆಳಗೆ ಬಿದ್ರೆ ಅಲ್ಲೇ ಬುಡದಲ್ಲಿ ಕೂತು ತಿನ್ತಾ ಇದ್ವಿ. ಐಸ್ ಕ್ಯಾಂಡಿ ಮಾರೋಕೆ ಬರುವವರ ಸೈಕಲ್ ಗಂಟೆ ಸದ್ದು ಕೇಳಿಸಿದ್ರೆ ಸಾಕು.. ಮನೆಯಲ್ಲಿರೋ ಚಿಲ್ಲರೆಯನ್ನೆಲ್ಲ ಜಾಲಾಡ್ತಿದ್ವಿ. 25 ಪೈಸೆಗೆ ಕ್ಯಾಂಡಿ, 50 ಪೈಸೆಗೆ ಬೆಲ್ಲ ಕ್ಯಾಂಡಿ.. ವಿವಿಧ ಕಲರ್‌ಗಳಲ್ಲಿ ಬರ್ತಿದ್ದ ಲಾಲಿಯನ್ನು ಚಪ್ಪರಿಸಿದ್ದೇ ಚಪ್ಪರಿಸಿದ್ದು.. ಅದು ಖಾಲಿ ಆದ್ಮೇಲೂ ಪ್ಲಾಸ್ಟಿಕ್ ಕವರ್ ನೆಕ್ಕೋದು ಇದ್ದಿದ್ದೇ..
ಸ್ಕೂಲ್‌ನಲ್ಲಿ ಸಾಮಾನ್ಯವಾಗಿ ಏನಾದ್ರೂ ಅಸೈನ್‌ಮೆಂಟ್ ಬರ್ಕೊಂಡು ಬರೋಕೆ ಹೇಳ್ತಿದ್ರು. ಆದ್ರೆ ನಾವು ಹುಡುಗರು ಅದನ್ನೆಲ್ಲ ಬರ್ಕೊಂಡು ಬರ್ತಾ ಇದ್ದಿದ್ದು ಕಡಿಮೆ. ಕೆಲವೊಮ್ಮೆ ಕ್ಲಾಸ್‌ಗೆ ಬರುವ ಟೀಚರ್ ಸಹ ಅದನ್ನು ಮರೆತಿರ್ತಿದ್ರು. ಆದ್ರೆ ಈ ಗಾಂಧಿ ಪೀಸ್‌ಗಳು ಇದ್ದಾವಲ್ಲಾ.. especially ಹೆಣ್ಮಕ್ಕಳು.. ಸಾರ್.. ನೀವು ಅಸೈನ್‌ಮೆಂಟ್ ಬರ್ಕೊಂಡು ಬರೋಕೆ ಹೇಳಿದ್ರಿ ಅಂತ ರಾಗ ಎಳೀತಿದ್ರು. ಆಗ್ಲೇ ನೋಡಿ ನಮ್ಮ ಟೀಚರು ಆ ಹೆಣ್ಮಕ್ಕಳಿಗೆ ಶಹಬ್ಬಾಸ್‌ಗಿರಿ ನೀಡ್ತಾ ಅಸೈನ್‌ಮೆಂಟ್ ಬರೆಯದೆ ಬಂದವರೆಲ್ಲ ಎದ್ದು ನಿಂತ್ಕೊಳ್ಳಿ ಅಂತ ಹೇಳ್ತಿದ್ರು. ಕೊನೆಗೆ ನೋಡಿದ್ರೆ ಕೆಲವೇ ಕೆಲವರನ್ನು ಬಿಟ್ಟು ಉಳಿದವರೆಲ್ಲ ಎದ್ದು ನಿಂತ್ಕೋತಿದ್ರು. ನಾವಂತೂ ಎದ್ದು ನಿಲ್ಲೋದ್ರಲ್ಲಿ ಮಿಸ್ಸೇ ಇಲ್ಲ..
ಐದು ಅಥವಾ ಆರನೆಯ ಕ್ಲಾಸ್‌ನಲ್ಲಿ ಇರ್ಬೇಕು.. ನಂಗೆ ಗಣಿತದಲ್ಲಿ ಅರ್ಧ ಮಾರ್ಕ್ಸ್ ಸಿಕ್ಕಿತ್ತು. 25ರಲ್ಲಿ ಅರ್ಧ ಮಾರ್ಕ್ಸ್.. ಆ ದಿನ ನಾನು ಬೈಸ್ಕೊಂಡಿದ್ದನ್ನು ಮರೆಯೋಕಾಗಲ್ಲ. ಕೊನೆಗೆ ಮನೆಯಿಂದ ಯಾರನ್ನಾದ್ರೂ ಕರ್ಕೊಂಡು ಬರೋಕೆ ಹೇಳಿದ್ರು. ದುರಂತ ಅಂದ್ರೆ ಸಂಜೆ ಉತ್ತರ ಪತ್ರಿಕೆಯೊಂದಿಗೆ ಮನೆಗೆ ಹೋಗಿದ್ದೆ. ಆದ್ರೆ ಆ ಉತ್ತರ ಪತ್ರಿಕೆ ಎಲ್ಲೋ ಕಳ್ದೋಗಿತ್ತು. ಮರುದಿನ ಅಮ್ಮನನ್ನು ಕರ್ಕೊಂಡು ಸ್ಕೂಲ್‌ಗೆ ಹೋಗಿದ್ದೆ. ನಮ್ಮ ಗಣಿತದ ಮೇಷ್ಟ್ರು ಅಮ್ಮನ ಮುಂದೆ ನಂಗೆ ಉಗ್ದು ಉಪ್ಪಿನಕಾಯಿ ಹಾಕಿದ್ರು. ಮನೆಗೆ ಹೋದ್ಮೇಲೆ ಅಮ್ಮ ನಡೆದಿದ್ದನ್ನೆಲ್ಲ ಅಪ್ಪನ ಬಳಿ ಹೇಳಿದ್ರು. ಆಗ ಅಪ್ಪನ ಕಡೆಯಿಂದನೂ ಮಂಗಳಾರತಿ ಆಗಿತ್ತು. ಜೊತೆಗೆ ಬೆತ್ತದ ರುಚಿಯೂ..
ಆ ಟೈಮ್‌ನಲ್ಲಿ ಯಾರದ್ದಾದ್ರೂ ಮನೆಯಲ್ಲಿ ಬೋರೆವೆಲ್ ಕೊರೆಯುತ್ತಾ ಇದ್ರೆ ನಾವು ಬೆಳಿಗ್ಗೆಯಿಂದ ಸಂಜೆವರೆಗೂ ಅಲ್ಲೇ ಇರ್ತಿದ್ವಿ. ಆಗೆಲ್ಲ 300-400 ಅಡಿಗೆಲ್ಲ ನೀರು ಸಿಗ್ತಿತ್ತು. ಬೋರೆವೆಲ್ ಕೊರೆದು ನೀರು ಸಿಗ್ತಿದ್ದಂಗೆ ಪೈಪ್ ಮೂಲಕ ನೀರು ಮೇಲಕ್ಕೆ ಹಾರೋದನ್ನು ನೋಡೋದೇ ಕಣ್ಣಿಗೆ ಹಬ್ಬವಾಗಿತ್ತು. ಇನ್ನು ಎಲ್ಲಾದ್ರೂ ಜೆಸಿಬಿ ಕೆಲಸ ಮಾಡ್ತಿದ್ರೆ ಅದನ್ನು ನೋಡ್ತಾ ನಿಲ್ಲೋದೇ ಕೆಲಸ. ಜೆಸಿಬಿ ಮಣ್ಣು ತೆಗೆಯೋದನ್ನು ಎಷ್ಟು ನೋಡಿದ್ರೂ ಸಾಕಾಗ್ತಾ ಇರ್ಲಿಲ್ಲ. ಮನೆಗೆ ಬಂದ್ಮೇಲೆ ಬಲಗೈಯಲ್ಲಿ ಜೆಸಿಬಿ ರೀತಿಯಲ್ಲೇ ಮಣ್ಣು ತೆಗಿಯೋಕೆ ನೋಡ್ತಿದ್ವಿ. ಅದೂ ಒಂದು ರೀತಿಯ ಆಟ. ಲಕ್ಷದೀಪೋತ್ಸವ ಮತ್ತಿತರ ಜಾತ್ರೆ ವೇಳೆ ಪ್ಲಾಸ್ಟಿಕ್‌ನ ಆಟಿಕೆ ಜೆಸಿಬಿಯನ್ನು ಖರೀದಿ ಮಾಡುವಂತೆ ಅಪ್ಪನಿಗೆ ದುಂಬಾಲು ಬೀಳೋದು, ಅಪ್ಪ ಬೈಯೋದು.. ಜಾತ್ರೆಗೆ ಗೆಳೆಯರ ಜೊತೆಗೆ ಸುಮ್ಮನೆ ಸುತ್ತಾಡೋದು.. ಸಂಜೆಯಿಂದ ಮಧ್ಯರಾತ್ರಿ ವರೆಗೆ. ಜೇಬಲ್ಲಿ ಒಂದು ರೂಪಾಯಿಯೂ ಇರ್ತಿರ್ಲಿಲ್ಲ. ಇರೋ ಬರೋ ಸ್ಟಾಲ್‌ಗಳ ಬ್ರೌಷರ್‌ಗಳನ್ನು ತಗೊಂಡು ಜೇಬಲ್ಲಿ ಇಟ್ಕೋತಿದ್ವಿ. ಮಧ್ಯರಾತ್ರಿ ವರೆಗೆ ಸುತ್ತಾಡಿ ಕಾಲು ಸೋತ ಮೇಲೆ ಮನೆ ಕಡೆ ಹೆಜ್ಜೆ ಹಾಕೋದು. ಐದು ದಿನ ಜಾತ್ರೆ ಇದ್ರೆ, ಐದೂ ದಿನ ಸುತ್ತಾಡ್ತಿದ್ವಿ. ಈ ಐದು ದಿನದಲ್ಲಿ ಯಾವತ್ತೋ ಒಂದು ದಿನ ಅಪ್ಪನ ಬಳಿ ಕಾಡಿ ಬೇಡಿ ತಗೊಂಡ 10-20 ರೂಪಾಯಿಯಲ್ಲಿ ಐಸ್‌ಕ್ರೀಮ್ ಅಥವಾ ಗೋಬಿ ಮಂಚೂರಿ ತಿಂದ್ರೆ ಅದೇ ದೊಡ್ಡ ವಿಷ್ಯ.
ಅಂದ ಹಾಗೆ ಇವೆಲ್ಲ ಬಹುತೇಕ ಪ್ರಾಥಮಿಕ ಶಾಲೆಯ ದಿನದ ನೆನಪುಗಳು..
ಬಾಲ್ಯದ ನೆನಪುಗಳು..
Thursday, April 14, 2016
Sunday, August 11, 2013
ನನ್ನ ಪ್ರೀತಿಯ ಹುಡುಗಿ...
Monday, August 5, 2013
ಗೆಳೆತನದ ಬೆಸುಗೆ...
ಇಂದಿನ ಯಾಂತ್ರೀಕೃತ ಬದುಕಿನಲ್ಲಿ ವೈಯಕ್ತಿಕ ಹಿತಾಸಕ್ತಿಗಳಿಗೆ ಕೊಂಚವೂ ಬೆಲೆ ಸಿಗಲ್ಲ.. ಮನುಷ್ಯ ಅಂದ್ಮೇಲೆ ಪ್ರತಿಯೊಬ್ಬನಿಗೂ ತನ್ನದೇ ಆದ ಕನಸುಗಳಿರತ್ತೆ... ನಿರೀಕ್ಷೆಗಳಿರತ್ತೆ.. ಆದ್ರೆ ನಮ್ಮ ಕನಸು, ನಿರೀಕ್ಷೆಗಳಿಗೆ ಸ್ಪಂದಿಸೋಕೆ ಖುದ್ದು ನಮಗೆ ಆಗಿಲ್ಲ ಅಂತಾದ್ರೆ ಕಷ್ಟ ಅಲ್ವಾ.. ಬದುಕಿನ ಯಾವುದೋ ಒಂದು ಘಳಿಗೆಯಲ್ಲಿ ನಾವು ತುಂಬಾ ಬ್ಯುಸಿ ಅನಿಸಿಬಹುದು.. ಅದೇ ರೀತಿ ಯಾವುದೇ ಕೆಲಸ ಕಾರ್ಯಗಳಿಲ್ಲದೆ ಸುಮ್ಮನಿದ್ದಾಗ ಯಾವುದಾದರೂ ಕೆಲಸದಲ್ಲಿ ಬ್ಯುಸಿಯಾಗಬೇಕು ಎಂದೂ ಅನ್ಸತ್ತೆ.. ಆದ್ರೆ ತುಂಬಾ ಬ್ಯುಸಿಯಾಗಿದ್ದಾಗ ಎಲ್ಲಾ ಜಂಜಾಟಗಳಿಂದ ಹೊರಗೋಡಿ ಬರಬೇಕು ಅನ್ಸೋದು ಸಹಜ.. ಯಾರೂ ಇಲ್ಲದ ಜಾಗದಲ್ಲಿ ಒಂಟಿಯಾಗಿ ಇದ್ದು ಬಿಡಬೇಕು ಅನ್ಸೋದುಂಟು... ಆದ್ರೆ ದೈನಂದಿನ ಬದುಕಿನ ಅನಿವಾರ್ಯತೆಗಳ ಮಧ್ಯೆ ಇದ್ಯಾವುದೂ ಸಾಧ್ಯವಾಗದೆ ಇದ್ದಾಗ ಕನಿಷ್ಠ ಮನಸ್ಸು ಹಗುರ ಮಾಡ್ಕೊಳ್ಳೋಕೆ ಗೆಳತಿಯೊಬ್ಬಳು ಬೇಕು ಅನ್ಸತ್ತೆ..
ತನ್ನೆಲ್ಲ ಕನಸು, ನಿರೀಕ್ಷೆಗಳು, ನೋವು ನಲಿವುಗಳಿಗೆ ಸ್ಪಂದಿಸುವ ಹುಡುಗಿ ಅವಳಾಗಿರಬೇಕು.. ಆಕೆಯೂ ನನ್ನೊಂದಿಗೆ ಹಾಗೆಯೇ ಇರಬೇಕು.. ಹೇಳಬೇಕು ಅನ್ಸಿದ್ದನ್ನು ಮನಸ್ಸು ಬಿಚ್ಚಿ ಹೇಳಬೇಕು.. ಎಲ್ಲಾ ವಿಷಯವನ್ನೂ ಮುಕ್ತವಾಗಿ ಹಂಚಿಕೊಳ್ಳುವ ಮನಸ್ಸಿರಬೇಕು.. ಪ್ರೀತಿ, ಸ್ನೇಹ, ಕಾಳಜಿಯ ಹಂದರವಿರಬೇಕು... ಆದ್ರೆ ಸಂಶಯ ಸ್ವಾರ್ಥ ಇರಬಾರದು.. ನನ್ನ ಗೆಳೆಯ ನನ್ನವನು ಅನ್ನೋ ಮನೋಭಾವ ಸ್ವಾರ್ಥವಾಗಬಾರದು..
ಗೆಳೆತನಕ್ಕಿಂತ ಮಧುರವಾದ ಸಂಬಂಧ ಮತ್ತೊಂದಿಲ್ಲ.. ಆದ್ರೆ ಸಂಬಂಧ ಮಧುರವಾಗಿರಲು ಇಬ್ಬರ ನಡುವೆ ಹೊಂದಾಣಿಕೆಯಿರಬೇಕು.. ಅರ್ಥ ಮಾಡಿಕೊಳ್ಳುವ ಗುಣವಿರಬೇಕು.. ಹೇಳಲಾಗದ್ದನ್ನು ಪರಸ್ಪರ ಮಾತನಾಡಿಕೊಳ್ಳುವ ಒಳಮನಸ್ಸು ಜಾಗೃತವಾಗಬೇಕು.. ಹಾಗಾದಾಗ ಗೆಳೆತನದ ಬೆಸುಗೆ ಮತ್ತಷ್ಟು ಗಟ್ಟಿಗೊಳ್ಳೋದ್ರಲ್ಲಿ ಸಂಶಯವಿಲ್ಲ...
Thursday, May 3, 2012
ಮಳೆಯೊಂದಿಗೆ ಅವಳು....
Thursday, April 5, 2012
ಮೊದಲ ಪ್ರೀತಿ...
ಕಾಲೇಜು ಎಂಟ್ರೆನ್ಸ್ ತಲುಪ್ತಿದ್ದಂಗೆ ಕೊಡೆ ಮಡಚಿ ಒದ್ದೆ ಬಟ್ಟೆಯೊಂದಿಗೆ ಕ್ಲಾಸ್ ಹುಡುಕುವ ಕೆಲಸ ಆರಂಭವಾಗಿತ್ತು. ಕೊನೆಗೂ 0-26 ಕ್ಲಾಸನ್ನು ಹುಡುಕೋದ್ರಲ್ಲಿ ಸಫಲನಾಗಿದ್ದೆ. ಮೊದಲ ದಿನದ ನೆನಪುಗಳೊಂದಿಗೆ ಒಂದು ವಾರ ಕಳೆದಿದ್ದೆ. ವಾರದ ಬಳಿಕ ನನ್ನ ಕಣ್ಣಿಗೆ ಕಾಣಿಸಿದ್ದೇ ಆ ಸುಂದರ ಕುವರಿ. ಹೆಸರು ಗೊತ್ತಿಲ್ಲ, ಊರು ಗೊತ್ತಿಲ್ಲ. ಆದ್ರೆ ಪ್ರತಿದಿನ ಅವಳನ್ನು ನೋಡ್ತಿದ್ದೆ. ಅವಳಿಗೊಂದು ಸ್ಮೈಲ್ ಕೊಡೋಕೆ ಕಾಯ್ತಿದ್ದೆ. ಆದ್ರೆ ಆಕೆ ಯಾವ ಹುಡುಗರ ಮುಖವನ್ನೂ ನೋಡ್ತಿರ್ಲಿಲ್ಲ. ನನ್ನ ಕಡೆಗಂತೂ ಅಪ್ಪಿ ತಪ್ಪಿಯೂ ನೋಡ್ತಿರ್ಲಿಲ್ಲ.
ಕೊನೆಗೂ ಕ್ಲಾಸ್ ನಲ್ಲಿ ಅಟೆಂಡೆನ್ಸ್ ಹಾಕೋವಾಗ ಅವಳ ಹೆಸರನ್ನು ಗಮನಿಸಿದ್ದೆ. ನನ್ನ ಮಟ್ಟಿಗಂತೂ ವಿಶೇಷವಾದ ಹೆಸರು. ಆ ಹೆಸರನ್ನು ತುಂಬಾನೇ ಪ್ರೀತ್ಸೋಕೆ ಶುರು ಮಾಡಿದ್ದೆ. ನಿಧಾನಕ್ಕೆ ಆ ಹೆಸರಿನ ಮೇಲಿದ್ದ ಪ್ರೀತಿ ಆಕೆಯ ಮೇಲಾಯ್ತು. ಪ್ರತಿದಿನ ಕಾಲೇಜಿಗೆ ಬರ್ತಿದ್ದಂಗೆ ಅವಳನ್ನೊಮ್ಮೆ ನೋಡೋಕೆ ಕಾಯ್ತಿದ್ದೆ. ಅವಾಗಷ್ಟೇ ಕ್ಲಾಸ್ ಬಂಕ್ ಮಾಡೋದನ್ನು ಕಲಿತಿದ್ದ ನಾನು ಆಕೆಗೋಸ್ಕರ ಕ್ಲಾಸ್ ಗೆ ಹೋಗೋಕೆ ಶುರು ಮಾಡಿದ್ದೆ.
ವಾರಗಳು ತಿಂಗಳುಗಳಾಯ್ತು. ಅವಳನ್ನು ಹುಚ್ಚನಂತೆ ಪ್ರೀತ್ಸೋಕೆ ಶುರು ಮಾಡಿದ್ದೆ. ಫಸ್ಟ್ ಇಯರ್ ಪಿಯುಸಿ ಮುಗಿಯಿತು. ನೋಡ ನೋಡ್ತಿದ್ದಂಗೆ ಸೆಕೆಂಡ್ ಇಯರ್ ಪಿಯುಸಿಯ ಕೊನೆಯ ದಿನಗಳು ಸಮೀಪಿಸಿದ್ವು. ಫೈನಲ್ ಎಕ್ಸಾಂ ಟೈಮ್ ನಲ್ಲಿ ನಂಗೆ ಭಯ ಶುರುವಾಗಿತ್ತು. ಎಕ್ಸಾಂ ಬಗ್ಗೆಯಲ್ಲ.. ಬದಲಾಗಿ ಆಕೆಯ ಬಗ್ಗೆ. ಸೆಕೆಂಡ್ ಪಿಯುಸಿ ನಂತ್ರ ಆಕೆ ಡಿಗ್ರಿಗಾಗಿ ಮತ್ತೆ ನಮ್ಮ ಕಾಲೇಜಿಗೆ ಬರ್ತಾಳೋ, ಇಲ್ಲಾ ಮನೆಯಲ್ಲೇ ಬಿದ್ದಿರ್ತಾಳೋ ಅಂತ... ಏನಪ್ಪಾ ಮಾಡೋದು ಅಂತ ತುಂಬಾನೇ ತಲೆಕೆಡಿಸಿಕೊಂಡಿದ್ದೆ. ಆದ್ರೆ ಹಾಗಂತ ಅವಳಲ್ಲಿ ಇದ್ಯಾವುದನ್ನೂ ಕೇಳೋ ಹಾಗೂ ಇಲ್ಲ. ಯಾಕಂದ್ರೆ ನಾವಿಬ್ರೂ ಮಾತಾಡ್ತಾನೇ ಇರ್ಲಿಲ್ಲ.
ಕೊನೆಗೆ ಪಿಯುಸಿ ಎಕ್ಸಾಂ ಮುಗಿಯಿತು. 2 ತಿಂಗಳು ರಜೆ ಇತ್ತು. ಆ ಟೈಮ್ ನಲ್ಲಂತೂ ಆಕೆಯನ್ನು ನೋಡೋಕಾಗ್ದೆ ಪರದಾಡ್ತಿದ್ದೆ. ರಿಸಲ್ಟ್ ನವತ್ತು ಆಕೆ ಮತ್ತೆ ಕಾಲೇಜಿಗೆ ಬಂದಿದ್ಳು. ಆಕೆಯನ್ನು ನೋಡಿದ ಖುಷಿ ಇವತ್ತಿಗೂ ನೆನಪಿದೆ.
ನಂಗೆ ತುಂಬಾ ಖುಷಿ ಅನ್ಸಿದ್ದು ಅಂದ್ರೆ ಫಸ್ಟ್ ಇಯರ್ ಡಿಗ್ರಿಗೆ ಅಡ್ಮಿಷನ್ ಮಾಡೋಕೆ ಬಂದವತ್ತು. ಅಂದು ಆಕೆಯೂ ತನ್ನ ತಾಯಿ ಜೊತೆಗೆ ಕಾಲೇಜಿಗೆ ಬಂದಿದ್ಳು. ನಾನು ಜರ್ನಲಿಸಂ ಕಾಂಬಿನೇಷನ್ ಚೂಸ್ ಮಾಡಿದ್ದೆ. ಆಕೆಯಾದ್ರೋ ಹಿಸ್ಟರಿಗೆ ಮೊರೆ ಹೋಗಿದ್ಳು. ಆದ್ರೂ ಒಂದೇ ಕಾಲೇಜಲ್ಲಿ ಪ್ರತಿದಿನ ನೋಡ್ಬೋದಲ್ವಾ ಅನ್ನೋ ಖುಷಿ ನನ್ನಲ್ಲಿತ್ತು.
ಮುಂದಿನ ದಿನಗಳು ನನ್ನ ಪಾಲಿಗೆ ತುಂಬಾನೇ ಸಂತಸ ತಂದಿತ್ತು. ಪ್ರತಿದಿನ ಕಾಲೇಜಿಗೆ ಬಂದು ಆಕೆಯ ಮುಖವನ್ನೊಮ್ಮೆ ನೋಡಿಯೇ ನಾನು ನನ್ನ ಕ್ಲಾಸ್ ರೂಂಗೆ ಹೋಗ್ತಿದ್ದೆ. ಹೀಗೆ ಮತ್ತೆರಡು ವರ್ಷಗಳು ಕಳೆದವು. ನನ್ನ ವನ್ ವೇ ಪ್ರೀತಿ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿತ್ತು. ಕೊನೆಗೆ ನನ್ನ ಪ್ರೀತಿಯನ್ನು ಅವಳ ಮುಂದೆ ಹೇಳ್ಬೇಕು ಅಂತ ಡಿಸೈಡ್ ಮಾಡಿದ್ದೆ. ಅದೊಂದು ದಿನ ಧೈರ್ಯ ಮಾಡಿ ಆಕೆಯನ್ನು ನನ್ನ ಕ್ಲಾಸ್ ರೂಂಗೆ ಕರೆದು ನಾನಿನ್ನ ಇಷ್ಟಪಡ್ತೀನಿ, ಮದುವೆಯಾಗ್ಬೇಕು ಅಂದ್ಕೊಂಡಿದ್ದೀನಿ ಅಂತ ಹೇಳಿದ್ದೆ. ಆದ್ರೆ ಆಕೆ ಒಲ್ಲೆ ಅಂದಿದ್ದಳು. ಮನೆಯಲ್ಲಿ ಗೊತ್ತಾದ್ರೆ ಪ್ರಾಬ್ಲಂ ಆಗತ್ತೆ, ಸೋ ಬೇಡ.. ದಯವಿಟ್ಟು ನನ್ನು ಮರೆತು ಬಿಡು ಅಂತ ಹೇಳಿದ್ಳು..
ಪ್ರಥಮ ಚುಂಬನಂ ದಂತಭಗ್ನಂ ಅನ್ನೋ ಪರಿಸ್ಥಿತಿ ಉಂಟಾಗಿತ್ತು. ನಾನ್ಯಾವತ್ತೂ ಆಕೆ ನನ್ನನ್ನು ರಿಜೆಕ್ಟ್ ಮಾಡ್ತಾಳೆ ಅನ್ನೋ ನೆಗೆಟೀವ್ ಯೋಚನೆಯನ್ನೇ ಇಟ್ಕೊಂಡಿರ್ಲಿಲ್ಲ. ಅಂತಾದ್ರಲ್ಲಿ ಆಕೆಯ ಮಾತು ಕೇಳಿದಾಗ ತುಂಬಾ ನೋವಾಗಿತ್ತು. ಅದನ್ನು ಅರಗಿಸಿಕೊಳ್ಳೋಕೆ ವಾರಗಳು, ತಿಂಗಳುಗಳೇ ಬೇಕಾಯ್ತು. ಕ್ಲಾಸ್ ಮೇಟ್ಸ್ ಗಳಿಂದ ದೇವದಾಸ್ ಅನ್ನೋ ಬಿಟ್ಟಿ ಪಟ್ಟವೂ ಸಿಕ್ಕಿತ್ತು...
ಮೊದಲ ಪ್ರೀತಿಯ ನೆನಪುಗಳು ಯಾವತ್ತಿದ್ರೂ ಮರೆತು ಹೋಗಲ್ಲ. ಅವು ಸದಾಕಾಲ ನೆನಪಿನಲ್ಲುಳಿಯತ್ತೆ. ಇವತ್ತಿಗೂ ನನ್ನ ಮೊದಲ ಇ ಮೇಲ್ ಐಡಿಯ ಪಾಸ್ ವರ್ಡ್ ಅವಳ ಹೆಸರೇ ಇದೆ. ನಾನು ಸೆಕೆಂಡ್ ಪಿಯುಸಿನಲ್ಲಿದ್ದಾಗ ಕ್ರಿಯೇಟ್ ಮಾಡಿದ ಇ ಮೇಲ್ ಐಡಿ...
ಅವಳ ನೆನಪುಗಳು, ಅವಳೊಂದಿಗಿನ ಕನಸುಗಳು... ನೆನಪುಗಳ ಬುತ್ತಿಯಲ್ಲಿ ಭದ್ರವಾಗಿದೆ. ಅವಳಿಗೆ ನಾನಿವಾಗ ನೆನಪಿರ್ಲಿಕ್ಕಿಲ್ಲ. ಯಾಕಂದ್ರೆ ಅವಳು ಮದುವೆಯಾಗಿ ಮೂರು ವರ್ಷಗಳೇ ಕಳೆದಿವೆ. ಸುಂದರ ಸಂಸಾರದ ನೌಕೆಯಲ್ಲಿ ಖುಷಿಯಾಗಿದ್ದಾಳೆ ಅಂದ್ಕೊಂಡಿದ್ದೀನಿ.. ಯಾವತ್ತೂ ಖುಷಿಯಾಗಿರ್ಲಿ...
Friday, March 16, 2012
ನನ್ನ ಕನಸು...
Saturday, February 11, 2012
ನಾ ನಿನ್ನ ತುಂಬಾ ಪ್ರೀತಿಸ್ತೀನಿ ಕಣೋ ಅಂತ ಆಕೆ ಅದೊಂದು ದಿನ ಫೋನ್ ಮಾಡಿ ಹೇಳಿದ್ಳು. ನಂಗೆ ಕೆಲಹೊತ್ತು ಅದನ್ನು ಅರಗಿಸಿಕೊಳ್ಳೋಕೆ ಸಾಧ್ಯವಾಗಿರಲಿಲ್ಲ. ಏನ್ ಹೇಳ್ಬೇಕು ಅಂತ ಗೊತ್ತಾಗದೆ ಸುಮ್ಮನಿದ್ದೆ. ಸುನೀ ಪ್ಲೀಸ್ ಕಣೋ, ಇಲ್ಲಾಂತ ಮಾತ್ರ ಹೇಳ್ಬೇಡ, ನಂಗೆ ತಡ್ಕೊಳ್ಳೋಕಾಗಲ್ಲ ಅಂತ ಅತ್ತು ಹೇಳಿದ್ಳು. ಅವಳ್ಯಾವತ್ತೂ ನನ್ನನ್ನು ಸುನೀ ಅಂತನೇ ಹೆಚ್ಚಾಗೀ ಕರೀತಿದ್ದಿದ್ದು. ಅವಳ ಆರ್ದ ದನಿ ಕೇಳಿದಾಗ ನಂಗೂ ಕಣ್ಣಲ್ಲಿ ನೀರು ಬಂದಿತ್ತು.
ಅವಳು ಪೋನ್ ಮಾಡಿ ತನ್ನ ಪ್ರೀತಿಯ ವಿಚಾರ ಹೇಳಿದ ಒಂದು ವಾರದ ಬಳಿಕ ಮತ್ತೊಮ್ಮೆ ಕಾಲ್ ಮಾಡಿದ್ಳು. ಸುನಿ ನಾಳೆ ನಾನು ಬೆಂಗಳೂರಿಗೆ ಬರ್ತಿದ್ದೀನಿ. ಜೊತೆಗೆ ನನ್ ಕ್ಲಾಸ್ ಮೇಟ್ ಕೂಡ ಇರ್ತಾನೆ. ಒಂದು ಇಂಟರ್ ವ್ಯೂ ಇದೆ ಕಣೋ.. ಬೆಳಿಗ್ಗೆ ನಿನ್ ರೂಮ್ ಗೆ ಬರ್ತೀವಿ ಅಂದಿದ್ಳು. ಮರುದಿನ ಭಾನುವಾರವಾಗಿದ್ರಿಂದ ಆಫೀಸ್ ಗೆ ರಜೆ ಇತ್ತು. 6 ಗಂಟೆಗೆಲ್ಲ ಮೆಜೆಸ್ಟಿಕ್ ನಲ್ಲಿ ಬಸ್ ಇಳ್ಕೊಂಡು ಇಬ್ರೂ ನನ್ನ ರೂಂ ಹತ್ರ ಬಂದಿದ್ಳು. 9 ಗಂಟೆಗೆಲ್ಲ ನಾನು ಅವರ ಜೊತೆಗೆ ಇಂಟರ್ ವ್ಯೂ ಜಾಗಕ್ಕೆ ಹೊರಟಿದ್ದೆ. ಮಧ್ಯಾಹ್ನವಾಗ್ತಿದ್ದಂಗೆ ಇಂಟರ್ ವ್ಯೂ ಮುಗಿದಿತ್ತು. ಮತ್ತೆ ಅವರಿಬ್ಬರನ್ನೂ ಕರ್ಕೊಂಡು ಲಾಲ್ ಭಾಗ್ ತೋರಿಸೋಕೆ ಕರ್ಕೊಂಡು ಹೋಗಿದ್ದೆ. 6 ಗಂಟೆಗೆಲ್ಲ ಮತ್ತೆ ವಾಪಾಸ್ ರೂಂ ಗೆ ಬಂದಿದ್ವಿ.
10 ಗಂಟೆಗೆ ಅವರಿಗೆ ಮೆಜೆಸ್ಟಿಕ್ ನಿಂದ ವಾಪಾಸ್ ಊರಿಗೆ ಹೊರಡೋಕೆ ಬಸ್. 8.30ಕ್ಕೆ ರೂಮ್ ಬಿಡೋಣ ಅಂದ್ಕೊಂಡಿದ್ದೆ. 8 ಗಂಟೆಗೆ ಊಟ ಮುಗಿಸಿಕೊಂಡ್ವಿ. ಮೂವರೂ ಟೆರೇಸ್ ನ ಕಟ್ಟೆ ಮೇಲೆ ಮಾತಾಡ್ತಾ ಕೂತಿದ್ವಿ. ಅಷ್ಟರಲ್ಲಿ ಸಹಪಾಠಿ ರೀ ಚಾರ್ಜ್ ಮಾಡೋಕೆ ಅಂತ ಕೆಳಗಡೆ ಹೋದ. ಬಹುಷ ಆಕೆ ಅದೇ ಕ್ಷಣಕ್ಕೋಸ್ಕರ ಕಾಯ್ತಿದ್ಳು. ಸುನೀ ನಾನು ಹೇಳಿದ್ರ ಬಗ್ಗೆ ಥಿಂಕ್ ಮಾಡಿದ್ಯಾ.. ಏನ್ ಮಾಡ್ತಿಯಾ ಹೇಳು.. ಅಂದ್ಳು. ಆಕೆ ತನ್ನ ಪ್ರೀತಿಯ ವಿಚಾರ ಹೇಳಿ ಒಂದು ವಾರ ಕಳೆದ್ರೂ ನನಗೊಂದು ನಿರ್ಧಾರಕ್ಕೆ ಬರೋಕೆ ಸಾಧ್ಯವಾಗಿರಲಿಲ್ಲ. ಆಕೆ ನಂಗೂ ಇಷ್ಟ ಆಗಿದ್ಳು. ಆಕೆಯ ತುಂಟತನಗಳೂ. ಆದ್ರೆ ಹಾಗಂತ ನಾನ್ಯಾವತ್ತೂ ಆಕೆಯನ್ನು ಲವ್ ಅನ್ನೋ ದೃಷ್ಟಿಕೋನದಲ್ಲಿ ನೋಡಿರಲಿಲ್ಲ. ಫ್ರೆಂಡ್ಲಿಯಾಗೇ ಇದ್ದೆ. ಆಕೆಯ ಪ್ರೀತಿಗೆ ಒಪ್ಪಿಗೆ ಹೇಳೋದೇನೋ ಸುಲಭವಾಗಿತ್ತು. ಆದ್ರೆ ಮುಂದೆ... ಆಕೆಯನ್ನು ಮದುವೆಯಾಗೋ ವಿಚಾರವಂತೂ ಕನಸೇ.. ಮದುವೆಗೆ ಸಾಕಷ್ಟು ತೊಡಕುಗಳುಂಟಾಗತ್ತೆ ಅನ್ನೋದು ನಂಗೆ ಗೊತ್ತಿತ್ತು. ಹಾಗಾಗಿ ಹೂಂ ಅನ್ನೋಕೆ ಸ್ವಲ್ಪ ಹಿಂದೆ ಮುಂದೆ ನೋಡ್ತಿದ್ದೆ.
ಅಂದು ರಾತ್ರಿ ನಾನೇನೂ ಸ್ಪಷ್ಟವಾಗಿ ಹೇಳೋಕೆ ಆಗಿರಲಿಲ್ಲ. ಆಕೆ ಜಾಸ್ತಿ ಫೋರ್ಸ್ ಮಾಡಲಿಲ್ಲ. ಅದೇ ಮೌನದಲ್ಲೇ ವಾಪಾಸ್ ಊರಿಗೆ ಹೊರಟ್ಳು. ಊರಿಗೆ ಹೋದ್ಮೇಲೆ ಮತ್ತೆ ನಾಲ್ಕು ದಿನದ ನಂತ್ರ ಫೋನ್ ಮಾಡಿದ್ಳು. ಈ ಬಾರಿ ನಂಗೆ ಏನಾದರೊಂದು ಉತ್ತರ ಹೇಳಲೇ ಬೇಕಾಗಿತ್ತು. ಈ ನಡುವೆ ದೊಡ್ಡದೊಂದು ಡ್ರಾಮಾ ನಡೆದು ಹೋಗಿತ್ತು. ಆಕೆಯ ಆಱೋಗ್ಯಕ್ಕೆ ಸಂಬಂಧಿಸಿ.. ಮಧ್ಯೆ ಅದ್ಯಾವುದೋ ಘಳಿಗೆಯಲ್ಲಿ ನಾನಾಕೆಯ ಪ್ರೀತಿಗೆ ಒಪ್ಪಿಗೆ ಸೂಚಿಸಿದ್ದೆ...
ಆದ್ರೆ ಮುಂದೆ ಏನೇನೋ ಆಗೋಯ್ತು. ನಾನು ಆಕೆಯ ಪ್ರೀತಿಗೆ ಒಪ್ಪಿಗೆ ಸೂಚಿಸಿದ ಮತ್ತೊಂದು ವಾರದಲ್ಲೇ ಆಕೆಯ ಎಂಗೇಜ್ ಮೆಂಟ್ ಸಹ ಆಗೋಯ್ತು.. ಮತ್ತೆ ತಿಂಗಳೊಳಗಾಗಿ ಧಾಂ ಧೂಂ ಅಂತ ಮದುವೆನೂ ಆಯ್ತು.. ನನಗದನ್ನು ಅರಗಿಸಿಕೊಳ್ಳೋಕೆ ಸಾಧ್ಯವಾಗಲಿಲ್ಲ..ಹಾಗಂತ ಭಗ್ನಪ್ರೇಮಿಯಾಗಿ ದೇವದಾಸನಾಗಲಿಲ್ಲ.. ಆಗೋದೆಲ್ಲ ಒಳ್ಳೇದಕ್ಕೇ ಅಂದ್ಕೊಂಡು ಸುಮ್ಮನಾದೆ. ಕೊನೆಗೆ ಆಕೆಯ ಮದುವೆಗೂ ಹೋಗಿ ಅಕ್ಷತೆ ಕಾಳು ಹಾಕಿ ಬಂದಿದ್ದೆ...
ಇವೆಲ್ಲ ಆಗಿ ಹೆಚ್ಚು ಕಡಿಮೆ ನಾಲ್ಕು ವರ್ಷಗಳೇ ಕಳೆದಿವೆ.. ಮತ್ತೆ ಯಾವುದೇ ಹುಡುಗಿ ಪ್ರೋಪೋಸ್ ಮಾಡಿದಾಗ ಹಳೆಯ ಕಥೆಗಳೆಲ್ಲ ನೆನಪಾಗೋಯ್ತು.. ಹಾಗೆ ಸುಮ್ನೆ ಬರೆದೆ..
Saturday, January 21, 2012
ಮೊಗೆದಷ್ಟೂ ಮುಗಿಯದ ಪ್ರೀತಿ...
ದಿನಗಳು ಕಳೆದು ಹೋಗ್ತಾನೇ ಇವೆ.. ಬೆರಳೆಣಿಕೆಯ ದಿನಗಳು ಮಾತ್ರ ಬಾಕಿಯಿವೆ.. ಬಳಿಕ ಇಬ್ರೂ ಬೇರೆಯಾಗ್ತೀವಿ.. ಶಾಶ್ವತವಾಗಿ... ಅದನ್ನು ಅರಗಿಸಿಕೊಳ್ಳುವ ಮನಸ್ಸಾಗ್ಲೀ, ಧೈರ್ಯವಾಗ್ಲೀ ಇಬ್ರಿಗೂ ಇಲ್ಲ.. ಆದ್ರೂ ತಮ್ಮ ಅಧೈರ್ಯವನ್ನೂ ಯಾರೂ ತೋರ್ಪಡಿಸುತ್ತಿಲ್ಲ.. ಎಲ್ಲೋ ಒಂದ್ಕಡೆ ಇಬ್ರಿಗೂ ಸಮಾಧಾನ ಆಗೋವರ್ಗೂ ಅತ್ತು ಬಿಡ್ಬೇಕು ಅನ್ಸಿದೆ.. ಆದ್ರೆ ಅದು ಕ್ಷಣಕ್ಕೆ ಮಾತ್ರ ಸಮಾಧಾನ ತಂದೀತು... ಪೂರ್ತಿ ಜೀವಮಾನಕ್ಕಲ್ಲ.. ಹಾಗಾದ್ರೆ ಇನ್ನೆಷ್ಟು ದಿನ ಹೀಗೆ ಇರೋದು... .
Wednesday, December 14, 2011
ಮೂರು ವರ್ಷಗಳ ನಂತರ..
Wednesday, November 2, 2011
ಮತ್ತೆ ಕ್ಲಾಸ್ ರೂಮ್ ನತ್ತ ಹೆಜ್ಜೆ..
ಕಾಲೇಜು ಮುಗಿದಮೇಲೂ ಬಹುತೇಕ ಕ್ಲಾಸ್ ಮೇಟ್ಸ್ ಜೊತೆಗೆ ಸಂಪರ್ಕವಿತ್ತು. ಆದ್ರೆ ಬೆರಳೆಣಿಕೆಯ ಜನರು ಎಲ್ಲಿದ್ದಾರೋ ಗೊತ್ತಿಲ್ಲ. ಪ್ರತಿ ಬಾರಿ ಫ್ರೆಂಡ್ಸ್ ಫೋನ್ ಮಾಡಿದಾಗ್ಲೂ ಒಂದ್ಸಲ ಎಲ್ರೂ ಮೀಟ್ ಆಗೋಣ ಅಂತ ಹೇಳ್ತಿದ್ರು. ನಾಲ್ಕು ವರ್ಷಗಳಿಂದ ಎಲ್ರೂ ಒಂದೆಡೆ ಮೀಟ್ ಆಗ್ಬೇಕು ಅಂದ್ಕೊಂಡ್ರೂ ಆಗಿರಲಿಲ್ಲ. ಆದ್ರೆ ಇದೀಗ ಅದಕ್ಕೆ ಸಮಯ ಕೂಡಿ ಬಂದಿದೆ. ಬರೋಬ್ಬರಿ ನಾಲ್ಕು ವರ್ಷಗಳ ನಂತ್ರ, ಈ ಕೂಡುವಿಕೆಗೆ ಸಾಕ್ಷಿಯಾಗಲಿರೋ ಜಾಗ ಬೇರ್ಯಾವುದೂ ಅಲ್ಲ, ಅದೇ ಉಜಿರೆ..
ಒಟ್ಟು ಎರಡು ದಿನಗಳ ಪ್ರೋಗ್ರಾಂ ಚಾರ್ಟ್. ಡಿಸೆಂಬರ್ 25 ಭಾನುವಾರ. ಅಂದು ಎಲ್ರೂ ಉಜಿರೆಯಲ್ಲಿ ಒಟ್ಟಾಗಿ ಬಳಿಕ ಒಂದು ದಿನದ ಪಿಕ್ ನಿಕ್ ಗೆ ಹೋಗೋ ಪ್ಲಾನ್. ಎಲ್ಲಿಗೆ ಹೋಗೋದು ಅನ್ನೋದನ್ನು ಇನ್ನೂ ಡಿಸೈಡ್ ಮಾಡಿಲ್ಲ. ಅಕ್ಕಪಕ್ಕದ ಯಾವುದಾದ್ರೂ ಫಾಲ್ಸ್ ಗಳಿಗೆ ಹೋಗೋ ಚಿಂತನೆ ಇದೆ. ಎಲ್ಲರ ಜೊತೆಗೆ ಚರ್ಚಿಸಿ ಈ ಬಗ್ಗೆ ಫೈನಲ್ ಮಾಡಲಾಗುವುದು. ಬೆಳಿಗ್ಗೆಯಿಂದ ಸಂಜೆವರೆಗೆ ಜೊತೆಗಿದ್ದು ಬಳಿಕ ಉಜಿರೆಗೆ ಮರಳಿ ಸಾಧ್ಯವಾದ್ರೆ ಎಲ್ಲಾದ್ರೂ ಒಂದ್ಕಡೆ ಕ್ಯಾಂಪ್ ಫೈರ್ ಹಾಕೊಂಡು ಇರೋಕೆ ಎಲ್ಲರ ಒಪ್ಪಿಗೆ ಸಿಗ್ಬೇಕು.
ಡಿಸೆಂಬರ್ 26 ಸೋಮವಾರ. ಬಹುನಿರೀಕ್ಷಿತ ದಿನ. ಯಾಕಂದ್ರೆ ಅಂದು ನಾವೆಲ್ರೂ ಮತ್ತೆ ನಾಲ್ಕು ವರ್ಷದ ಹಿಂದಿನಂತೆ ಕಾಲೇಜಿಗೆ ಹೋಗ್ಬೇಕು. ಡಿಗ್ರಿಯಲ್ಲಿದ್ದಂತೆ ಕ್ಲಾಸ್ ರೂಮ್ ಗೆ ಹೋಗಿ ವಿದ್ಯಾರ್ಥಿಗಳಂತೆ ಕೂತ್ಕೋಬೇಕು. ಡಿಗ್ರಿಯಲ್ಲಿ ನಮಗೆ ಪಾಠ ಮಾಡ್ತಿದ್ದ ಉಪನ್ಯಾಸಕರೆಲ್ಲ ಬಂದು ಕ್ಲಾಸ್ ತೆಗೆದುಕೊಳ್ಳಲಿದ್ದಾರೆ. ಮೋಸ್ಟ್ ಇಂಟರೆಸ್ಟಿಂಗ್ ಅಂದ್ರೆ, ಸ್ವತಃ ನಮ್ಮ ಪ್ರಿನ್ಸಿ ಯಶೋವರ್ಮ ಸರ್ ಸಹ ಬಂದು ಕ್ಲಾಸ್ ತಗೋತೀನಿ ಅನ್ನೋ ಭರವಸೆಯನ್ನು ಹಿಂದೆ ನೀಡಿದ್ದಾರೆ.
ಜೊತೆಗೆ ಭಾಸ್ಕರ್ ಹೆಗ್ಡೆ, ಶೈಲೇಶ್, ಬಿಪಿ ಸಂಪತ್, ಶಂಕರ್ ನಾರಾಯಣ್, ಸೂರ್ಯ ನಾರಾಯಣ್ ಸೇರಿದಂತೆ ನಮಗೆ ಪಾಠ ಮಾಡಿದ ಉಪನ್ಯಾಸಕರು ತರಗತಿಗೆ ಬರಲಿದ್ದಾರೆ. ಒಂದು ಗಂಟೆ ಪಾಠ ಮಾಡಲಿದ್ದಾರೆ. ಈ ವಿಚಾರದ ಬಗ್ಗೆ ಮಾತಾಡ್ತಿದ್ದಾಗ ಮೊನ್ನೆಯಷ್ಟೇ ಶೈಲೇಶ್ ಸರ್ ಒಂದು ಮಾತು ಕೇಳಿದ್ರು. ನೀವು ಮೊದ್ಲಿನ ಥರಾನೇ ಕೀಟಲೆ ಮಾಡ್ತೀರಾ ಅಂತ.. ನಾನದಿಕ್ಕೆ ಹೌದು ಅಂದಿದ್ದೆ. ಅದ್ಕೆ ಅವ್ರು ಹೇಳಿದ್ರು, ಹಾಗಾದ್ರೆ ನಾವು ಮೊದ್ಲಿನ್ ತರಾನೇ ಬೈದು ಕ್ಲಾಸ್ ನಿಂದ ಹೊರಗೆ ಹಾಕ್ತೀವಿ ಅಂತ... ತಮಾಷೆಗೆ ಹೇಳಿದ್ರಷ್ಟೇ.. ಆದ್ರೆ ಅದು ಏನೇ ಆಗ್ಲಿ, ಆ ಕ್ಷಣಗಳನ್ನು ಅನುಭವಿಸೋಕೆ ನಾವೆಲ್ಲ ತುದಿಗಾಲಲ್ಲಿ ನಿಂತಿದ್ದೀವಿ.
ಭಾಸ್ಕರ್ ಹೆಗ್ಡೆ ಸರ್ ಗೆ ಫೋನ್ ಮಾಡಿ ಈ ವಿಷಯ ಹೇಳಿದಾಗ ಅವ್ರು ಹೇಳಿದ್ರು, ನೀವು ಕಾಲೇಜಲ್ಲಿ ಹೊಸ ಟ್ರೆಂಡ್ ಸ್ಟಾರ್ಟ್ ಮಾಡ್ತೀರಾ ಅಂತ.. ಇದುವರೆಗೆ ನಮ್ಮ ಎಸ್ ಡಿ ಎಂ ಕಾಲೇಜಲ್ಲಿ ಇಂತಹ ಪ್ರಯೋಗ ಯಾರೂ ಮಾಡಿಲ್ಲ. ಹಾಗಾಗಿ ಇದು ಯಶಸ್ವಿಯಾದ್ರೆ ಅದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಕಾಲೇಜಿನ ಇತಿಹಾಸದ ಸುವರ್ಣಾಕ್ಷರಗಳಲ್ಲಿ ನಮ್ಮ ಸಾಧನೆ ಯಾವತ್ತಿಗೂ ಇರುತ್ತೆ.
ಪ್ರತಿಯೊಬ್ರೂ ಬಿಡುವು ಮಾಡ್ಕೊಂದು ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಸಾಧ್ಯವಾದಷ್ಟು ಪ್ರತಿಯೊಬ್ರಿಗೂ ಫೋನ್ ಮಾಡಿ 25 ಮತ್ತು 26ಕ್ಕೆ ಫ್ರೀ ಮಾಡೋಕೆ ಹೇಳಿದ್ದೀವಿ. ಎಷ್ಟು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಅನ್ನೋದೆ ಸದ್ಯದ ಪ್ರಶ್ನೆ.
ಕಾರ್ಯಕ್ರಮದ ಬಗ್ಗೆ ಏನೇ ಸಲಹೆ, ಅನಿಸಿಕೆ ಇದ್ರೂ ದಯವಿಟ್ಟು ನನಗೆ ಅಥವಾ ದಾಮುಗೆ ಫೋನ್ ಮಾಡಿ. 9980914181 ಅಥವಾ 9986046667- ಇದು ನನ್ನ ಫೋನ್ ನಂಬರ್. ದಾಮುಗೆ ಕರೆ ಮಾಡೋಕೆ 9916821201 ಗೆ ರಿಂಗ್ ಮಾಡಿ.. ಬದಲಾವಣೆಗಳಿದ್ದಲ್ಲಿ ಕೆಳಗಡೆ ಕಮೆಂಟ್ ಬಾಕ್ಸ್ ನಲ್ಲೂ ಬರೆದು ಹಾಕಬಹುದು....
Monday, October 31, 2011
ಕಾಲೇಜಿನ ನೆನಪುಗಳು ಮತ್ತೊಮ್ಮೆ..
ಮೂರು ವರ್ಷದ ಡಿಗ್ರೀ ಲೈಫ್ ಅವಿಸ್ಮರಣೀಯ... ಪ್ರತಿಯೊಬ್ಬರಿಗೂ ಅವರವರ ಕಾಲೇಜು ಲೈಫ್ ತುಂಬಾ ಮೆಮೊರಬಲ್ ಆಗಿರತ್ತೆ.. ನಮ್ಮದೂ ಹಾಗೆ ಅನಿಸ್ಬೋದು.. ಆದ್ರೆ ಬೇರೆಯವ್ರಿಗಿಂತ ವಿಭಿನ್ನವಾದ ಹಲವಾರು ಅನುಗಳನ್ನು ನಾವು ಪಡ್ಕೊಂಡಿದ್ವಿ..
ಫಸ್ಟ್ ಇಯರ್ ನಲ್ಲಿ ಯಾರೂ ಅಷ್ಟೊಂದು ಪರಿಚಿತರಾಗಿರಲಿಲ್ಲ. ಪಿಯುಸಿನಲ್ಲಿ ಒಟ್ಟಿಗಿದ್ದವರು ಮಾತ್ರ ಹೆಚ್ಚು ಮಿಂಗಲ್ ಆಗ್ತಿರ್ತಿದ್ರು.. ಆದ್ರೆ ದಿನಗಳೆದಂತೆ ಡಿಗ್ರಿಗೆ ಹೊಸದಾಗಿ ಸೇರ್ಕೊಂಡವ್ರು ಎಲ್ರ ಜೊತೆಗೆ ಕ್ಲೋಸ್ ಆಗತೊಡಗಿದ್ರು. ನಮ್ಮ ಜರ್ನಲಿಸಂ ಕ್ಲಾಸ್ ಒಂದು ಕುಟುಂಬದಂತೆ ಆಗಿತ್ತು. ಇದಕ್ಕೆಲ್ಲ ಮುಖ್ಯ ಕಾರಣ ಅಂದ್ರೆ ನಮ್ಮ ಜರ್ನಲಿಸಂ ಲೆಕ್ಟರರ್ ಭಾಸ್ಕರ್ ಹೆಗಡೆ ಅಂದ್ರೆ ತಪ್ಪಾಗಲಿಕ್ಕಿಲ್ಲ. ಯಾಕಂದ್ರೆ ನಮಗೆ ಅಷ್ಟೊಂದು ಫ್ರೀಡಂ ಕೊಟ್ಟಿದ್ರು. ಮಾತ್ರವಲ್ಲ ಒಂದು ಕುಟುಂಬದಂತೆ ಇರೋಕೆ ಬೇಕಾದ ಪೂರಕ ವಾತಾವರಣವನ್ನು ಅವರೇ ಕಲ್ಪಿಸಿಕೊಟ್ಟಿದ್ರು.
ನಮ್ಮೆಲ್ಲರ ಆತ್ಮೀಯತೆಗೆ ಹೆಚ್ಚಿನ ಪಾತ್ರ ವಹಿಸಿದ್ದು ಜರ್ನಲಿಸಂ ಲ್ಯಾಬ್ ಅಂದ್ರೆ ತಪ್ಪಾಗಲಿಕ್ಕಿಲ್ಲ. ಯಾಕಂದ್ರೆ ಇಡೀ ಕಾಲೇಜಲ್ಲಿ ಡಿಸಿಪ್ಲಿನ್ ಕಮಿಟಿಯವ್ರು ಬರದೆ ಇದ್ದ ಜಾಗ ಅಂದ್ರೆ ಬಹುಶ ಅದೊಂದೇ ಆಗಿತ್ತು. ಬೇರೆಲ್ಲ ಕ್ಲಾಸ್ ಗಳತ್ತನೂ ಡಿಸಿಪ್ಲಿನ್ ಕಮಿಟಿಯಲ್ಲಿದ್ದ ಲೆಕ್ಟರರ್ಸ್ ಒಂದು ಕಣ್ಣಿಟ್ಟಿದ್ರು. ಯಾವುದಾದ್ರೂ ಒಂದು ಕ್ಲಾಸ್ ನಿಂದ ಸ್ವಲ್ಪ ಜಾಸ್ತಿ ಸೌಂಡ್ ಬಂದ್ರೂ ಅತ್ತ ಓಡೋಡಿ ಹೋಗ್ತಿದ್ರು. ಆದ್ರೆ ನಮ್ಮ ಜರ್ನಲಿಸಂ ಲ್ಯಾಬ್ ಇದ್ದಿದ್ದು ಬೇಸ್ ಮೆಂಟ್ ನಲ್ಲಿ. ಮಾತ್ರವಲ್ಲ ಪಕ್ಕದಲ್ಲೇ ನಮ್ಮ ಜರ್ನಲಿಸಂ ಡಿಪಾರ್ಟ್ ಮೆಂಟ್ ಸಹ ಇತ್ತು. ನಮ್ಮ ಡಿಪಾರ್ಟ್ ಮೆಂಟ್ ನ ಏಕೈಕ ಲೆಕ್ಚರರ್ ಕಂ ಹೆಚ್ಒಡಿ ಭಾಸ್ಕರ್ ಹೆಗ್ಡೆ ಯವರನ್ನು ದಾಟಿ ಯಾವ ಲೆಕ್ಟರರ್ಸ್ ಕೂಡ ಜರ್ನಲಿಸಂ ಲ್ಯಾಬ್ ಒಳಗೆ ಕಾಲಿಡ್ತಿರ್ಲಿಲ್ಲ.
ಹಾಗಾಗಿ ನಾವೆಷ್ಟೇ ಕೂಗಾಡಿದ್ರೂ, ಕೇಕೆ ಹಾಕಿದ್ರೂ ಬೇರೆ ಯಾರೂ ಬಂದು ಕೇಳ್ತಿರ್ಲಿಲ್ಲ. ತೀರಾ ಸೌಂಡ್ ಜಾಸ್ತಿಯಾದಾಗ ಭಾಸ್ಕರ್ ಹೆಗ್ಡೆ ಸರ್ ಬಂದು ಏನಾಯ್ತು ಅಂತ ಅದೇ ತಾಳ್ಮೆ ಬೆರೆತ ಧ್ವನಿಯಲ್ಲಿ ಕೇಳ್ತಿದ್ರು. ಅವರ ತಾಳ್ಮೆಗೆ ಹ್ಯಾಟ್ಸ್ ಆಫ್ ಹೇಳಲೇಬೇಕು.. ಆದ್ರೆ ಅವರು ಅಷ್ಟು ಹೇಳಿ ಲ್ಯಾಬ್ ನಿಂದ ಆಚೆ ಹೋಗ್ತಿದ್ದಂಗೆ ಮತ್ತೆ ನಮ್ಮ ಆರ್ಭಟ ಯಥಾಸ್ಥಿತಿಗೆ ಮರಳುತ್ತಿತ್ತು. ಇದು ಎಂದಿನ ದಿನಚರಿಯಾಗಿತ್ತು. ನಮ್ಮಲ್ಲಿ ಯಾರದಾದ್ರೂ ಬರ್ತ್ ಡೇ ಅಥವಾ ಇನ್ಯಾವುದೋ ಫಂಕ್ಷನ್ ಇದ್ರೆ ಕೇಳೋದೆ ಬೇಡ. ಕ್ಲಾಸ್ ಕಟ್, ಎಂಜಾಯ್ ಮೆಂಟ್ ಸ್ಟಾರ್ಟ್. ಪ್ರತಿಯೊಬ್ಬರ ಬರ್ತ್ ಡೇಯನ್ನೂ ನೆನಪಿಟ್ಟುಕೊಂಡಿದ್ದ ದೀಕ್ಷಾ ತಲೆಯಲ್ಲಿ ಅದ್ಯಾವ ಮೆಮೊರಿ ಕಾರ್ಡ್ ಇಟ್ಕೊಂಡಿದ್ಳೋ ಗೊತ್ತಿಲ್ಲ..
ಸೆಕೆಂಡ್ ಇಯರ್ ಎಂಡ್ ವರೆಗೂ ನಮ್ಮ ನೆಟ್ಟಿನ ಜರ್ನಲಿಸಂ ಲ್ಯಾಬ್ ಇತ್ತು. ಆದ್ರೆ ಫೈನಲ್ ಇಯರ್ ಗೆ ಬರ್ತಿದ್ದಂಗೆ ಪ್ರೀತಿಯ ಜರ್ನಲಿಸಂ ಲ್ಯಾಬ್ ಕಾಣೆಯಾಗಿತ್ತು. ಸ್ಟುಡಿಯೋ ಪರ್ಪಸ್ ಗೋಸ್ಕರ ಲ್ಯಾಬನ್ನು ತೆರವುಗೊಳಿಸಿದ್ರು. ಹಾಗಾಗಿ 0-2ನಲ್ಲಿ ಕುಳಿತು ಪಾಠ ಕೇಳುವ ಅನಿವಾರ್ಯ ಪರಿಸ್ಥಿತಿ ಉಂಟಾಗಿತ್ತು. ಅದೂ ಕಾರಿಡಾರ್ ಪಕ್ಕದಲ್ಲೇ. ಹಾಗಾಗಿ ಆರಂಭದಲ್ಲಿ ನಮ್ಮ ಆರ್ಭಟಕ್ಕೆ ಕೊಂಚ ಬ್ರೇಕ್ ಇದ್ದಿತ್ತು. ಆದ್ರೆ ಆ ಕ್ಲಾಸ್ ರೂಮ್ ಗೆ ಒಗ್ಗಿಕೊಳ್ತಿದ್ದಂಗೆ ನಿಧಾನವಾಗಿ ಮತ್ತೆ ಹಳೇ ಚಾಳಿ ಆರಂಭಿಸಿದ್ವಿ.
ಮೂರು ವರ್ಷದ ಸವಿನೆನಪುಗಳು ಸಾಕಷ್ಟಿವೆ. ಒಂದೊಂದಾಗಿ ಬರೀತೀನಿ.. ನಿಮಲ್ಲಿ ಆ ಮೂರು ವರ್ಷಗಳ ನೆನಪುಗಳಿದ್ರೆ ಶಾರ್ಟ್ ಆಗಿಯಾದ್ರೂ ಕಮೆಂಟ್ ಬಾಕ್ಸ್ ನಲ್ಲಿ ಹಾಕಿ.. ಅದನ್ನೇ ಮೂಲ ಪ್ರತಿಯಾಗಿರಿಸಿ ನೆನಪುಗಳ ಹಂದರವನ್ನು ಮತ್ತಷ್ಟು ಬಿಚ್ಚಿಡೋಣ....
Monday, October 10, 2011
ನಕ್ಸಲ್ ಹಾದಿ...???
ಹಸಿವು ಅಂದ್ರೆ....
ಅಂದು ಸೆಪ್ಟೆಂಬರ್ 13.. ನೈಟ್ ಶಿಫ್ಟ್ ಇದ್ದಿದ್ರಿಂದ 11 ಗಂಟೆಗೆಲ್ಲ ಆಫೀಸಿಗೆ ಬಂದಿದ್ದೆ.. ಮತ್ತೊಂದು ಗಂಟೆ ಕಳೆದಿರಬಹುದು ಅನ್ಸತ್ತೆ.. ಇನ್ಸುಟ್ ನವ್ರು ಫೋನ್ ಮಾಡಿ ಅರ್ಜೆಂಟಾಗಿ ಚೆನ್ನೈಗೆ ಹೊರಡಿ ಅಂದ್ರು.. ನೋಡಿದ್ರೆ ತಮಿಳುನಾಡಿನ ಅರಕ್ಕೋಣಂನಲ್ಲಿ ರೈಲು ಅಪಘಾತ ಸಂಭವಿಸಿತ್ತು. ಆಗಲೇ 9 ಮಂದಿ ಸಾವನ್ನಪ್ಪಿದ್ರು.. 80ಕ್ಕೂ ಅಧಿಕ ಮಂದಿ ಗಾಯಾಳಾಗಿದ್ರು... ಉಟ್ಟ ಬಟ್ಟೆಯಲ್ಲೇ ಅರಕ್ಕೋಣಂಗೆ ಹೋಗೋಕೆ ರೆಡಿಯಾಗಿದ್ದೆ. ಕ್ಯಾಮೆರಾಮ್ಯಾನ್ ನರೇಶ್ ಮನೆಯಿಂದ ರೆಡಿಯಾಗಿ ಬಂದಿದ್ದ. ನ್ಯೂಸ್ 9 ನಿಂದಲೂ ಒಬ್ರು ರಿಪೋರ್ಟರ್ ಇದ್ರು. ಚಂದ್ರು ಅವರ ಕ್ವಾಲಿಸ್ ವಾಹನ ಆಫೀಸ್ ಹೊರಗಡೆ ಕಾಯ್ತಾ ನಿಂತಿತ್ತು... ಓಬಿ ವೆಹಿಕಲ್ ಕೂಡ ರೆಡಿಯಾಗಿತ್ತು.. ಎಂಜಿನಿಯರ್ ಪ್ರಕಾಶ್ ಮತ್ತು ಡ್ರೈವರ್ ತಿಮ್ಮೇಶ್ ನಮಗಿಂತ ಮೊದಲು ಹೊರಟು ಬಿಟ್ಟಿದ್ರು.. ನಾವು 1 ಗಂಟೆಗೆಲ್ಲ ಕ್ವಾಲಿಸ್ ಏರಿ ಅರಕ್ಕೋಣಂನತ್ತ ಪ್ರಯಾಣ ಹೊರಟಿದ್ವಿ.. < /p>
ಬೆಳಗ್ಗಿನ ಜಾವ 6.30ಕ್ಕೆ ಅರಕ್ಕೋಣಂ ಸರ್ಕಾರೀ ಆಸ್ಪತ್ರೆಯ ಮುಂದೆ ತಲುಪಿದ್ವಿ.. ಗಾಯಾಳುಗಳಲ್ಲಿ ಸುಮಾರು 60 ಮಂದಿ ಅದೇ ಆಸ್ಪತ್ರೆಗೆ ದಾಖಲಾಗಿದ್ರು.. ಅಲ್ಲಿ ನಮಗೆ ಶ್ರೀಕಾಂತ್ ಸಿಕ್ಕಿದ್ದ.. ಶ್ರೀಕಾಂತ್ ನಮ್ಮ ಚೆನ್ನೈ ಕ್ಯಾಮೆರಾಮ್ಯಾನ್ ಕಂ ರಿಪೋರ್ಟರ್.. ಶ್ರೀಕಾಂತ್ ಜೊತೆಗೆ ಮಾತಾಡ್ಕೊಂಡು ಅರ್ಧ ಗಂಟೆಯ ನಂತ್ರ ನೇರವಾಗಿ ಅಪಘಾತ ನಡೆದ ಸ್ಥಳಕ್ಕೆ ಧಾವಿಸಿದ್ವಿ.. ರಾತ್ರಿ ಅಪಘಾತ ಸಂಭವಿಸಿತ್ತು.. ಆದ್ರೆ ಬೆಳಗಾಗ್ತಿದ್ದಂಗೆ ಸ್ಥಳೀಯರೂ, ಅಕ್ಕಪಕ್ಕದ ಊರವರೆಲ್ಲ ತಂಡೋಪತಂಡವಾಗಿ ಅಪಘಾತ ನೋಡೋಕೆ ಬಂದಿದ್ರು..ಹಾಗಾಗಿ ರೈಲ್ವೇ ಗೇಟ್ ನಿಂದಾಚೆಗೆ ಯಾವುದೇ ವಾಹನಗಳನ್ನು ಬಿಡ್ತಿರಲಿಲ್ಲ.. ಹಾಗಾಗಿ ರೈಲ್ವೇ ಗೇಟ್ ಗಿಂತಲೂ ಹಿಂದೆಯೇ ವಾಹನ ನಿಲ್ಲಿಸಿ ನಡ್ಕೊಂಡು ಹೋಗ್ಬೇಕಾಯ್ತು.. ಓಬಿ ವ್ಯಾನ್ ಕೂಡ ಅಲ್ಲೇ ನಿಂತಿತ್ತು.. ಹೆಚ್ಚು ಕಡಿಮೆ 1 ಕಿಲೋ ಮೀಟರ್ ರೈಲ್ವೇ ಟ್ರ್ಯಾಕ್ ಮೇಲೆ ನಡ್ಕೊಂಡು ಹೋಗ್ಬೇಕಾಯ್ತು ಸ್ಪಾಟ್ ತಲುಪೋಕೆ..
ಆಗಲೇ ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳೆಲ್ಲ ಸ್ಥಳದಲ್ಲಿ ಜಮಾಯಿಸಿದ್ರು.. ನಜ್ಜುಗುಜ್ಜಾದ ಬೋಗಿಗಳನ್ನು ರೈಲ್ವೇ ಟ್ರ್ಯಾಕ್ ನಿಂದ ಬದಿಗೆ ಸರಿಸುವ ಕೆಲಸ ಒಂದ್ಕಡೆ ನಡೀತಿತ್ತು.. ಮತ್ತೊಂದೆಡೆ ಕಿತ್ತು ಹೋದ ಟ್ರ್ಯಾಕ್ ಗಳನ್ನು ಸರಿಪಡಿಸುವ ಕೆಲಸ ಆರಂಭವಾಗಿತ್ತು.. ಹೋದ ಕೂಡ್ಲೇ ಒಂದು ವಾಕ್ ಥ್ರೂ ಕೊಟ್ಟೆ... ಅಷ್ಟೊತ್ತಿಗಾಗ್ಲೇ ಆಫೀಸಿನಿಂದ ಫೋನ್ ಮೇಲೆ ಫೋನ್ ಬರೋಕೆ ಶುರುವಾಗಿತ್ತು.. ಕ್ಯಾಸೆಟ್ ಓಬಿಗೆ ಇನ್ನೂ ಕೊಟ್ಟಿಲ್ವಾ.. ಡಂಪ್ ಆಯ್ತಾ.. ಅಂತೆಲ್ಲ.. ಓಬಿ ವ್ಯಾನ್ ನಾವಿದ್ದ ಜಾಗದಿಂದ 1 ಕಿಲೋಮೀಟರ್ ದೂರದಲ್ಲಿತ್ತು.. ಹಾಗಾಗಿ ನಡ್ಕೊಂಡು ಹೋಗಿ ಕ್ಯಾಸೆಟ್ ಕೊಟ್ಟು ಬರೋಕೆ ಲೇಟ್ ಆಗಿತ್ತು.. ಆದ್ರೂ ನಮ್ಮ ಚೆನ್ನೈ ಕ್ಯಾಮೆರಾಮ್ಯಾನ್ ಶ್ರೀಕಾಂತ್ ತಾನೇ ಕ್ಯಾಸೆಟ್ ನ ಓಬಿ ಹತ್ರ ಕೊಟ್ಟು ಬಂದಿದ್ದ.. 10 ಗಂಟೆಯಾಗ್ತಿದ್ದಂಗೆ ಬಿಸಿಲಿನ ತಾಪ ಹೇಗಿದೆ ಅನ್ನೋದು ಅರಿವಿಗೆ ಬಂದಿತ್ತು.. ಬೆಂಗ್ಳೂರಲ್ಲಿ ಮಟ ಮಟ ಮಧ್ಯಾಹ್ನ ಸ್ವಲ್ಪ ಬಿಸಿಲು ಜಾಸ್ತಿ ಇದ್ರೆ ಸಾಕು.. ಅಬ್ಬಾ ಏನು ಸೆಕೆ ಅಂತಿದ್ವಿ.. ಅಂತಾದ್ರಲ್ಲಿ ಅಲ್ಲಿ 10 ಗಂಟೆಗೆ ನಿಲ್ಲೋಕಾಗ್ತಿರ್ಲಿಲ್ಲ..
ಹಾಗೆ ಮತ್ತೊಂದು ವಾಕ್ ಥ್ರೂ ಕೊಟ್ಟು ಸೆಕೆಂಡ್ ಟೈಮ್ ನಾನೇ ಕ್ಯಾಸೆಟ್ ತಗೊಂಡು ಓಬಿ ವ್ಯಾನ್ ಹತ್ರಕ್ಕೆ ಹೋಗಿದ್ದೆ... ಕ್ಯಾಸೆಟ್ ಡಂಪ್ ಮಾಡಿದ್ಮೇಲೆ ಪೊಲೀಸರ ಜೊತೆಗೆ ಮನವಿ ಮಾಡ್ಕೊಂಡು ಹೇಗೋ ಓಬಿ ವ್ಯಾನ್ ನ ರೈಲ್ವೇ ಗೇಟ್ ದಾಟಿಸಿ ಮತ್ತೊಂದು ಬದಿಗೆ ತಂದಿದ್ವಿ.. ಅಲ್ಲಿ ಪೊಲೀಸರು ಮತ್ತೆ ನಮ್ಮನ್ನು ಅಡ್ಡ ಹಾಕಿದ್ರು.. ಅವ್ರ ಬಳಿ ಕಾಡಿ ಬೇಡಿ ರೈಲ್ವೇ ಟ್ರ್ಯಾಕ್ ಸಮೀಪದಲ್ಲೇ ಇರುವ ಪ್ಯಾರಲಲ್ ರೋಡ್ ನಲ್ಲಿ ಒಂದಷ್ಟು ದೂರ ಹೋದ್ವಿ.. ರಸ್ತೆ ಕಿರಿದಾಗಿದ್ದು ಒಂದು ವಾಹನ ಹೋಗೋವಷ್ಟು ಮಾತ್ರ ಜಾಗವಿತ್ತು.. ಅಷ್ಟು ಕಿರಿದಾದ ರಸ್ತೆಯಲ್ಲಿ ಆಗ್ಲೇ ಪೊಲೀಸರ ವಾಹನಗಳು ಸಾಲಾಗಿ ನಿಂತಿದ್ವು.. ಜೊತೆಗೆ ಹಿಂದಿನ ದಿನ ರಾತ್ರಿಯೇ ಬಂದಿದ್ದ ನ್ಯಾಷನಲ್ ಮತ್ತು ಕೆಲವು ಸ್ಥಳೀಯ ಟಿವಿ ಚಾನಲ್ ಗಳ ಓಬಿ ವ್ಯಾನ್ ಗಳು ರಸ್ತೆ ಪಕ್ಕ ಪಾರ್ಕ್ ಆಗಿತ್ತು...
ಹಾಗೂ ಹೀಗೂ ಸಾಹಸ ಮಾಡಿ ನಮ್ಮ ಓಬಿ ವ್ಯಾನನ್ನು ರೈಲು ಅಪಘಾತ ನಡೆದ ಸ್ಥಳದ ಸಮೀಪಕ್ಕೆ ತಂದಿದ್ವಿ. ಹಾಗಾಗಿ ವಿಸುವಲ್ಸ್ ಕಳ್ಸೋಕೆ ತುಂಬಾ ಅನುಕೂಲ ಆಯ್ತು.. ಮಧ್ಯಾಹ್ನ 12 ಗಂಟೆ ನ್ಯೂಸ್ ಗೆ ಲೈವ್ ಚಾಟ್ ಕೊಟ್ಟಾಯ್ತು.. ಅಷ್ಟೊತ್ತಿಗಾಗ್ಲೇ ಹೊಟ್ಟೆ ಚುರುಗುಟ್ಟೋಕೆ ಆರಂಭವಾಗಿತ್ತು. ಮಧ್ಯಾಹ್ನದ ಆ ಉರಿಬಿಸಿಲಿನ ಜೊತೆಗೆ ಬಿಸಿಲಿನ ಝಳ.. ಓಬಿ ವ್ಯಾನ್ ನಲ್ಲಿದ್ದ ನೀರು ಖಾಲಿಯಾಗಿತ್ತು.. ನಮ್ಮ ಓಬಿ ಡ್ರೈವರ್ ತಿಮ್ಮೇಶ್ ಬೇರ್ಯಾವುದೇ ಓಬಿ ವ್ಯಾನ್ ನಲ್ಲಿದ್ದ ನೀರು ತಂದುಕೊಟ್ಟು ಸದ್ಯಕ್ಕೆ ಬಾಯಾರಿಕೆ ನೀಗಿಸಿದ್ದ. ಆದ್ರೆ ಹಸಿವು ಮಾತ್ರ ಕಡಿಮೆಯಾಗ್ಲಿಲ್ಲ. ಗಂಟೆ 1.30 ಆಗ್ತಿದ್ದಂಗೆ ರೈಲ್ವೇ ಖಾತೆ ಸಚಿವ ದಿನೇಶ್ ತ್ರಿವೇದಿ, ರಾಜ್ಯ ಸಹಾಯಕ ಸಚಿವ ಮುನಿಯಪ್ಪ ಮತ್ತಿತರ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ರು. ಆ ನೂಕು ನುಗ್ಗಲಿನಲ್ಲಿ ಬೈಟ್, ವಿಸುವಲ್ಸ್ ತಗೊಂಡು ಕಳಿಸುವಷ್ಟರಲ್ಲಿ ಸಾಕಾಗಿ ಹೋಗಿತ್ತು. ಇವೆಲ್ಲ ಮುಗಿದಾಗ ಗಂಟೆ 3 ಆಗಿತ್ತು. ಹಸಿವಿನಿಂದ ಕಣ್ಣು ಕಾಣದಂತ ಪರಿಸ್ಥಿತಿ. ಬೆಳಿಗ್ಗೆ ತಿಂಡಿ ಸಹ ಮಾಡಿರಲಿಲ್ಲ. ಎಲ್ಲಾದ್ರೂ ತಿನ್ನೋಕೆ ಏನಾದ್ರೂ ತೆಗೆದುಕೊಂಡು ಬರೋಣ ಅಂದ್ಕೊಂಡ್ರೆ ಅಂಗಡಿಗಳೇ ಇಲ್ಲ.
ಓಬಿ ವ್ಯಾನ್ ನಲ್ಲಿ ವಿಸುವಲ್ಸ್ ಸೆಂಡ್ ಆಗ್ತಿರ್ಬೇಕಾದ್ರೆ ನಮ್ಮ ಓಬಿ ಡ್ರೈವರ್ ತಿಮ್ಮೇಶ್ ಹೋಗಿ ಎಲ್ಲಿಂದಲೋ ಒಂದು ಬೇಯಿಸಿದ ಮೊಟ್ಟೆ ತೆಗೆದುಕೊಂಡು ಬಂದ. ಆ ಮೊಟ್ಟೆಯನ್ನು ನಾನು, ಕ್ಯಾಮೆರಾಮ್ಯಾನ್ ನರೇಶ್, ಓಬಿ ಇಂಜಿನಿಯರ್ ಪ್ರಕಾಶ್ ಮತ್ತು ಡ್ರೈವರ್ ತಿಮ್ಮೇಶ್ ನಾಲ್ಕು ಪೀಸ್ ಮಾಡಿ ತಿಂದ್ವಿ. ಆದ್ರೆ ಅದು ನಮ್ಮ ಹೊಟ್ಟೆಯ ಯಾವ ಮೂಲೆಗೂ ಸಾಕಾಗಲಿಲ್ಲ. ಮತ್ತೆ ಸ್ವಲ್ಪ ಹೊತ್ತಿನ ನಂತ್ರ ತಿಮ್ಮೇಶ್ ನಾಲ್ಕು ಬೆರಳಿನಷ್ಟುದ್ದದ ಬಾಳೆಹಣ್ಣು ತಗೊಂಡು ಬಂದ. ಆದ್ರೆ ಆ ನಾಲ್ಕರಲ್ಲಿ 1 ಬಾಳೆಹಣ್ಣು ಹಾಳಾಗಿ ಹೋಗಿತ್ತು. ಹಾಗಾಗಿ ಮೂರು ಬಾಳೆಹಣ್ಣನ್ನು ಪೀಸ್ ಮಾಡಿ ನಾಲ್ವರು ತಿಂದಿದ್ವಿ. ಮುಂದೇನು ಮಾಡೋದು ಅಂತ ಹಾಗೆ ವ್ಯಾನ್ ನಲ್ಲಿ ಕೂತಿರ್ಬೇಕಾದ್ರೆ ರೈಲ್ವೇ ಪೊಲೀಸ್ ಸಮವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬ ಬಂದ. ಸಾರ್ ನಾನು ಮೈಸೂರಿನವನು ಎಂದು ಹೇಳಿ ಪರಿಚಯ ಮಾಡಿಸಿಕೊಂಡು, ನಂತ್ರ ಊಟ ಆಯ್ತಾ ಕೇಳ್ದ. ಊಟ ಎಲ್ಲಿ ಸಾರ್ ತಿಂಡಿನೇ ಆಗಿಲ್ಲ ಅಂತ ನಾವು ಹೇಳಿದ ಕೂಡ್ಲೇ ಆ ರೈಲ್ವೇ ಪೊಲೀಸ್ ಎಲ್ಲಿಂದಲೋ ನಾಲ್ಕು ಬೇಯಿಸಿದ ಮೊಟ್ಟೆ ತೆಗೆದುಕೊಂಡು ಬಂದು ಕೊಟ್ಟ. ಸಿಕ್ಕಿದ್ದೇ ತಡ ನಾಲ್ವರೂ ಒಂದೊಂದು ಮೊಟ್ಟೆ ತಿಂದ್ವಿ. ಕನಿಷ್ಠ ಆ ಪೊಲೀಸ್ ಗೆ ನಿಮ್ಗೆ ಬೇಕಾ ಅಂತನೂ ಕೇಳಿರಲಿಲ್ಲ. ಹಸಿದ ಹೊಟ್ಟೆಯ ತಾಳದ ಮಧ್ಯೆ ಏನೂ ಗೊತ್ತಾಗ್ತಿರ್ಲಿಲ್ಲ.
ಒಮ್ಮೊಮ್ಮೆ ಊಟ ಸಾಕು ಅಂತ ಅರ್ಧ ತಿಂದು ಎಸೆದಿದ್ದ ಘಟನೆಗಳೆಲ್ಲ ನೆನಪಾಗಿತ್ತು ಅವಾಗ. ಅಥವಾ ಚೆನ್ನಾಗಿಲ್ಲ ಅಂತ ತಂದಿದ್ದ ಊಟ-ತಿಂಡಿ ಬೇಡಾಂತ ಎಸೀತೀವಿ. ಆದ್ರೆ ಅರಕ್ಕೋಣಂನ ಉರಿಬಿಸಿಲಿನಲ್ಲಿ ಹೊಟ್ಟೆಗೆ ಹಿಟ್ಟಿಲ್ಲದೆ ಪರದಾಡ್ತಿದ್ದಾಗ ಅವೆಲ್ಲವೂ ನೆನಪಾಯ್ತು..
ಅಷ್ಟೊತ್ತಿಗೆ ನಮ್ಮ ನ್ಯೂಸ್ 9 ರಿಪೋರ್ಟರ್ ತನ್ನ ಕೆಲಸ ಮುಗಿಸಿಕೊಂಡು ಕ್ವಾಲಿಸ್ ನಲ್ಲಿ ವಾಪಾಸ್ ಬಂದಿದ್ರು. ಪುಣ್ಯಕ್ಕೆ ನಮ್ಮ ಕ್ವಾಲಿಸ್ ಡ್ರೈವರ್ ಜೊತೆಗೆ ನಾಲ್ಕೈದು ಊಟ ಪಾರ್ಸೆಲ್ ಕಟ್ಟಿಸಿಕೊಂಡು ಬಂದಿದ್ದ. ಮೈನ್ ರೋಡ್ ಗೆ ಬಂದು ರಸ್ತೆ ಪಕ್ಕದಲ್ಲಿ ಮರದ ನೆರಳಿನಲ್ಲಿ ಗಾಡಿ ಪಾರ್ಕ್ ಮಾಡಿ ಪಾರ್ಸೆಲ್ ತಂದಿದ್ದ ಊಟ ತಿನ್ಬೇಕಾದ್ರೆ ಏನೋ ನೆಮ್ಮದಿ..
Saturday, September 24, 2011
ಪಿಯುಸಿ ಫಸ್ಟ್ ಇಯರ್ ಸೇರೋಕೆ ಕಾಲೇಜಿಗೆ ಹೋದಾಗ ಕೆಲವು ಹೈಸ್ಕೂಲ್ ಗೆಳೆಯರು ಜೊತೆಗಿದ್ರು.. ಆದ್ರೆ ಕೆಲವರು ಸೈನ್ಸ್ ತೆಗೆದುಕೊಂಡ್ರು.. ಇನ್ನೂ ಕೆಲವರು ಕಾಮರ್ಸ್ ಸೇರಿದ್ರು.. ನಾನು ಮಾತ್ರ ಅದೇ ಮಾಮೂಲಿ ಆರ್ಟ್ಸ್ ಚೂಸ್ ಮಾಡ್ದೆ...
ಹೈಸ್ಕೂಲ್ ಗೆಳೆಯರಲ್ಲೊಬ್ಬನಾದ ರಾಜೇಶ್ ನಂಗೆ ಪಿಯುಸಿಯಲ್ಲಿ ಬೆಂಚ್ ಮೇಟ್.. ನಾವೆಲ್ಲರೂ ಅವನನ್ನೂ ಗಾರ್ಡ ಎಂದೇ ಕರೀತಿದ್ವಿ.. ಪ್ರತಿ ಕ್ಲಾಸ್ ನಲ್ಲೂ ನಾನೂ ಅವ್ನೂ ಜೊತೆಗೇ ಕೂರ್ತಿದ್ವಿ.. ಕಾಲೇಜು ಸೇರಿದ ಮೊದ ಮೊದಲು ನಾನು ತುಂಬಾನೇ ಒಬೀಡಿಯೆಂಟ್ ಸ್ಟೂಡೆಂಟ್ ಥರ ಇದ್ದೆ.. ಕ್ಲಾಸ್ ನಲ್ಲಿ ಕೂತು ನೆಟ್ಟಗೆ ಪಾಠ ಕೇಳ್ತಿದ್ದೆ.. ಆದ್ರೆ ಜೊತೆಗಿದ್ನಲ್ಲಾ.. ಗಾರ್ಡ.. ಅವ್ನು ಬರೀ ತಲೆಹರಟೆ.. ಒಂದಿನಾನೂ ನೆಟ್ಟಗೆ ಕ್ಲಾಸ್ ನಲ್ಲಿ ಪಾಠ ಕೇಳೋಕೆ ಬಿಡ್ತಿರ್ಲಿಲ್ಲ.. ಏನಾದ್ರೂ ವಟ ವಟಾಂತ ಮಾತಾಡ್ತಾನೆ ಇರ್ತಿದ್ದ.. ಅವ್ನಿಂದಾಗಿ ನಾನೂ ಕ್ಲಾಸ್ ಕಡೆಗೆ ಗಮನ ಹರಿಸ್ತಿರ್ಲಿಲ್ಲ.. ಜೊತೆಗೆ ಆ ಹುಡುಗಿ ನೋಡು, ಈ ಹುಡುಗಿ ನೋಡು ಎಂದೆಲ್ಲ ಹೇಳಿ ಕಾಡಿಸ್ತಿದ್ದ.. ನಾವಿಬ್ರೂ ಕ್ಲಾಸ್ ನಲ್ಲಿ ಕಿತಾಪತಿ ಮಾಡ್ತೀವಿ ಅಂತ ಹೇಳಿ ತುಂಬಾ ಸಲ ಲೆಕ್ಚರರ್ಸ್ ಗೆಟ್ ಔಟ್ ಹೇಳಿದ್ದೂ ಇದೆ.. ಹಾಗೆ ಕ್ಲಾಸ್ ನಿಂದ ನಾವಿಬ್ರೂ ಹೊರಗಡೆ ಹೋಗ್ಬೇಕಾದ್ರೆ ಉಳಿದವರೆಲ್ಲ ಕಿಸಿ ಕಿಸಿ ನಗ್ರಿದ್ರು.. ಆದ್ರೆ ಗಾರ್ಡ ಮಾತ್ರ ಟೆನ್ಶನ್ ಮಾಡ್ಕೋತಿರ್ಲಿಲ್ಲ.. ನಾನು ಛೇ ಕ್ಲಾಸ್ ಮಿಸ್ ಆಯ್ತಲ್ಲಾ ಅಂದ್ರೆ, ಅವ್ನು ಮಾತ್ರ, ಹೋಗ್ಲಿ ಬಿಡು, ಅಟೆಂಡೆನ್ಸ್ ಸಿಕ್ತು.. ಇನ್ನು ವನ್ ಹವರ್ ಫ್ರೀ ಅಂತ ಹೇಳಿ ನನ್ನನ್ನು ಕರ್ಕೊಂಡು ಬಾಯ್ಸ್ ರೂಂಗೆ ಹೋಗ್ತಿದ್ದ.. ಅಲ್ಲಿ ಮತ್ತದೇ ಪಟ್ಟಾಂಗ..
ಪಿಯುಸಿ ಫಸ್ಟ್ ಇಯರ್ ನಲ್ಲಿದ್ದಾಗ್ಲೇ ನನ್ನ ಫಸ್ಟ್ ಲವ ಸ್ಟೋರಿ ಸ್ಟಾರ್ಟ್ ಆಗಿದ್ದು.. ನಮ್ಮ ಕ್ಲಾಸ್ ನಲ್ಲೊಬ್ಳು ಹುಡುಗಿಯಿದ್ಳು.. ಅವಳ ಜೊತೆಗೆ ಮಾತಾಡೋಕೂ ಶುರು ಮಾಡಿರ್ಲಿಲ್ಲ.. ಆಗ್ಲೇ ನಂಗೆ ಅವಳ ಮೇಲೆ ವಿಪರೀತ ಲವ್.. ಪಿಯುಸಿನಲ್ಲಿ ಎರಡು ವರ್ಷ ಕಳೆದ್ರೂ ನಾನು ಪ್ರೊಪೋಸ್ ಮಾಡಿರ್ಲಿಲ್ಲ..
ಪಿಯುಸಿನಲ್ಲಿ ಗಾರ್ಡ ಡುಮ್ಕಿ ಹೊಡ್ದ.. ಹಾಗಾಗಿ ಡಿಗ್ರಿಗೆ ಬಂದಾಗ ಅವನು ಮಿಸ್ ಆಗ್ಬಿಟ್ಟ.. ಆದ್ರೆ ದಾಮು ಜೊತೆಗಿದ್ದ.. ಹಾಗಾಗಿ ಅಷ್ಟೊಂದು ಬೋರ್ ಅನ್ಸಿಲ್ಲ.. ಇನ್ನು ಪಿಯುಸಿಯಲ್ಲಿದ್ದಾಗ್ಲೇ ಕೊಡಗಿನ ಹುಡುಗಿ ಜಯಶ್ರೀ ಪರಿಚಯ ಆಗಿದ್ದು.. ಆದ್ರೆ ಡಿಗ್ರಿಗೆ ಬರ್ತಿದ್ದಂಗೆ ಅವಳದ್ದು ಫೈನಲ್ ಇಯರ್ ಮುಗಿದಿತ್ತು.. ಮತ್ತೆ ಕಾಂಟ್ಯಾಕ್ಟ್ ಗೆ ಸಿಗಲೇ ಇಲ್ಲ.. ಇನ್ನು ಮೌಲ್ಯ ಇವಾಗ್ಲೂ ಟಚ್ ನಲ್ಲಿದ್ದಾಳೆ.. ಮದುವೆಯಾಗಿ ಒಂದು ಪುಟ್ಟ ಮಗ ಇದ್ದಾನೆ.. ಇನ್ನು ಕೆಲವರ ಹೆಸರು ಹೇಳೋದೇ ಬೇಡ... ಎಲ್ಲಾ ನಂಗಿಂತ ಸೀನಿಯರ್ಸ್.. ಹಾಂ, ಸುನಿಲ್ ಮತ್ತು ವಿನು ಅನ್ನೋ ಇಬ್ರು ಸೈನ್ಸ್ ಫ್ರೆಂಡ್ಸ್ ಇದ್ರು.. ಅವ್ರೂ ಸೀನಿಯರ್ಸೇ.. ಆದ್ರೂ ನಂಗೆ ಒಳ್ಳೆ ಫ್ರೆಂಡ್ಸ್ ಆಗಿದ್ರು.. ಸುನಿಲ್ ಸದ್ಯಕ್ಕೆ ಉಡುಪಿಯಲ್ಲಿದ್ದಾನೆ, ಆದ್ರೆ ವಿನು ಎಲ್ಲಿದ್ದಾನೋ ಗೊತ್ತಿಲ್ಲ.. ರಾಜೇಶ್ ಉಜಿರೆಯಲ್ಲಿ ಮೊಬೈಲ್ ಶಾಪ್ ಇಟ್ಕೊಂಡಿದ್ದಾನೆ.. ಸ್ಟಿಲ್ ಹ್ಯಾವ್ ಕಾಂಟ್ಯಾಕ್ಟ್...
ಡಿಗ್ರಿ ಸೇರ್ಕೊಂಡಾಗ ಅದ್ಯಾಕೋ ಗೊತ್ತಿಲ್ಲ, ಜರ್ನಲಿಸಂ ಸಬ್ಜೆಕ್ಟ್ ತಗೊಂಡೆ.. ಜೊತೆಗೆ ಇಂಗ್ಲೀಷ್ ಲಿಟರೇಚರ್ ಮತ್ತು ಡಾಟಾ ಪ್ರೋಸೇಸಿಂಗ್.. ಫಸ್ಟ್ ಇಯರ್ ಡಿಗ್ರಿಯಲ್ಲಿ ನಂಗೆ ಬೆಂಚ್ ಮೇಟ್ ಆಗಿದ್ದು ಸ್ಟ್ಯಾನಿ ಪಿಂಟೋ, ಬಿಜು ವರ್ಗೀಸ್, ಚೇತನ್, ಪುಷ್ಪರಾಜ್ ಮೊದಲಾದವರು.. ದಿನ ಹೋಗ್ತಿದ್ದಂಗೆ ತುಂಬಾ ಜನ ಫ್ರೆಂಡ್ಸ್ ಆದ್ರೂ.. ದೀಕ್ಷಾ, ಅಕ್ಷತಾ, ಯಾಮಿನಿ, ಶಾಂತಲಾ, ಶ್ವೇತಾ.. ಹೀಗೆ ಪಟ್ಟಿ ಬೆಳೀತಾನೇ ಹೋಗತ್ತೆ.. ಬಟ್ ಮೋಸ್ಟ್ ಮೆಮೊರಬಲ್ ಅಂದ್ರೆ ಸ್ಟ್ಯಾನಿ.. ಮೂರು ವರ್ಷದ ಡಿಗ್ರಿ ಲೈಫ್ ನಲ್ಲಿ ನಾನು ಅವ್ನೂ ಬಹುತೇಕ ಜೊತೆಗೇ ಇದ್ವಿ... ಸಂಜೆ 5 ಗಂಟೆಯಿಂದ ನೆಕ್ಟ್ ಡೇ 9 ಗಂಟೆ ಟೈಮ್ ಬಿಟ್ಟು... ರಜಾ ದಿನಗಳಂದೂ ಕೆಲವೊಮ್ಮೆ ಒಟ್ಟಿಗೆ ಇರ್ತಿದ್ವಿ...
ನಾನು ಸ್ಟ್ಯಾನಿ ಒಟ್ಟಿಗೆ ಸೇರಿ ಮಾಡ್ಕೊಂಡ ಚೇಷ್ಟೆಗಳು ಒಂದೆರಡಲ್ಲ.. ಇದಕ್ಕೆಲ್ಲ ಪುಷ್ಪರಾಜ್ ಮತ್ತು ಚೇತನ್ ಸಾಥ್ ನೀಡ್ತಿದ್ದ.. ಜೊತೆಗೆ ದಾಮು ಕೂಡ.. ಆದ್ರೆ ನಮ್ಮ ಚಿಪ್ಸ್ ಬಿಜು ಮಾತ್ರ ಬುದ್ಧಿ ಹೇಳ್ತಿದ್ದ... ಯಾಕಂದ್ರೆ ಅವ್ನು ಡಿಗ್ರಿಗೆ ಬರೋ ಮೊದ್ಲು ಒಂದರೆಡು ವರ್ಷ ಫಿಲಾಸಫಿ ಓದಿ ನಂತ್ರ ಅರ್ಧಕ್ಕೆ ಬಿಟ್ಟು ಬಂದಿದ್ದ.. ವಯಸಲ್ಲಿ ನಮಗಿಂತಲೂ ಸ್ವಲ್ಪ ದೊಡ್ಡವನು.. ಸ್ವಲ್ಪ ಅಂದ್ರೆ.. ಬೇಡ ಬಿಡಿ.. ಬಿಜು ಕ್ಲಾಸ್ ಗೆ ತರ್ತಿದ್ದ ಚಿಪ್ಸ್ ಮಾತ್ರ ಸೂಪರ್.. ನಾವೆಲ್ಲ ಕಿತ್ತಾಡ್ಕೊಂಡು ತಿನ್ತಿದ್ವಿ..
ಈ ಮಧ್ಯೆ ನಮ್ ಸ್ಟ್ಯಾನಿ ಸ್ಟಾರ್ಟ್ ಮಾಡಿದ್ದ ಆ ಮ್ಯಾಗಜಿನ್ ಮಾತ್ರ ಸೂಪರಾಗಿತ್ತು.. ಅದ್ರ ಹೆಸರು ಬೇಡ ಅನ್ಸತ್ತೆ.. ಬಹುಷ ಆ ಮ್ಯಾಗಜಿನ್ ಸ್ಟಾರ್ಟ್ ಆದಮೇಲೆ ಸುನಿಲ್ ಹೆಗ್ಡೆ, ರಾಘವ್ ಶರ್ಮನಂತಹ ಕೆಲವು ಫಸ್ಟ್ ಬೆಂಚಿನ ವಿದ್ಯಾರ್ಥಿಗಳು ನಮ್ಗೆ ಕ್ಲೋಸ್ ಆದ್ರೂ.. ಸಿದ್ಧವನದ ಗೆಳೆಯರ ಸಪೋರ್ಟ್ ಅಂತೂ ಯಾವತ್ತೂ ಇತ್ತು..
ಸೆಕೆಂಡ್ ಇಯರ್ ನಲ್ಲಿದ್ದಾಗ ಕಾಲೇಜು ಡೇ ಟೈಮ್ ನಲ್ಲಿ ಮಾಡಿದ್ದ ಫ್ಯಾನ್ಸಿ ಡ್ರೆಸ್ ಕಾಂಪಿಟೇಷನ್ ಅನ್ ಫೊರ್ಗೆಟೆಬಲ್.. ಸಬ್ಜೆಕ್ ಕಂಬಳ.. ತುಳುನಾಡಿನ ಆಟಗಳಲ್ಲೊಂದು.. ಅವತ್ತು ಕಂಬಳಕ್ಕಾಗಿ ಎಲ್ಲಾ ಸಿದ್ಧತೆ ಮಾಡ್ಕೊಂಡಿದ್ವಿ.. ಪುಷ್ಪರಾಜ್, ಸ್ಟ್ಯಾನಿ ಎಲ್ಲಾ ಸೇರ್ಕೊಂಡು ರತ್ನಮಾನಸದಿಂದ ಎತ್ತುಗಳನ್ನು ಕಂಬಳಕ್ಕೆ ರೆಡಿ ಮಾಡ್ಕೊಂಡು ಬರೋಕೆ ಹೋಗಿದ್ರು... ರತ್ನಮಾನಸದ ವಾರ್ಡನ್ ಎರಡು ಎತ್ತುಗಳನ್ನು ಚೆನ್ನಾಗಿ ತೊಳೆದು, ಕಟ್ಟಿ ಹಾಕಿದ್ರು.. ನಮ್ಮ ಹುಡುಗರು ಆ ಎತ್ತುಗಳನ್ನು ಹಗ್ಗ ಬಿಚ್ಚಿದ್ದೇ ತಡ,, ನಾಗಾಲೋಟದಿಂದ ರತ್ನಮಾನಸದ ತೋಟದೊಳಗೆ ಓಡಿ ಹೋಯ್ತು.. ನಾನು ಮತ್ತು ದಾಮು ರತ್ನಮಾನಸಕ್ಕೆ ಹೋದ್ರೆ ಎಲ್ರೂ ಆ ಎತ್ತುಗಳ ಹಿಂದೆ ಓಡ್ತಿದ್ರು.. ವಾರ್ಡನ್, ರತ್ನಮಾನಸದ ಸ್ಟೂಡೆಂಟ್ಸ್, ಕೆಲಸದವರು ಎಲ್ಲಾ ಅದ್ರ ಹಿಂದೆ ಹೋದ್ರೂ ಪ್ರಯೋಜನವಾಗಲಿಲ್ಲ.. ಕೊನೆಗೆ ಅಲ್ಲಿದ್ದ ಎರಡು ಪುಟ್ಟ ಕರುಗಳೊಂದಿಗೆ ಕಾಲೇಜಿಗೆ ವಾಪಾಸ್ ಬಂದ್ವಿ.. ಎತ್ತಿನ ಬದಲು ಕರುಗಳನ್ನೇ ಒಂದು ಜೊತೆ ಕಂಬಳದಲ್ಲಿ ಓಡಿಸಿದ್ವಿ.. ಮತ್ತೊಂದು ಜೊತೆಗೆ ಸ್ಟ್ಯಾನಿ ಮತ್ತು ರಿತೇಶ್ ತಲೆ ಮೇಲೆ ಕಂಬಳಿ ಹಾಕೊಂಡು ಎತ್ತುಗಳಂತೆ ಓಡಿದ್ರು.. ಅದನ್ನೆಲ್ಲ ಜೀವಮಾನದಲ್ಲಿ ಮರೆಯೋಕಾಗಲ್ಲ..
ಸೆಕೆಂಡ್ ಇಯರ್ ಡಿಗ್ರಿನಲ್ಲಿದ್ದಾಗ್ಲೇ ನಮ್ಮ ಬಿಜು ಎಲೆಕ್ಷನ್ ಗೆ ನಿಂತಿದ್ದ.. ಎಲೆಕ್ಷನ್ ಆಯ್ತು.. ಬಿಜು ಕ್ಲಾಸ್ ರೆಪ್ರೆಸೆಂಟೇಟೀವ್ ಆಗಿ ಗೆದ್ದು ಬಿಟ್ಟಿದ್ದ.. ಅದ್ರ ಅಂಗವಾಗಿ ಸ್ವಪ್ನಾ ಬಾರ್ ಆಂಡ್ ರೆಸ್ಟೋರೆಂಟ್ ಗೆ ಹೋಗಿದ್ವಿ.. ಪಾರ್ಟಿ ಸೆಲೆಬ್ರೇಷನ್ ಗೆ.. ಕೆಲವ್ರೆಲ್ಲ ಲೈಟಾಗಿ ಎಣ್ಣೆ ಏರಿಸಿಕೊಂಡಿದ್ರು.. ಪಾರ್ಟಿ ಎಲ್ಲಾ ಮುಗಿಸ್ಕೊಂಡು ಹೊರಗಡೆ ಬಂದಿದ್ವಿ.. ಯಾವ್ದೋ ಮಾರುತಿ 800 ನಿಂತಿತ್ತು.. ಸ್ವಲ್ಪ ಮತ್ತೇರಿದ್ದ ಬಿಜು ಒಂದು ಡೈಲಾಗ್ ಹೊಡೆದ.. ಚಾರ್ಜರ್ ಕೊರ್ಯೆ, ಮೊಬೈಲ್ ಕೊರ್ಯೆ.. ಥ್ಯಾಂಕ್ಸ್ ಬೊಡ್ಚಿ.. ಒಂಜಿ ವೋಟ್ ಪಾಡ್ಯಾಲಾ... ಅಂದ್ರೆ, ಚಾರ್ಜರ್ ಕೊಟ್ಟೆ, ಮೊಬೈಲ್ ಕೊಟ್ಟೆ.. ಥ್ಯಾಂಕ್ಸ್ ಬೇಡ.. ಆದ್ರೆ ಒಂದು ವೋಟ್ ಹಾಕಿದ್ಳಾ... ಇದು ನಮ್ಮದೇ ತರಗತಿಯ ಹುಡುಗಿಯೊಬ್ಬಳ ಬಗ್ಗೆ ಬಿಜು ಹೇಳಿದ ಡೈಲಾಗ್ ಆಗಿತ್ತು.. ಇವತ್ತಿಗೂ ಬಿಜು ಅಂದ್ರೆ ಆ ಡೈಲಾಗ್ ನೆನಪಾಗತ್ತೆ.. ಮತ್ತೂ ಮಜಾ ಅಂದ್ರೆ ಒಂದಿನ ಕ್ಲಾಸ್ ನಲ್ಲಿ ಫ್ರೀ ಟೈಮ್ ಇದ್ದಾಗ ಸ್ಕಿಟ್ ಮಾಡಿದ್ವಿ.. ಜೊತೆಗೆ ಬಿಜು ಕೂಡ ಇದ್ದ.. ಆದ್ರೆ ಬಿಜುಗೆ ನಾವು ಯಾವ ಸ್ಕಿಟ್ ಮಾಡ್ತಿದ್ದೀವಿ ಅನ್ನೋದೇ ಗೊತ್ತಿರ್ಲಿಲ್ಲ.. ಅಲ್ಲಿ ನಾನು, ದಾಮು, ಸ್ಟ್ಯಾನಿ ಎಲ್ಲಾ ಸೇರ್ಕೊಂಡು ಮಾಡಿದ್ದು ಅದೇ ಬಿಜುನ ಡೈಲಾಗ್ ಸ್ಕಿಟ್ ನ... ಬಿಜು ಬೈದಿಲ್ಲ ಅಷ್ಟೇ.. ಆದ್ರೆ ಅವ್ನ ಮುಖ ಸಣ್ಣಗಾಗಿ ಹೋಗಿತ್ತು.. ಮತ್ತೆ ಅವ್ನಿಗೆ ಹೇಗೋ ಸಮಾಧಾನ ಮಾಡೋವಷ್ಟರಲ್ಲಿ ಸಾಕಾಗಿ ಹೋಗಿತ್ತು..
ಫೈನಲ್ ಇಯರ್ ನಲ್ಲಿದ್ದಾಗ ಫ್ಯಾನ್ಸಿ ಡ್ರೆಸ್ ಕಾಂಪಿಟೇಷನ್ ಗೆ ಆಯ್ಕೆ ಮಾಡ್ಕೊಂಡಿದ್ದು ಹಿಜಿಡಾ ಸಮಾವೇಶ.. ನಾನು, ಸ್ಟ್ಯಾನಿ, ಬಿಜು, ಪುಷ್ಪರಾಜ, ಗುರುಪ್ರಸಾದ್ ಎಲ್ಲಾ ಸೇರ್ಕೊಂಡು ಅದಕ್ಕೆ ಅಣಿಯಾಗಿದ್ವಿ.. ಕ್ಲಾಸ್ ನಲ್ಲಿದ್ದ ಸಹೃದಯಿ ಗೆಳತಿಯರು ತಮ್ಮ ಚೂಡಿದಾರ್ ಗಳನ್ನು ನಮಗೆ ಕೊಟ್ಟಿದ್ರು.. ಮುಖಕ್ಕೊಂದಿಷ್ಟು ಬಣ್ಣ ಹಚ್ಕೊಂಡು, ತುಟಿಗೆಲ್ಲ ಲಿಪ್ ಸ್ಟಿಕ್ ಪದರ ಹಾಕಿ, ಏನೇನೋ ಮಾಡ್ಕೊಂಡು ಹಿಜಿಡಾ ಆಗಿ ರೆಡಿಯಾಗಿದ್ವಿ.. ನಮ್ಮ ತರಗತಿಯ ಕೆಲವು ಗೆಳತಿಯರು ನಮಗೆ ಮೇಕ್ ಅಪ್ ಮಾಡೋಕೆ ಹೆಲ್ಪ್ ಮಾಡಿದ್ರು.. ಕಾಲೇಜು ಗ್ರೌಂಡ್ ನಲ್ಲಿ ನಾವು ಸುಮಾರು 20 ಹುಡುಗರು, ಹಿಜಿಡಾ ವೇಷದಲ್ಲಿ ಮಿಂಚಿದ್ವಿ.. ದಾಮು ಕೊಟ್ಟಿದ್ದ ಬ್ಯಾಕ್ ಗ್ರೌಂಡ್ ವಾಯ್ಸ್ ಅಂತೂ ಸೂಪರ್.. ಕೊನೆಯಲ್ಲಿ ಮೇರಾ ಅಂಗಾನೇಮೇ ತುಮ್ಹಾರಾ ನಾಮ್ ಅನ್ನೋ ಸಾಂಗ್ ಗೆ ಹೆಜ್ಜೆ ಹಾಕಿದ್ವಿ... ಕೊನೆಗೆ ಪುಷ್ಪರಾಜ್ ನ ಬೈಕ್ ನಲ್ಲಿ ವಾಪಾಸ್ ಹೋಗ್ತಿದ್ದಾಗ ಯಾರ್ದೋ ಚೂಡಿದಾರ್ ನ ವೇಲ್ ಹಿಂದಿನ ಚಕ್ರಕ್ಕೆ ಸಿಲುಕಿತ್ತು.. ಆದ್ರೆ ಅದೃಷ್ಟವಶಾತ್ ಯಾವುದೇ ಅಪಾಯ ಆಗಿಲ್ಲ...
ಇನ್ನು ವೆರೈಟಿ ಕಾಂಪಿಟೇಷನ್ ಗೆ ರಾತ್ರಿಯೆಲ್ಲಾ ಕಷ್ಟಪಟ್ಟು ಕೆಲಸ ಮಾಡಿದ್ವಿ.. ನೆಕ್ಟ್ ಡೇ ಫಸ್ಟ್ ಪ್ರೈಸ್ ನಮಗೇ ಬಂದಿತ್ತು.. ಇಂಗ್ಲೀಷ್ ಕ್ಲಾಸ್ ನಲ್ಲಿ ಕೂತು ಮಾಡಿದ್ದ ಕಿತಾಪತಿಗಳು ಒಂದೆರಡಲ್ಲ.. ಸದ್ಯ ಡೆಲ್ಲಿಯಲ್ಲಿ ಜನಶ್ರೀ ರಿಪೋರ್ಟರ್ ಆಗಿರೋ ರಾಘವ್ ಶರ್ಮಾನಿಗೆ ರಸ್ಕ್ ಕೊಟ್ಟಿದ್ದಂತೂ ಮರೆಯೋಕಾಗಲ್ಲ.. ರಾಘು ರಸ್ಕ್ ಬೇಕೇನೋ ಅಂತ ಹೇಳಿ ನಾನೇ ಕೊಟ್ಟಿದ್ದೆ.. ಪಾಪ ಅವ್ನು ತಗೊಂಡು ತಿಂದಿದ್ದ... ಶೇಕ್ಸ್ ಪಿಯರ್ ಬಗ್ಗೆ ಕ್ಲಾಸ್ ನಡೀತಿತ್ತು.. ಅವ್ನು ಅರ್ಧ ತಿಂದಾದ ಮೇಲೆ ಕೇಳ್ದ.. ರಸ್ಕ್ ಎಲ್ಲಿಂದ ಅಂತ.. ಮುಸಿ ಮುಸಿ ನಗ್ತಾ ನಿಧಾನಕ್ಕೆ ಹೇಳಿದ್ದೆ.. ಇಲ್ಲೇ ಕೆಳಗಡೆ ಬಿದ್ದಿತ್ತು ಕಣೋ.. ಪಾಪ ರಾಘವನ ಮುಖ ನೋಡ್ಬೇಕಾಗಿತ್ತು.. ಅತ್ತ ಉಗುಳೋಕೂ ಆಗಲ್ಲ, ಇತ್ತ ನುಂಗೋಕೂ ಆಗಲ್ಲ..
ನ್ಯೂ ಇಯರ್ ಸೆಲೆಬ್ರೇಷನ್ ನವತ್ತು ನೇತ್ರಾವತಿ ನದಿಯ ತಟದಲ್ಲಿ ನೈಟ್ ಕ್ಯಾಂಪ್ ಮಾಡಿದ್ವಿ.. ಅವತ್ತು ನದಿ ದಡದಲ್ಲಿ ಮರಳಲ್ಲಿ ಆರಡಿ ಉದ್ದದ ಹೊಂಡ ತೋಡಿದ್ವಿ. ನಂತ್ರ ಎಲ್ಲಾ ಸೇರ್ಕೊಂಡು ರಾಘವನನ್ನು ಆ ಹೊಂಡದಲ್ಲಿ ಹಾಕಿದ್ವಿ.. ಆದ್ರೆ ಮೇಲೆ ಮರಳು ಹಾಕಿ ಮುಚ್ಚಿಲ್ಲ.. ಅದ್ಕೇ ಇವಾಗ ಡೆಲ್ಲಿಯಲ್ಲಿ ಕೆಲ್ಸ ಮಾಡ್ತಿದ್ದಾನೆ...
ಹೀಗೆ ಕಾಲೇಜು ದಿನಗಳ ಸವಿನೆನಪುಗಳು ಒಂದೆರಡಲ್ಲ... ಒಂದಕ್ಕಿಂತ ಮತ್ತೊಂದು ವಿಭಿನ್ನ.. ಕಾಲೇಜು ಲೈಫ್ ಮುಗಿದು ನಾಲ್ಕು ವರ್ಷ ಕಳೆಯಿತು.. ಜೊತೆಗಿದ್ದ ಬಹುತೇಕ ಗೆಳೆಯರು ಇಂದು ಒಳ್ಳೆಯ ಪೊಸಿಷನ್ ನಲ್ಲಿದ್ದಾರೆ.. ಖುಷಿ ಆಗತ್ತೆ..
ತುಂಬಾ ಗೆಳೆಯರು ಇವತ್ತಿಗೂ ಕಾಂಟ್ಯಾಕ್ಟ್ ನಲ್ಲಿದ್ದಾರೆ.. ಆದ್ರೆ ಕೆಲವರು ಕಾರಣಾಂತರಗಳಿಂದ ಮಾತಾಡ್ತಿಲ್ಲ.. ಇನ್ನು ಕೆಲವರ ಜೊತೆಗೆ ಟಚ್ ಇಲ್ಲ.. ಎಲ್ಲಿದ್ದಾರೆ, ಏನ್ ಮಾಡ್ತಿದ್ದಾರೆ ಅನ್ನೋದೇ ಗೊತ್ತಿಲ್ಲ.. ಆದ್ರೆ ನಮ್ಮ ಕ್ಲಾಸ್ ನಲ್ಲಿದ್ದ 52 ಗೆಳೆಯರ ನೆನಪುಗಳೂ ಜೊತೆಗಿವೆ.. ಹೀಗೆ ಹಳೆಯ ನೆನಪುಗಳು ಇನ್ನೂ ಇವೆ.. ಮತ್ತೊಮ್ಮೆ ಬರೀತೀನಿ...
Saturday, November 27, 2010
ಕೊಲೆಗಡುಕನ ಮುಂದೆ...
ಖಾಸಗೀ ಟಿವಿ ವಾಹಿನಿಯೊಂದರಲ್ಲಿ ಅಪರಾಧ ವರದಿಗಾರನಾಗಿ ಕೆಲಸ ಮಾಡ್ತಿರೋ ನನಗೆ ಆ ದಿನವನ್ನು ಯಾವತ್ತಿಗೂ ಮರೆಯೋಕಾಗಲ್ಲ.. ಬೆಳ್ಳಂ ಬೆಳಗ್ಗೆ ಆರ್. ಟಿ.ನಗರದಲ್ಲಿ ಮರ್ಡರ್ ಆಗಿದೆ ಅಂತ ಗೊತ್ತಾಗಿದ್ದೆ ತಡ, ಬ್ರೇಕಿಂಗ್ ನ್ಯೂಸ್ ಕೊಡ್ತಾ ಸ್ಪಾಟ್ ತಲುಪಿದ್ದೆ.. ತಾಳಿ ಕಟ್ಟಿದ ಹೆಂಡತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಆ ಪಾಪಿ ಗಂಡ ಕೊಲೆಮಾಡಿದ್ದ.. ಪಾಪ ಎಲ್ಲವನ್ನೂ ಕಣ್ಣಾರೆ ಕಂಡಿದ್ದ ಇಬ್ಬರು ಮಕ್ಕಳನ್ನು ತಾಯಿ ಮನೆಯಲ್ಲಿ ಬಿಟ್ಟು ಗಂಡ ಪರಾರಿಯಾಗಿದ್ದ.. ನಾನು ಮತ್ತು ಮತ್ತೊಂದು ಖಾಸಗಿ ವಾಹಿನಿಯ ಗೆಳೆಯ ರಾಕೇಶ್ ಸ್ಪಾಟ್ ವಿಸುವಲ್ಸ್ ಮತ್ತು ಬೈಟ್ ತಗೊಂಡು ನೇರವಾಗಿ ಕಮಿಷನರ್ ಆಫೀಸಿಗೆ ಹೋಗಿದ್ದೆವು.. ಜಂಟಿ ಪೋಲಿಸ್ ಆಯುಕ್ತರಾದ ಅಲೋಕ್ ಕುಮಾರ್ ಬೈಟ್ ಬೇಕಾಗಿತ್ತು.. ಬೈಟ್ ತಗೊಂಡು ವಾಪಾಸ್ ಆಫೀಸಿಗೆ ಬಂದು ಸ್ಕ್ರಿಪ್ಟ್ ಕೊಟ್ಟು ಬೇರ್ಯಾವುದೋ ಕೆಲಸದಲ್ಲಿ ತೊಡಗಿಸಿಕೊಂಡಿದ್ದೆ.. ಸಂಜೆ ಸುಮಾರು ೫ ಗಂಟೆಯಾಗಿರಬಹುದು ಅನ್ಸತ್ತೆ.. ಆಫೀಸ್ ಗೆ ಅನಾಮಿಕನೊಬ್ಬ ಬಂದಿದ್ದ.. ಮೇಡಂ ಸುನಿಲ್ ಯಾರೋ ಬಂದಿದ್ದಾರೆ ನೋಡಿ, ಏನೋ ಮರ್ಡರ್ ಅಂತ ಹೇಳ್ತಿದ್ದಾರೆ ಅಂದ್ರು.. ಏನಪ್ಪಾ ಇದು ಅಂದ್ಕೊಂಡು ಅವನನ್ನು ವಿಚಾರಿಸಿದೆ.. Receptionಮೇಡಂ ಕೂಡ ಅಲ್ಲೇ ನಿಂತಿದ್ರು.. ಗಬ್ಬು ವಾಸನೆ ಅವನ ದೇಹದಿಂದ ಮೂಗಿಗೆ ಬಡಿಯುತ್ತಿತ್ತು.. "ಯಾರ್ ನೀವು, ಏನ್ ವಿಷ್ಯ" ಅಂತ ಕೇಳ್ದೆ.. " ಸಾರ್ ಬೆಳಿಗ್ಗೆ ಆರ್. ಟಿ.ನಗರದಲ್ಲಿ ಮರ್ಡರ್ ಆಗಿತ್ತಲ್ಲ, ಅದು ನಾನೆ ಮಾಡಿದ್ದೂ ಸಾರ್" ಅಂದ.. ಅರೆಕ್ಷಣ ಕೈಕಾಲು ಸ್ತಬ್ಧವಾಗಿತ್ತು.. ಏನ್ ಹೇಳ್ಬೇಕು, ಏನ್ ಮಾಡ್ಬೇಕು ಅಂತಾನೆ ಗೊತ್ತಾಗದೆ ಸುಮ್ಮನೆ ನಿಂತಿದ್ದೆ.. ಪಕ್ಕದಲ್ಲಿ ನಿಂತಿದ್ದ ಮೇಡಂ ಪರಿಸ್ಥಿತಿಯಂತೂ ಕೇಳೋದೇ ಬೇಡ.. ಆದರು ಕೊಂಚ ಧೈರ್ಯ ೧೨ "ಯಾಕೆ ಮರ್ಡರ್ ಮಾಡ್ದೆ" ಎಂದು ಕೇಳ್ದೆ.. "ಇಲ್ಲ ಸಾರ್ ಆಕೆ ತುಂಬಾನೇ ಕೆಟ್ಟವಳು.. ಅದ್ಕೇ ಕೊಲೆ ಮಾಡ್ದೆ.. " ಅದೇ ನಿರ್ವಿಕಾರ ಮನೋಭಾವದಲ್ಲಿ ಆತ ಮುಂದುವರಿಸಿದ.. "ತುಂಬಾನೇ ಸಹಿಸ್ಕೊಂಡೆ, ಆದ್ರೆ ಅವಳು ನೆಟ್ಟಗಾಗ್ಲಿಲ್ಲ.. ಮಾತ್ರವಲ್ಲ ಮತ್ತೆ ಹಳೇ ಚಾಳಿ ಮುಂದುವರಿಸಿದ್ಳು.. " "ಸಾರ್ ಸ್ವಲ್ಪ ನೀರು ಕುಡೀಬೋದಾ" ಅಂತ ಕೇಳ್ದ.. "ಹಾಂ" ಎಂದು ಹೇಳಿ ನಾನು ತಲೆಯಲ್ಲಾಡಿಸಿದೆ.. ಪಕ್ಕದಲ್ಲೇ ಇದ್ದ ಕ್ಯಾನ್ ನಿಂದ ಗ್ಲಾಸಿಗೆ ನೀರು ತುಂಬಿಸ್ಕೊಂಡು ಕುಡಿದ.. ಪಾಪ ಬೆಳಗ್ಗೆಯಿಂದ ಏನೂ ತಿಂದಿರ್ಲಿಲ್ಲ ಅನ್ಸತ್ತೆ... ನೀರು ಕುಡಿದಾದ ಮೇಲೆ ಮತ್ತೆ ಮಾತಾಡೋಕೆ ಶುರು ಮಾಡ್ದ.. "ಆಕೆ ನನ್ನ ಮಗಳನ್ನೂ ತನ್ನ ಹಾದಿಗೆ ತರ್ತೀನಿ ಅಂತ ಹೇಳೋಕೆ ಶುರು ಮಾಡಿದ್ಳು, ನಂಗೆ ತಡ್ಕೊಳ್ಳೋಕೆ ಆಗಿಲ್ಲ.. ರಾತ್ರಿ ಪೂರ ಜಗಳ ಆಗಿತ್ತು.. ನಾನು ಏನೇ ಹೇಳಿದ್ರೂ ನನ್ ಮಾತನ್ನು ಕೇಳೋ ಪರಿಸ್ಥಿತಿಯಲ್ಲಿ ಆಕೆ ಇರ್ಲಿಲ್ಲ.. ಆಕೆ ಇನ್ನು ಬದುಕೋದು ಬೇಡಾಂತ ನಿರ್ಧರಿಸಿದ್ದೆ.. ಯಾಕಂದ್ರೆ ನಂಗೆ ನಂಗಿತ್ತ ನನ್ ಮಗಳೇ ಹೆಚ್ಚಾಗಿತ್ತು.. 12 ವರ್ಷದ ಆ ಮಗೂ ತಾಯಿ ದಾರಿಯಲ್ಲಿ ಹೋಗೋದು ನಂಗೆ ಇಷ್ಟ ಇರ್ಲಿಲ್ಲ.. " ಇಷ್ಟನ್ನು ಒಂದೇ ಉಸಿರಲ್ಲಿ ಹೇಳಿದ ಆ ವ್ಯಕ್ತಿ ನಂತ್ರ ನಿಧಾನವಾಗಿ ಚೇರ್ ಮೇಲೆ ಕುಳಿತುಕೊಂಡ.. ನಂಗೆ ಭಯ ಆದ್ರೂ ಅದನ್ನು ತೋರಿಸ್ಕೊಳ್ಳದೆ ಪಕ್ಕದ ಚೇರ್ ನಲ್ಲಿ ಕುಳಿತುಕೊಂಡೆ.. "ಆಕೆ ತುಂಬಾ ಜನರ ಜೊತೆಗೆ ಸಂಬಂಧ ಇಟ್ಕೊಂಡಿದ್ಳು ಸಾರ್.. ಅದನ್ನೇ ವೃತ್ತಿಯಾಗಿ ಮಾಡಿಕೊಂಡಿದ್ಳು.. ಅದೂ ನನ್ ಗೆಳೆಯರ ಜೊತೆಗೇ... ನಂಗೆ ಮೊದ್ಲು ಇವೆಲ್ಲ ಗೊತ್ತಿರ್ಲಿಲ್ಲ.. ಅವಳ ಮೇಲೆ ತುಂಬಾನೇ ನಂಬಿಕೆಯಿಟ್ಟಿದೆ... ಆದ್ರೆ ನಂತ್ರ ಅವಳ ಖಯಾಲಿ ಗೊತ್ತಾಯ್ತು.. ನಿನ್ನೆ ರಾತ್ರಿ ನಾನು ಮನೆಗೆ ಹೋಗ್ತಿದ್ದಾಗ ಯಾರೋ ಒಬ್ಬ ಮನೆಯಿಂದ ಆಚೆ ಹೋಗ್ತಿದ್ದ.. ಆಕೆಗೆ ಇವಾಗ ಹೋಗಿದ್ದು ಯಾರು ಅಂತ ಕೇಳಿದ್ದಕ್ಕೆ ಫ್ರೆಂಡ್ ಅಂದ್ಳು.. ಯಾವ ಫ್ರೆಂಡ್ ಅವನಿಗೆ ಇಷ್ಟೊತ್ತಲ್ಲಿ ಏನ್ ಕೆಲ್ಸ ಅಂತ ಕೇಳಿದ್ದಕ್ಕೆ ನಂಗೇ ದಬಾಯಿಸಿದ್ಳು... ನಿಮ್ಗೆ ಯಾಕ್ರೀ ಅದೆಲ್ಲ ಅಂತ ನನ್ನನ್ನೇ ದಬಾಯಿಸಿದ್ಳು.. ನಂಗೆ ರೇಗೋಗಿತ್ತು.. ಮಕ್ಕಳ ಮುಂದೆಯೇ ಅವಳ ಕಪಾಳಕ್ಕೆರಡು ಬಾರಿಸಿದೆ.. ಅಷ್ಟಕ್ಕೆ ಆಕೆಯ ಕೋಪ ಮತ್ತಷ್ಟು ನೆತ್ತಿಗೇರಿತ್ತು... ನಂಗೆ ಇಷ್ಟ ಇರೋ ರೀತಿಯಲ್ಲಿ ನಾನು ಬದುಕ್ತೀನಿ ನೀವು ಕೇಳೋಕೆ ಬರ್ಬೇಡಿ ಅಂದ್ಳು.. ನಂಗೆ ಆಕೆಯ ವರ್ತನೆ ಆಶ್ಚರ್ಯ ತಂದಿತ್ತು.. ಆಕೆಯ ಬಗ್ಗೆ ಹಲವಾರು ಕನಸುಗಳನ್ನಿಟ್ಟುಕೊಂಡಿದ್ದೆ... ಏನು ಮಾತಾಡ್ಬೇಕು ಎಂದು ಗೊತ್ತಾಗದೆ ಸುಮ್ಮನಿದ್ದೆ... ನಾನು ಸುಮ್ಮನಿರೋದನ್ನು ಕಂಡ ಆಕೆ ಮತ್ತಷ್ಟು ಮಾತಾಡೋಕೆ ಶುರು ಮಾಡಿದ್ಳು.. ಕೊನೆಗೆ ನಾನು ಒಂದು ಮಾತು ಹೇಳ್ದೆ.. ನೀನ್ ಏನ್ ಬೇಕಾದ್ರೂ ಮಾಡ್ಕೋ, ಆದ್ರೆ ಮಕ್ಕಳ ಮುಂದೆ ಈ ರೀತಿ ಮಾಡೋದು ಸರಿಯಿರಲ್ಲ.. ಮಗಳು ದೊಡ್ಡವಳಾಗ್ತಿದ್ದಾಳೆ.. ನೀನ್ ಇನ್ಮೇಲೆ ಈ ಮನೆಯಲ್ಲಿರ್ಬೇಡ ಅಂತ ಹೇಳ್ದೆ.. ಆಗ್ಲೇ ಆಕೆಯ ನಿಜರೂಪ ನೋಡಿದ್ದು.. ನಾನು ನಂಗೆ ಇಷ್ಟ ಬಂದ ರೀತಿಯಲ್ಲಿ ಇರ್ತೀನಿ, ನನ್ ಮಗಳನ್ನೂ ನಂಗಿಷ್ಟ ಬಂದ ರೀತಿಯಲ್ಲೇ ಬೆಳೆಸ್ತೀನಿ... ಬೇಕಂದ್ರೆ ಅವಳನ್ನೂ ಜೊತೆಗೆ ಕರ್ಕೊಂಡು ಹೋಗ್ತೀನಿ ಅಂದ್ಳು.. ಅವಳ ಆ ಮಾತನ್ನು ನಂಗೆ ಸಹಿಸೋಕಾಗಿಲ್ಲ ಸರ್.. ಆದ್ರೆ ಅವಾಗ ಏನೂ ಮಾಡಿಲ್ಲ.. ಮತ್ತೆ ಬಾರ್ ಗೆ ಹೋಗಿ ಒಂದು ಕ್ವಾರ್ಟರ್ ಕುಡ್ಕೊಂಡು ಮನೆಗೆ ಬಂದೆ.. ಗಂಟೆ ೧೨ ಕಳೆದಿರ್ಬೋದು.. ಕೋಣೆಯಲ್ಲಿ ಬಹುತೇಕ ಕತ್ತಲು ಆವರಿಸಿತ್ತು.. ಮಕ್ಕಳೂ ಜೊತೆಗೇ ಮಲಗಿದ್ರು... ಕೋಣೆಯ ಮತ್ತೊಂದು ಮೂಲೆಯಲ್ಲಿ ಆಕೆ ಮಲಗಿದ್ಳು.. ಮಕ್ಕಳಿಬ್ಬರನ್ನೂ ಎಬ್ಬಿಸಿ ಪಕ್ಕದ ಕೋಣೆಗೆ ಕರ್ಕೊಂಡು ಹೋಗಿ ಮಲಗ್ಸಿದೆ.. ಆ ಘಳಿಗೆಯಲ್ಲಿ ಅದ್ಯಾಕೆ ಹಾಗನಿಸ್ತೋ ಗೊತ್ತಿಲ್ಲ.. ಮನೆಯ ಮುಂದೆ ಬಟ್ಟೆ ಒಗಿಯೋಕೆ ಹಾಕಿದ್ದ ಚಪ್ಪಡಿ ಕಲ್ಲು ಎತ್ಕೊಂಡು ಮನೆಯೊಳಗೆ ಬಂದೆ.. ಮಬ್ಬು ಬೆಳಕಲ್ಲೇ ಮಲಗಿದ್ದ ಆಕೆಯ ತಲೆ ಮೇಲಕ್ಕೆ ಕಲ್ಲನ್ನು ಎತ್ತಿ ಹಾಕಿದೆ.. ಒಂದೆರಡು ಕ್ಷಣ ನರಳಾಡಿದ್ಳು.. ಬಾಯಿಂದ ಸಣ್ಣದೊಂದು ಆರ್ತನಾದ ಹೊರಬಂದಿತ್ತು ಅಷ್ಟೇ.. ವಿಲ ವಿಲನೆ ಒದ್ದಾಡಿ ಅಲ್ಲೇ ಪ್ರಾಣ ಬಿಟ್ಳು.. ರೂಂ ಪೂರ್ತಿ ರಕ್ತ ತುಂಬಿಕೊಂಡಿತ್ತು.. ಸದ್ದು ಕೇಳಿ ಮಕ್ಕಳಿಬ್ಬರೂ ಪಕ್ಕದ ಕೋಣೆಯಿಂದ ಓಡಿ ಬಂದು ನೋಡಿದ್ರು.. ಇಬ್ಬರನ್ನೂ ಎತ್ಕೊಂಡು ಸೀದಾ ನನ್ನ ತಾಯಿ ಮನೆಗೆ ಹೋಗಿ ಬಿಟ್ಟು ಬಂದೆ.. ಬಳಿಕ ರಾತ್ರಿಯಿಂದ ಅಲೆದಾಡೋಕೆ ಶುರು ಮಾಡ್ದೆ.. "
" ಪೊಲೀಸ್ ಹತ್ರ ಸರೆಂಡರ್ ಆಗ್ಬೋದಿತ್ತಾಲ್ಲಾ" ಕೇಳ್ದೆ..
"ಇಲ್ಲ ಸಾರ್.. ನಂಗೆ ನಡೆದ ಘಟನೆಯನ್ನು ಮಾಧ್ಯಮದ ಜೊತೆಗೆ ಹೇಳ್ಕೋಬೇಕಿತ್ತು.. ಹಾಗಾಗಿನೇ ರಾತ್ರಿಯಿಂದ ತಪ್ಪಿಸಿಕೊಂಡು ಇಲ್ಲಿವರೆಗೆ ಹುಡುಕ್ಕೊಂಡು ಬಂದೆ.. ನಂಗೆ ಆಕೆಯನ್ನು ಕೊಲೆ ಮಾಡಿರೋದಿಕ್ಕೇನೂ ಬೇಜಾರಿಲ್ಲ ಸಾರ್.. ಅವಳಂತವ್ರು ಬದುಕಿರ್ಬಾರ್ದು.. ಆಕೆ ಹಾಳಾಗಿದ್ದು ಪರ್ವಾಗಿಲ್ಲ.. ಆದ್ರೆ ನನ್ ಮಗಳನ್ನು ಹಾಳು ಮಾಡ್ತೀನಿ ಅಂತ ಹೇಳಿದ್ಳಲ್ಲಾ... ಅದನ್ನೇ ಸಹಿಸೋಕಾಗಿಲ್ಲ.. " ಅಂತ ಮತ್ತೆ ಹೇಳ್ದ...
"ಹಾಗಾದ್ರೆ ಇವಾಗ ಪೊಲೀಸರು ಬಂದ್ರೆ ಸರೆಂಡರ್ ಆಗ್ತಿಯಾ.." ಕೇಳ್ದೆ..
"ಹೂಂ ಸರ್ ಆಗ್ತೀನಿ.." ಅಂದ..
ಮೊದ್ಲು ಕ್ಯಾಮೆರಾಗೆ ಓರ್ಡರ್ ಮಾಡಿ ಸೀದಾ ಆತನನ್ನು ಕರ್ಕೊಂಡು ಆಫೀಸ್ ಪಕ್ಕದ ಪಾರ್ಕ್ ಗೆ ಹೋದೆ.. ಅರ್ಧ ಗಂಟೆ ಆತನ ಇಂಟರ್ ವ್ಯೂ ತಗೊಂಡೆ.. ಕ್ಯಾಮೆರಾ ಮುಂದೆ ಆ ಕೊಲೆಗಾರ ತನ್ನೆಲ್ಲಾ ಕಥೆಗಳನ್ನೂ ಹೇಳ್ಕೊಂಡ.. ನಂತ್ರ ಅಂದಿನ ಜಾಯಿಂಟ್ ಕಮಿಷನರ್ ಅಲೋಕ್ ಕುಮಾರ್ ಗೆ ಫೋನ್ ಮಾಡಿ ವಿಷಯ ತಿಳಿಸಿದೆ.. ಅಲೋಕ್ ಕುಮಾರ್ ಕೂಡ್ಲೇ ಅಶೋಕ ನಗರ ಪೊಲೀಸರಿಗೆ ನಮ್ಮ ಕಚೇರಿಯತ್ತ ದೌಡಾಯಿಸುವಂತೆ ಸೂಚನೆ ನೀಡಿದ್ರು.. ಮತ್ತೊಂದೆಡೆ ಆರ್.ಟಿ ನಗರ ಇನ್ಸ್ ಪೆಕ್ಟರ್ ಪೂವಯ್ಯನವ್ರಿಗೂ ಸುದ್ದಿ ಮುಟ್ಟಿಸಿ ಅಶೋಕ ನಗರ ಠಾಣೆಯತ್ತ ತೆರಳುವಂತೆ ಹೇಳಿದ್ರು.. ೧೦ ನಿಮಿಷಗಳ ಒಳಗಾಗಿ ಅಶೋಕ್ ನಗರ ಪೊಲೀಸ್ ಠಾಣೆಯ ಹೊಯ್ಸಳ ವಾಹನವೊಂದು ನಮ್ಮ ಆಫೀಸ್ ಮುಂದೆ ನಿಂತಿತ್ತು.. ಸಬ್ ಇನ್ಸ್ ಪೆಕ್ಟರ್ ಲಕ್ಷ್ಮಿ ಮೇಡಮ್ ಜೊತೆಯಲ್ಲಿದ್ರು.. ನಂಗೊಂದು ಥ್ಯಾಂಕ್ಸ್ ಹೇಳಿ ಆ ಕೊಲೆಗಾರ ಪೊಲೀಸ್ ಜೀಪ್ ಹತ್ತಿದ್ದ... ಅಷ್ಟೊತ್ತು ನಂಜೊತೆ ಗೆಳೆಯನಂತೆ ಎಲ್ಲವನ್ನೂ ಹೇಳ್ಕೊಂಡಿದ್ದ ಆ ವ್ಯಕ್ತಿ ಕೈಗೆ ಕೋಳ ತೊಟ್ಕೊಂಡು ಜೀಪ್ ನಲ್ಲಿ ಕುಳಿತಿದ್ದ.. ಹೊಯ್ಸಳ ಜೀಪ್ ಅಶೋಕ್ ನಗರ ಠಾಣೆಯತ್ತ ಹೋಯ್ತು.. ನಾನು ಆಫೀಸೊಳಕ್ಕೆ ಬಂದೆ...
Saturday, October 23, 2010
ನನ್ನ ದೇವತೆ...
ಅಪ್ಸರೆಯ ಸೊಬಗು, ಸ್ವರ್ಣ ಮಾಲೆ, ನೆರಿಗೆಯ ಸೀರೆ, ಕನಕಾಂಬರ ಹೂವುಗಳಿಲ್ಲದಿದ್ರು ನನಗವಳು ದೇವತೆಯೇ...
ನೆನೆದಾಗ ಕಣ್ಮುಂದೆ ಬರೋ ನಡೆದಾಡುವ ದೇವತೆ..
ಪ್ರೀತಿ, ಸ್ನೇಹದ ದೀಪ ಹಚ್ಚಿ, ವಿಶ್ವಾಸ ನಂಬಿಕೆಯ ಆರತಿ ಎತ್ತಿ, ಕಾಳಜಿಯ ಪೂಜೆ ಸಲ್ಲಿಸಿ ಆರಾಧಿಸ್ತೀನಿ..
ತುಟಿಯಂಚಿನ ಕಿರುನಗೆ ಮತ್ತು ಪ್ರೀತಿ ತುಂಬಿದ ಮಾತುಗಳೇ ನನಗಾ ದೇವತೆಯ ಪ್ರಸಾದ..
Tuesday, December 2, 2008
ಘಾಸಿ ಮಾಡಬೇಡಿ ಈ ಬದುಕಿಗೆ...
ಭಾವಗಳ ಬದುಕಲ್ಲಿ,
ಪ್ರೀತಿ ಸ್ನೇಹದ ಬೆಸುಗೆಗಳಿಗೆ ಅರ್ಥ ಕಲ್ಪಿಸುತ್ತ,
ವಾಸ್ತವದ ನೆನಪಿನಲ್ಲಿ ವಿಹರಿಸುವ ಪುಟ್ಟ ಜೀವಿ ನಾನು,
ಘಾಸಿ ಮಾಡಬೇಡಿ ಈ ಬದುಕಿಗೆ....



















