Monday, October 10, 2011


ಹಸಿವು ಅಂದ್ರೆ....

ಅಂದು ಸೆಪ್ಟೆಂಬರ್ 13.. ನೈಟ್ ಶಿಫ್ಟ್ ಇದ್ದಿದ್ರಿಂದ 11 ಗಂಟೆಗೆಲ್ಲ ಆಫೀಸಿಗೆ ಬಂದಿದ್ದೆ.. ಮತ್ತೊಂದು ಗಂಟೆ ಕಳೆದಿರಬಹುದು ಅನ್ಸತ್ತೆ.. ಇನ್ಸುಟ್ ನವ್ರು ಫೋನ್ ಮಾಡಿ ಅರ್ಜೆಂಟಾಗಿ ಚೆನ್ನೈಗೆ ಹೊರಡಿ ಅಂದ್ರು.. ನೋಡಿದ್ರೆ ತಮಿಳುನಾಡಿನ ಅರಕ್ಕೋಣಂನಲ್ಲಿ ರೈಲು ಅಪಘಾತ ಸಂಭವಿಸಿತ್ತು. ಆಗಲೇ 9 ಮಂದಿ ಸಾವನ್ನಪ್ಪಿದ್ರು.. 80ಕ್ಕೂ ಅಧಿಕ ಮಂದಿ ಗಾಯಾಳಾಗಿದ್ರು... ಉಟ್ಟ ಬಟ್ಟೆಯಲ್ಲೇ ಅರಕ್ಕೋಣಂಗೆ ಹೋಗೋಕೆ ರೆಡಿಯಾಗಿದ್ದೆ. ಕ್ಯಾಮೆರಾಮ್ಯಾನ್ ನರೇಶ್ ಮನೆಯಿಂದ ರೆಡಿಯಾಗಿ ಬಂದಿದ್ದ. ನ್ಯೂಸ್ 9 ನಿಂದಲೂ ಒಬ್ರು ರಿಪೋರ್ಟರ್ ಇದ್ರು. ಚಂದ್ರು ಅವರ ಕ್ವಾಲಿಸ್ ವಾಹನ ಆಫೀಸ್ ಹೊರಗಡೆ ಕಾಯ್ತಾ ನಿಂತಿತ್ತು... ಓಬಿ ವೆಹಿಕಲ್ ಕೂಡ ರೆಡಿಯಾಗಿತ್ತು.. ಎಂಜಿನಿಯರ್ ಪ್ರಕಾಶ್ ಮತ್ತು ಡ್ರೈವರ್ ತಿಮ್ಮೇಶ್ ನಮಗಿಂತ ಮೊದಲು ಹೊರಟು ಬಿಟ್ಟಿದ್ರು.. ನಾವು 1 ಗಂಟೆಗೆಲ್ಲ ಕ್ವಾಲಿಸ್ ಏರಿ ಅರಕ್ಕೋಣಂನತ್ತ ಪ್ರಯಾಣ ಹೊರಟಿದ್ವಿ.. < /p>

ಬೆಳಗ್ಗಿನ ಜಾವ 6.30ಕ್ಕೆ ಅರಕ್ಕೋಣಂ ಸರ್ಕಾರೀ ಆಸ್ಪತ್ರೆಯ ಮುಂದೆ ತಲುಪಿದ್ವಿ.. ಗಾಯಾಳುಗಳಲ್ಲಿ ಸುಮಾರು 60 ಮಂದಿ ಅದೇ ಆಸ್ಪತ್ರೆಗೆ ದಾಖಲಾಗಿದ್ರು.. ಅಲ್ಲಿ ನಮಗೆ ಶ್ರೀಕಾಂತ್ ಸಿಕ್ಕಿದ್ದ.. ಶ್ರೀಕಾಂತ್ ನಮ್ಮ ಚೆನ್ನೈ ಕ್ಯಾಮೆರಾಮ್ಯಾನ್ ಕಂ ರಿಪೋರ್ಟರ್.. ಶ್ರೀಕಾಂತ್ ಜೊತೆಗೆ ಮಾತಾಡ್ಕೊಂಡು ಅರ್ಧ ಗಂಟೆಯ ನಂತ್ರ ನೇರವಾಗಿ ಅಪಘಾತ ನಡೆದ ಸ್ಥಳಕ್ಕೆ ಧಾವಿಸಿದ್ವಿ.. ರಾತ್ರಿ ಅಪಘಾತ ಸಂಭವಿಸಿತ್ತು.. ಆದ್ರೆ ಬೆಳಗಾಗ್ತಿದ್ದಂಗೆ ಸ್ಥಳೀಯರೂ, ಅಕ್ಕಪಕ್ಕದ ಊರವರೆಲ್ಲ ತಂಡೋಪತಂಡವಾಗಿ ಅಪಘಾತ ನೋಡೋಕೆ ಬಂದಿದ್ರು..ಹಾಗಾಗಿ ರೈಲ್ವೇ ಗೇಟ್ ನಿಂದಾಚೆಗೆ ಯಾವುದೇ ವಾಹನಗಳನ್ನು ಬಿಡ್ತಿರಲಿಲ್ಲ.. ಹಾಗಾಗಿ ರೈಲ್ವೇ ಗೇಟ್ ಗಿಂತಲೂ ಹಿಂದೆಯೇ ವಾಹನ ನಿಲ್ಲಿಸಿ ನಡ್ಕೊಂಡು ಹೋಗ್ಬೇಕಾಯ್ತು.. ಓಬಿ ವ್ಯಾನ್ ಕೂಡ ಅಲ್ಲೇ ನಿಂತಿತ್ತು.. ಹೆಚ್ಚು ಕಡಿಮೆ 1 ಕಿಲೋ ಮೀಟರ್ ರೈಲ್ವೇ ಟ್ರ್ಯಾಕ್ ಮೇಲೆ ನಡ್ಕೊಂಡು ಹೋಗ್ಬೇಕಾಯ್ತು ಸ್ಪಾಟ್ ತಲುಪೋಕೆ..


ಆಗಲೇ ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳೆಲ್ಲ ಸ್ಥಳದಲ್ಲಿ ಜಮಾಯಿಸಿದ್ರು.. ನಜ್ಜುಗುಜ್ಜಾದ ಬೋಗಿಗಳನ್ನು ರೈಲ್ವೇ ಟ್ರ್ಯಾಕ್ ನಿಂದ ಬದಿಗೆ ಸರಿಸುವ ಕೆಲಸ ಒಂದ್ಕಡೆ ನಡೀತಿತ್ತು.. ಮತ್ತೊಂದೆಡೆ ಕಿತ್ತು ಹೋದ ಟ್ರ್ಯಾಕ್ ಗಳನ್ನು ಸರಿಪಡಿಸುವ ಕೆಲಸ ಆರಂಭವಾಗಿತ್ತು.. ಹೋದ ಕೂಡ್ಲೇ ಒಂದು ವಾಕ್ ಥ್ರೂ ಕೊಟ್ಟೆ... ಅಷ್ಟೊತ್ತಿಗಾಗ್ಲೇ ಆಫೀಸಿನಿಂದ ಫೋನ್ ಮೇಲೆ ಫೋನ್ ಬರೋಕೆ ಶುರುವಾಗಿತ್ತು.. ಕ್ಯಾಸೆಟ್ ಓಬಿಗೆ ಇನ್ನೂ ಕೊಟ್ಟಿಲ್ವಾ.. ಡಂಪ್ ಆಯ್ತಾ.. ಅಂತೆಲ್ಲ.. ಓಬಿ ವ್ಯಾನ್ ನಾವಿದ್ದ ಜಾಗದಿಂದ 1 ಕಿಲೋಮೀಟರ್ ದೂರದಲ್ಲಿತ್ತು.. ಹಾಗಾಗಿ ನಡ್ಕೊಂಡು ಹೋಗಿ ಕ್ಯಾಸೆಟ್ ಕೊಟ್ಟು ಬರೋಕೆ ಲೇಟ್ ಆಗಿತ್ತು.. ಆದ್ರೂ ನಮ್ಮ ಚೆನ್ನೈ ಕ್ಯಾಮೆರಾಮ್ಯಾನ್ ಶ್ರೀಕಾಂತ್ ತಾನೇ ಕ್ಯಾಸೆಟ್ ನ ಓಬಿ ಹತ್ರ ಕೊಟ್ಟು ಬಂದಿದ್ದ.. 10 ಗಂಟೆಯಾಗ್ತಿದ್ದಂಗೆ ಬಿಸಿಲಿನ ತಾಪ ಹೇಗಿದೆ ಅನ್ನೋದು ಅರಿವಿಗೆ ಬಂದಿತ್ತು.. ಬೆಂಗ್ಳೂರಲ್ಲಿ ಮಟ ಮಟ ಮಧ್ಯಾಹ್ನ ಸ್ವಲ್ಪ ಬಿಸಿಲು ಜಾಸ್ತಿ ಇದ್ರೆ ಸಾಕು.. ಅಬ್ಬಾ ಏನು ಸೆಕೆ ಅಂತಿದ್ವಿ.. ಅಂತಾದ್ರಲ್ಲಿ ಅಲ್ಲಿ 10 ಗಂಟೆಗೆ ನಿಲ್ಲೋಕಾಗ್ತಿರ್ಲಿಲ್ಲ..

ಹಾಗೆ ಮತ್ತೊಂದು ವಾಕ್ ಥ್ರೂ ಕೊಟ್ಟು ಸೆಕೆಂಡ್ ಟೈಮ್ ನಾನೇ ಕ್ಯಾಸೆಟ್ ತಗೊಂಡು ಓಬಿ ವ್ಯಾನ್ ಹತ್ರಕ್ಕೆ ಹೋಗಿದ್ದೆ... ಕ್ಯಾಸೆಟ್ ಡಂಪ್ ಮಾಡಿದ್ಮೇಲೆ ಪೊಲೀಸರ ಜೊತೆಗೆ ಮನವಿ ಮಾಡ್ಕೊಂಡು ಹೇಗೋ ಓಬಿ ವ್ಯಾನ್ ನ ರೈಲ್ವೇ ಗೇಟ್ ದಾಟಿಸಿ ಮತ್ತೊಂದು ಬದಿಗೆ ತಂದಿದ್ವಿ.. ಅಲ್ಲಿ ಪೊಲೀಸರು ಮತ್ತೆ ನಮ್ಮನ್ನು ಅಡ್ಡ ಹಾಕಿದ್ರು.. ಅವ್ರ ಬಳಿ ಕಾಡಿ ಬೇಡಿ ರೈಲ್ವೇ ಟ್ರ್ಯಾಕ್ ಸಮೀಪದಲ್ಲೇ ಇರುವ ಪ್ಯಾರಲಲ್ ರೋಡ್ ನಲ್ಲಿ ಒಂದಷ್ಟು ದೂರ ಹೋದ್ವಿ.. ರಸ್ತೆ ಕಿರಿದಾಗಿದ್ದು ಒಂದು ವಾಹನ ಹೋಗೋವಷ್ಟು ಮಾತ್ರ ಜಾಗವಿತ್ತು.. ಅಷ್ಟು ಕಿರಿದಾದ ರಸ್ತೆಯಲ್ಲಿ ಆಗ್ಲೇ ಪೊಲೀಸರ ವಾಹನಗಳು ಸಾಲಾಗಿ ನಿಂತಿದ್ವು.. ಜೊತೆಗೆ ಹಿಂದಿನ ದಿನ ರಾತ್ರಿಯೇ ಬಂದಿದ್ದ ನ್ಯಾಷನಲ್ ಮತ್ತು ಕೆಲವು ಸ್ಥಳೀಯ ಟಿವಿ ಚಾನಲ್ ಗಳ ಓಬಿ ವ್ಯಾನ್ ಗಳು ರಸ್ತೆ ಪಕ್ಕ ಪಾರ್ಕ್ ಆಗಿತ್ತು...

ಹಾಗೂ ಹೀಗೂ ಸಾಹಸ ಮಾಡಿ ನಮ್ಮ ಓಬಿ ವ್ಯಾನನ್ನು ರೈಲು ಅಪಘಾತ ನಡೆದ ಸ್ಥಳದ ಸಮೀಪಕ್ಕೆ ತಂದಿದ್ವಿ. ಹಾಗಾಗಿ ವಿಸುವಲ್ಸ್ ಕಳ್ಸೋಕೆ ತುಂಬಾ ಅನುಕೂಲ ಆಯ್ತು.. ಮಧ್ಯಾಹ್ನ 12 ಗಂಟೆ ನ್ಯೂಸ್ ಗೆ ಲೈವ್ ಚಾಟ್ ಕೊಟ್ಟಾಯ್ತು.. ಅಷ್ಟೊತ್ತಿಗಾಗ್ಲೇ ಹೊಟ್ಟೆ ಚುರುಗುಟ್ಟೋಕೆ ಆರಂಭವಾಗಿತ್ತು. ಮಧ್ಯಾಹ್ನದ ಆ ಉರಿಬಿಸಿಲಿನ ಜೊತೆಗೆ ಬಿಸಿಲಿನ ಝಳ.. ಓಬಿ ವ್ಯಾನ್ ನಲ್ಲಿದ್ದ ನೀರು ಖಾಲಿಯಾಗಿತ್ತು.. ನಮ್ಮ ಓಬಿ ಡ್ರೈವರ್ ತಿಮ್ಮೇಶ್ ಬೇರ್ಯಾವುದೇ ಓಬಿ ವ್ಯಾನ್ ನಲ್ಲಿದ್ದ ನೀರು ತಂದುಕೊಟ್ಟು ಸದ್ಯಕ್ಕೆ ಬಾಯಾರಿಕೆ ನೀಗಿಸಿದ್ದ. ಆದ್ರೆ ಹಸಿವು ಮಾತ್ರ ಕಡಿಮೆಯಾಗ್ಲಿಲ್ಲ. ಗಂಟೆ 1.30 ಆಗ್ತಿದ್ದಂಗೆ ರೈಲ್ವೇ ಖಾತೆ ಸಚಿವ ದಿನೇಶ್ ತ್ರಿವೇದಿ, ರಾಜ್ಯ ಸಹಾಯಕ ಸಚಿವ ಮುನಿಯಪ್ಪ ಮತ್ತಿತರ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ರು. ಆ ನೂಕು ನುಗ್ಗಲಿನಲ್ಲಿ ಬೈಟ್, ವಿಸುವಲ್ಸ್ ತಗೊಂಡು ಕಳಿಸುವಷ್ಟರಲ್ಲಿ ಸಾಕಾಗಿ ಹೋಗಿತ್ತು. ಇವೆಲ್ಲ ಮುಗಿದಾಗ ಗಂಟೆ 3 ಆಗಿತ್ತು. ಹಸಿವಿನಿಂದ ಕಣ್ಣು ಕಾಣದಂತ ಪರಿಸ್ಥಿತಿ. ಬೆಳಿಗ್ಗೆ ತಿಂಡಿ ಸಹ ಮಾಡಿರಲಿಲ್ಲ. ಎಲ್ಲಾದ್ರೂ ತಿನ್ನೋಕೆ ಏನಾದ್ರೂ ತೆಗೆದುಕೊಂಡು ಬರೋಣ ಅಂದ್ಕೊಂಡ್ರೆ ಅಂಗಡಿಗಳೇ ಇಲ್ಲ.

ಓಬಿ ವ್ಯಾನ್ ನಲ್ಲಿ ವಿಸುವಲ್ಸ್ ಸೆಂಡ್ ಆಗ್ತಿರ್ಬೇಕಾದ್ರೆ ನಮ್ಮ ಓಬಿ ಡ್ರೈವರ್ ತಿಮ್ಮೇಶ್ ಹೋಗಿ ಎಲ್ಲಿಂದಲೋ ಒಂದು ಬೇಯಿಸಿದ ಮೊಟ್ಟೆ ತೆಗೆದುಕೊಂಡು ಬಂದ. ಆ ಮೊಟ್ಟೆಯನ್ನು ನಾನು, ಕ್ಯಾಮೆರಾಮ್ಯಾನ್ ನರೇಶ್, ಓಬಿ ಇಂಜಿನಿಯರ್ ಪ್ರಕಾಶ್ ಮತ್ತು ಡ್ರೈವರ್ ತಿಮ್ಮೇಶ್ ನಾಲ್ಕು ಪೀಸ್ ಮಾಡಿ ತಿಂದ್ವಿ. ಆದ್ರೆ ಅದು ನಮ್ಮ ಹೊಟ್ಟೆಯ ಯಾವ ಮೂಲೆಗೂ ಸಾಕಾಗಲಿಲ್ಲ. ಮತ್ತೆ ಸ್ವಲ್ಪ ಹೊತ್ತಿನ ನಂತ್ರ ತಿಮ್ಮೇಶ್ ನಾಲ್ಕು ಬೆರಳಿನಷ್ಟುದ್ದದ ಬಾಳೆಹಣ್ಣು ತಗೊಂಡು ಬಂದ. ಆದ್ರೆ ಆ ನಾಲ್ಕರಲ್ಲಿ 1 ಬಾಳೆಹಣ್ಣು ಹಾಳಾಗಿ ಹೋಗಿತ್ತು. ಹಾಗಾಗಿ ಮೂರು ಬಾಳೆಹಣ್ಣನ್ನು ಪೀಸ್ ಮಾಡಿ ನಾಲ್ವರು ತಿಂದಿದ್ವಿ. ಮುಂದೇನು ಮಾಡೋದು ಅಂತ ಹಾಗೆ ವ್ಯಾನ್ ನಲ್ಲಿ ಕೂತಿರ್ಬೇಕಾದ್ರೆ ರೈಲ್ವೇ ಪೊಲೀಸ್ ಸಮವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬ ಬಂದ. ಸಾರ್ ನಾನು ಮೈಸೂರಿನವನು ಎಂದು ಹೇಳಿ ಪರಿಚಯ ಮಾಡಿಸಿಕೊಂಡು, ನಂತ್ರ ಊಟ ಆಯ್ತಾ ಕೇಳ್ದ. ಊಟ ಎಲ್ಲಿ ಸಾರ್ ತಿಂಡಿನೇ ಆಗಿಲ್ಲ ಅಂತ ನಾವು ಹೇಳಿದ ಕೂಡ್ಲೇ ಆ ರೈಲ್ವೇ ಪೊಲೀಸ್ ಎಲ್ಲಿಂದಲೋ ನಾಲ್ಕು ಬೇಯಿಸಿದ ಮೊಟ್ಟೆ ತೆಗೆದುಕೊಂಡು ಬಂದು ಕೊಟ್ಟ. ಸಿಕ್ಕಿದ್ದೇ ತಡ ನಾಲ್ವರೂ ಒಂದೊಂದು ಮೊಟ್ಟೆ ತಿಂದ್ವಿ. ಕನಿಷ್ಠ ಆ ಪೊಲೀಸ್ ಗೆ ನಿಮ್ಗೆ ಬೇಕಾ ಅಂತನೂ ಕೇಳಿರಲಿಲ್ಲ. ಹಸಿದ ಹೊಟ್ಟೆಯ ತಾಳದ ಮಧ್ಯೆ ಏನೂ ಗೊತ್ತಾಗ್ತಿರ್ಲಿಲ್ಲ.

ಒಮ್ಮೊಮ್ಮೆ ಊಟ ಸಾಕು ಅಂತ ಅರ್ಧ ತಿಂದು ಎಸೆದಿದ್ದ ಘಟನೆಗಳೆಲ್ಲ ನೆನಪಾಗಿತ್ತು ಅವಾಗ. ಅಥವಾ ಚೆನ್ನಾಗಿಲ್ಲ ಅಂತ ತಂದಿದ್ದ ಊಟ-ತಿಂಡಿ ಬೇಡಾಂತ ಎಸೀತೀವಿ. ಆದ್ರೆ ಅರಕ್ಕೋಣಂನ ಉರಿಬಿಸಿಲಿನಲ್ಲಿ ಹೊಟ್ಟೆಗೆ ಹಿಟ್ಟಿಲ್ಲದೆ ಪರದಾಡ್ತಿದ್ದಾಗ ಅವೆಲ್ಲವೂ ನೆನಪಾಯ್ತು..

ಅಷ್ಟೊತ್ತಿಗೆ ನಮ್ಮ ನ್ಯೂಸ್ 9 ರಿಪೋರ್ಟರ್ ತನ್ನ ಕೆಲಸ ಮುಗಿಸಿಕೊಂಡು ಕ್ವಾಲಿಸ್ ನಲ್ಲಿ ವಾಪಾಸ್ ಬಂದಿದ್ರು. ಪುಣ್ಯಕ್ಕೆ ನಮ್ಮ ಕ್ವಾಲಿಸ್ ಡ್ರೈವರ್ ಜೊತೆಗೆ ನಾಲ್ಕೈದು ಊಟ ಪಾರ್ಸೆಲ್ ಕಟ್ಟಿಸಿಕೊಂಡು ಬಂದಿದ್ದ. ಮೈನ್ ರೋಡ್ ಗೆ ಬಂದು ರಸ್ತೆ ಪಕ್ಕದಲ್ಲಿ ಮರದ ನೆರಳಿನಲ್ಲಿ ಗಾಡಿ ಪಾರ್ಕ್ ಮಾಡಿ ಪಾರ್ಸೆಲ್ ತಂದಿದ್ದ ಊಟ ತಿನ್ಬೇಕಾದ್ರೆ ಏನೋ ನೆಮ್ಮದಿ..

2 comments:

Manjunathraj said...
This comment has been removed by the author.
Manjunathraj said...

ವಿಷಯವನ್ನ ನೆರೇಟ್‌ ಮಾಡುವ ವಿಧಾನ ಚೆನ್ನಾಗಿದೆ ಗೆಳೆಯ... ಪತ್ರಕರ್ತನ ಅನುಭವಗಳು ಬಹಳ ವಿಚಿತ್ರವಾದವು... ಅವುಗಳನ್ನ ತನ್ನೊಳಗೇ ಇಟ್ಟುಕೊಳ್ಳದೆ ಹೀಗೆ ಇತರರಿಗೂ ತಿಳಿಸುವುದರಿಂದ ಹೊಸದಾಗಿ ಮಾಧ್ಯಮ ರಂಗಕ್ಕೆ ಕಾಲಿಡುವವರಿಗೆ ಅನುಕೂಲವಾಗುತ್ತೆ…