Sunday, February 19, 2017

ಬಾಲ್ಯದ ನೆನಪುಗಳು..

ವೃತ್ತಿ ಜೀವನ ಆರಂಭವಾಗಿ 10 ವರ್ಷಗಳು ಆಗ್ತಾ ಬಂತು.. ಅಪರೂಪಕ್ಕೊಮ್ಮೆ ಬಿಡುವು ಸಿಕ್ಕಾಗ ಹಳೆಯ ದಿನಗಳೆಲ್ಲ ನೆನಪಾಗುತ್ತೆ.. Especially ಶಾಲೆಗೆ ಹೋಗ್ತಿದ್ದ ದಿನಗಳು.. ಆ ದಿನಗಳು ಇನ್ನೆಂದಿಗೂ ಮರಳಿ ಬರಲ್ಲ.. ಈಗಿನ ಮಕ್ಕಳಿಗೆ ಆ ದಿನಗಳು ಸಿಗೋದೂ ಇಲ್ಲ.. ಆದ್ರೆ ಈಗ ಆ ದಿನಗಳನ್ನು ನೆನೆಸಿಕೊಳ್ಳೋದೆ ಒಂಥರಾ ಖುಷಿ..
ಮನೆಯಲ್ಲಿ ನನ್ನ ಕಾಟ ತಡೆಯೋಕಾಗ್ದೆ ಒಂದು ವರ್ಷ ಮೊದ್ಲೇ ಅಂಗನವಾಡಿಗೆ ಸೇರಿಸಿದ್ರು. ಅಂಗನವಾಡಿ ಮನೆಯಿಂದ ತುಂಬಾ ಹತ್ತಿರ ಇತ್ತು. ಆಗ ನಮ್ಮ ಅಂಗನವಾಡಿಯಲ್ಲಿ ಜಾನಕಿ ಟೀಚರ್ ಪಾಠ ಮಾಡ್ತಿದ್ರು. ಚಡ್ಡಿ ಹಾಕೊಂಡು ಅಂಗನವಾಡಿಗೆ ಹೋಗ್ತಿದ್ದ ದಿನಗಳು.. ಹೆಚ್ಚಾಗಿ ಅಮ್ಮನೇ ನನ್ನನ್ನು ಅಂಗನವಾಡಿಗೆ ಕರ್ಕೊಂಡು ಹೋಗ್ತಾ ಇದ್ದಿದ್ದು. ಒಮ್ಮೊಮ್ಮೆ ಅಪ್ಪ.. ಅಂಗನವಾಡಿ ಸಮೀಪವೇ ಇದ್ದ ಥಾಮಸ್ ಅವರ ಮಿಠಾಯಿ ಅಂಗಡಿ. 5 ಪೈಸೆಗೆ ಸಿಗ್ತಾ ಇದ್ದ ಮಿಠಾಯಿ ಮುಂದೆ ಈಗಿನ ಯಾವ ಚಾಕ್ಲೇಟುಗಳೂ ಸಾಠಿಯಾಗಲ್ಲ. ಆಗ ಅಂಗನವಾಡಿಯಲ್ಲಿ ಮಧ್ಯಾಹ್ನ ಉಂಡೆ ಕೊಡ್ತಿದ್ರು. ಅದ್ರ ಹೆಸ್ರು ಮರ್ತೋಗಿದೆ.. ಬಟ್ ಅದ್ರ ರುಚಿ ಮಾತ್ರ ಇನ್ನೂ ಬಾಯಲ್ಲಿ ನೀರೂರಿಸುತ್ತೆ. ಪ್ಯಾಕೆಟ್ ರೂಪದಲ್ಲಿ ಬರ್ತಿದ್ದ ಹುಡಿಯನ್ನು ಅಂಗನವಾಡಿಯ ಆಯಾ, ದೊಡ್ಡದೊಂದು ಪಾತ್ರೆಯಲ್ಲಿ ಹಾಕಿ, ಅದಕ್ಕೊಂಚೂರು ನೀರು ಮಿಕ್ಸ್ ಮಾಡಿ ಉಂಡೆ ಮಾಡ್ತಿದ್ರು. ಒಬ್ಬರಿಗೆ ಸಾಮಾನ್ಯವಾಗಿ ಎರಡು ಉಂಡೆ ಸಿಗ್ತಿತ್ತು. ಕೆಲವೊಮ್ಮೆ ಅಂಗನವಾಡಿಯ ಸ್ಟೋರ್ ರೂಮ್‌ನಲ್ಲಿ ಪ್ಯಾಕೆಟ್‌ನಲ್ಲಿ ಮಿಕ್ಕಿದ ಹುಡಿಯನ್ನು ನಾವು ಅಂಗೈಗೆ ಹಾಕೊಂಡು ತಿನ್ತಿದ್ವಿ. ಆಗ ಆ ಹುಡಿ ಕೆನ್ನೆಯ ತುಂಬೆಲ್ಲಾ ಇರ್ತಿತ್ತು...
ಅಂಗನವಾಡಿ ಬಳಿಕ ಮನೆಯಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರದ ಮುಂಡ್ರುಪ್ಪಾಡಿ ಶಾಲೆಯಲ್ಲಿ ನನ್ನ ಒಂದನೇ ತರಗತಿ ವ್ಯಾಸಂಗ. ನಾಲ್ಕು ಕಿಲೋಮೀಟರ್ ನಡ್ಕೊಂಡು ಹೋಗೋದು ಆಗ ತುಂಬಾ ಕಷ್ಟ ಆಗ್ತಿತ್ತು. ಮಳೆಗಾಲದಲ್ಲಂತೂ ಕೈಯಲ್ಲೊಂದು ಕೊಡೆ ಹಿಡ್ಕೊಂಡು ಬ್ಯಾಗ್ ಒದ್ದೆಯಾಗದಂತೆ ಹೋಗೋದು ಪ್ರಯಾಸದ ಕೆಲಸ. ಅದು ಕಾಲು ಬೆಂಡಾಗಿರುವ ಉದ್ದದ ಕೊಡೆ. ಅಲ್ಲಲ್ಲಿ ಸೋರ್ತಿತ್ತು. ಹಾಗಾಗಿ ಮನೆಯಿಂದ ಹೊರಡುವಾಗ್ಲೇ ಅಮ್ಮ ಪ್ಲಾಸ್ಟಿಕ್ ಕವರೊಂದನ್ನು ತಲೆ ಮೇಲೆ ಕಟ್ತಿದ್ರು. ಕೊಡೆ ಸೋರಿದ್ರೂ, ತಲೆ ಮೇಲೆ ನೀರು ಬೀಳ್ಬಾರ್ದು ಅಂತ.. ಇನ್ನು ಬೆನ್ನಿಗೆ ಬಟ್ಟೆಯ ಬ್ಯಾಗ್. ಅದರೊಳಗೊಂದು ಉದ್ದದ ಬುತ್ತಿ.. ಅದಕ್ಕೊಂದು ಅರ್ಧ ವರ್ತುಲಾಕಾರದ ಪುಟ್ಟ ಹಿಡಿ.. ಸಾಮಾನ್ಯವಾಗಿ ಆ ಬುತ್ತಿಯಲ್ಲಿ ಅನ್ನ ಅಥವಾ ಗಂಜಿ ಇರ್ತಿತ್ತು. ಶಾಲೆಗೆ ಹೋಗ್ತಾ ಪಾಪಚ್ಚಣ್ಣನ ಅಂಗಡಿಯಿಂದ 25 ಪೈಸೆಯ ಉಪ್ಪಿನಕಾಯಿ ಪ್ಯಾಕೆಟ್ ತಗೊಂಡು ಹೋಗ್ತಿದ್ದೆ. ಇನ್ನು ಆ ಬ್ಯಾಗ್‌ ಒಳಗೆ ಬೆರಳೆಣಿಕೆಯ ಪುಸ್ತಕಗಳು.. ಮರದ ಪಟ್ಟಿಯಿಂದ ಕೂಡಿದ ಒಂದು ಸ್ಲೇಟ್.. ಸ್ಲೇಟ್ ಒರೆಸಲು ಹಿತ್ತಲಲ್ಲಿ ಬೆಳೆಯುವ ಅದ್ಯಾವುದೋ ಗಿಡದ ಕಡ್ಡಿ.. ಪುಟ್ಟ ಬಿಳಿ ಮತ್ತು ಕಂದು ಬಣ್ಣದ ಪುಟ್ಟ ಚಾಕ್‌ನಲ್ಲಿ ಒಮ್ಮೆ ಬರೆದ ಮೇಲೆ, ಆ ಕಡ್ಡಿಯಿಂದ ಅದನ್ನು ಒರೆಸ್ತಿದ್ವಿ. ಆಗ ಕೆಲವರು ಪ್ಲಾಸ್ಟಿಕ್ ಸ್ಲೇಟ್ ತರ್ತಿದ್ರು. ನಮ್ಮ ಪಾಲಿಗೆ ಅವರೆಲ್ಲ ಶ್ರೀಮಂತರ ಮನೆಯ ಮಕ್ಕಳು.. ಮುಂಡ್ರುಪ್ಪಾಡಿಯ ಆ ಶಾಲೆಗೆ ಹೋಗುವಾಗ ಒಂದು ನೀರಿನ ಹಳ್ಳ ಬರ್ತಿತ್ತು. ನಾವದನ್ನು ತೋಡು ಅಂತ ಕರೀತಿದ್ವಿ. ಈ ತೋಡು ದಾಟಲು ಅಡಿಕೆ ಮರದ ಸೇತುವೆ.. ಅಡಿಕೆ ಮರದ ಸೇತುವೆ ಅಂತ ಗಾಬರಿಯಾಗ್ಬೇಡಿ.. ಅಡಿಕೆ ಮರವನ್ನು ಎರಡು ಅಥವಾ ನಾಲ್ಕು ಭಾಗ ಮಾಡ್ತಾರೆ. ಬಳಿಕ ಅದರ ಹೊರಭಾಗ ಮೇಲ್ಭಾಗದಲ್ಲಿ ಬರುವಂತೆ ಇಟ್ಟು ನಾಲ್ಕೈದು ಕಡೆ ಹಗ್ಗದಿಂದ ಕಟ್ತಾರೆ. ಇದು ಸಾಮಾನ್ಯವಾಗಿ 30 ರಿಂದ 40 ಅಡಿ ಉದ್ದ ಇರುತ್ತೆ. ಇದನ್ನೇ ತೋಡಿನ ಎರಡೂ ಕಡೆಯ ದಡಕ್ಕೆ ಮುಟ್ಟುವಂತೆ ಹಾಕಿರ್ತಾರೆ. ಈ ಎರಡೂ ಬದಿಯಲ್ಲಿ ಒಂದು ಮರದ ಕಂಬ ನೆಟ್ಟು, ಈ ಸೇತುವೆಗೆ ಹೊಂದಿಕೊಂಡಂತೆ ಉದ್ದಕ್ಕೆ ಹಗ್ಗ ಕಟ್ತಾರೆ. ಸೇತುವೆ ಮೇಲೆ ನಡೆದುಕೊಂಡು ಹೋಗುವವರು ಕೆಳಗೆ ಬೀಳದಂತೆ ಸಪೋರ್ಟೀವ್ ಆಗಿರ್ಲಿ ಅಂತ.. ಕೈಯಲ್ಲೊಂದು ಕೊಡೆ ಹಿಡ್ಕೊಂಡು, ಬೆನ್ನ ಮೇಲೆ ಬ್ಯಾಗ್ ಹಾಕೊಂಡು ಜೋರು ಮಳೆಯಲ್ಲಿ ಆ ಸೇತುವೆ ಮೇಲೆ ನಡೆಯೋಕೆ ಭಯ ಆಗ್ತಿತ್ತು. ಯಾಕಂದ್ರೆ ಅಡಿಕೆ ಮರದ ಸೇತುವೆ ಮೇಲೆ ನೀರು ಬಿದ್ದಾಗ ಅದು ಜಾರಲು ಶುರುವಾಗ್ತಿತ್ತು. ಆಗೆಲ್ಲ ಚಪ್ಪಲಿ ಹಾಕ್ತಾನೇ ಇರ್ಲಿಲ್ಲ. ಬರಿಗಾಲಲ್ಲೇ ಓಡಾಡ್ತ ಇದ್ದಿದ್ರಿಂದ ಸೇತುವೆ ಮೇಲೆ ಬ್ಯಾಲೆನ್ಸ್ ಮಾಡ್ಕೊಂಡು ಹೋಗ್ತಿದ್ವಿ. ಸಾಮಾನ್ಯವಾಗಿ ಮಳೆಗಾಲದಲ್ಲಿ ಆ ಸೇತುವೆ ಸಮೀಪದ ಮನೆಯ ಹಿರಿಯರು ಯಾರಾದ್ರೂ ಶಾಲೆಗೆ ಹೋಗುವ ಮಕ್ಕಳನ್ನು ಸೇತುವೆ ದಾಟಿಸೋಕೆ ಅಂತನೇ ಅಲ್ಲಿ ನಿಂತಿರ್ತಿದ್ರು.. ಮಳೆ ಅಂದ್ರೆ ಸುಮ್ಮನೆ ಒಂದರ್ಧ ಗಂಟೆ ಬಂದು ಹೋಗುವಂತದ್ದಾಗಿರ್ಲಿಲ್ಲ.. ರಾತ್ರಿ ವೇಳೆ ಶುರುವಾಗುವ ಮಳೆ ಸತತವಾಗಿ ಎರಡು ಮೂರು ದಿನ ಸುರಿಯುತ್ತಿತ್ತು. ಕೆಲವೊಮ್ಮೆ ಆ ಮಳೆಗೆ ನಮ್ಮ ಅಡಿಕೆ ಮರದ ಸೇತುವೆ ಸಹ ಮುಳುಗುತ್ತಿದ್ದರಿಂದ ಎಷ್ಟೋ ಬಾರಿ ಶಾಲೆಗೆ ಹೊರಟವರು ವಾಪಾಸ್ ಮನೆಗೆ ಹೋಗಿದ್ದೂ ಉಂಟು. ಆ ದಿನ ನನ್ನ ಖುಷಿಗೆ ಪಾರವೇ ಇರ್ತಿರ್ಲಿಲ್ಲ..
ಒಂದನೇ ತರಗತಿ ಮುಗಿಯುತ್ತಿದ್ದಂಗೆ ನನ್ನ ಶಾಲೆ ಬದಲಾಯ್ತು. ಧರ್ಮಸ್ಥಳದಲ್ಲಿರುವ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಗೆ ಸೇರ್ಪಡೆಗೊಂಡೆ. ಮನೆಯಿಂದ ಶಾಲೆಗೆ ಸುಮಾರು 2 ಕಿಲೋ ಮೀಟರ್. ಆಗ್ಲೂ ನಡ್ಕೊಂಡೇ ಹೋಗಿ ಬರ್ತಾ ಇದ್ದಿದ್ದು. ಆದ್ರೆ ಜೊತೆಗೆ ಗೆಳೆಯರು ತುಂಬಾ ಮಂದಿ ಇದ್ರು. ಅದರಲ್ಲಿ ಚೇತನ್ ಸಹ ಒಬ್ಬ.. ಅಂಗನವಾಡಿಯಿಂದ ಶುರುವಾದ ನಮ್ಮ ಸ್ನೇಹ ಇನ್ನೂ ಹಾಗೇ ಇದೆ.. 29 ವರ್ಷ ಕಳೆದರೂ.. ನಮ್ಮ ಜೊತೆಗೆ ಇನ್ನೂ ಹಲವಾರು ಮಂದಿ ಗೆಳೆಯರಿದ್ರು.. ಬಹುತೇಕ ನಾವೆಲ್ಲರೂ ನೆರೆಹೊರೆಯವರೇ.. ಹಾಗಾಗಿ ಶಾಲೆಗೆ ಹೋಗಿ ಬರೋದು ನಮ್ಮ ಪಾಲಿನ ಜಾಲಿ ಟ್ರಿಪ್ ಅಂತನೇ ಹೇಳ್ಬೋದು. ಶಾಲೆಗೆ ಹೋಗುವ ದಾರಿಯಲ್ಲಿ ಯಾವ ಮಾವಿನ ಮರವನ್ನೂ ಬಿಡ್ತಿರ್ಲಿಲ್ಲ.. ಸಣ್ಣ ಮಾವಿನಕಾಯಿ ಕಂಡ್ರೂ ಸಾಕು.. ನಮ್ಮ ಚೋಟಾ ಗ್ಯಾಂಗ್ ಕೈಯಲ್ಲಿ ಕಲ್ಲುಗಳನ್ನು ಹಿಡ್ಕೊಂಡು ರೆಡಿಯಾಗಿರ್ತಿದ್ವಿ. ಮರದ ಮೇಲಿನ ಮಾವಿನ ಕಾಯಿಗೆ ಕಲ್ಲು ಹೊಡೆಯೋಕೆ.. ಕೊನೆಗೆ ಯಾರೇ ಮಾವಿನಕಾಯಿ ಬೀಳಿಸಿದ್ರೂ, ಎಲ್ರೂ ಸೇರ್ಕೊಂಡು ಅದನ್ನು ಹಂಚ್ಕೊಂಡು ತಿನ್ತಿದ್ವಿ.
ಶಾಲೆಗೆ ಹೋಗ್ತಿದ್ದಾಗ ನಮ್ಮ ಮನೆಯ ಸಮೀಪವೇ ಸಣ್ಣದೊಂದು ನೀರಿನ ತೊರೆ ಹರಿಯುತ್ತಿತ್ತು. ಈಗ್ಲೂ ಇದೆ.. ಆದ್ರೆ ನೀರು ಕಡಿಮೆ. ಈ ತೊರೆ ಸಮೀಪದಲ್ಲೇ ಇರುವ ಮನೆಯವರು ಯಾವುದೋ ಕೆಲಸಕ್ಕಾಗಿ ಕೆಂಪು ಕಲ್ಲು ತಂದಿಟ್ಟಿದ್ರು. ಒಂದು ದಿನ ಸಂಜೆ ನಾನೂ ನನ್ನ ಗೆಳೆಯ ಇಬ್ರೂ ಸೇರ್ಕೊಂಡು ಆ ಕಲ್ಲನ್ನೆಲ್ಲ ತೊರೆಗೆ ಅಡ್ಡಲಾಗಿ ಜೋಡಿಸಿ ಅಣೆಕಟ್ಟು ರೀತಿಯಲ್ಲಿ ಕಟ್ಟಿದ್ವಿ.. ಮರುದಿನ ಬೆಳಿಗ್ಗೆ ನೋಡಿದ್ರೆ ರಸ್ತೆ ತುಂಬೆಲ್ಲ ನೀರು.. ನಾವು ಕಟ್ಟಿದ ಅಣೆಕಟ್ಟನಿಂದಾಗಿ ನೀರು ನಿಂತು ರಸ್ತೆವರೆಗೂ ನೀರು ನಿಂತು, ರಸ್ತೆಯ ಇನ್ನೊಂದು ಬದಿಯಲ್ಲಿರುವ ತೋಟಕ್ಕೂ ನೀರು ನುಗ್ಗಿತ್ತು. ಬೆಳಿಗ್ಗೆ ನಾವು ಶಾಲೆಗೆ ಹೊರಟು ರಸ್ತೆಯಲ್ಲಿ ನಡ್ಕೊಂಡು ಬರ್ಬೇಕಾದ್ರೆ, ನಾವು ಕಟ್ಟಿದ್ದ ಅಣೆಕಟ್ಟಿನ ಪಕ್ಕದ ರಸ್ತೆಯಲ್ಲಿ ವಾಹನಗಳು ಓಡಾಡೋಕೆ ಆಗದೆ ನಿಂತಿತ್ತು. ನಮಗೆ ಮನಸ್ಸಲ್ಲೇ ನಗು.. ಆದ್ರೆ ಏನೂ ಗೊತ್ತಿಲ್ಲದ ರೀತಿಯಲ್ಲಿ ನಿಂತಿದ್ವಿ. ಇವಾಗ ಅದೆಲ್ಲ ನೆನೆಸ್ಕೊಂಡಾಗ ನಗು ಬರುತ್ತೆ..
ನಾವೆಲ್ಲ ಶಾಲೆಗೆ ಹೋಗ್ತಿದ್ದಾಗ ರಸ್ತೆಯಲ್ಲಿ ಒಂದರೆಡು ಅಡಿ ನೀರು ಇರ್ತಿದ್ದಿದ್ದು ಸಾಮಾನ್ಯವಾಗಿತ್ತು. ಸಂಜೆ ಶಾಲೆ ಮುಗಿಸ್ಕೊಂಡು ವಾಪಾಸ್ ಮನೆಗೆ ಹೋಗುವಾಗ ನಮ್ಮ ಸಂಭ್ರಮ ಕೇಳೋದೇ ಬೇಡ. ಎಡಗಾಲನ್ನು ನೀರಿಗೆ ಊರಿಕೊಂಡು ಬಲಗಾಲಲ್ಲಿ ನೀರು ರಟ್ಟಿಸ್ತಾ ಇದ್ದಿದ್ದು ಪ್ರತಿದಿನದ ಕೆಲಸ.. ಕೊನೆಗೆ ಮನೆ ಸೇರುವಷ್ಟರಲ್ಲಿ ನಮ್ಮ ಬಟ್ಟೆಗಳೆಲ್ಲ ಕೆಸರಾಗಿರ್ತಿತ್ತು. ಇದಕ್ಕೆ ಅಮ್ಮನಿಂದ ಬೈಗುಳವೂ ಸಿಗ್ತಿತ್ತು. ಅಷ್ಟಾದ್ರೂ ಮರುದಿನ ಮತ್ತೆ ಹಾಗೇ ಮಾಡ್ತಿದ್ವಿ... ಇನ್ನು ಮೊದಲ ಮಳೆ ಬಂದಾಗ ಮೀನು ಹಿಡಿಯೋದು ಒಂದು ಕೆಲಸವಾಗಿತ್ತು. ಸಾಮಾನ್ಯವಾಗಿ ಜೂನ್ ತಿಂಗಳ ಮೊದಲ ಮಳೆಗೆ ಗದ್ದೆ, ತೋಟಗಳ ನೀರು ಸಮೀಪದ ತೋಡಿಗೆ ಹರಿದು ಹೋಗ್ತಿತ್ತು. ಆಗ ತೋಡಿನಲ್ಲಿರುವ ಮೀನುಗಳೆಲ್ಲ ತೋಟ, ಗದ್ದೆಗಳಿಗೆ ವಿರುದ್ಧ ದಿಕ್ಕಿನಲ್ಲಿ ಬರ್ತಿತ್ತು. ಅದು ಮೀನುಗಳು ಮೊದಲ ಮಳೆಯನ್ನು ಸಂಭ್ರಮಿಸುವ ರೀತಿ.. ನೀರಿನಿಂದ ಮೇಲಕ್ಕೆ ಹಾರುತ್ತಾ ತೋಟಕ್ಕೆ ನುಗ್ಗುವ ಮೀನುಗಳನ್ನು ಹಿಡಿಯೋದು ನಮ್ಮ ಸಂಭ್ರಮದ ಭಾಗವಾಗಿತ್ತು. ಹೆಚ್ಚೆಂದರೆ ನಾಲ್ಕೋ ಐದೋ ಮೀನುಗಳು ಸಿಗ್ತಿತ್ತು. ಆದ್ರೆ ಅದನ್ನು ಮನೆಗೆ ತಗೊಂಡು ಹೋಗಿ ಅಮ್ಮನ ಬಳಿ ಕೊಟ್ಟು ಪದಾರ್ಥ ಮಾಡಿಸಿ, ತಿನ್ನೋವರೆಗೆ ಸಮಾಧಾನ ಆಗ್ತಿರ್ಲಿಲ್ಲ. ರಜಾದಿನಗಳಲ್ಲಿ ತೋಡಿನಲ್ಲಿ ಈಜಾಡೋಕೆ ಹೋಗ್ತಿದ್ವಿ. ಆಗ ಅಪ್ಪನ ಹಳೆಯ ಪಂಚೆ ತಗೊಂಡು ಹೋಗಿ, ಅದರ ತುದಿಯನ್ನು ಎರಡೂ ಬದಿಯಲ್ಲಿ ಹಿಡ್ಕೊಂಡು ನೀರಿನಲ್ಲಿ ಮೀನು ಹಿಡೀತಿದ್ವಿ. ಅವೆಲ್ಲ ತುಂಬಾ ಸಣ್ಣಪುಟ್ಟ ಮೀನುಗಳು.. ಆ ಮೀನುಗಳನ್ನು ಪುಟ್ಟದೊಂದು ಡಬ್ಬಿಯಲ್ಲಿ ಹಾಕೊಂಡು ಮನೆಗೆ ತಗೊಂಡು ಹೋಗಿ ಬಾವಿಗೆ ಹಾಕ್ತಿದ್ವಿ. ಆಮೇಲೆ ದಿನಾ ಬಾವಿಯಲ್ಲಿ ಇಣುಕಿ ನೋಡೋದೇ ಕೆಲಸ.. ಮೀನು ದೊಡ್ಡಾದಾಗಿದ್ಯಾ ಅಂತ...
ಸಂಜೆ ಅಥವಾ ರಾತ್ರಿ ಭಾರೀ ಸಿಡಿಲು-ಗುಡುಗು ಇದ್ರೆ ಬೆಳಗಾಗೆದ್ದು ತೋಟದಲ್ಲಿ ಸುತ್ತಾಡೋದೇ ಕೆಲಸವಾಗ್ತಿತ್ತು.. ಯಾಕೆ ಗೊತ್ತಾ.. ಅಣಬೆ ಹುಡುಕೋಕೆ.. ಸಾಮಾನ್ಯವಾಗಿ ಸಿಡಿಲು-ಗುಡುಗು ಜಾಸ್ತಿ ಇದ್ದ ಮರುದಿನ ಅಣಬೆಗಳು ಹುಟ್ಟಿಕೊಳ್ತಿತ್ತು. ಅದಕ್ಕೆ ವೈಜ್ಞಾನಿಕ ಕಾರಣಗಳು ಏನಿದ್ಯೋ ಗೊತ್ತಿಲ್ಲ. ಆದ್ರೆ ನಾನಂತೂ ಮಿಸ್ ಇಲ್ದೆ ತೋಟದಲ್ಲಿ ಹುಡುಕಾಡ್ತಿದ್ದೆ. ಅಲ್ಲೊಂದು ಇಲ್ಲೊಂದು ಪುಟ್ಟ ಅಣಬೆ ಸಿಗ್ತಿತ್ತು. ಇನ್ನು ಮನೆ ಹಿಂಭಾಗಕ್ಕೆ ಇದ್ದ ಪುಟ್ಟ ಕಾಡಿನಲ್ಲಿ ಕೆಲವು ದೊಡ್ಡ ಮರಗಳ ಕೆಳಗೆ ನೂರಾರು ಸಂಖ್ಯೆಯಲ್ಲಿ ಅಣಬೆಗಳು ಹುಟ್ಟುತ್ತಿತ್ತು. ಅದನ್ನೆಲ್ಲ ಕೊಯ್ದು ಗೋಣಿ ಚೀಲದಲ್ಲಿ ಕಟ್ಕೊಂಡು ಮನೆಗೆ ಬರೋದು, ಬಿದಿರಿನ ರಾಶಿಯ ಮಧ್ಯೆ ಕಣಿಲೆ ಹುಡುಕೋದು... ಇವೆಲ್ಲ ನಮ್ಮ ಶಾಲಾ ಬದುಕಿನ ನಿತ್ಯ ಕೆಲಸಗಳಾಗಿರ್ತಿತ್ತು. ಸಂಜೆಯಾದ್ರೆ ತೋಟದ ನಡುವೆ ನವಿಲುಗಳು ಗರಿ ಬಿಚ್ಚಿ ಕುಣಿಯುತ್ತಾ ಹಾರಾಡ್ತಿತ್ತು. ಇನ್ನು ಮರಗೆಣಸು ನೆಡ್ತಿದ್ದ ಜಾಗದಲ್ಲಿ ಮೊಲಗಳ ಕಾಟ ಇರ್ತಿತ್ತು. ಮರಗೆಣಸಿನ ಗಿಡ ದೊಡ್ಡದಾಗ್ತಿದ್ದಂಗೆ ಅದರ ಎಲೆಗಳನ್ನು ತಿನ್ನೋಕೆ ಮೊಲಗಳು ಬರ್ತಿತ್ತು. ಬೆಳಗೆದ್ದು ನೋಡಿದ್ರೆ ಬಹುತೇಕ ಮರಗೆಣಸಿನ ಗಿಡಗಳಿಗೆ ಎಲೆಗಳೇ ಇರ್ತಿರ್ಲಿಲ್ಲ.. ಆಗಿನ ಕಾಲಕ್ಕೆ ಮರಗೆಣಸೇ ನಮ್ಮ ಹಸಿವನ್ನು ನೀಗಿಸ್ತಾ ಇದ್ದಿದ್ದು.. ಹಾಗಾಗಿ ಮರಗೆಣಸು ನೆಡ್ತಿದ್ದ ಜಾಗದಲ್ಲಿ ತಂತಿಯ ಉರುಳು ಇಡ್ತಿದ್ವಿ. ಉರುಳು ಅಂದ್ರೆ ಉದ್ದದ ತಂತಿಯನ್ನು ವೃತ್ತಾಕಾರದಲ್ಲಿ ಜೋಡಿಸಿ ಎರಡು ಕಡೆ ಸಣ್ಣ ಕೋಲು ನೆಟ್ಟು ಅದಕ್ಕೆ ಕಟ್ಟೋದು. ಅದರ ಅಕ್ಕಪಕ್ಕಕ್ಕೆ ಸೊಪ್ಪುಗಳನ್ನು ಹಾಕ್ತಿದ್ವಿ. ರಾತ್ರಿ ಎಲೆ ತಿನ್ನೋಕೆ ಬರುವ ಮೊಲಗಳು ಈ ಉರುಳಿನಲ್ಲಿ ಸಿಕ್ಕಿ ಹಾಕಿಕೊಳ್ತಿತ್ತು...
ಸಂಜೆ ಕ್ರಿಕೆಟ್ ಆಡೋದು ಉಳಿದೆಲ್ಲ ಕೆಲಸಗಳಿಗಿಂತ ಫೇವರೀಟ್. ಸ್ಕೂಲ್ ಮುಗಿಸ್ಕೊಂಡು ಮನೆಗೆ ಬಂದ್ರೆ ಸಾಕು... ಬ್ಯಾಗ್ ಎಲ್ಲೋ ಎಸೆದು ಹಳೆಯದೊಂದು ಡ್ರೆಸ್ ಹಾಕೊಂಡು ಗ್ರೌಂಡ್‌ಗೆ ಓಡ್ತಿದ್ವಿ. ತೋಟದಲ್ಲಿದ್ದ ನೇರವಾದ ಗಿಡಗಳೆಲ್ಲ ನಮ್ಮ ವಿಕೆಟ್‌ಗಳಾಗ್ತಿತ್ತು. ಆ ಗಿಡವನ್ನು ಕತ್ತರಿಸಿ ಸಿಪ್ಪೆ ತೆಗೆದು ಅದಕ್ಕೆ ಪೆಪ್ಸಿಯ ಸ್ಕಿಕ್ಕರ್ ಅಂಡಿಸ್ತಿದ್ವಿ. ತೀರಾ ಸಣ್ಣದಿದ್ದಾಗ ತೆಂಗಿನ ಮರದ ಗರಿಯ ಬ್ಯಾಟ್‌ಗಳು ಹೆಚ್ಚಾಗಿತ್ತು. ಬರ್ತಾ ಬರ್ತಾ ಮರದ ಬ್ಯಾಟ್‌ಗಳನ್ನು ತಯಾರಿಸೋಕೆ ಶುರು ಮಾಡಿದ್ವಿ. ಟಿವಿಯಲ್ಲಿ ಕ್ರಿಕೆಟ್ ಅಟಗಾರರು ಬಳಸುವ ರೀತಿಯಲ್ಲಿ ಆ ಬ್ಯಾಟ್‌ಗೆ ಸ್ಟಿಕ್ಕರ್ ಅಂಟಿಸಿ ಆನಂದ ಪಡ್ತಿದ್ವಿ. ರೈಟ್ ಹ್ಯಾಂಡ್ ಬ್ಯಾಟಿಂಗ್ ಮಾಡೋವ್ರು ಸಹ ಗಂಗೂಲಿ ರೀತಿಯಲ್ಲಿ ಎರಡು ಸ್ಟೆಪ್ ಮುಂದೆ ಬಂದು ಸಿಕ್ಸರ್ ಬಾರಿಸೋಕೆ ಪ್ರಯತ್ನ ಪಡ್ತಿದ್ವಿ. ಶೋಯೆಬ್ ಅಖ್ತರ್ ಬೌಲಿಂಗ್ ನೋಡಿದ ಮೇಲೆ ಗ್ರೌಂಡ್‌ನ ಬೌಂಡರಿ ಲೈನ್‌ನಿಂದನೇ ಓಡ್ಕೊಂಡು ಬಂದು ಬೌಲಿಂಗ್ ಮಾಡೋದು ಸ್ಟೈಲ್ ಆಗಿತ್ತು. ಸಂಜೆ ನಾಲ್ಕು ಗಂಟೆಗೆ ಮ್ಯಾಚ್ ಆಡೋ ಮೊದ್ಲು ತಣ್ಣಗೆ ಮಳೆ ಬಂದಿದ್ರೆ ಬೌಲರ್‌ಗಳಿಗೆ ಖುಷಿ.. ಪಿಚ್ ಬೌನ್ಸ್ ಆಗುತ್ತೆ ಅಂತ.. ಆರು ಓವರ್‌ಗಳ ಮ್ಯಾಚ್‌ ಆದ್ರೂ, ಆರು ಓವರ್ ಮುಗಿಯೋ ಮೊದ್ಲೇ ಬ್ಯಾಟ್ಸ್‌ಮನ್‌ಗಳೆಲ್ಲ ಔಟ್ ಆಗ್ತಿದ್ರು. ರಜಾ ದಿನಗಳಂದು ಬೆಳಿಗ್ಗೆಯೇ ನಮ್ಮ ಟೆಸ್ಟ್ ಕ್ರಿಕೆಟ್ ಆರಂಭವಾಗ್ತಿತ್ತು. ಅರ್ಧ ದಿನ ಆಗ್ತಿದ್ದಂಗೆ ಎರಡೂ ಕಡೆಯ ಬ್ಯಾಟ್ಸ್‌ಮನ್‌ಗಳು ಔಟ್ ಆಗಿ ಮ್ಯಾಚ್ ಮುಗ್ದೋಗ್ತಿತ್ತು. ಮನೆಗೆ ಬಂದ ಮೇಲೆ ಎಡಗೈಯಲ್ಲಿ ಗೋಡೆಗೆ ಬಾಲ್ ಎಸೆಯುತ್ತಾ ಬ್ಯಾಟಿಂಗ್ ಪ್ರಾಕ್ಟೀಸ್.. ಅಕ್ಕಪಕ್ಕದ ಯಾವುದೇ ಊರುಗಳಲ್ಲಿ ಮ್ಯಾಚ್ ಇದ್ರೂ ನಮ್ಮ ತಂಡ ಅಲ್ಲಿ ಹಾಜರಿರ್ತಿತ್ತು. ಕ್ಲಾಸ್‌ಗೆ ಚಕ್ಕರ್ ಹೊಡೆದು ಮ್ಯಾಚ್ ಆಡೋಕೆ ಹೋಗೋದೇ ಒಂದು ಮಜಾ.. ಸಾಮಾನ್ಯವಾಗಿ ಲೀಗ್ ಅಥವಾ ಕ್ವಾರ್ಟರ್ ಫೈನಲ್ ಹಂತದಲ್ಲೇ ಸೋತು ವಾಪಾಸಾಗ್ತಿದ್ವಿ. ಎಷ್ಟು ಮ್ಯಾಚ್ ಸೋತ್ರೂ ಪರ್ವಾಗಿಲ್ಲ, ಮುಂದಿನ ಬಾರಿ ಮತ್ತೆ ಟೂರ್ನಮೆಂಟ್ ಇದ್ದಾಗ ಪಾಲ್ಗೊಳ್ಳೋದನ್ನು ಮಾತ್ರ ಮಿಸ್ ಮಾಡ್ತಿರ್ಲಿಲ್ಲ.

No comments: