Wednesday, December 14, 2011

ಮೂರು ವರ್ಷಗಳ ನಂತರ..

ಮಲ್ಲೇಶ್ವರಂ 6th ಕ್ರಾಸ್ ನ ರಸ್ತೆಗಳಲ್ಲಿ ಮೂರು ವರ್ಷಗಳ ಹಿಂದೆ ನಾವಿಬ್ರೂ ಒಟ್ಟಿಗೆ ನಡ್ಕೊಂಡು ಹೋಗಿದ್ವಿ.. ಅವಾಗಿನ್ನೂ ಪರಿಚಯ ಸ್ನೇಹಕ್ಕೆ ತಿರುಗಿದ್ದ ದಿನಗಳು.. ಇಬ್ರೂ ಪರಸ್ಪರ ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದೆವು.. ಹಾಗಿದ್ದಾಗ್ಲೇ ಅದೊಂದು ದಿನ ಮಲ್ಲೇಶ್ವರಂನಲ್ಲಿ ಇಬ್ರೂ ಭೇಟಿಯಾಗಿದ್ವಿ.. ಹಾಗೆ ಮಾತಾಡ್ತಾ ಮಾತಾಡ್ತಾ 6th ಕ್ರಾಸ್ ನ ರಸ್ತೆಯಲ್ಲಿ ವಾಕ್ ಮಾಡ್ತಿದ್ವಿ.. ಅದು ಇಳಿ ಸಂಜೆಯ ಸುಂದರ ವಾತಾವರಣ.. ಹಾಗೆ ನಡ್ಕೊಂಡು ಹೋಗ್ತಿರ್ಬೇಕಾದ್ರೆ ನಾನಾಕೆಯ ಅಂಗೈ ಹಿಡ್ಕೊಂಡಿದ್ದೆ. ಪರಸ್ಪರ ಕೈ ಹಿಡ್ಕೊಂಡು ನಾವಿಬ್ರೂ ಹೆಜ್ಜೆ ಹಾಕುವಾಗ ನಮಗರಿವಿಲ್ಲದಂತೆ ಆತ್ಮೀಯತೆ ಬೆಳೆದುಕೊಂಡಿತ್ತು.. ನಮ್ಮಿಬ್ಬರ ಗೆಳೆತನ ಮತ್ತಷ್ಟು ಗಟ್ಟಿಯಾಗಿತ್ತು.. ಇವೆಲ್ಲ ಮೂರು ವರ್ಷಗಳ ಹಿಂದಿನ ನೆನಪು.. ಇದಾದ ಬಳಿಕ ನಾವಿಬ್ಬರೂ ಭೇಟಿಯಾಗಿರಲಿಲ್ಲ.. ನಾನೊಂದು ತೀರ, ಅವಳೊಂದು ತೀರ ಎನ್ನುವಂತೆ ಇಬ್ರೂ ದೂರ ದೂರ ಇದ್ವಿ..


ಆದ್ರೆ ನಿನ್ನೆ ಸಂಜೆ ಮತ್ತೆ ನಾವಿಬ್ರೂ ಭೇಟಿಯಾಗಿದ್ವಿ.. ಅದೇ ಮಲ್ಲೇಶ್ವರಂ 6th ಕ್ರಾಸ್ ನಲ್ಲೇ.. ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಅದೇ ರಸ್ತೆಯಲ್ಲಿ ಕೈ ಕೈ ಹಿಡ್ಕೊಂಡು ಹೆಜ್ಜೆ ಹಾಕಿದ್ವಿ.. ಇದಾದ ಬಳಿಕ ವೇಣುಗೋಪಾಲ ಸ್ವಾಮಿ ದೇವಾಲಯದ ಸುಂದರ ಪರಿಸರದಲ್ಲಿ ಸ್ವಲ್ಪ ಹೊತ್ತು ಮೌನವಾಗಿ ಕುಳಿತಿದ್ವಿ.. ಕತ್ತಲಾಗ್ತಿದ್ದಂಗೆ ನಿಧಾನಕ್ಕೆ ಅಲ್ಲಿಂದ ಹೊರಟು ಸಣ್ಣದೊಂದು ಶಾಪಿಂಗ್ ಮುಗಿಸಿ ಮೊದ್ಲು ಯಾವತ್ತೂ ಹೋಗ್ತಿದ್ದ ಹೋಟೆಲ್ ನತ್ತ ಹೆಜ್ಜೆ ಹಾಕಿದ್ದೆವು.. ಇಬ್ರಿಗೂ ಹಸಿವಿರಲಿಲ್ಲ.. ಆದ್ರೂ ಆ ಹೋಟೆಲ್ ಗೆ ಹೋಗೋಕೆ ಆಸೆ.. ಫಸ್ಟ್ ಫ್ಲೋರ್ ನ ಅದೇ ಮೂಲೆ ಟೇಬಲ್ ಖಾಲಿಯಿತ್ತು.. ಇಬ್ರೂ ಹೋಗಿ ಒಂದೊಂದು ಕಪ್ ಟೀ ಕುಡಿದು ಸ್ವಲ್ಪ ಹೊತ್ತು ಮಾತಾಡಿ ವಾಪಾಸ್ ಹೊರಟಿದ್ದೆವು..


ಹಳೆಯ ನೆನಪುಗಳು ಯಾವತ್ತಿದ್ರೂ ಸುಮಧುರ.. ಅದು ನಮ್ಮ ಪ್ರೀತಿಪಾತ್ರರ ಬಗ್ಗೆಯಾಗುವಾಗ ಮತ್ತಷ್ಟು ಮಧುರವಾಗಿರತ್ತೆ.. ನೆನಪುಗಳ ಬುತ್ತಿಯನ್ನು ಮತ್ತೊಮ್ಮೆ ಸವಿಕ್ಷಣಗಳೊಂದಿಗೆ ತುಂಬಿಸಿಟ್ಟಿದ್ದೀನಿ.. ಮತ್ತೆ ಯಾವತ್ತಾದ್ರೂ ನೆನೆಸಿಕೊಳ್ಳೋಕೆ...

No comments: