Tuesday, October 23, 2007

ಸ್ನೇಹ - ಪ್ರೀತಿ.


ಸ್ನೇಹ ಪ್ರೀತಿಗೆ ಮೂಲ. ಹೌದು ಎಂದು ಈಗ ಅನಿಸುತಿದೆ. ಅಂದು ನಾವು ಕಾಲೇಜಿನ ಮೂಲೆಯಲ್ಲಿ ನಿಂತಿದ್ದಾಗ ಪ್ರೀತಿ ಇರಲಿಲ್ಲ. ಬದಲಾಗಿ ಗಟ್ಟಿಯಾದ ಸ್ನೇಹ. ಹಲವು ವರ್ಶಗಳ ಶಾಶ್ವತ ಸ್ನೇಹ. ಅನೇಕ ಸ್ನೇಹಿತರು ನಮ್ಮ ಬಗ್ಗೆ ಏನೇನೊ ಹೇಳಿದ್ರು. ಪ್ರೇಮಿಗಳು ಅಂದ್ರು. ಆದ್ರೆ ನಾವು ತಲೆಕೆಡಿಸಿಕೊಳ್ಳಲಿಲ್ಲ. ಅನೇಕರು ತಮಾಶೆ ಮಾಡಿದ್ರು. ಆಗ ನಮ್ಮಿಂದ ಹೊರಟ ಡೈಲಾಗ್ ನಮ್ಮ ಬಗ್ಗೆ ನಮ್ಗೆ ಚೆನ್ನಾಗಿ ಗೊತ್ತಲ್ವ. ಮತ್ತ್ಯಾಕೆ ವರಿ. ಆದ್ರೆ ಆಗ್ಲೂ ನನ್ಗೆ ನಿನ್ನ ನೋಡ್ದೆ ಇದ್ರೆ ಏನೊ ಕಳೆದುಕೊಂಡ ರೀತಿ. ಈಗ ಗೆಳೆಯರೆಲ್ಲ ಅಂದಾಡಿದ ಮಾತುಗಳು ನನ್ನ ಪಾಲಿಗೆ ನಿಜವೆನಿಸಿದೆ. ಆದ್ರೆ ಇದು ನನಗೆ ಮಾತ್ರ, ನಿನಗಲ್ಲ. ನಿನಗೆ ಈಗ್ಲೂ ನಾನು ಹಿಂದಿನ ರೀತಿಯ ಆತ್ಮೀಯ ಸ್ನೇಹಿತ. ಈಗ ಒಂದು ದಿನ ಕಾಲ್ ಮಾಡ್ದೆ ಇರೋಕಾಗಲ್ಲ. ಕಾರಣ ಗೊತ್ತಿಲ್ಲ. ನೀನು ನಾನು ಜೊತೆಗಿರುವಾಗ ಬರದ ಲವ್ ಈಗ ದೂರಾದಾಗ ಬಂದಿದೆ. ಯಾವತ್ತೂ ಕೂಡ ಒಂದು ವಸ್ತು ಜೊತೆಗಿರುವಾಗ ಅದರ ಮಹತ್ವ ಅರಿವಾಗಲ್ಲ. ಆದ್ರೆ ಪರಸ್ಪರ ದೂರ ಸರಿದಾಗಲೆ ಆ ನೋವು ತಿಳಿಯೋದು, ಅದರ ನೆನಪಲ್ಲೆ ಕಾಲ ಕಳೆಯೋದು. ಇದಕ್ಕೋ ಏನೋ ನನಗನಿಸಿದ್ದು, ನೀನು ಜೊತೆಗಿರಬೇಕು, ನನ್ನವಳಾಗಬೇಕು. ಈ ಉದ್ದೇಶ ತಿಳಿಸಿದಾಗ ನಿನ್ನ ನಿರಾಕರಣೆ ನನಗೆ ತುಂಬಾನೆ ನೋವುಂಟು ಮಾಡಿತು. ಆದ್ರೆ ಅಂದು ನೀನು ನನ್ನನ್ನು ಸಮಾಧಾನಿಸಲು ಹೇಳಿದ ಕೆಲವು ಮಾತಿನ ತುಣುಕುಗಳು ನನ್ನಲ್ಲಿ ಕಿರು ಆಸೆಯ ಚಿಗುರು ಮೂಡುವಂತೆ ಮಾಡಿದೆ. ಒಂದಂತೂ ನಿಜ, ನಿನಗೂ ನನ್ನ ಮೇಲೆ ಸ್ವಲ್ಪ ಪ್ರೀತಿ ಇದೆ. ಆದ್ರೆ ನೀನು ಹೇಳಲ್ಲ. ನೀನು ತುಂಬಾನೆ ರೂಪವತಿ. ಅದಕ್ಕೋ ಏನೋ ತುಂಬಾ ಹುಡುಗರು ನಿನ್ನನ್ನು ಇಷ್ಟಪಟ್ಟರು. ಆದ್ರೆ ಇಂದು ಅವರೊಂದಿಗೆ ನೀನು ಸರಿಯಾಗಿ ಮಾತಾಡ್ತಾ ಇಲ್ಲ. ಅದೇ ಅಳುಕಿನಲ್ಲಿ ನನ್ನ ಪ್ರೀತಿ ಬಗ್ಗೆ ಹೇಳಿದಾಗ ಮುಗ್ಧೆ ನೀನು ಅತ್ತದ್ದು, ನಾನು ಸಮಾಧಾನಿಸಿದ್ದು... ಹೀಗೆ ಮುಂದಿನ ಜೀವನದ ಏಳು ಬೀಳುಗಳ ಬಗ್ಗೆ ಮಾತುಗಳು ಸಾಗಿತ್ತು. ನನಗೆ ನಿನಗಿಂತ ಚೆಂದದ ಹುಡುಗಿಯರು ಸಿಗಲಿ ಅನ್ನೊ ನಿನ್ನ ಹಾರೈಕೆ ಬೇಕಾಗಿರಲಿಲ್ಲ. ಇಶ್ಟೆಲ್ಲ ವ್ಯತಿರಿಕ್ತ ಮಾತುಗಳಿದ್ದರೂ ನಿನ್ನ ಮಿಸ್ಡ್ ಕಾಲ್‌ಗಾಗಿ ನಾನು ಹಾತೊರೆಯುತ್ತಿದ್ದೇನೆ. ನೀನು ಕೂಡ ನಾನು ಫೋನ್ ಮಾಡ್ದೆ ಇದ್ರೆ ಬೈಗುಳದ ಸುರಿಮಳೆಗೈಯ್ಯುತ್ತಿ.. ಇದೆಲ್ಲ ಒಂಥರ ಅಕ್ಕರೆ. ಇದೇ ನಮ್ಮ ಜೀವನಕ್ಕೆ ಪ್ರೀತಿಯ ಸಿಹಿ ಸಕ್ಕರೆಯಾದ್ರೆ ಚೆನ್ನಾಗಿತ್ತು ಅಲ್ವಾ..

ದಾಮೋದರ್ ದೊಂಡೋಲೆ

No comments: