Monday, August 5, 2013

ಗೆಳೆತನದ ಬೆಸುಗೆ...

ಪ್ರೀತಿ ಸ್ನೇಹ ಅನ್ನೋದೆ ಹಾಗೆ.. ಯಾರ ಮೇಲೆ ಯಾವಾಗ ಬರತ್ತೆ ಅಂತ ಹೇಳೋದಿಕ್ಕಾಗಲ್ಲ.. ನಿನ್ನೆ ಮೊನ್ನೆ ಪರಿಚಯವಾದವರು ತುಂಬಾ ಬೇಗ ಮನಸ್ಸಿಗೆ ಹತ್ತಿರ ಆಗ್ತಾರೆ.. ಕೆಲವೇ ದಿನಗಳ ಮಾತುಕತೆಯೇ ಹಲವಾರು ವರ್ಷಗಳ ಪರಿಚಯದಂತೆ ಭಾಸವಾಗತ್ತೆ... ತುಂಬಾ ಮಾತಾಡ್ಬೇಕು ಅನ್ಸತ್ತೆ.. ಮನಸಲ್ಲಿರೋದನ್ನೆಲ್ಲ ಹೇಳಿ ಹಗುರಾಗಬೇಕು ಅನ್ಸತ್ತೆ.. ಜೊತೆಗಿದ್ದುಕೊಂಡು ಕೀಟಲೆ ಮಾಡ್ತಾ ಎಲ್ಲ ಮರೆತು ಖುಷಿಯಾಗಿರ್ಬೇಕು ಅನ್ಸತ್ತೆ.. ಹೀಗೆ ಹತ್ತು ಹಲವು ಕನಸುಗಳು...

ಇಂದಿನ ಯಾಂತ್ರೀಕೃತ ಬದುಕಿನಲ್ಲಿ ವೈಯಕ್ತಿಕ ಹಿತಾಸಕ್ತಿಗಳಿಗೆ ಕೊಂಚವೂ ಬೆಲೆ ಸಿಗಲ್ಲ.. ಮನುಷ್ಯ ಅಂದ್ಮೇಲೆ ಪ್ರತಿಯೊಬ್ಬನಿಗೂ ತನ್ನದೇ ಆದ ಕನಸುಗಳಿರತ್ತೆ... ನಿರೀಕ್ಷೆಗಳಿರತ್ತೆ.. ಆದ್ರೆ ನಮ್ಮ ಕನಸು, ನಿರೀಕ್ಷೆಗಳಿಗೆ ಸ್ಪಂದಿಸೋಕೆ ಖುದ್ದು ನಮಗೆ ಆಗಿಲ್ಲ ಅಂತಾದ್ರೆ ಕಷ್ಟ ಅಲ್ವಾ.. ಬದುಕಿನ ಯಾವುದೋ ಒಂದು ಘಳಿಗೆಯಲ್ಲಿ ನಾವು ತುಂಬಾ ಬ್ಯುಸಿ ಅನಿಸಿಬಹುದು.. ಅದೇ ರೀತಿ ಯಾವುದೇ ಕೆಲಸ ಕಾರ್ಯಗಳಿಲ್ಲದೆ ಸುಮ್ಮನಿದ್ದಾಗ ಯಾವುದಾದರೂ ಕೆಲಸದಲ್ಲಿ ಬ್ಯುಸಿಯಾಗಬೇಕು ಎಂದೂ ಅನ್ಸತ್ತೆ.. ಆದ್ರೆ ತುಂಬಾ ಬ್ಯುಸಿಯಾಗಿದ್ದಾಗ ಎಲ್ಲಾ ಜಂಜಾಟಗಳಿಂದ ಹೊರಗೋಡಿ ಬರಬೇಕು ಅನ್ಸೋದು ಸಹಜ.. ಯಾರೂ ಇಲ್ಲದ ಜಾಗದಲ್ಲಿ ಒಂಟಿಯಾಗಿ ಇದ್ದು ಬಿಡಬೇಕು ಅನ್ಸೋದುಂಟು... ಆದ್ರೆ ದೈನಂದಿನ ಬದುಕಿನ ಅನಿವಾರ್ಯತೆಗಳ ಮಧ್ಯೆ ಇದ್ಯಾವುದೂ ಸಾಧ್ಯವಾಗದೆ ಇದ್ದಾಗ ಕನಿಷ್ಠ ಮನಸ್ಸು ಹಗುರ ಮಾಡ್ಕೊಳ್ಳೋಕೆ ಗೆಳತಿಯೊಬ್ಬಳು ಬೇಕು ಅನ್ಸತ್ತೆ..

ತನ್ನೆಲ್ಲ ಕನಸು, ನಿರೀಕ್ಷೆಗಳು, ನೋವು ನಲಿವುಗಳಿಗೆ ಸ್ಪಂದಿಸುವ ಹುಡುಗಿ ಅವಳಾಗಿರಬೇಕು.. ಆಕೆಯೂ ನನ್ನೊಂದಿಗೆ ಹಾಗೆಯೇ ಇರಬೇಕು.. ಹೇಳಬೇಕು ಅನ್ಸಿದ್ದನ್ನು ಮನಸ್ಸು ಬಿಚ್ಚಿ ಹೇಳಬೇಕು.. ಎಲ್ಲಾ ವಿಷಯವನ್ನೂ ಮುಕ್ತವಾಗಿ ಹಂಚಿಕೊಳ್ಳುವ ಮನಸ್ಸಿರಬೇಕು.. ಪ್ರೀತಿ, ಸ್ನೇಹ, ಕಾಳಜಿಯ ಹಂದರವಿರಬೇಕು... ಆದ್ರೆ ಸಂಶಯ ಸ್ವಾರ್ಥ ಇರಬಾರದು.. ನನ್ನ ಗೆಳೆಯ ನನ್ನವನು ಅನ್ನೋ ಮನೋಭಾವ ಸ್ವಾರ್ಥವಾಗಬಾರದು..

ಗೆಳೆತನಕ್ಕಿಂತ ಮಧುರವಾದ ಸಂಬಂಧ ಮತ್ತೊಂದಿಲ್ಲ.. ಆದ್ರೆ ಸಂಬಂಧ ಮಧುರವಾಗಿರಲು ಇಬ್ಬರ ನಡುವೆ ಹೊಂದಾಣಿಕೆಯಿರಬೇಕು.. ಅರ್ಥ ಮಾಡಿಕೊಳ್ಳುವ ಗುಣವಿರಬೇಕು.. ಹೇಳಲಾಗದ್ದನ್ನು ಪರಸ್ಪರ ಮಾತನಾಡಿಕೊಳ್ಳುವ ಒಳಮನಸ್ಸು ಜಾಗೃತವಾಗಬೇಕು.. ಹಾಗಾದಾಗ ಗೆಳೆತನದ ಬೆಸುಗೆ ಮತ್ತಷ್ಟು ಗಟ್ಟಿಗೊಳ್ಳೋದ್ರಲ್ಲಿ ಸಂಶಯವಿಲ್ಲ...

No comments: