Wednesday, March 19, 2008

ನಗರದ ಬದುಕಿನ ನಡುವೆ.....



ಆಧುನಿಕತೆಯ ಭರದಲ್ಲಿ, ನಗರ ಜೀವನದ ಪಯಣದಲ್ಲಿ ಬದುಕು ಬದಲಾಗುತ್ತಿದೆ. ಯಾಂತ್ರೀಕೃತ ಬದುಕು ರೂಢಿಯಾಗಿಬಿಟ್ಟಿದೆ. ಇವೆಲ್ಲದರ ನಡುವೆ ನಾನು ನನ್ನತನವನ್ನು ಕಳೆದುಕೊಂಡಿದ್ದೇನೆ ಎಂದನಿಸುತ್ತಿದೆ...
ಯೋಚಿಸಲು ಸಮಯ ಸಿಕ್ಕಾಗಲೆಲ್ಲ ನೆನಪಾಗುವುದು ಅದೇ ಹಳೆಯ ಕಾಲೇಜು ದಿನಗಳು. ಸುಖ, ದುಖ, ನೋವು, ನಲಿವುಗಳಿಂದ ಕೂಡಿದ್ದ ಆ ದಿನಗಳು ಈಗಲೂ ಕಣ್ಮುಂದೆ ಸುಳಿಯುತ್ತಿದೆ. ತರಗತಿಗೆ ಚಕ್ಕರ್ ಹೊಡೆದು ಭಟ್ರ ಹೋಟೆಲಿಗೆ ಹೋಗಿ ಪಟ್ಟಾಂಗ ಹೊಡೆಯುತ್ತಾ, ಲೇಡೀಸ್ ಹಾಸ್ಟೆಲ್ಗೆ ಹೋಗುವ ದಾರಿಯಲ್ಲಿನ ಮರದ ಕಟ್ಟೆಯಲ್ಲಿ ಕುಳಿತು ಚಹಾ ಕುಡಿಯುತ್ತಿದ್ದುದು ಅವಿಸ್ಮರಣೀಯ... ನಡುವೆ ಗೆಳೆಯ ಸ್ಟ್ಯಾನಿಯ ಹಾಸ್ಯ ಚಟಾಕಿಗಳನ್ನು ಮರೆಯಲು ಸಾಧ್ಯವೇ ಇಲ್ಲ. ಈಗಲೂ ಜೊತೆಗೆ ಅವನಿಲ್ಲದ ಕೊರತೆ ನನ್ನನ್ನು ಕಾಡುತ್ತಿದೆ.
೯ ಗಂಟೆಗೆ ತರಗತಿ ಆರಂಭಗೊಂಡರೂ ೯.೪೫ಕ್ಕೆ ತರಗತಿಯೊಳಗೆ ಹೋಗುತ್ತಿದ್ದುದು, ಉಪನ್ಯಾಸಕರ ಅವಗಣನೆ, ಕೆಲವೊಮ್ಮೆ ತರಗತಿಯಿಂದ ಹೊರಗೆ ಕಳಿಸುತ್ತಿದ್ದುದು, ಮಧ್ಯಾಹ್ನ ಊಟ ಮುಗಿಸಿ ಕಾರಿಡಾರಿನಲ್ಲಿ ಸುತ್ತಾಡುತ್ತಿದ್ದುದು, ಸಂಜೆ ಕಾಲೇಜಿನ ಗೇಟ್ ಹಾಕುವವರೆಗೂ ಅಲ್ಲೇ ಇರುತ್ತಿದ್ದುದು ಅಚ್ಹಳಿಯದೆ ಮನಸಿನಲ್ಲಿದೆ. ಆದರೆ ಅವೆಲ್ಲವೂ ಈಗ ಕೇವಲ ನೆನಪು ಮಾತ್ರ. ಇನ್ನೆಂದಿಗೂ ಮರಳಿ ಬಾರದ ಸಿಹಿ ನೆನಪುಗಳು...
ಈಗೇನಿದ್ದರೂ ಆಫೀಸ್ ಮತ್ತು ರೂಮ್ ಎಂಬೆರಡು ಪ್ರಪಂಚ ಮಾತ್ರ... ದಿನದಲ್ಲಿ ಎಂಟು ಗಂಟೆಯ ಆಫೀಸ್ ಕೆಲಸ ಮುಗಿಸಿದರೆ ಮತ್ತೆ ರೂಮ್ಗೆ ಹಿಂತಿರುಗುವುದು. ಒಂದಷ್ಟು ಹೊತ್ತು ಕಾಲಹರಣಕ್ಕಾಗಿ ಟಿ.ವಿ ವೀಕ್ಷಣೆ. ಮೊಬೈಲ್ ನಲ್ಲಿ ಕರೆನ್ಸಿ ಇದ್ರೆ ಯಾರಾದರೂ ಗೆಳೆಯರೊಂದಿಗೆ ಸ್ವಲ್ಪ ಹೊತ್ತು ಹರಟೆ.. ಅಲ್ಲಿಗೆ ಮುಗಿಯಿತು...
ಕೆಲವೊಮ್ಮೆ ಬೇಸರ ಆಗ್ತದೆ... ಇನ್ನೂ ಕೆಲವೊಮ್ಮೆ ಸಂತಸ ಆಗ್ತದೆ. ಆದ್ರೆ ಅದನ್ನು ಹಂಚಿಕೊಳ್ಳಲು ಯಾರೂ ಇಲ್ಲ... ನಗರ ಜೀವನದಲ್ಲಿ ಭಾವನೆಗಳಿಗೆ ಎಳ್ಳಷ್ಟೂ ಬೆಲೆಯಿಲ್ಲ... ಕೆಲವೊಮ್ಮೆ ಬದುಕು ಶೂನ್ಯ ಎಂದನಿಸಿದರೂ ಎಲ್ಲೋ ಒಂದೆಡೆ ನಿರೀಕ್ಷೆಯ ಒಸರು ಕಾಡ್ತಿದೆ....

1 comment:

Anonymous said...

ಕಳೆದ ದಿನಗಳು ಮರಳಿಬಾರವು...ಏನಿದ್ದರೂ ಸಿಹಿ ನೆನಪು ಮಾತ್ರ ತಾನೇ... ಅದೇ ನೆನಪು ಅಚ್ಚಳಿಯದೆ ಉಳಿಯುವಂತಹುದು. ಮನಕ್ಕೆ ತಟ್ಟಿದ, ಮುಟ್ಟಿದ ನೆನಪು ಎಂದೆಂದಿಗೂ ಕಾಡುತ್ತಲೇ ಇರುತ್ತವೆ.ಅದು ಹೂತರೂ ಮತ್ತೆ ಮತ್ತೆ ಎದ್ದು ಬಂದು ಕಾಡುತ್ತಿರುತ್ತವೆ... ಯಾವುದೋ ಒಂದು ಘಟನೆ, ಫಕ್ಕನೆ ನೋಡಿದ ನೋಟ ಅವೆಲ್ಲವೂ ಮತ್ತೆ ಮತ್ತೆ ಹಳೆಯ ನೆನಪುಗಳನ್ನು ಮನದ ಮುಂದೆ ತಂದು ನಿಲ್ಲಿಸುತ್ತವೆ. ಆ ಸಂದರ್ಭದಲ್ಲಿ ನಾವೇನೋ ಕಳಕೊಂಡ ವಿಷಾಧದ ಛಾಯೆ ನಮ್ಮನ್ನಾವರಿಸಿ ಬಿಡುತ್ತವೆ.
ಛೆ...ಬದುಕು ಎಷ್ಟು ಕ್ಷಣಿಕವಲ್ಲವೇ....
- ಹೀಗೇ ಸುಮ್ನೆ ಬರೆದೆ... ಆದೂರು.