Saturday, February 11, 2012

ನಾಲ್ಕು ವರ್ಷದ ಹಿಂದಿನ ನೆನಪು... ನಾನಾಗ ಬೆಂಗಳೂರಿಗೆ ಕಾಲಿಟ್ಟಿದ್ದ ಆರಂಭದ ದಿನಗಳು. ಖಾಸಗೀ ವಾಹಿನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದೆ. ಸಾವಿರಾರು ಕನಸುಗಳು, ನಿರೀಕ್ಷೆಗಳನ್ನಿಟ್ಟುಕೊಂಡಿದ್ದ ನನಗೆ ನನ್ನದೇ ಆದ ಕಲ್ಪನಾ ಲೋಕವೊಂದಿತ್ತು. ನಾನೇ ಕಟ್ಟಿ ಬೆಳೆಸಿದ ಆಳೆತ್ತರದ ಕನಸುಗಳ ಲೋಕವಿತ್ತು. ಈ ನಡುವೆ ಆ ಹುಡುಗಿ ನನ್ನು ಮನಸ್ಸು ಕೆಡಿಸಿದ್ದಳು.
               ನಾ ನಿನ್ನ ತುಂಬಾ ಪ್ರೀತಿಸ್ತೀನಿ ಕಣೋ ಅಂತ ಆಕೆ ಅದೊಂದು ದಿನ ಫೋನ್ ಮಾಡಿ ಹೇಳಿದ್ಳು. ನಂಗೆ ಕೆಲಹೊತ್ತು ಅದನ್ನು ಅರಗಿಸಿಕೊಳ್ಳೋಕೆ ಸಾಧ್ಯವಾಗಿರಲಿಲ್ಲ. ಏನ್ ಹೇಳ್ಬೇಕು ಅಂತ ಗೊತ್ತಾಗದೆ ಸುಮ್ಮನಿದ್ದೆ. ಸುನೀ ಪ್ಲೀಸ್ ಕಣೋ, ಇಲ್ಲಾಂತ ಮಾತ್ರ ಹೇಳ್ಬೇಡ, ನಂಗೆ ತಡ್ಕೊಳ್ಳೋಕಾಗಲ್ಲ ಅಂತ ಅತ್ತು ಹೇಳಿದ್ಳು. ಅವಳ್ಯಾವತ್ತೂ ನನ್ನನ್ನು ಸುನೀ ಅಂತನೇ ಹೆಚ್ಚಾಗೀ ಕರೀತಿದ್ದಿದ್ದು. ಅವಳ ಆರ್ದ ದನಿ ಕೇಳಿದಾಗ ನಂಗೂ ಕಣ್ಣಲ್ಲಿ ನೀರು ಬಂದಿತ್ತು.
              ಅವಳು ಪೋನ್ ಮಾಡಿ ತನ್ನ ಪ್ರೀತಿಯ ವಿಚಾರ ಹೇಳಿದ ಒಂದು ವಾರದ ಬಳಿಕ ಮತ್ತೊಮ್ಮೆ ಕಾಲ್ ಮಾಡಿದ್ಳು. ಸುನಿ ನಾಳೆ ನಾನು ಬೆಂಗಳೂರಿಗೆ ಬರ್ತಿದ್ದೀನಿ. ಜೊತೆಗೆ ನನ್ ಕ್ಲಾಸ್ ಮೇಟ್ ಕೂಡ ಇರ್ತಾನೆ. ಒಂದು ಇಂಟರ್ ವ್ಯೂ ಇದೆ ಕಣೋ.. ಬೆಳಿಗ್ಗೆ ನಿನ್ ರೂಮ್ ಗೆ ಬರ್ತೀವಿ ಅಂದಿದ್ಳು. ಮರುದಿನ ಭಾನುವಾರವಾಗಿದ್ರಿಂದ ಆಫೀಸ್ ಗೆ ರಜೆ ಇತ್ತು. 6 ಗಂಟೆಗೆಲ್ಲ ಮೆಜೆಸ್ಟಿಕ್ ನಲ್ಲಿ ಬಸ್ ಇಳ್ಕೊಂಡು ಇಬ್ರೂ ನನ್ನ ರೂಂ ಹತ್ರ ಬಂದಿದ್ಳು. 9 ಗಂಟೆಗೆಲ್ಲ ನಾನು ಅವರ ಜೊತೆಗೆ ಇಂಟರ್ ವ್ಯೂ ಜಾಗಕ್ಕೆ ಹೊರಟಿದ್ದೆ. ಮಧ್ಯಾಹ್ನವಾಗ್ತಿದ್ದಂಗೆ ಇಂಟರ್ ವ್ಯೂ ಮುಗಿದಿತ್ತು. ಮತ್ತೆ ಅವರಿಬ್ಬರನ್ನೂ ಕರ್ಕೊಂಡು ಲಾಲ್ ಭಾಗ್ ತೋರಿಸೋಕೆ ಕರ್ಕೊಂಡು ಹೋಗಿದ್ದೆ. 6 ಗಂಟೆಗೆಲ್ಲ ಮತ್ತೆ ವಾಪಾಸ್ ರೂಂ ಗೆ ಬಂದಿದ್ವಿ.
             10 ಗಂಟೆಗೆ ಅವರಿಗೆ ಮೆಜೆಸ್ಟಿಕ್ ನಿಂದ ವಾಪಾಸ್ ಊರಿಗೆ ಹೊರಡೋಕೆ ಬಸ್. 8.30ಕ್ಕೆ ರೂಮ್ ಬಿಡೋಣ ಅಂದ್ಕೊಂಡಿದ್ದೆ. 8 ಗಂಟೆಗೆ ಊಟ ಮುಗಿಸಿಕೊಂಡ್ವಿ. ಮೂವರೂ ಟೆರೇಸ್ ನ ಕಟ್ಟೆ ಮೇಲೆ ಮಾತಾಡ್ತಾ ಕೂತಿದ್ವಿ. ಅಷ್ಟರಲ್ಲಿ ಸಹಪಾಠಿ ರೀ ಚಾರ್ಜ್ ಮಾಡೋಕೆ ಅಂತ ಕೆಳಗಡೆ ಹೋದ. ಬಹುಷ ಆಕೆ ಅದೇ ಕ್ಷಣಕ್ಕೋಸ್ಕರ ಕಾಯ್ತಿದ್ಳು. ಸುನೀ ನಾನು ಹೇಳಿದ್ರ ಬಗ್ಗೆ ಥಿಂಕ್ ಮಾಡಿದ್ಯಾ.. ಏನ್ ಮಾಡ್ತಿಯಾ ಹೇಳು.. ಅಂದ್ಳು. ಆಕೆ ತನ್ನ ಪ್ರೀತಿಯ ವಿಚಾರ ಹೇಳಿ ಒಂದು ವಾರ ಕಳೆದ್ರೂ ನನಗೊಂದು ನಿರ್ಧಾರಕ್ಕೆ ಬರೋಕೆ ಸಾಧ್ಯವಾಗಿರಲಿಲ್ಲ. ಆಕೆ ನಂಗೂ ಇಷ್ಟ ಆಗಿದ್ಳು. ಆಕೆಯ ತುಂಟತನಗಳೂ. ಆದ್ರೆ ಹಾಗಂತ ನಾನ್ಯಾವತ್ತೂ ಆಕೆಯನ್ನು ಲವ್ ಅನ್ನೋ ದೃಷ್ಟಿಕೋನದಲ್ಲಿ ನೋಡಿರಲಿಲ್ಲ. ಫ್ರೆಂಡ್ಲಿಯಾಗೇ ಇದ್ದೆ. ಆಕೆಯ ಪ್ರೀತಿಗೆ ಒಪ್ಪಿಗೆ ಹೇಳೋದೇನೋ ಸುಲಭವಾಗಿತ್ತು. ಆದ್ರೆ ಮುಂದೆ... ಆಕೆಯನ್ನು ಮದುವೆಯಾಗೋ ವಿಚಾರವಂತೂ ಕನಸೇ.. ಮದುವೆಗೆ ಸಾಕಷ್ಟು ತೊಡಕುಗಳುಂಟಾಗತ್ತೆ ಅನ್ನೋದು ನಂಗೆ ಗೊತ್ತಿತ್ತು. ಹಾಗಾಗಿ ಹೂಂ ಅನ್ನೋಕೆ ಸ್ವಲ್ಪ ಹಿಂದೆ ಮುಂದೆ ನೋಡ್ತಿದ್ದೆ.
              ಅಂದು ರಾತ್ರಿ ನಾನೇನೂ ಸ್ಪಷ್ಟವಾಗಿ ಹೇಳೋಕೆ ಆಗಿರಲಿಲ್ಲ. ಆಕೆ ಜಾಸ್ತಿ ಫೋರ್ಸ್ ಮಾಡಲಿಲ್ಲ. ಅದೇ ಮೌನದಲ್ಲೇ ವಾಪಾಸ್ ಊರಿಗೆ ಹೊರಟ್ಳು. ಊರಿಗೆ ಹೋದ್ಮೇಲೆ ಮತ್ತೆ ನಾಲ್ಕು ದಿನದ ನಂತ್ರ ಫೋನ್ ಮಾಡಿದ್ಳು. ಈ ಬಾರಿ ನಂಗೆ ಏನಾದರೊಂದು ಉತ್ತರ ಹೇಳಲೇ ಬೇಕಾಗಿತ್ತು. ಈ ನಡುವೆ ದೊಡ್ಡದೊಂದು ಡ್ರಾಮಾ ನಡೆದು ಹೋಗಿತ್ತು. ಆಕೆಯ ಆಱೋಗ್ಯಕ್ಕೆ ಸಂಬಂಧಿಸಿ.. ಮಧ್ಯೆ ಅದ್ಯಾವುದೋ ಘಳಿಗೆಯಲ್ಲಿ ನಾನಾಕೆಯ ಪ್ರೀತಿಗೆ ಒಪ್ಪಿಗೆ ಸೂಚಿಸಿದ್ದೆ...
ಆದ್ರೆ ಮುಂದೆ ಏನೇನೋ ಆಗೋಯ್ತು. ನಾನು ಆಕೆಯ ಪ್ರೀತಿಗೆ ಒಪ್ಪಿಗೆ ಸೂಚಿಸಿದ ಮತ್ತೊಂದು ವಾರದಲ್ಲೇ ಆಕೆಯ ಎಂಗೇಜ್ ಮೆಂಟ್ ಸಹ ಆಗೋಯ್ತು.. ಮತ್ತೆ ತಿಂಗಳೊಳಗಾಗಿ ಧಾಂ ಧೂಂ ಅಂತ ಮದುವೆನೂ ಆಯ್ತು.. ನನಗದನ್ನು ಅರಗಿಸಿಕೊಳ್ಳೋಕೆ ಸಾಧ್ಯವಾಗಲಿಲ್ಲ..ಹಾಗಂತ ಭಗ್ನಪ್ರೇಮಿಯಾಗಿ ದೇವದಾಸನಾಗಲಿಲ್ಲ.. ಆಗೋದೆಲ್ಲ ಒಳ್ಳೇದಕ್ಕೇ ಅಂದ್ಕೊಂಡು ಸುಮ್ಮನಾದೆ. ಕೊನೆಗೆ ಆಕೆಯ ಮದುವೆಗೂ ಹೋಗಿ ಅಕ್ಷತೆ ಕಾಳು ಹಾಕಿ ಬಂದಿದ್ದೆ...
                ಇವೆಲ್ಲ ಆಗಿ ಹೆಚ್ಚು ಕಡಿಮೆ ನಾಲ್ಕು ವರ್ಷಗಳೇ ಕಳೆದಿವೆ.. ಮತ್ತೆ ಯಾವುದೇ ಹುಡುಗಿ ಪ್ರೋಪೋಸ್ ಮಾಡಿದಾಗ ಹಳೆಯ ಕಥೆಗಳೆಲ್ಲ ನೆನಪಾಗೋಯ್ತು.. ಹಾಗೆ ಸುಮ್ನೆ ಬರೆದೆ..

No comments: