Saturday, November 27, 2010

ಕೊಲೆಗಡುಕನ ಮುಂದೆ...

ಅದೊಂದು ಭಾನುವಾರ...
ಖಾಸಗೀ ಟಿವಿ ವಾಹಿನಿಯೊಂದರಲ್ಲಿ ಅಪರಾಧ ವರದಿಗಾರನಾಗಿ ಕೆಲಸ ಮಾಡ್ತಿರೋ ನನಗೆ ಆ ದಿನವನ್ನು ಯಾವತ್ತಿಗೂ ಮರೆಯೋಕಾಗಲ್ಲ.. ಬೆಳ್ಳಂ ಬೆಳಗ್ಗೆ ಆರ್. ಟಿ.ನಗರದಲ್ಲಿ ಮರ್ಡರ್ ಆಗಿದೆ ಅಂತ ಗೊತ್ತಾಗಿದ್ದೆ ತಡ, ಬ್ರೇಕಿಂಗ್ ನ್ಯೂಸ್ ಕೊಡ್ತಾ ಸ್ಪಾಟ್ ತಲುಪಿದ್ದೆ.. ತಾಳಿ ಕಟ್ಟಿದ ಹೆಂಡತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಆ ಪಾಪಿ ಗಂಡ ಕೊಲೆಮಾಡಿದ್ದ.. ಪಾಪ ಎಲ್ಲವನ್ನೂ ಕಣ್ಣಾರೆ ಕಂಡಿದ್ದ ಇಬ್ಬರು ಮಕ್ಕಳನ್ನು ತಾಯಿ ಮನೆಯಲ್ಲಿ ಬಿಟ್ಟು ಗಂಡ ಪರಾರಿಯಾಗಿದ್ದ.. ನಾನು ಮತ್ತು ಮತ್ತೊಂದು ಖಾಸಗಿ ವಾಹಿನಿಯ ಗೆಳೆಯ ರಾಕೇಶ್ ಸ್ಪಾಟ್ ವಿಸುವಲ್ಸ್ ಮತ್ತು ಬೈಟ್ ತಗೊಂಡು ನೇರವಾಗಿ ಕಮಿಷನರ್ ಆಫೀಸಿಗೆ ಹೋಗಿದ್ದೆವು.. ಜಂಟಿ ಪೋಲಿಸ್ ಆಯುಕ್ತರಾದ ಅಲೋಕ್ ಕುಮಾರ್ ಬೈಟ್ ಬೇಕಾಗಿತ್ತು.. ಬೈಟ್ ತಗೊಂಡು ವಾಪಾಸ್ ಆಫೀಸಿಗೆ ಬಂದು ಸ್ಕ್ರಿಪ್ಟ್ ಕೊಟ್ಟು ಬೇರ್ಯಾವುದೋ ಕೆಲಸದಲ್ಲಿ ತೊಡಗಿಸಿಕೊಂಡಿದ್ದೆ.. ಸಂಜೆ ಸುಮಾರು ೫ ಗಂಟೆಯಾಗಿರಬಹುದು ಅನ್ಸತ್ತೆ.. ಆಫೀಸ್ ಗೆ ಅನಾಮಿಕನೊಬ್ಬ ಬಂದಿದ್ದ.. ಮೇಡಂ ಸುನಿಲ್ ಯಾರೋ ಬಂದಿದ್ದಾರೆ ನೋಡಿ, ಏನೋ ಮರ್ಡರ್ ಅಂತ ಹೇಳ್ತಿದ್ದಾರೆ ಅಂದ್ರು.. ಏನಪ್ಪಾ ಇದು ಅಂದ್ಕೊಂಡು ಅವನನ್ನು ವಿಚಾರಿಸಿದೆ.. Receptionಮೇಡಂ ಕೂಡ ಅಲ್ಲೇ ನಿಂತಿದ್ರು.. ಗಬ್ಬು ವಾಸನೆ ಅವನ ದೇಹದಿಂದ ಮೂಗಿಗೆ ಬಡಿಯುತ್ತಿತ್ತು.. "ಯಾರ್ ನೀವು, ಏನ್ ವಿಷ್ಯ" ಅಂತ ಕೇಳ್ದೆ.. " ಸಾರ್ ಬೆಳಿಗ್ಗೆ ಆರ್. ಟಿ.ನಗರದಲ್ಲಿ ಮರ್ಡರ್ ಆಗಿತ್ತಲ್ಲ, ಅದು ನಾನೆ ಮಾಡಿದ್ದೂ ಸಾರ್" ಅಂದ.. ಅರೆಕ್ಷಣ ಕೈಕಾಲು ಸ್ತಬ್ಧವಾಗಿತ್ತು.. ಏನ್ ಹೇಳ್ಬೇಕು, ಏನ್ ಮಾಡ್ಬೇಕು ಅಂತಾನೆ ಗೊತ್ತಾಗದೆ ಸುಮ್ಮನೆ ನಿಂತಿದ್ದೆ.. ಪಕ್ಕದಲ್ಲಿ ನಿಂತಿದ್ದ ಮೇಡಂ ಪರಿಸ್ಥಿತಿಯಂತೂ ಕೇಳೋದೇ ಬೇಡ.. ಆದರು ಕೊಂಚ ಧೈರ್ಯ ೧೨ "ಯಾಕೆ ಮರ್ಡರ್ ಮಾಡ್ದೆ" ಎಂದು ಕೇಳ್ದೆ.. "ಇಲ್ಲ ಸಾರ್ ಆಕೆ ತುಂಬಾನೇ ಕೆಟ್ಟವಳು.. ಅದ್ಕೇ ಕೊಲೆ ಮಾಡ್ದೆ.. " ಅದೇ ನಿರ್ವಿಕಾರ ಮನೋಭಾವದಲ್ಲಿ ಆತ ಮುಂದುವರಿಸಿದ.. "ತುಂಬಾನೇ ಸಹಿಸ್ಕೊಂಡೆ, ಆದ್ರೆ ಅವಳು ನೆಟ್ಟಗಾಗ್ಲಿಲ್ಲ.. ಮಾತ್ರವಲ್ಲ ಮತ್ತೆ ಹಳೇ ಚಾಳಿ ಮುಂದುವರಿಸಿದ್ಳು.. " "ಸಾರ್ ಸ್ವಲ್ಪ ನೀರು ಕುಡೀಬೋದಾ" ಅಂತ ಕೇಳ್ದ.. "ಹಾಂ" ಎಂದು ಹೇಳಿ ನಾನು ತಲೆಯಲ್ಲಾಡಿಸಿದೆ.. ಪಕ್ಕದಲ್ಲೇ ಇದ್ದ ಕ್ಯಾನ್ ನಿಂದ ಗ್ಲಾಸಿಗೆ ನೀರು ತುಂಬಿಸ್ಕೊಂಡು ಕುಡಿದ.. ಪಾಪ ಬೆಳಗ್ಗೆಯಿಂದ ಏನೂ ತಿಂದಿರ್ಲಿಲ್ಲ ಅನ್ಸತ್ತೆ... ನೀರು ಕುಡಿದಾದ ಮೇಲೆ ಮತ್ತೆ ಮಾತಾಡೋಕೆ ಶುರು ಮಾಡ್ದ.. "ಆಕೆ ನನ್ನ ಮಗಳನ್ನೂ ತನ್ನ ಹಾದಿಗೆ ತರ್ತೀನಿ ಅಂತ ಹೇಳೋಕೆ ಶುರು ಮಾಡಿದ್ಳು, ನಂಗೆ ತಡ್ಕೊಳ್ಳೋಕೆ ಆಗಿಲ್ಲ.. ರಾತ್ರಿ ಪೂರ ಜಗಳ ಆಗಿತ್ತು.. ನಾನು ಏನೇ ಹೇಳಿದ್ರೂ ನನ್ ಮಾತನ್ನು ಕೇಳೋ ಪರಿಸ್ಥಿತಿಯಲ್ಲಿ ಆಕೆ ಇರ್ಲಿಲ್ಲ.. ಆಕೆ ಇನ್ನು ಬದುಕೋದು ಬೇಡಾಂತ ನಿರ್ಧರಿಸಿದ್ದೆ.. ಯಾಕಂದ್ರೆ ನಂಗೆ ನಂಗಿತ್ತ ನನ್ ಮಗಳೇ ಹೆಚ್ಚಾಗಿತ್ತು.. 12 ವರ್ಷದ ಆ ಮಗೂ ತಾಯಿ ದಾರಿಯಲ್ಲಿ ಹೋಗೋದು ನಂಗೆ ಇಷ್ಟ ಇರ್ಲಿಲ್ಲ.. " ಇಷ್ಟನ್ನು ಒಂದೇ ಉಸಿರಲ್ಲಿ ಹೇಳಿದ ಆ ವ್ಯಕ್ತಿ ನಂತ್ರ ನಿಧಾನವಾಗಿ ಚೇರ್ ಮೇಲೆ ಕುಳಿತುಕೊಂಡ.. ನಂಗೆ ಭಯ ಆದ್ರೂ ಅದನ್ನು ತೋರಿಸ್ಕೊಳ್ಳದೆ ಪಕ್ಕದ ಚೇರ್ ನಲ್ಲಿ ಕುಳಿತುಕೊಂಡೆ.. "ಆಕೆ ತುಂಬಾ ಜನರ ಜೊತೆಗೆ ಸಂಬಂಧ ಇಟ್ಕೊಂಡಿದ್ಳು ಸಾರ್.. ಅದನ್ನೇ ವೃತ್ತಿಯಾಗಿ ಮಾಡಿಕೊಂಡಿದ್ಳು.. ಅದೂ ನನ್ ಗೆಳೆಯರ ಜೊತೆಗೇ... ನಂಗೆ ಮೊದ್ಲು ಇವೆಲ್ಲ ಗೊತ್ತಿರ್ಲಿಲ್ಲ.. ಅವಳ ಮೇಲೆ ತುಂಬಾನೇ ನಂಬಿಕೆಯಿಟ್ಟಿದೆ... ಆದ್ರೆ ನಂತ್ರ ಅವಳ ಖಯಾಲಿ ಗೊತ್ತಾಯ್ತು.. ನಿನ್ನೆ ರಾತ್ರಿ ನಾನು ಮನೆಗೆ ಹೋಗ್ತಿದ್ದಾಗ ಯಾರೋ ಒಬ್ಬ ಮನೆಯಿಂದ ಆಚೆ ಹೋಗ್ತಿದ್ದ.. ಆಕೆಗೆ ಇವಾಗ ಹೋಗಿದ್ದು ಯಾರು ಅಂತ ಕೇಳಿದ್ದಕ್ಕೆ ಫ್ರೆಂಡ್ ಅಂದ್ಳು.. ಯಾವ ಫ್ರೆಂಡ್ ಅವನಿಗೆ ಇಷ್ಟೊತ್ತಲ್ಲಿ ಏನ್ ಕೆಲ್ಸ ಅಂತ ಕೇಳಿದ್ದಕ್ಕೆ ನಂಗೇ ದಬಾಯಿಸಿದ್ಳು... ನಿಮ್ಗೆ ಯಾಕ್ರೀ ಅದೆಲ್ಲ ಅಂತ ನನ್ನನ್ನೇ ದಬಾಯಿಸಿದ್ಳು.. ನಂಗೆ ರೇಗೋಗಿತ್ತು.. ಮಕ್ಕಳ ಮುಂದೆಯೇ ಅವಳ ಕಪಾಳಕ್ಕೆರಡು ಬಾರಿಸಿದೆ.. ಅಷ್ಟಕ್ಕೆ ಆಕೆಯ ಕೋಪ ಮತ್ತಷ್ಟು ನೆತ್ತಿಗೇರಿತ್ತು... ನಂಗೆ ಇಷ್ಟ ಇರೋ ರೀತಿಯಲ್ಲಿ ನಾನು ಬದುಕ್ತೀನಿ ನೀವು ಕೇಳೋಕೆ ಬರ್ಬೇಡಿ ಅಂದ್ಳು.. ನಂಗೆ ಆಕೆಯ ವರ್ತನೆ ಆಶ್ಚರ್ಯ ತಂದಿತ್ತು.. ಆಕೆಯ ಬಗ್ಗೆ ಹಲವಾರು ಕನಸುಗಳನ್ನಿಟ್ಟುಕೊಂಡಿದ್ದೆ... ಏನು ಮಾತಾಡ್ಬೇಕು ಎಂದು ಗೊತ್ತಾಗದೆ ಸುಮ್ಮನಿದ್ದೆ... ನಾನು ಸುಮ್ಮನಿರೋದನ್ನು ಕಂಡ ಆಕೆ ಮತ್ತಷ್ಟು ಮಾತಾಡೋಕೆ ಶುರು ಮಾಡಿದ್ಳು.. ಕೊನೆಗೆ ನಾನು ಒಂದು ಮಾತು ಹೇಳ್ದೆ.. ನೀನ್ ಏನ್ ಬೇಕಾದ್ರೂ ಮಾಡ್ಕೋ, ಆದ್ರೆ ಮಕ್ಕಳ ಮುಂದೆ ಈ ರೀತಿ ಮಾಡೋದು ಸರಿಯಿರಲ್ಲ.. ಮಗಳು ದೊಡ್ಡವಳಾಗ್ತಿದ್ದಾಳೆ.. ನೀನ್ ಇನ್ಮೇಲೆ ಈ ಮನೆಯಲ್ಲಿರ್ಬೇಡ ಅಂತ ಹೇಳ್ದೆ.. ಆಗ್ಲೇ ಆಕೆಯ ನಿಜರೂಪ ನೋಡಿದ್ದು.. ನಾನು ನಂಗೆ ಇಷ್ಟ ಬಂದ ರೀತಿಯಲ್ಲಿ ಇರ್ತೀನಿ, ನನ್ ಮಗಳನ್ನೂ ನಂಗಿಷ್ಟ ಬಂದ ರೀತಿಯಲ್ಲೇ ಬೆಳೆಸ್ತೀನಿ... ಬೇಕಂದ್ರೆ ಅವಳನ್ನೂ ಜೊತೆಗೆ ಕರ್ಕೊಂಡು ಹೋಗ್ತೀನಿ ಅಂದ್ಳು.. ಅವಳ ಆ ಮಾತನ್ನು ನಂಗೆ ಸಹಿಸೋಕಾಗಿಲ್ಲ ಸರ್.. ಆದ್ರೆ ಅವಾಗ ಏನೂ ಮಾಡಿಲ್ಲ.. ಮತ್ತೆ ಬಾರ್ ಗೆ ಹೋಗಿ ಒಂದು ಕ್ವಾರ್ಟರ್ ಕುಡ್ಕೊಂಡು ಮನೆಗೆ ಬಂದೆ.. ಗಂಟೆ ೧೨ ಕಳೆದಿರ್ಬೋದು.. ಕೋಣೆಯಲ್ಲಿ ಬಹುತೇಕ ಕತ್ತಲು ಆವರಿಸಿತ್ತು.. ಮಕ್ಕಳೂ ಜೊತೆಗೇ ಮಲಗಿದ್ರು... ಕೋಣೆಯ ಮತ್ತೊಂದು ಮೂಲೆಯಲ್ಲಿ ಆಕೆ ಮಲಗಿದ್ಳು.. ಮಕ್ಕಳಿಬ್ಬರನ್ನೂ ಎಬ್ಬಿಸಿ ಪಕ್ಕದ ಕೋಣೆಗೆ ಕರ್ಕೊಂಡು ಹೋಗಿ ಮಲಗ್ಸಿದೆ.. ಆ ಘಳಿಗೆಯಲ್ಲಿ ಅದ್ಯಾಕೆ ಹಾಗನಿಸ್ತೋ ಗೊತ್ತಿಲ್ಲ.. ಮನೆಯ ಮುಂದೆ ಬಟ್ಟೆ ಒಗಿಯೋಕೆ ಹಾಕಿದ್ದ ಚಪ್ಪಡಿ ಕಲ್ಲು ಎತ್ಕೊಂಡು ಮನೆಯೊಳಗೆ ಬಂದೆ.. ಮಬ್ಬು ಬೆಳಕಲ್ಲೇ ಮಲಗಿದ್ದ ಆಕೆಯ ತಲೆ ಮೇಲಕ್ಕೆ ಕಲ್ಲನ್ನು ಎತ್ತಿ ಹಾಕಿದೆ.. ಒಂದೆರಡು ಕ್ಷಣ ನರಳಾಡಿದ್ಳು.. ಬಾಯಿಂದ ಸಣ್ಣದೊಂದು ಆರ್ತನಾದ ಹೊರಬಂದಿತ್ತು ಅಷ್ಟೇ.. ವಿಲ ವಿಲನೆ ಒದ್ದಾಡಿ ಅಲ್ಲೇ ಪ್ರಾಣ ಬಿಟ್ಳು.. ರೂಂ ಪೂರ್ತಿ ರಕ್ತ ತುಂಬಿಕೊಂಡಿತ್ತು.. ಸದ್ದು ಕೇಳಿ ಮಕ್ಕಳಿಬ್ಬರೂ ಪಕ್ಕದ ಕೋಣೆಯಿಂದ ಓಡಿ ಬಂದು ನೋಡಿದ್ರು.. ಇಬ್ಬರನ್ನೂ ಎತ್ಕೊಂಡು ಸೀದಾ ನನ್ನ ತಾಯಿ ಮನೆಗೆ ಹೋಗಿ ಬಿಟ್ಟು ಬಂದೆ.. ಬಳಿಕ ರಾತ್ರಿಯಿಂದ ಅಲೆದಾಡೋಕೆ ಶುರು ಮಾಡ್ದೆ.. "
" ಪೊಲೀಸ್ ಹತ್ರ ಸರೆಂಡರ್ ಆಗ್ಬೋದಿತ್ತಾಲ್ಲಾ" ಕೇಳ್ದೆ..
"ಇಲ್ಲ ಸಾರ್.. ನಂಗೆ ನಡೆದ ಘಟನೆಯನ್ನು ಮಾಧ್ಯಮದ ಜೊತೆಗೆ ಹೇಳ್ಕೋಬೇಕಿತ್ತು.. ಹಾಗಾಗಿನೇ ರಾತ್ರಿಯಿಂದ ತಪ್ಪಿಸಿಕೊಂಡು ಇಲ್ಲಿವರೆಗೆ ಹುಡುಕ್ಕೊಂಡು ಬಂದೆ.. ನಂಗೆ ಆಕೆಯನ್ನು ಕೊಲೆ ಮಾಡಿರೋದಿಕ್ಕೇನೂ ಬೇಜಾರಿಲ್ಲ ಸಾರ್.. ಅವಳಂತವ್ರು ಬದುಕಿರ್ಬಾರ್ದು.. ಆಕೆ ಹಾಳಾಗಿದ್ದು ಪರ್ವಾಗಿಲ್ಲ.. ಆದ್ರೆ ನನ್ ಮಗಳನ್ನು ಹಾಳು ಮಾಡ್ತೀನಿ ಅಂತ ಹೇಳಿದ್ಳಲ್ಲಾ... ಅದನ್ನೇ ಸಹಿಸೋಕಾಗಿಲ್ಲ.. " ಅಂತ ಮತ್ತೆ ಹೇಳ್ದ...
"ಹಾಗಾದ್ರೆ ಇವಾಗ ಪೊಲೀಸರು ಬಂದ್ರೆ ಸರೆಂಡರ್ ಆಗ್ತಿಯಾ.." ಕೇಳ್ದೆ..
"ಹೂಂ ಸರ್ ಆಗ್ತೀನಿ.." ಅಂದ..
ಮೊದ್ಲು ಕ್ಯಾಮೆರಾಗೆ ಓರ್ಡರ್ ಮಾಡಿ ಸೀದಾ ಆತನನ್ನು ಕರ್ಕೊಂಡು ಆಫೀಸ್ ಪಕ್ಕದ ಪಾರ್ಕ್ ಗೆ ಹೋದೆ.. ಅರ್ಧ ಗಂಟೆ ಆತನ ಇಂಟರ್ ವ್ಯೂ ತಗೊಂಡೆ.. ಕ್ಯಾಮೆರಾ ಮುಂದೆ ಆ ಕೊಲೆಗಾರ ತನ್ನೆಲ್ಲಾ ಕಥೆಗಳನ್ನೂ ಹೇಳ್ಕೊಂಡ.. ನಂತ್ರ ಅಂದಿನ ಜಾಯಿಂಟ್ ಕಮಿಷನರ್ ಅಲೋಕ್ ಕುಮಾರ್ ಗೆ ಫೋನ್ ಮಾಡಿ ವಿಷಯ ತಿಳಿಸಿದೆ.. ಅಲೋಕ್ ಕುಮಾರ್ ಕೂಡ್ಲೇ ಅಶೋಕ ನಗರ ಪೊಲೀಸರಿಗೆ ನಮ್ಮ ಕಚೇರಿಯತ್ತ ದೌಡಾಯಿಸುವಂತೆ ಸೂಚನೆ ನೀಡಿದ್ರು.. ಮತ್ತೊಂದೆಡೆ ಆರ್.ಟಿ ನಗರ ಇನ್ಸ್ ಪೆಕ್ಟರ್ ಪೂವಯ್ಯನವ್ರಿಗೂ ಸುದ್ದಿ ಮುಟ್ಟಿಸಿ ಅಶೋಕ ನಗರ ಠಾಣೆಯತ್ತ ತೆರಳುವಂತೆ ಹೇಳಿದ್ರು.. ೧೦ ನಿಮಿಷಗಳ ಒಳಗಾಗಿ ಅಶೋಕ್ ನಗರ ಪೊಲೀಸ್ ಠಾಣೆಯ ಹೊಯ್ಸಳ ವಾಹನವೊಂದು ನಮ್ಮ ಆಫೀಸ್ ಮುಂದೆ ನಿಂತಿತ್ತು.. ಸಬ್ ಇನ್ಸ್ ಪೆಕ್ಟರ್ ಲಕ್ಷ್ಮಿ ಮೇಡಮ್ ಜೊತೆಯಲ್ಲಿದ್ರು.. ನಂಗೊಂದು ಥ್ಯಾಂಕ್ಸ್ ಹೇಳಿ ಆ ಕೊಲೆಗಾರ ಪೊಲೀಸ್ ಜೀಪ್ ಹತ್ತಿದ್ದ... ಅಷ್ಟೊತ್ತು ನಂಜೊತೆ ಗೆಳೆಯನಂತೆ ಎಲ್ಲವನ್ನೂ ಹೇಳ್ಕೊಂಡಿದ್ದ ಆ ವ್ಯಕ್ತಿ ಕೈಗೆ ಕೋಳ ತೊಟ್ಕೊಂಡು ಜೀಪ್ ನಲ್ಲಿ ಕುಳಿತಿದ್ದ.. ಹೊಯ್ಸಳ ಜೀಪ್ ಅಶೋಕ್ ನಗರ ಠಾಣೆಯತ್ತ ಹೋಯ್ತು.. ನಾನು ಆಫೀಸೊಳಕ್ಕೆ ಬಂದೆ...

4 comments:

Hariprasada. A said...

ತುಂಬಾ ಚೆನ್ನಾಗಿದೆ ಅನುಭವ. ಅದನ್ನು ಕಟ್ಟಿಕೊಟ್ಟ ರೀತಿಯೂ..

Roopa said...

abba,,,,nice... aste curel... adru yako ata one side kathe helta hogidane ansuttalva... the narration is gud....

chanakya said...

dear Suni manasu nannalle maathaduthidhe you are bhayankareshware..... from-,Sudhakar Jain

ಕಡಲ ತೀರದ ಕಾಡು ಮಲ್ಲಿಗೆ!! said...

ಹೇಯ್ ಕ್ರೌರ್ಯ ಯಾರಿದ್ದಾರೆ ನಿನ್ನ ಹಿಂದೆ.... ಕುದಿಯುವ ರಕುತ... ಭಾವನೆಗಳ ಸಮಾಧಿ.... "ಭಾವನೆಗಳ ಸಂಭಾಳಿಕೆ"