Thursday, April 5, 2012

ಮೊದಲ ಪ್ರೀತಿ...

ಅಪಕ್ವ ಮನಸ್ಸಿನಲ್ಲಿ ಮೊಳಕೆಯೊಡೆದಿದ್ದ ಮೊದಲ ಪ್ರೀತಿ.. ನಾನಾಗ ಫಸ್ಟ್ ಪಿಯುಸಿಗೆ ಕಾಲಿಟ್ಟಿದ್ದೆ. ಕಾಲೇಜು ಜೀವನದ ಆರಂಭದ ದಿನಗಳು.. ಮೊದಲ ಮಳೆಯ ಜೊತೆಗೆ ಪುಟ್ಟದೊಂದು ಬ್ಯಾಗ್ ಬೆನ್ನಿಗೆ ನೇತಾಡಿಸಿಕೊಂಡು ಕಾಲೇಜಿಗೆ ಹೊರಟಿದ್ದೆ. ಭೋರ್ಗರೆಯುವ ಮಳೆಯನ್ನೂ ಲೆಕ್ಕಿಸದೆ ಅಪ್ಪ ಕೊಡಿಸಿದ ಹೊಸ ಕೊಡೆಯೊಂದಿಗೆ ಮಳೆ ಹನಿಯೊಂದಿಗೆ ಚೆಲ್ಲಾಟವಾಡ್ತಾ ಕಾಲೇಜಿಗೆ ಹೋಗೋದೆ ಹೊಸ ಅನುಭವವಾಗಿತ್ತು. ಅಂದಿನವರೆಗೆ ಯುನಿಫಾರ್ಮ್ ನಲ್ಲೇ ಸ್ಕೂಲ್ ಗೆ ಹೋಗ್ತಿದ್ದ ನನಗೆ ಕಲರ್ ಕಲರ್ ಡ್ರೆಸ್ ನಲ್ಲಿ ಕಾಲೇಜಿಗೆ ಹೋಗೋದು ವಿಶೇಷವಾಗಿತ್ತು.

ಕಾಲೇಜು ಎಂಟ್ರೆನ್ಸ್ ತಲುಪ್ತಿದ್ದಂಗೆ ಕೊಡೆ ಮಡಚಿ ಒದ್ದೆ ಬಟ್ಟೆಯೊಂದಿಗೆ ಕ್ಲಾಸ್ ಹುಡುಕುವ ಕೆಲಸ ಆರಂಭವಾಗಿತ್ತು. ಕೊನೆಗೂ 0-26 ಕ್ಲಾಸನ್ನು ಹುಡುಕೋದ್ರಲ್ಲಿ ಸಫಲನಾಗಿದ್ದೆ. ಮೊದಲ ದಿನದ ನೆನಪುಗಳೊಂದಿಗೆ ಒಂದು ವಾರ ಕಳೆದಿದ್ದೆ. ವಾರದ ಬಳಿಕ ನನ್ನ ಕಣ್ಣಿಗೆ ಕಾಣಿಸಿದ್ದೇ ಆ ಸುಂದರ ಕುವರಿ. ಹೆಸರು ಗೊತ್ತಿಲ್ಲ, ಊರು ಗೊತ್ತಿಲ್ಲ. ಆದ್ರೆ ಪ್ರತಿದಿನ ಅವಳನ್ನು ನೋಡ್ತಿದ್ದೆ. ಅವಳಿಗೊಂದು ಸ್ಮೈಲ್ ಕೊಡೋಕೆ ಕಾಯ್ತಿದ್ದೆ. ಆದ್ರೆ ಆಕೆ ಯಾವ ಹುಡುಗರ ಮುಖವನ್ನೂ ನೋಡ್ತಿರ್ಲಿಲ್ಲ. ನನ್ನ ಕಡೆಗಂತೂ ಅಪ್ಪಿ ತಪ್ಪಿಯೂ ನೋಡ್ತಿರ್ಲಿಲ್ಲ.

ಕೊನೆಗೂ ಕ್ಲಾಸ್ ನಲ್ಲಿ ಅಟೆಂಡೆನ್ಸ್ ಹಾಕೋವಾಗ ಅವಳ ಹೆಸರನ್ನು ಗಮನಿಸಿದ್ದೆ. ನನ್ನ ಮಟ್ಟಿಗಂತೂ ವಿಶೇಷವಾದ ಹೆಸರು. ಆ ಹೆಸರನ್ನು ತುಂಬಾನೇ ಪ್ರೀತ್ಸೋಕೆ ಶುರು ಮಾಡಿದ್ದೆ. ನಿಧಾನಕ್ಕೆ ಆ ಹೆಸರಿನ ಮೇಲಿದ್ದ ಪ್ರೀತಿ ಆಕೆಯ ಮೇಲಾಯ್ತು. ಪ್ರತಿದಿನ ಕಾಲೇಜಿಗೆ ಬರ್ತಿದ್ದಂಗೆ ಅವಳನ್ನೊಮ್ಮೆ ನೋಡೋಕೆ ಕಾಯ್ತಿದ್ದೆ. ಅವಾಗಷ್ಟೇ ಕ್ಲಾಸ್  ಬಂಕ್ ಮಾಡೋದನ್ನು ಕಲಿತಿದ್ದ ನಾನು ಆಕೆಗೋಸ್ಕರ ಕ್ಲಾಸ್ ಗೆ ಹೋಗೋಕೆ ಶುರು ಮಾಡಿದ್ದೆ.

ವಾರಗಳು ತಿಂಗಳುಗಳಾಯ್ತು. ಅವಳನ್ನು ಹುಚ್ಚನಂತೆ ಪ್ರೀತ್ಸೋಕೆ ಶುರು ಮಾಡಿದ್ದೆ. ಫಸ್ಟ್ ಇಯರ್ ಪಿಯುಸಿ ಮುಗಿಯಿತು. ನೋಡ ನೋಡ್ತಿದ್ದಂಗೆ ಸೆಕೆಂಡ್ ಇಯರ್ ಪಿಯುಸಿಯ ಕೊನೆಯ ದಿನಗಳು ಸಮೀಪಿಸಿದ್ವು. ಫೈನಲ್ ಎಕ್ಸಾಂ ಟೈಮ್ ನಲ್ಲಿ ನಂಗೆ ಭಯ ಶುರುವಾಗಿತ್ತು. ಎಕ್ಸಾಂ ಬಗ್ಗೆಯಲ್ಲ.. ಬದಲಾಗಿ ಆಕೆಯ ಬಗ್ಗೆ. ಸೆಕೆಂಡ್ ಪಿಯುಸಿ ನಂತ್ರ ಆಕೆ ಡಿಗ್ರಿಗಾಗಿ ಮತ್ತೆ ನಮ್ಮ ಕಾಲೇಜಿಗೆ ಬರ್ತಾಳೋ, ಇಲ್ಲಾ ಮನೆಯಲ್ಲೇ ಬಿದ್ದಿರ್ತಾಳೋ ಅಂತ... ಏನಪ್ಪಾ ಮಾಡೋದು ಅಂತ ತುಂಬಾನೇ ತಲೆಕೆಡಿಸಿಕೊಂಡಿದ್ದೆ. ಆದ್ರೆ ಹಾಗಂತ ಅವಳಲ್ಲಿ ಇದ್ಯಾವುದನ್ನೂ ಕೇಳೋ ಹಾಗೂ ಇಲ್ಲ. ಯಾಕಂದ್ರೆ ನಾವಿಬ್ರೂ ಮಾತಾಡ್ತಾನೇ ಇರ್ಲಿಲ್ಲ.

ಕೊನೆಗೆ ಪಿಯುಸಿ ಎಕ್ಸಾಂ ಮುಗಿಯಿತು. 2 ತಿಂಗಳು ರಜೆ ಇತ್ತು. ಆ ಟೈಮ್ ನಲ್ಲಂತೂ ಆಕೆಯನ್ನು ನೋಡೋಕಾಗ್ದೆ ಪರದಾಡ್ತಿದ್ದೆ. ರಿಸಲ್ಟ್ ನವತ್ತು ಆಕೆ ಮತ್ತೆ ಕಾಲೇಜಿಗೆ ಬಂದಿದ್ಳು. ಆಕೆಯನ್ನು ನೋಡಿದ ಖುಷಿ ಇವತ್ತಿಗೂ ನೆನಪಿದೆ.

ನಂಗೆ ತುಂಬಾ ಖುಷಿ ಅನ್ಸಿದ್ದು ಅಂದ್ರೆ ಫಸ್ಟ್ ಇಯರ್ ಡಿಗ್ರಿಗೆ ಅಡ್ಮಿಷನ್ ಮಾಡೋಕೆ ಬಂದವತ್ತು. ಅಂದು ಆಕೆಯೂ ತನ್ನ ತಾಯಿ ಜೊತೆಗೆ ಕಾಲೇಜಿಗೆ ಬಂದಿದ್ಳು. ನಾನು ಜರ್ನಲಿಸಂ ಕಾಂಬಿನೇಷನ್ ಚೂಸ್ ಮಾಡಿದ್ದೆ. ಆಕೆಯಾದ್ರೋ ಹಿಸ್ಟರಿಗೆ ಮೊರೆ ಹೋಗಿದ್ಳು. ಆದ್ರೂ ಒಂದೇ ಕಾಲೇಜಲ್ಲಿ ಪ್ರತಿದಿನ ನೋಡ್ಬೋದಲ್ವಾ ಅನ್ನೋ ಖುಷಿ ನನ್ನಲ್ಲಿತ್ತು.

ಮುಂದಿನ ದಿನಗಳು ನನ್ನ ಪಾಲಿಗೆ ತುಂಬಾನೇ ಸಂತಸ ತಂದಿತ್ತು. ಪ್ರತಿದಿನ ಕಾಲೇಜಿಗೆ ಬಂದು ಆಕೆಯ ಮುಖವನ್ನೊಮ್ಮೆ ನೋಡಿಯೇ ನಾನು ನನ್ನ ಕ್ಲಾಸ್ ರೂಂಗೆ ಹೋಗ್ತಿದ್ದೆ. ಹೀಗೆ ಮತ್ತೆರಡು ವರ್ಷಗಳು ಕಳೆದವು. ನನ್ನ ವನ್ ವೇ ಪ್ರೀತಿ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿತ್ತು. ಕೊನೆಗೆ ನನ್ನ ಪ್ರೀತಿಯನ್ನು ಅವಳ ಮುಂದೆ ಹೇಳ್ಬೇಕು ಅಂತ ಡಿಸೈಡ್ ಮಾಡಿದ್ದೆ. ಅದೊಂದು ದಿನ ಧೈರ್ಯ ಮಾಡಿ ಆಕೆಯನ್ನು ನನ್ನ ಕ್ಲಾಸ್ ರೂಂಗೆ ಕರೆದು ನಾನಿನ್ನ ಇಷ್ಟಪಡ್ತೀನಿ, ಮದುವೆಯಾಗ್ಬೇಕು ಅಂದ್ಕೊಂಡಿದ್ದೀನಿ ಅಂತ ಹೇಳಿದ್ದೆ. ಆದ್ರೆ ಆಕೆ ಒಲ್ಲೆ ಅಂದಿದ್ದಳು. ಮನೆಯಲ್ಲಿ ಗೊತ್ತಾದ್ರೆ ಪ್ರಾಬ್ಲಂ ಆಗತ್ತೆ, ಸೋ ಬೇಡ.. ದಯವಿಟ್ಟು ನನ್ನು ಮರೆತು ಬಿಡು ಅಂತ ಹೇಳಿದ್ಳು..

ಪ್ರಥಮ ಚುಂಬನಂ ದಂತಭಗ್ನಂ ಅನ್ನೋ ಪರಿಸ್ಥಿತಿ ಉಂಟಾಗಿತ್ತು. ನಾನ್ಯಾವತ್ತೂ ಆಕೆ ನನ್ನನ್ನು ರಿಜೆಕ್ಟ್ ಮಾಡ್ತಾಳೆ ಅನ್ನೋ ನೆಗೆಟೀವ್ ಯೋಚನೆಯನ್ನೇ ಇಟ್ಕೊಂಡಿರ್ಲಿಲ್ಲ. ಅಂತಾದ್ರಲ್ಲಿ ಆಕೆಯ ಮಾತು ಕೇಳಿದಾಗ ತುಂಬಾ ನೋವಾಗಿತ್ತು. ಅದನ್ನು ಅರಗಿಸಿಕೊಳ್ಳೋಕೆ ವಾರಗಳು, ತಿಂಗಳುಗಳೇ ಬೇಕಾಯ್ತು. ಕ್ಲಾಸ್ ಮೇಟ್ಸ್ ಗಳಿಂದ ದೇವದಾಸ್ ಅನ್ನೋ ಬಿಟ್ಟಿ ಪಟ್ಟವೂ  ಸಿಕ್ಕಿತ್ತು...

ಮೊದಲ ಪ್ರೀತಿಯ ನೆನಪುಗಳು ಯಾವತ್ತಿದ್ರೂ ಮರೆತು ಹೋಗಲ್ಲ. ಅವು ಸದಾಕಾಲ ನೆನಪಿನಲ್ಲುಳಿಯತ್ತೆ. ಇವತ್ತಿಗೂ ನನ್ನ ಮೊದಲ ಇ ಮೇಲ್ ಐಡಿಯ ಪಾಸ್ ವರ್ಡ್ ಅವಳ ಹೆಸರೇ ಇದೆ. ನಾನು ಸೆಕೆಂಡ್ ಪಿಯುಸಿನಲ್ಲಿದ್ದಾಗ ಕ್ರಿಯೇಟ್ ಮಾಡಿದ ಇ ಮೇಲ್ ಐಡಿ...

ಅವಳ ನೆನಪುಗಳು, ಅವಳೊಂದಿಗಿನ ಕನಸುಗಳು... ನೆನಪುಗಳ ಬುತ್ತಿಯಲ್ಲಿ ಭದ್ರವಾಗಿದೆ. ಅವಳಿಗೆ ನಾನಿವಾಗ ನೆನಪಿರ್ಲಿಕ್ಕಿಲ್ಲ. ಯಾಕಂದ್ರೆ ಅವಳು ಮದುವೆಯಾಗಿ ಮೂರು ವರ್ಷಗಳೇ ಕಳೆದಿವೆ. ಸುಂದರ ಸಂಸಾರದ ನೌಕೆಯಲ್ಲಿ ಖುಷಿಯಾಗಿದ್ದಾಳೆ ಅಂದ್ಕೊಂಡಿದ್ದೀನಿ..  ಯಾವತ್ತೂ ಖುಷಿಯಾಗಿರ್ಲಿ...

No comments: