Sunday, February 10, 2008

ಚಿತ್ರಚಾಪದ ಕುರಿತು ನನಗನಿಸಿದಂತೆ....


ಗೆಳೆಯ ಶ್ರೀನಿಧಿ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಕರೆದಾಗ ವಿಶೇಷವೇನು ಅನಿಸಲಿಲ್ಲ. ಎಲ್ಲರಂತೆ ಇವರೂ ತಮ್ಮಿಂದಾದಷ್ಟು ಬರೆದು ಒಂದಷ್ಟು ಹಣ ಖರ್ಚು ಮಾಡಿ ಪುಸ್ತಕವೊಂದನ್ನು ಬಿಡುಗಡೆ ಮಾಡುತ್ತಾರೆ. ಅದೇ ಮಾಮೂಲಿ ಪುಸ್ತಕ ಬಿಡುಗಡೆ, ಒಂದಷ್ಟು ಭಾಷಣ... ಅಲ್ಲಿಗೆ ಮುಗಿಯಿತು... ಹೀಗೆಲ್ಲ ಅಂದುಕೊಂಡು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ದ್ ಕಲ್ಚರ್ಗೆ ತೆರಳಿದವನಿಗೆ ಅಚ್ಹರಿ ಕಾದಿತ್ತು. ಒಂದು ರೀತಿಯಲ್ಲಿ ನಮ್ಮ ದಕ್ಷಿಣ ಕನ್ನಡದ ಯಾವುದೋ ಕಾರ್ಯಕ್ರಮಕ್ಕೆ ತೆರಳಿದ ಅನುಭವ. ಜೊತೆಗೆ ಬ್ಲಾಗ್ ಬರಹಗಾರರ ದಂಡೇ ಅಲ್ಲಿತ್ತು.

ಕಾರ್ಯಕ್ರಮ ಮಾತ್ರ ಅರ್ಧ ಗಂಟೆ ತಡವಾಗಿಯೇ ಆರಂಭವಾಗಿತ್ತು. ಪುಸ್ತಕ ಬಿಡುಗಡೆ ಮಾಡಿದ ವೆಂಕಟ ಸುಬ್ಬಯ್ಯ ಅವರು ಮಾತನಾಡಿದ ರೀತಿಯಿಂದಲೇ ಈ ಪುಸ್ತಕದಲ್ಲೇನೋ ವಿಶೇಷತೆಯಿದೆ ಅನಿಸಿತು. ಅದು ಹೊಗಳುವಿಕೆಯಾಗಿರಲಿಲ್ಲ. ಆದರೆ ವಾಸ್ತವವನ್ನು ಹೊರಗಿಟ್ಟಿದ್ದರು. ಮುಕ್ತವಾಗಿ ಪುಸ್ತಕದ ಬಗೆಗಿನ ತಮ್ಮ ಅನುಭವಗಳನ್ನು ಹರಿಯ ಬಿಟ್ಟರು. ಈ ಇಳಿ ವಯಸ್ಸಿನಲ್ಲೂ ನವಯುವಕನಂತೆ ಮಾತನಾಡಿ ಸಭೆಯಲ್ಲಿ ನಗೆಯುಬ್ಬಿಸಿದರು.

ಪುಸ್ತಕ ಕೈಗೆ ಸಿಕ್ಕಿದ ಕೂಡಲೇ ಪೂರ್ತಿ 58 ಪುಟಗಳನ್ನು ವೇಗವಾಗಿ ತಿರುವಿ ಹಾಕಿದೆ. ಬಳಿಕ ಚಿತ್ರಚಾಪ ತಂಡದ ಮುನ್ನುಡಿಯೋದಿದೆ. ಖುಷಿಯನಿಸಿತು. ಮುಂದಿನ ಪುಟದಲ್ಲಿ ವಸುಧೇಂದ್ರ ಬರೆದದ್ದನ್ನು ಓದಿದೆ. ತುಂಬಾ ಚೆನ್ನಾಗಿ ಬರೆದಿದ್ದಾರೆ. ಐವರು ಲೇಖಕರ ಬರಹಗಳ ಕುರಿತೂ ಚಿಕ್ಕದಾಗಿ ಆದರೂ ಚೊಕ್ಕವಾಗಿ ಬರೆದಿದ್ದಾರೆ.

ಮಲೆನಾಡು, ದೇವಕಾರ ಮತ್ತು ಭುವಿಯ ಸ್ವಗತ- ಮೂರೂ ಕವನಗಳನ್ನು ಮೊದಲು ಓದಿದೆ. ಪ್ರಕೃತಿಯನ್ನೇ ಕೇಂದ್ರವಾಗಿರಿಸಿ ಬರೆದ ಕವನಗಳು. ಪ್ರಕೃತಿಯ ಕುರಿತಾದ ಮರುಕ, ನೋವು, ಸೌಂದರ್ಯ ಎಲ್ಲವೂ ಅದರಲ್ಲಡಗಿದೆ. ಭುವಿಯ ಸ್ವಗತದಲ್ಲಿನ ಸಾಲುಗಳು ಮಾತ್ರ ಅರಣ್ಯ ರೋದನವೇ ಸರಿ...


ಪರಿಸರದ ನಾಲ್ಕು ಚಿತ್ರಗಳು ಎಂಬ ಬರಹದಲ್ಲಿ ನಾಲ್ಕು ವಿಷಯಗಳನ್ನು ಲೇಖಕರು ಆಯ್ಕೆ ಮಾಡಿದ್ದಾರೆ. ಕೆರೆಯೊಂದರ ದುರವಸ್ಥೆಯ ಚಿತ್ರಣ ಕಣ್ಣಿಗೆ ಕಟ್ಟುವಂತಿದೆ. ದಕ್ಷಿಣ ಕನ್ನಡದ ಕೃಷಿಯ ಕುರಿತು ಬರೆದಿರುವ ಲೇಖನದಲ್ಲಿ ಕೃಷಿಕನ, ಕೃಷಿಯ ಕಷ್ಟದ ಅರಿವಾಗುತ್ತದೆ. ಅದರಲ್ಲಿನ ಮೂರನೆಯ ಲೇಖನ ನೆಲೆ ಅರ್ಥಪೂರ್ಣವಾಗಿದೆ. "ಕರೆಂಟು ಜಗತ್ತಿಗೆ ಕೊಡುವ ಆತುರದಲ್ಲಿ ನಾವೆಲ್ಲ ನಮ್ಮ ಜಮೀನು, ನೆಲ, ಕಳೆದುಕೊಂಡೆವು, ನಮ್ಮ ಪುಣ್ಯಕ್ಕೆ ನಮಗಿಲ್ಲೇ ಜಾಗ ಸಿಕ್ಕಿತು, ಹತ್ತಿರದಲ್ಲೇ. ಆದರೆ ಮೊದಲಿನ ಹಂತಕ್ಕೆ ಬರಲು ಇನ್ನೂ ಸಾಧ್ಯವಾಗಿಲ್ಲ. ಇಷ್ಟೆಲ್ಲ ಮಾಡಿದರೂ, ನಮ್ಮಗಳ ಮನೆಗೆಲ್ಲ ಇನ್ನೂ ವಿದ್ಯುತ್ ಬಂದಿಲ್ಲ, ಅದೇನೋ ಅನ್ನುತ್ತಾರಲ್ಲ, ದೀಪದ ಬುಡ ಕತ್ತಲೆ ಅಂತ, ಹಾಗಾಗಿದೆ ನಮ್ಮ ಕಥೆ."- ಎಂಬ ಈ ವಾಕ್ಯಗಳಲ್ಲಿ ಲೇಖಕರ ಸಂಪೂರ್ಣ ಸಿಟ್ಟು, ವೇದನೆ, ಅಸಮಾಧಾನ ಅಡಗಿರುವುದನ್ನು ಗಮನಿಸಬಹುದು. ಅಣೆಕಟ್ಟಿನ ಭರದಲ್ಲಿ ಮುಳುಗಿದ ಊರುಗಳ ಕುರಿತು ಬೆಳಕು ಚೆಲ್ಲುವ ಸುಂದರ ಮತ್ತು ಮನಮುಟ್ಟುವ ಲೇಖನವಿದು. ನಾಲ್ಕನೆಯ ಲೇಖನ ಅಲೆ ಕರಾವಳಿಯ ಮೀನುಗಾರ ಕುಟುಂಬಗಳು ಕಡಲ್ಕೊರೆತ ಉಂಟಾದಾಗ ಅನುಭವಿಸುವ ಬವಣೆಯ ಕುರಿತು ಹೇಳುತ್ತದೆ.

ಇದು ಎಂಥ ಲೋಕವಯ್ಯ- ಲೇಖನ ಚಾರಣಕ್ಕೆ ಸಂಭಂಧಪಟ್ಟದ್ದು. ಚಾರಣದ ನವಿರಾದ ವರ್ಣನೆಯ ಜೊತೆಗೆ ಒಂದಷ್ಟು ಹಾಸ್ಯ ಪ್ರಜ್ನೆ ಲೇಖನದಲ್ಲಿದ್ದು ಓದಿಸಿಕೊಂಡು ಹೋಗುತ್ತದೆ. ಕೆಲವೆಡೆಗಳಲ್ಲಿ ವರ್ಣನೆ ಬೋರ್ ಹೊಡೆಸಿದ್ದೂ ಇದೆ.

ಹಳ್ಳಿಯ ಪರಿಸರದಲ್ಲೊಂದು ಸುತ್ತು, ಲೇಖನ ವಿಭಿನ್ನವಾಗಿದೆ. ಇಲ್ಲಿ ಲೇಖಕರು ಕಥೆಯನ್ನು ಗೆಳೆಯನೊಬ್ಬನಿಗೆ ವರ್ಣಿಸುವಂತೆ ವಿವರಿಸಿದ್ದಾರೆ. ಪಕ್ಕಾ ಹಳ್ಳಿಗಾಡಿನ ತೋಟ, ಬೆಟ್ಟ ಗುಡ್ಡಗಳನ್ನು ವಿವರಿಸಿರುವ ಪರಿ ಮಾತ್ರ ಉತ್ತಮವಾಗಿದೆ.. "ಬ್ಯಾಟರಿಯ ಬೆಳಕಿನಲ್ಲಿ ನನಗೆ ರಾಜಿ, ಸುಮಂತನೆಂಬ ಮರವನ್ನು ತಬ್ಬಿ ನಿಂತ ಬಳ್ಳಿಯಂತೆ ಕಾಣಿಸಿದಳು" - ಈ ವಾಕ್ಯವನ್ನೊಮ್ಮೆ ಗಮನಿಸಿ.. ಏನೋ ವಿಶೇಷವಿದೆ... ತಬ್ಬಿ ನಿಂತ ಗಂಡ-ಹೆಂಡತಿಯನ್ನು ಮರ ಮತ್ತು ಬಳ್ಳಿಗೆ ಹೋಲಿಸಿದ್ದಾರೆ.. ಲೇಖಕರ ಭಾವನಾತ್ಮಕ ಚಿಂತನೆಯನ್ನು ಇಲ್ಲಿ ಗಮನಿಸಬಹುದು.

ಅರಿವೆಷ್ಟಿದೆ ನಮಗೆ ಲೇಖನದಲ್ಲಿ ಚಾರಣಿಗರ ಉತ್ಸಾಹಕ್ಕೆ ತಣ್ಣೀರೆರಚುವ ಸಾಕಷ್ಟು ಜನರಿಗೆ ತಕ್ಕ ಉತ್ತರವಿದೆ.. "ನೀವು ಏನು ನೋಡಬೇಕು ಅಂತಿದ್ದೀರೋ ಈಗಲೇ ನೋಡಿ. ನಗರೀಕರಣವು ಬಹಳ ವೇಗವಾಗಿ ಬೆಳೆಯುತ್ತಿದೆ" ಎಂಬ ಲೇಖಕರ ಚಾರಣದ ಗುರುಗಳ ಮಾತುಗಳನ್ನು ಉಲ್ಲೇಖಿಸಿರುವುದು ನೂರಕ್ಕೆ ನೂರರಷ್ಟು ಸತ್ಯ. ಆಧುನೀಕರಣದ ಭರದಲ್ಲಿ ಮುಂದೆ ಸಾಗುತ್ತಿರುವ ಈ ಕಾಲಘಟ್ಟದಲ್ಲಿ ಅಳಿದುಳಿದಿರುವ ಅರಣ್ಯಗಳನ್ನು, ಜಲಪಾತಗಳನ್ನು ನೋಡಲು ಸಾಧ್ಯವಾದರೆ ಬದುಕು ಸಾರ್ಥಕ....

"ಮಾನವನಾಗಿ ಹುಟ್ಟೀದ್ ಮೇಲೆ ಏನೇನ್ ಕಂಡಿ, ಸಾಯೋದ್ರೊಳಗೆ ಒಮ್ಮೆ ನೋಡು ಕೆಮ್ಮಣ್ಣ್ ಗುಂಡಿ!"- ಇದು ಕೆಮ್ಮಣ್ಣು ಗುಂಡಿಯ ವೈಭವವನ್ನು ವರ್ಣಿಸುವ ಬರಹ.. ಇಲ್ಲಿ ಪ್ರಕೃತಿಯ ವರ್ಣಯೆಯ ಜೊತೆಗೆ ಅಗತ್ಯವಿಲ್ಲದ ಕೆಲವೊಂದು ವಿಚಾರಗಳೂ ಇವೆ.. ಆದರು ಪ್ರಸ್ತುತ ಪಡಿಸಿರುವ ರೀತಿ ಮಾತ್ರ ಗಮನಾರ್ಹವಾಗಿದೆ..

ಒಟ್ಟಿನಲ್ಲಿ ಹೇಳುವುದಾದರೆ ಪುಸ್ತಕ ಒಪ್ಪವಾಗಿ, ಓರಣವಾಗಿದೆ. ಪ್ರಕೃತಿಯ ಬಗ್ಗೆ ಈ ಯುವಕರಿಗಿರುವ ಪ್ರೀತಿ, ಗೌರವ ಎಲ್ಲರಲ್ಲೂ ಇದ್ದಿದ್ದರೆ ಇಂದು ಅರಣ್ಯಗಳು ಇಷ್ಟರ ಮಟ್ಟಿಗೆ ನಾಶವಾಗುತ್ತಿರಲಿಲ್ಲ.. ಚಿತ್ರ ಚಾಪದಲ್ಲಿನ ಚಿತ್ರಗಳು ಮಾತ್ರ ಕಳೆಗುಂದಿವೆ. ಕಲಾವಿದ ಇನ್ನಷ್ಟು ಉತ್ತಮವಾಗಿ ಚಿತ್ರಗಳನ್ನು ಬಿಡಿಸಬಹುದಿತ್ತು. ಸಮಯದ ಅಭಾವವೋ ಅಥವಾ ನಿರ್ಲಕ್ಷ್ಯವೋ ಒಟ್ಟಿನಲ್ಲಿ ಎಲ್ಲಾ ಚಿತ್ರಗಳಲ್ಲೂ ಎದ್ದು ಕಾಣುತ್ತವೆ. ಉಳಿದಂತೆ ಪುಸ್ತಕದ ಬಗ್ಗೆ ದೂರು ಹೇಳಲು ನನ್ನಲ್ಲೇನೂ ಇಲ್ಲ.. ೫೫ ರೂಪಾಯಿಯ ಪುಸ್ತಕವನ್ನು ಕೊಂಡು ಓದುವುದರಿಂದ ಯಾವುದೇ ನಿರಾಸೆಯಾಗದು ಎಂಬುದು ನನ್ನ ಅನಿಸಿಕೆ.


ಸುನಿಲ್....

2 comments:

ರಾಧಾಕೃಷ್ಣ ಆನೆಗುಂಡಿ. said...

ನಾನು ಅಲ್ಲಿದೆ.... ಗಮನವಿತ್ತೆ......

ಅಮರ said...

ಪ್ರಿಯ ಸುನಿಲ್ ಅವರೇ,

ನಮಸ್ಕಾರ,

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

-ಅಮರ